




15 ದಿನದೊಳಗೆ ಇಲಾಖೆಯ ಸೌಲಭ್ಯಗಳ ಮಾಹಿತಿ ಪತ್ರ ನೀಡುವಂತೆ ತಹಶೀಲ್ದಾರ್ ಸೂಚನೆ




- ಕೆಲವು ಕಡೆ ಇನ್ನೂ ಡಿ.ಸಿ.ಮನ್ನಾ ಭೂಮಿ ಸೇರ್ಪಡೆಗೊಂಡಿಲ್ಲ
- ಆಯ್ಕೆಗೆ ಸೂಚಿಸಿದರೂ ಅರ್ಜಿಯಲ್ಲಿ ಹೆಸರಿಲ್ಲ
- ಮನೆ ನಿರ್ಮಾಣಕ್ಕೆ ರೂ. 5ಲಕ್ಷ ಅನುದಾನ ಬೇಡಿಕೆ
- ಕೆಮ್ಮಿಂಜೆ ಜಾಗದ ನಕ್ಷೆ ವರದಿ ನೋಡಿ ನಿರ್ಧಾರ
- ಎಸ್ಸಿ,ಎಸ್ಟಿಯವರ ಜಾಗ ಭೂ ಪರಿವರ್ತನೆ ಕಾರ್ಯರೂಪ ಆಗುತ್ತಿಲ್ಲ
- ಆಹಾರ ಸುರಕ್ಷತಾ ಕಾರ್ಯಾಚರಣೆ ಮಾಡಿ
ಪುತ್ತೂರು: ಇಲಾಖೆಗಳಲ್ಲಿನ ಯೋಜನೆ, ಸೌಲಭ್ಯಗಳ ಕುರಿತು ಸಭೆಯಲ್ಲಿ ಹೇಳಿದರೆ ಸಾಲದು. ಅದನ್ನು ಕರಪತ್ರದ ಮೂಲಕ ಮುದ್ರಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ನೀಡಿ. ಅವರ ಮೂಲಕ ಸಮಾಜದ ತಳಮಟ್ಟದ ಜನರಿಗೂ ಮಾಹಿತಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನ 15 ದಿನದೊಳಗೆ ಎಲ್ಲಾ ಇಲಾಖೆಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಗುವ ಸೌಲಭ್ಯಗಳ ಕುರಿತ ಕರ ಪತ್ರವನ್ನು ಮುದ್ರಿಸಿ ನನಗೆ ನೀಡಬೇಕು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ಅವರು ತಿಳಿಸಿದ್ದಾರೆ.






ಅವರು ಜ.15ರಂದು ಪುತ್ತೂರು ತಾಲೂಕು ಪಂಚಾಯತ್‌ನಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣೆ, ಭದ್ರತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ಪ್ರಾಯೋಜಿತ ಯೋಜನೆಗಳಿಗೆ ಬ್ಯಾಂಕ್ ಸಾಲಗಳು ಸರಿಯಾಗಿ ಸಿಗುತ್ತಿಲ್ಲ. ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡದೆ ಅವರು ಸಾಲದಿಂದ ವಂಚಿತರಾಗುತ್ತಾರೆ. ಅಲ್ಲದೇ ಸರಕಾರದ ಯೋಜನೆ ಹಾಗೂ ಸವಲತ್ತು ಹಿಂದಕ್ಕೆ ಹೋಗಿ ಫಲಾನುಭವಿಗಳೂ ಸರಕಾರದ ಸವಲತ್ತಿನಿಂದ ವಂಚಿತರಾಗಿದ್ದಾರೆ.
