ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಕಚೇರಿ ಶುಭಾರಂಭ

0

ಪುತ್ತೂರು: ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಜಿಲ್ಲೆ ಪುತ್ತೂರು ಪ್ರಾದೇಶಿಕ ಕಚೇರಿಯು ಜ.18ರಂದು ದರ್ಬೆ ಬೈಪಾಸ್ ರಸ್ತೆಯ ಆರ್‌ಇಬಿ ಎನ್‌ಕ್ಲೇವ್ ಕಟ್ಟಡಲ್ಲಿ ಶುಭಾರಂಭಗೊಂಡಿತು.


ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ.ಎಲ್.ಎಚ್ ಮಂಜುನಾಥ ಮಾತನಾಡಿ, ಪ್ರಾದೇಶಿಕ ಕಚೇರಿಯ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಸೇವೆ ದೊರೆಯಲು ಸಹಕಾರಿಯಾಗಲಿದೆ. ಧರ್ಮಸ್ಥಳ ಶಾಖೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 11,000 ಸ್ವಸಹಾಯ ಸಂಘಗಳು ವ್ಯವಹರಿಸುತ್ತಿದ್ದು ಸುಮಾರು ರೂ.2500ಕೋಟಿ ವ್ಯವಹಾರ ನಡೆಯುತ್ತಿದೆ. ಶಾಖೆಯಲ್ಲಿ ಉತ್ತಮ ಸೇವೆ ದೊರೆಯುತ್ತಿದೆ. ಯೋಜನೆಯ 8500ಸಿಬಂದಿಗಳ ವ್ಯವಹಾರವೂ ಧರ್ಮಸ್ಥಳ ಶಾಖೆಯಲ್ಲಿ ನಡೆಯುತ್ತಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಟ್ಟು ರೂ.18,200ಕೋಟಿ ಸಾಲವಿದೆ ಎಂದರು.

ಬ್ಯಾಂಕ್ ಆಫ್ ಬರೋಡಾದ ಮೂಲಕ ಗ್ರೂಪ್ ಅಕೌಂಟ್‌ನ್ನು ಪ್ರಥಮವಾಗಿ ನೀಡಿದೆ. ಯೋಜನೆಯ ಮೂಲಕ ಬ್ಯಾಂಕ್ ಆಫ್ ಬರೋಡಾದಲ್ಲಿ 51 ಲಕ್ಷ ಗ್ರಾಹಕರಿದ್ದಾರೆ. ಜೊತೆಗೆ 40,000 ಸಿಬಂದಿಗಳ ವ್ಯವಹಾರವೂ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗೃಹ ಸಾಲವೇ ಮುಖ್ಯವಾಗಿರುತ್ತದೆ. ದಾಖಲೆಗಳ ಕೊರತೆಯಿಂದ ಎಲ್ಲರಿಗೂ ಗೃಹ ಸಾಲ ಪಡೆದುಕೊಳ್ಳಲು ಅನಾನುಕೂಲವಾಗುತ್ತದೆ. ಇದಕ್ಕಾಗಿ ಸ್ವಸಹಾಯ ಪದ್ದತಿಯಲ್ಲಿ ಗೃಹ ಸಾಲ ಹಾಗೂ ವ್ಯವಹಾರ ಸಾಲ ನೀಡುವ ಯೋಜನೆ ಪ್ರಾರಂಭಿಸುವಂತೆ ಎಲ್.ಎಚ್ ಮಂಜುನಾಥ್ ಸಲಹೆ ನೀಡಿದರು.

