ನೆಹರುನಗರ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ರೂ. 5.35 ಕೋಟಿ ಅನುದಾನ ಮಂಜೂರು – ನಳಿನ್ ಕುಮಾರ್ ಕಟೀಲ್

0

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜು ಮತ್ತು ಉಪ್ಪಿನಂಗಡಿ ಸಂಪರ್ಕಕ್ಕೆ ನೆಹರುನಗರದಲ್ಲಿರುವ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ರೂ. 5.35 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಕೇಂದ್ರ ಸರಕಾರ ಮತ್ತು ಕೇಂದ್ರ ರೈಲ್ವೇ ಸಚಿವ ಅಶ್ವಿನ್‌ವೈಷ್ಣವ್ ಅವರನ್ನು ಅಭಿನಂದಿಸಿದ್ದಾರೆ.

ನೆಹರುನಗರ ಮೇಲ್ಸೇತುವೆ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಪರಿಣಾಮವಾಗಿ ಅನೇಕ ಸಂದರ್ಭಗಳಲ್ಲಿ ರಸ್ತೆ ಬ್ಲಾಕ್ ಆಗುತ್ತಲೇ ಇರುತ್ತದೆ. ಅದರಲ್ಲೂ ಮಳೆಗಾಲದಲ್ಲಂತೂ ಇಲ್ಲಿನ ಪರಿಸ್ಥಿತಿ ಯಾರಿಗೂ ಬೇಡ. ಒಂದೆಡೆ ಮಳೆ ನೀರು ತುಂಬಿ ಮೇಲ್ಸೇತುವೆಯ ರಸ್ತೆಯೇ ಮುಚ್ಚಿರುತ್ತದೆ. ಈ ನಡುವೆ ವಾಹನಗಳ ಓಡಾಟ. ಅಂತಹ ಸಂದರ್ಭದಲ್ಲಿ ನಡೆದಾಡುವವರ ಪಾಡು ಹೇಳತೀರದು. ಈ ನಡುವೆ ಬೆಳಗ್ಗೆ ಎಂಟೂವರೆಯಿಂದ ಒಂಭತ್ತರವರೆಗೆ ವಿದ್ಯಾಥಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಈ ಮೇಲ್ಸೇತುವೆ ನಡೆದಾಡುವುದಕ್ಕೂ ಸಣ್ಣದೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಅದಾಗಲೇ ಮೇಲ್ಸೇತುವೆಯನ್ನು ಅಗಲಗೊಳಿಸುವಂತೆ ಸಾಕಷ್ಟು ಬಾರಿ ರೈಲ್ವೇ ಇಲಾಖೆಗೆ ಮನವಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಜೊತೆಗೆ ಕೇಂದ್ರ ಸರ್ಕಾರ ಹಾಗೂ ರೈಲ್ವೇ ಇಲಾಖೆಯ ಗಮನ ಸೆಳೆಯುವ ದೃಷ್ಟಿಯಿಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ವಿವೇಕಾನಂದ ಪದವಿಪೂರ್ವ ಕಾಲೇಜು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ವಿವೇಕಾನಂದ ಎಂ.ಬಿ.ಎ. ಕಾಲೇಜುಗಳ ವಿದ್ಯಾರ್ಥಿ ಸಂಘ ಹಾಗೂ ಎಬಿವಿಪಿ ಘಟಕಗಳು ಹಾಗೂ ನಾಗರಿಕರ ವತಿಯಿಂದ ಈ ಹಿಂದೆ ಟ್ವಿಟರ್ ಅಭಿಯಾನ ಅಯೋಜಿಸಿತ್ತು. ಅದಾದ ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕ ಸಂಜಿವ ಮಠಂದೂರು ಅವರು ರೈಲ್ವೇ ಮೇಲ್ಸೇತುವೆ ಅಗಲೀಕರಣಕ್ಕೆ ಸತತ ಪ್ರಯತ್ನ ಪಟ್ಟಿದ್ದರು. ಇದೀಗ ಕೇಂದ್ರ ಸರಕಾರ ರೈಲ್ವೇ ಮಾರ್ಗದಲ್ಲಿ ಹಾಸನ ಮಂಗಳೂರು ಜಂಕ್ಷನ್ ನಡುವೆ ನೆಹರುನಗರ ಕಬಕ ಪುತ್ತೂರಿನಲ್ಲಿ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣಕ್ಕಾಗಿ ರೂ.5.35 ಕೋಟಿ ಅನುದಾನ ಮಂಜೂರು ಮಾಡಿದೆ.

LEAVE A REPLY

Please enter your comment!
Please enter your name here