ಲೀಡ್ ಬ್ಯಾಂಕ್ ಮೂಲಕ ಸಾಲ ಸೌಲಭ್ಯದ ಮಾಹಿತಿ ನೀಡಬೇಕು ಎಂದು ಮುಕೇಶ್ ಕೆಮ್ಮಿಂಜೆ ಪ್ರಸ್ತಾಪಿಸಿದರು. ಮುದ್ದ ಅವರು ಇದಕ್ಕೆ ಧ್ವನಿಗೂಡಿಸಿದರು. ಈ ಕುರಿತು ತಹಸೀಲ್ದಾರ್ ಅವರು ಮಾತನಾಡಿ, ಬ್ಯಾಂಕ್ ಸಹಿತ ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯೋಜನೆ ಮತ್ತು ಸೌಲಭ್ಯ ಹಾಗೂ ಅದನ್ನು ಜನರು ಹೇಗೆ ಪಡೆಯುವುದು ಎಂಬ ಮಾಹಿತಿಯುಳ್ಳ ಕರಪತ್ರ ಮುದ್ರಿಸಿ ಎಸ್ಸಿ ಹಾಗೂ ಎಸ್ಟಿ ಸಮುದಾಯದ ಮುಖಂಡರಿಗೆ ನೀಡಬೇಕೆಂದರು. ಲೀಡ್ ಬ್ಯಾಂಕ್ ಮನೇಜರ್ ಅವರು ಬ್ಯಾಂಕ್ ಮೂಲಕ ಸಿಗುವ ಸಾಲದ ಮಾಹಿತಿ ನೀಡಿದರು. ಬ್ಯಾಂಕ್‌ಗಳಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ನಿಟ್ಟಿನಲ್ಲಿ ಸರಕಾರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಏನೇನು ಸಹಾಯ ಮಾಡಲು ಆಗುತ್ತದೆಯೋ ಅದನ್ನು ಮಾಡಬೇಕು. ಕೆಲವೊಂದು ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದಲೂ ಕೆಲಸ ಮಾಡಿ ಎಂದು ತಹಸೀಲ್ದಾರ್ ಹೇಳಿದರು.
ಕೆಲವು ಕಡೆ ಇನ್ನೂ ಡಿ.ಸಿ.ಮನ್ನಾ ಭೂಮಿ ಸೇರ್ಪಡೆಗೊಂಡಿಲ್ಲ: ಡಿ.ಸಿ ಮನ್ನಾ ಜಮೀನನ್ನು ಗುರುತುಪಡಿಸಿ ಅರ್ಹರಿಗೆ ಹಂಚಲು ಈಗಾಗಲೇ ಕಬಕ, ಹಿರೇಬಂಡಾಡಿ, ಕೆಮ್ಮಿಂಜೆ ಭಾಗದಲ್ಲಿ ನಿವೇಶನ ಮಂಜೂರು ಮಾಡಿ ಅದನ್ನು ಗ್ರಾ.ಪಂ ಮತ್ತು ನಗರಸಭೆಗೆ ಹಸ್ತಾಂತರಿಸಲಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು. ಕೊರಗಪ್ಪ ಅವರು ಆರ್ಯಾಪು ಗ್ರಾಮದ ಭಾಗದಲ್ಲಿ ಡಿ.ಸಿ ಮನ್ನಾ ಭೂಮಿ ಇನ್ನೂ ಸೇರ್ಪಡೆಗೊಂಡಿಲ್ಲ ಎಂದು ಹೇಳಿದರು. ಮುಕೇಶ್ ಕೆಮ್ಮಿಂಜೆ ಅವರು ಮಾತನಾಡಿ, 94 ಸಿಸಿಗೆ ಸಂಬಂಧಿಸಿ ಆ ಭಾಗದಲ್ಲಿ ಮೂರು ನಾಲ್ಕು ಕುಟುಂಬ ಇದೆ. ಅವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ ಎಂದರು. ಉತ್ತರಿಸಿದ ತಹಸೀಲ್ದಾರ್‌ರವರು, ಈ ಕುರಿತು 94ಸಿಸಿಯ ಅರ್ಜಿಯ ನಂಬರ್ ಕೊಡಿ. ಅದನ್ನು ನಾನು ಪರಿಶೀಲಿಸುತ್ತೇನೆ ಎಂದರು. ಮುದ್ದ ಅವರು ಮಾತನಾಡಿ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಗಡಿ ಗುರುತು ಮಾತ್ರ ಆಗಿದೆ ಹೊರತು ಮುಂದಿನ ಪ್ರಯತ್ನ ನಡೆದಿಲ್ಲ ಎಂದರು. ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಅವರು ಅನುದಾನ ಕೋರಿ ಜಿಲ್ಲಾ ಉಪನಿರ್ದೇಶಕರಿಗೆ ಮೂರು ಬಾರಿ ಪತ್ರ ಬರೆಯಲಾಗಿದೆ ಎಂದರು. ತಹಶೀಲ್ದಾರ್ ಅವರು ಈ ಕುರಿತು ನಾನೇ ವಿಚಾರಿಸುತ್ತೇನೆ ಎಂದರು.