ಸಿರಿ ಗ್ರಾಮೋದ್ಯಮ ಸಂಸ್ಥೆಯ ಜನಾರ್ದನ ಮಾತನಾಡಿ, ಸಿರಿ ಗ್ರಾಮೋದ್ಯಮ ಸಂಸ್ಥೆಯ ಎಲ್ಲಾ ವ್ಯವಹಾರಗಳು ಬ್ಯಾಂಕ್ ಆಫ್ ಬರೋಡಾದ ಮೂಲಕ ನಡೆಯುತ್ತಿದೆ. ಬ್ಯಾಂಕ್‌ನವರಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತಿದ್ದು ಸಿರಿ ಅಭಿವೃದ್ಧಿಯಲ್ಲಿ ಬ್ಯಾಂಕ್ ಸಹಕಾರವಿದೆ ಎಂದರು.

ಬ್ಯಾಂಕ್ ಆಫ್ ಬರೋಡಾದ ವಲಯ ವ್ಯವಸ್ಥಾಪಕಿ ಗಾಯತ್ರಿ ಮಾತನಾಡಿ, ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕು ಹಾಗೂ ಕೊಡುಗು ಜಿಲ್ಲೆಯ ವ್ಯಾಪ್ತಿಗೆ ಸೇರಿದಂತೆ ಪುತ್ತೂರಿನಲ್ಲಿ ಪ್ರಾದೇಶಿಕ ಕಚೇರಿ ಪ್ರಾರಂಭಗೊಂಡಿದೆ. 2020ರಲ್ಲಿ ಪ್ರಾರಂಭಿಸಲಾಗಿದ್ದರೂ ಕೊರೋನಾದಿಂದ ವಿಳಂಬವಾಗಿದೆ. ಪ್ರಾದೇಶಿಕ ಕಚೇರಿಗೆ ಪುತ್ತೂರು ಉತ್ತಮ ಸ್ಥಳವಾಗಿದ್ದು ಇಲ್ಲಿಂದಲೇ ಎಲ್ಲಾ ಶಾಖೆಗಳ ಮೇಲ್ವಿಚಾರಣೆ ನಡೆಯಲಿದೆ. ಬ್ಯಾಂಕ್‌ನಿಂದ ಇನ್ಶೂರೆನ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಬ್ಯಾಂಕ್‌ನ ಡಿಜಿಎಂ ಜಯಚಂದ್ರನ್ ಮಾತನಾಡಿ, ಉತ್ತಮ ಅನುಭವೀ ಸಿಬಂದಿಗಳ ಮೂಲಕ ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದರು.

ಸನ್ಮಾನ;

ಕಾರ್ಯಕ್ರಮದ ಉದ್ಘಾಟಕರಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ.ಎಲ್.ಎಚ್ ಮಂಜುನಾಥರವರನ್ನು ಸನ್ಮಾನಿಸಲಾಯಿತು.

ಸಾಲಪತ್ರ ವಿತರಣೆ:

ಬ್ಯಾಂಕ್‌ನ ಗ್ರಾಹಕರಾದ ಅರುಣಾ ಕುಮಾರಿ, ಮಿನ್ಹಾಝ್ ಎಂಟರ್‌ಪ್ರೈಸಸ್, ಕೆಜಿಎನ್ ವುಡ್ & ಫರ್ನಿಚೇರ‍್ಸ್, ಎನ್. ಉಮೇಶ್, ಜಮಾಲ್ ಅಬ್ದುಲ್ಲಾ ಕಳೆಂಜ, ಯಶೋಧರ ಬೆಳ್ಳಾರೆ, ಗುರುಪ್ರಸಾದ್ ಕೆ. ಹಾಗೂ ಅಬ್ದುಲ್ ಶಕೂರ್ ಉಪ್ಪಿನಂಗಡಿಯವರಿಗೆ ಕಾರ್ಯಕ್ರಮದಲ್ಲಿ ಸಾಲದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಉಪ ವ್ಯವಸ್ಥಾಪಕ ವಿದ್ಯಾಧರ ಶೆಟ್ಟಿ ವಂದಿಸಿದರು. ಮಚ್ಚಿನ ಶಾಖೆಯ ಶಿವಪ್ರಸಾದ್ ಸುರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here