ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ

0

ಕಾಣಿಯೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜ.11 ರಂದು ಆರಂಭಗೊಂಡಿರುವ ಕ್ಷೇತ್ರದ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.16ರಂದು ಸಂಭ್ರಮದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.

ಜ.೧೬ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 9-10ರಿಂದ 5-55 ರ ವರೆಗಿನ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಸದಾಶಿವ ದೇವರಿಗೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಭಜನಾ ಸೇವೆ, ರಾತ್ರಿ ಶ್ರೀ ಉಳ್ಳಾಕುಲು ಮತ್ತು ರಕ್ತೇಶ್ವರಿ ದೈವದ ಭಂಡಾರ ತೆಗೆದು, ರಂಗಪೂಜೆ, ಶ್ರೀ ದೇವರ ಉತ್ಸವ ಬಲಿ, ರಾಜಾಂಗಣ ಪ್ರಾಸಾದ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ರಾಜ್ಯ ಪ್ರಶಸ್ತಿ, ವಿಜೇತ ಕೊಳಲು ಮಾಂತ್ರಿಕ ಲಿಂಗಪ್ಪ ಗೌಡ ಕಡೆಂಗ ಇವರಿಂದ ಕೊಳಲು ವಾದನ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಅನುವಂಶೀಯ ಮೊಕ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಕುಮಾರ್ ಅಗಳಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ, ಕೋಶಾಧಿಕಾರಿ ಮೋನಪ್ಪ ಗೌಡ ಕೂರೋಡಿ, ಪ್ರಧಾನ ಅರ್ಚಕ ಗಣೇಶ್ ಭಟ್ ಮಾಡಾವು, ಅರ್ಚಕ ರಾಮಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಲಿಂಗಪ್ಪ ಗೌಡ ಅಗಳಿ ಹೊಸಮನೆ, ಸದಸ್ಯರಾದ ಕುಶಾಲಪ್ಪ ಗೌಡ ಅಗಳಿ ಮಾದೇರಿ, ಹರೀಶ್ ಮುಂಡಾಲ, ರಾಧಾಕೃಷ್ಣ ಗೌಡ ಬೈತಡ್ಕ, ಭವಾನಿಶಂಕರ್ ಗೌಡ ಅಗಳಿ, ತಾರಾ ಶಿವಣ್ಣ ಬೆಳಂದೂರು, ಮಾಧವಿ ಬೊಮ್ಮೊಡಿ, ಲಲಿತಾ ಅಜಿರಂಗಳ ಹಾಗೂ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರ, ಪರವೂರ ಭಕ್ತರು ಉಪಸ್ಥಿತರಿದ್ದರು.

ಸ್ವಯಂಸೇವಕರ ರಾತ್ರಿ-ಹಗಲೆನ್ನದ ದುಡಿಮೆ:
ಯಾವುದೇ ಕಾರ್‍ಯಕ್ರಮ ಯಶಸ್ವಿಗೆ ಸ್ವಯಂಸೇವಕರ ಅಗತ್ಯ ಇದ್ದು  ಇರುತ್ತದೆ. ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಯಶಸ್ವಿ ಸಂಪನ್ನದ ಹಿಂದೆ ನೂರಾರು ಸ್ವಯಂಸೇವಕರ ರಾತ್ರಿ-ಹಗಲೆನ್ನದ ದುಡಿಮೆ ಇದೆ ಎನ್ನುವುದು ಸತ್ಯ. ಬ್ರಹ್ಮಕಲಶೋತ್ಸವ ಸಮಿತಿ, ವ್ಯವಸ್ಥಾಪನಾ ಸಮಿತಿಯವರೇ ಹೇಳುವಂತೆ ಇಲ್ಲಿ ನೂರಾರು ಸಂಖ್ಯೆಯಲ್ಲಿ ಸ್ವಯಂ ಸೇವಕರು ರಾತ್ರಿ ಹಗಲೆನ್ನದೆ ದೇವಸ್ಥಾನದ ಕೆಲಸ ಕಾರ್ಯದಲ್ಲಿ ಶ್ರಮದಾನಗೈದಿದ್ದಾರೆ. ವಿವಿಧ ಪಾಳಿಗಳಲ್ಲಿ ವಿವಿಧ ಕರ್ತವ್ಯಗಳನ್ನು ಸುಮಾರು 500 ಕ್ಕಿಂತಲೂ ಅಧಿಕ ಸ್ವಯಂಸೇವಕರು ನಿಭಾಯಿಸಿದ್ದಾರೆ.

ಬಂಟಿಂಗ್ಸ್, ತಳಿರು ತೋರಣಗಳನ್ನು ಕಟ್ಟುವುದು, ಅಲಂಕಾರ, ಸ್ವಚ್ಛತೆ, ಪಾರ್ಕಿಂಗ್, ಪ್ರಚಾರ ಸಹಿತ ವಿವಿಧ ಕೆಲಸಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರು ತಮ್ಮ ಸಂಪೂರ್ಣ ಸೇವೆಗೈದಿದ್ದಾರೆ. ಟಿಶರ್ಟ್ ಧರಿಸಿಕೊಂಡು, ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಯಂ ಸೇವಕರನ್ನು ನೋಡುವುದೇ ಚಂದ ಎನ್ನುವ ಮಾತುಗಳು ಭಕ್ತರಿಂದ ಕೇಳಿಬರುತ್ತಿತ್ತು. ಇದರ ಜೊತೆಗೆ ಮಹಿಳಾ ಸ್ವಯಂಸೇವಕರ ಪಾತ್ರವೂ ಕೂಡ ಮಹತ್ವದ್ದಾಗಿದ್ದು, ಬ್ರಹ್ಮಕಲಶೋತ್ಸವದ ಚಟುವಟಿಕೆಗಳು ಆರಂಭಗೊಂಡಂದಿನಿಂದ ಮುಕ್ತಾಯದವರೆಗೂ ಮಹಿಳೆಯರು ಅತ್ಯಂತ ಸಂಭ್ರಮ ಸಡಗರದಿಂದ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬ್ರಹ್ಮಕಲಶೋತ್ಸವದ ಸಂಭ್ರಮ ಹೀಗೆಯೇ ಇರಲಿ, ಮುಗಿಯುವುದೇ ಬೇಡ ಎನ್ನುವುದು ಸ್ವಯಂಸೇವಕರ ಮಾತಾಗಿತ್ತು.

LEAVE A REPLY

Please enter your comment!
Please enter your name here