ಆಯ್ಕೆಗೆ ಸೂಚಿಸಿದರೂ ಅರ್ಜಿಯಲ್ಲಿ ಹೆಸರಿಲ್ಲ: ಗಂಗಾಕಲ್ಯಾಣಕ್ಕೆ ಆನ್‌ಲೈನ್ ಮೂಲಕ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದರೂ ನಿಗಮದ ಅರ್ಜಿ ಪಟ್ಟಿಯಲ್ಲಿ ಫಲಾನುಭವಿಯ ಹೆಸರಿಲ್ಲ. ಈ ಕುರಿತು ಇಲಾಖಾ ಅಧಿಕಾರಿಗೆ ಪೋನ್ ಮಾಡಿದರೆ ಯಾವುದೇ ಸ್ಪಂದನೆ ಇಲ್ಲ. ಶಾಸಕರ ಹೆಸರನ್ನು ಸೇರಿಸಲು ತಿಳಿಸಿದರೂ ಅರ್ಜಿಯಲ್ಲೇ ಫಲಾನುಭವಿಯ ಹೆಸರಿಲ್ಲದಿರುವುದು ಗಮನಕ್ಕೆ ಬಂದಿದೆ ಎಂದು ಕೊರಗಪ್ಪ ಅವರು ಪ್ರಸ್ತಾಪಿಸಿದರು. ಈ ಕುರಿತು ಪರಿಶೀಲನೆ ಮಾಡುವುದಾಗಿ ತಹಶೀಲ್ದಾರ್ ತಿಳಿಸಿದರು.
ಪುತ್ತೂರಿಗೆ ಎಸ್‌ಸಿ, ಎಸ್ಟಿ ಅಧಿಕಾರಿಗಳು ಬೇಕು: ಮೂರು ತಾಲೂಕಿನ ಜವಾಬ್ದಾರಿ ಇರುವ ಎಸ್ಸಿ ಹಾಗೂ ಎಸ್ಟಿ ಅಧಿಕಾರಿಗಳು ವಾರದಲ್ಲಿ ಮೂರು ದಿನವಾದರೂ ಪುತ್ತೂರಿಗೆ ಬರಬೇಕು ಎಂದು ಮುಖೇಶ್ ಕೆಮ್ಮಿಂಜೆ ಪ್ರಸ್ತಾಪಿಸಿದರು. ಉತ್ತರಿಸಿದ ತಹಶೀಲ್ದಾರ್ ಅವರು ಈ ಕುರಿತು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ ಎಂದರು.

ನೆಲ್ಲಿಗುಂಡಿ ರಸ್ತೆಗಾಗಿ ಭೂ ಸ್ವಾಧೀನ: ನೆಲ್ಲಿಗುಂಡಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಭೂ ಒತ್ತುವರಿಗೆ ಜಿಲ್ಲಾಧಿಕಾರಿಗಳ ಆದೇಶ ಬರಬೇಕಷ್ಟೆ. 6 ಮೀಟರ್ ರಸ್ತೆಗಾಗಿ ಭೂ ಸ್ವಾಧೀನ ಮಾಡಬೇಕಾಗಿದೆ ಎಂದು ನಗರಸಭೆ ಅಧಿಕಾರಿಗಳು ಪಾಲನಾ ವರದಿಗೆ ಸಂಬಂಧಿಸಿ ಉತ್ತರಿಸಿದರು.
ಮನೆ ನಿರ್ಮಾಣಕ್ಕೆ ರೂ. 5ಲಕ್ಷ ಅನುದಾನ ಬೇಡಿಕೆ: ಸೇಸಪ್ಪ ನೆಕ್ಕಿಲು ಅವರು ಮಾತನಾಡಿ, ವಸತಿ ನಿರ್ಮಾಣಕ್ಕಾಗಿ ಇವತ್ತಿನ ಕಾಲಘಟ್ಟದಲ್ಲಿ ನೀಡುವ ರೂ. 3ಲಕ್ಷ ಎಲ್ಲಿಯೂ ಸಾಕಾಗುವುದಿಲ್ಲ. ಅದನ್ನು ರೂ. 5ಲಕ್ಷಕ್ಕೆ ಏರಿಸುವಂತೆ ಪ್ರಸ್ತಾಪಿಸಿದರು. ಅದೇ ರೀತಿ ಎಸ್ಸಿ ಹಾಗೂ ಎಸ್ಟಿ ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಆರಂಭದ ಕಾಮಗಾರಿಯು ಕಾಲೋನಿಯಂದಲೇ ಪ್ರಾರಂಭ ಮಾಡಬೇಕು. ಆದರೆ ಕಾಮಗಾರಿಯೂ ಬೇರೆ ಯಾರದ್ದೋ ಸ್ಥಳದಿಂದ ಆರಂಭಗೊಳ್ಳುತ್ತಿದೆ ಎಂದು ಆರೋಪಿಸಿದರು. ಉತ್ತರಿಸಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಇಂಜಿನಿಯರ್ ಭರತ್ ಅವರು, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮೂರು ಸಲ ಪರಿಶೀಲಿಸಿ ವರದಿ ಪಡೆದ ಬಳಿಕವೇ ಕಾಮಗಾರಿ ನಡೆಯುತ್ತದೆ. ಯಾವುದೇ ಸಮಸ್ಯೆ ಆಗುತ್ತಿಲ್ಲ ಎಂದರು. ಉದಯ ಕುಮಾರ್ ಅವರು ಮಾತನಾಡಿ, ಕೆಯ್ಯೂರು ಗ್ರಾಮದ ಎರೆಕ್ಕಲ್ ಎಂಬಲ್ಲಿ ರಸ್ತೆ ಕಾಮಗಾರಿ ಪೂರ್ಣ ಮಾಡಿ ಚರಂಡಿ ಮಾಡದೇ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದಾರೆ. ದೂರು ನೀಡಿದರು ಯಾರೂ ಸ್ಪಂದಿಸುತ್ತಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ತಹಶೀಲ್ದಾರ್ ಅವರು ಮಾತನಾಡಿ ತಕ್ಷಣ ಸ್ಥಳ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆಮ್ಮಿಂಜೆ ಜಾಗದ ನಕ್ಷೆ ವರದಿ ನೋಡಿ ನಿರ್ಧಾರ: ಕೆಮ್ಮಿಂಜೆ ಗ್ರಾಮದಲ್ಲಿ ಅಕ್ರಮವಾಗಿ ಮನೆ ಕಟ್ಟುವ ಸಲುವಾಗಿ ರಸ್ತೆ ಬಂದ್ ಮಾಡಿದ್ದಾರೆ. ಈ ಕುರಿತು 2007ರಲ್ಲಿ ಅಕ್ರಮ ಸಕ್ರಮದಲ್ಲಿ ಒಮ್ಮೆ ಮಂಜೂರಾಗಿದ್ದರೂ ಅದು ತಿರಸ್ಕಾರಗೊಂಡಿತ್ತು. ಈಗ ಮತ್ತೆ ಮಂಜೂರಾಗಿದೆ ಎಂದು ಹೇಳಿಕೊಂಡು ರಸ್ತೆ ಬಂದ್ ಮಾಡಿದ್ದಾರೆ. ಸ್ಥಳ ತನಿಖೆಗೆ ನೀವು ಕೂಡಾ ಬಂದಿದ್ದೀರಿ. ಆದರೆ ಇನ್ನೂ ಯಾವ ನಿರ್ಧಾರ ಆಗಿಲ್ಲ ಎಂದು ಉದಯ ಮತ್ತು ಪರಮೇಶ್ವರ ಪ್ರಸ್ತಾಪಿಸಿದರು. ಉತ್ತರಿಸಿದ ತಹಶೀಲ್ದಾರ್ ಅವರು ಈ ಕುರಿತು ನಾನೇ ಸ್ಥಳ ತನಿಖೆಗೆ ಬಂದಿದ್ದೆ. ಇದೀಗ ನಕ್ಷೆ ವರದಿಗೆ ಬರೆದಿದ್ದೇವೆ. ಅದರ ವರದಿಯಂತೆ ಯಾರಲ್ಲಿ ಎಷ್ಟೆಷ್ಟು ಜಾಗ ಇದೆ ಎಂದು ತಿಳಿದು ಬರುತ್ತದೆ. ಒಂದು ವೇಳೆ ಅತಿಕ್ರಮಣ ಆಗಿದ್ದರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಎಸ್ಸಿ-ಎಸ್ಟಿಯವರ ಜಾಗ ಭೂ ಪರಿವರ್ತನೆ ಕಾರ್ಯರೂಪ ಆಗುತ್ತಿಲ್ಲ: ಎಸ್ಸಿ, ಎಸ್ಟಿ ಸಮುದಾಯದವರಿಗೆ 10 ಸೆಂಟ್ಸ್ ಜಮೀನು ಭೂ ಪರಿವರ್ತನೆಗೆ ಸರಕಾರದಿಂದ ಆದೇಶ ಬಂದಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಶೇಷಪ್ಪ ನೆಕ್ಕಿಲು ಪ್ರಸ್ತಾಪಿಸಿದರು. ಮುಕೇಶ್ ಕೆಮ್ಮಿಂಜೆ ಧ್ವನಿಗೂಡಿಸಿದರು. ಉತ್ತರಿಸಿದ ತಹಶೀಲ್ದಾರ್ ಅವರು ಭೂಪರಿವರ್ತನೆಗೆ ಆದೇಶ ಬಂದಿದೆ. ಅದನ್ನು ಯಾವ ರೀತಿ ಕಾರ್ಯರೂಪಕ್ಕೆ ತರಬೇಕು ಎಂಬ ಕುರಿತು ಗೈಡ್ ಲೈನ್ ಬಂದಿಲ್ಲ. ಆದರೆ ನೀವು ಕೊಟ್ಟ ಅರ್ಜಿಯನ್ನು ಸ್ವೀಕರಿಸಿ ಸ್ಥಳ ತನಿಖೆ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಡುತ್ತೇವೆ ಎಂದರು.
ಆಹಾರ ಸುರಕ್ಷತಾ ಕಾರ್ಯಚರಣೆ ಮಾಡಿ: ರಸ್ತೆ ಬದಿ ಕಬ್ಬು ಜ್ಯೂಸ್ ಮಾರಾಟ ಮಾಡಲಾಗುತ್ತಿದೆ. ಆದರೆ ಅಲ್ಲಿ ಯಾವುದೇ ಆರೋಗ್ಯ ಸುರಕ್ಷತೆ ಇಲ್ಲ. ಸಾರ್ವಜನಿಕರು ಅದನ್ನು ಸೇವಿಸುವಾಗ ಅವರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಕಡೆಯಿಂದ ಕಾರ್ಯಾಚರಣೆ ಮಾಡುವಂತೆ ಬಾಲಚಂದ್ರ ಸೊರಕೆ ಪ್ರಸ್ತಾಪಿಸಿದರು. ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಈ ಕುರಿತು ಆಹಾರ ಸುರಕ್ಷತೆಯ ಕುರಿತು ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ನಾವು ಈಗಾಗಲೇ ಕೆಲವು ಕಡೆ ಕಾರ್ಯಾಚರಣೆ ಮಾಡಿ ಕ್ರಮ ಕೈಗೊಂಡಿದ್ದೇವೆ ಎಂದರು.
ಬೆಳ್ಳಿಪ್ಪಾಡಿಯಲ್ಲಿ ಸ್ಮಶಾನ ಬೇಕೆಂದು ಮುದ್ದ ಪ್ರಸ್ತಾಪಿಸಿದರು. ತಾ.ಪಂ ಮಾಜಿ ಸದಸ್ಯ ಸಂಕಪ್ಪ ಅವರು ಮಾತನಾಡಿ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂದು ಪ್ರಸ್ತಾಪಿಸಿದರು. ದರ್ಬೆ ವೃತ್ತಕ್ಕೆ ಅಂಬೇಡ್ಕರ್ ವೃತ್ತ ನಾಮಕರಣ ಮಾಡಲು ಈ ಹಿಂದೆ ಪ್ರಸ್ತಾಪ ಮಾಡಿರುವುದನ್ನು ಪಾಲನಾ ವರದಿಯಲ್ಲಿ ಕೈ ಬಿಡಲಾಗಿದೆ. ಜೊತೆಗೆ ಈ ಕುರಿತು ಅಧಿಕಾರಿಗಳು ಚಿಂತನೆ ನಡೆಸುತ್ತಿಲ್ಲ ಎಂದು ಶೇಷಪ್ಪ ನೆಕ್ಕಿಲು ಪ್ರಸ್ತಾಪಿಸಿದರು. ಬೀಟ್ ಪೊಲೀಸರು ಗ್ರಾಮಗಳಲ್ಲಿ ಸಭೆ ನಡೆಸುತ್ತಿಲ್ಲ ಎಂದು ಶೇಷಪ್ಪ ನೆಕ್ಕಿಲು ಪ್ರಸ್ತಾಪಿಸಿದರು. ನಿಡ್ಪಳ್ಳಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಕೃಷ್ಣ ಅವರು ಪ್ರಸ್ತಾಪಿಸಿದರು. ಲೋಕೇಶ್ ಎಚ್.ಹೆಚ್ ಸಹಿತ ಹಲವಾರು ಮಂದಿ ವಿವಿಧ ಸಮಸ್ಯೆಗಳನ್ನು ಸಭೆಯಲ್ಲಿ ಮುಂದಿಟ್ಟರು. ಅಂಬೇಡ್ಕರ್ ನಿಗಮದ ಸಹಾಯಕ ನಿರ್ದೆಶಕರಿಗೆ ಮೈಸೂರಿಗೆ ವರ್ಗಾವಣೆ ಆಗಿದ್ದು ಅವರ ಸ್ಥಾನಕ್ಕೆ ಬೇರೆ ಯಾರನ್ನು ನಿಯೋಜಿಸದ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಸಭೆಗೆ ಹಾಜರಾಗಲು ಅಸಾಧ್ಯವಿದೆ. ಅಂಬೇಡ್ಕರ್ ನಿಗಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ದ.ಕ.ಜಿಲ್ಲೆಗೆ ಕಳುಹಿಸಿಕೊಡುವಂತೆ ಸಭೆಯ ಪಾಲನಾ ವರದಿಯಲ್ಲಿ ತಿಳಿಸಲಾಯಿತು.
ವೇದಿಕೆಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಕುಮಾರ್ ರೈ, ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಸುನಿಲ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಅವರು ಸಮಿತಿ ಪಾಲನಾ ವರದಿ ಮಂಡಿಸಿದರು.
ಜನರಿಗೆ ಕೆಲಸ ಕೊಡಿಸುವ ಬದಲು ಪಡೆಯುವ ಶಕ್ತಿ ಕೊಡಬೇಕು:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರಕಾರಿ ಕೆಲಸ ಕೊಡಿಸುವುದು ಮುಖ್ಯವಲ್ಲ. ಅವರಿಗೆ ಕೆಲಸ ಪಡೆಯುವ ಶಕ್ತಿ ಕೊಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳು ಅನೇಕ ಇದೆ. ಇದಕ್ಕೆ ಸರಕಾರಿ ವ್ಯವಸ್ಥೆಯಲ್ಲೇ ತರಬೇತಿ ನೀಡಲಾಗುತ್ತದೆ. ಈ ವೇಳೆ ಸ್ಟೈಪಂಡ್ ನೀಡಲಾಗುತ್ತದೆ. ಇಂತಹ ಪೂರ್ವ ತಯಾರಿಗೆ ಜನರನ್ನು ಪ್ರೇರೇಪಿಸಬೇಕು. ನಾನು ಕೂಡಾ ಇಂತಹ ಉಚಿತ ಸೌಲಭ್ಯದಿಂದಲೇ ಉನ್ನತ ಸ್ಥಾನ ಪಡೆದಿದ್ದೇನೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ತಹಶೀಲ್ದಾರ್ ನಿಸರ್ಗಪ್ರಿಯ ಅವರು ಮಾಹಿತಿ ನೀಡಿದರು. ಮುಕೇಶ್ ಕೆಮ್ಮಿಂಜೆ ಅವರು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದರೂ ಅವರಿಗೆ ತಕ್ಕ ಕೆಲಸ ಸಿಕ್ಕಿಲ್ಲ ಎಂಬ ಪ್ರಸ್ತಾಪಕ್ಕೆ ತಹಸೀಲ್ದಾರ್ ಅವರು ಈ ರೀತಿ ಉತ್ತರಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಅಂಬೇಡ್ಕರ್ ಭಾವಚಿತ್ರ ಕೊಡುವ ಭರವಸೆ
ತಾ.ಪಂ ಇ.ಒಗೆ ಚಪ್ಪಾಳೆತಟ್ಟಿ ಅಭಿನಂದನೆ
ಅಂಗನವಾಡಿ ಕೇಂದ್ರಗಳಲ್ಲಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಅಳವಡಿಸುವ ಕುರಿತು ಪ್ರಸ್ತಾಪಿಸಿದಾಗ ಅಂಗನವಾಡಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಈ ಕುರಿತು ಪತ್ರ ಬರೆಯಲಾಗಿದೆ ಎಂದು ಉತ್ತರಿಸಿದರು. ಈ ಕುರಿತು ಎಸ್ಸಿ, ಎಸ್ಟಿ ಸದಸ್ಯರು ಸರಕಾರಿ ಇಲಾಖೆಯಲ್ಲಿ ಕಡ್ಡಾಯವಾಗಿರುವ ಅಂಬೇಡ್ಕರ್ ಭಾವ ಚಿತ್ರ ಅಳವಡಿಸಲು ಕೂಡಾ ಪತ್ರ ಬರೆಯುವ ಅಗತ್ಯ ಇದೆಯಾ ಎಂದು ಪ್ರಶ್ನಿಸಿದರಲ್ಲದೆ ಯಾರಾದರೂ ದಾನಿಗಳು ನೀಡಿದರೂ ಭಾವಚಿತ್ರ ಹಾಕಬಹುದಲ್ಲ ಎಂದರು. ತಕ್ಷಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಮಧ್ಯೆ ಪ್ರವೇಶಿಸಿ ಅಂಗನವಾಡಿ ಕೇಂದ್ರಗಳಿಗೆ ಅಂಬೇಡ್ಕರ್ ಅವರ ಭಾವಚಿತ್ರ ಎಷ್ಟು ಬೇಕೆಂದು ಲೆಕ್ಕಕೊಡಿ. ನಾನು ಕೊಡುತ್ತೇನೆ ಎಂದರು. ಈ ವೇಳೆ ಸಭೆಯಲ್ಲಿದ್ದ ಎಸ್ಸಿ ಎಸ್ಟಿ ಸದಸ್ಯರು ಚಪ್ಪಾಳೆ ತಟ್ಟಿ ಇ.ಒ ಅವರನ್ನು ಅಭಿನಂದಿಸಿದರು.








