ನೆಲ್ಯಾಡಿ: ಶಾಲಾ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ

0

ವಿವೇಕಾನಂದರ ಹೆಸರಿನಲ್ಲಿ 10 ಸಾವಿರ ಶಾಲಾ ಕೊಠಡಿ ನಿರ್ಮಾಣ: ಬಿ.ಸಿ.ನಾಗೇಶ್

ನೆಲ್ಯಾಡಿ: ಸರಕಾರಿ ಉ.ಹಿ.ಪ್ರಾ.ಶಾಲೆ ನೆಲ್ಯಾಡಿ ಇಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಜ.18ರಂದು ಸಂಜೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್‌ರವರು ಶಿಲಾನ್ಯಾಸ ನೆರವೇರಿಸಿದರು.

ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಕಾಲೆ ಶಿಕ್ಷಣ ಪದ್ಧತಿಯೂ ಪರಾವಲಂಬಿಯಾಗಿ ಮಾಡಿ, ಸ್ವಾಭಿಮಾನ ಕಡಿಮೆ ಮಾಡಿದೆ. ಮಗುವಿಗೆ ಏನು ಬೇಕು ಎಂಬ ನೆಲೆಯಲ್ಲಿ ಹೊಸ ಶಿಕ್ಷಣ ಪದ್ಧತಿ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ 2015ರಲ್ಲಿಯೇ ಕೇಂದ್ರ ಸರಕಾರ ಟಾಸ್ಕ್‌ಪೋರ್ಸ್ ರಚನೆ ಮಾಡಿ 2020ರ ತನಕ ದೇಶದೆಲ್ಲೆಡೆ ಶಾಲಾ ಪೋಷಕರು, ಶಿಕ್ಷಣ ತಜ್ಞರ, ಶಿಕ್ಷಕರ, ಮಕ್ಕಳ, ರೈತರ ಅಭಿಪ್ರಾಯ ಕ್ರೋಢೀಕರಿಸಿ ಈಗ ಜಾರಿಗೊಳಿಸುತ್ತಿದೆ ಎಂದರು. ಕಳೆದ 5 ವರ್ಷಗಳ ಅವಧಿಯಲ್ಲಿ ಪ್ರಾಕೃತಿಕ ವಿಕೋಪ, ಕೋವಿಡ್‌ನಂತಹ ಸಂಕಷ್ಟ ಸ್ಥಿತಿಯಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲಿ 8 ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿ ನಿರ್ಮಾಣ ಆಗಿದೆ. ಈಗ ವಿವೇಕಾನಂದರ ಹೆಸರಿನಲ್ಲಿ 10 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ. ಬಸವರಾಜ್ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಮೀಸಲಿರಿಸಿದ್ದಾರೆ. ಸುರೇಶ್‌ಕುಮಾರ್ ಶಿಕ್ಷಣ ಸಚಿವರಾಗಿದ್ದ ವೇಳೆ 3 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ ಮಾಡಲಾಗಿದೆ. ಈಗ 13  ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಆಗಿದ್ದು ಕೋರ‍್ಟ್‌ನಲ್ಲಿ ಸಮಸ್ಯೆ ಪರಿಹಾರಗೊಂಡಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶಿಕ್ಷಕರೂ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಈ ಶೈಕ್ಷಣಿಕ ವರ್ಷದ ಆರಂಭದಲ್ಲೇ 34 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. 50 ಕ್ಕಿಂತ ಕಡಿಮೆ ಮಕ್ಕಳಿರುವ 138 ಸರಕಾರಿ ಪ್ರೌಢಶಾಲೆಗಳಿಗೂ 7 ಶಿಕ್ಷಕರ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅವರು ಮಾತನಾಡಿ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ’ವಿವೇಕ’ ಯೋಜನೆಯಡಿ ವಿವಿಧ ಶಾಲೆಗಳಲ್ಲಿ ಈ ವರ್ಷ 39 ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ನೆಲ್ಯಾಡಿ ಶಾಲೆಯಲ್ಲಿ 5 ಕೊಠಡಿಗಳ ನಿರ್ಮಾಣ ಆಗಲಿದೆ. ಸರಕಾರ ಹಾಗೂ ಸಿಆರ್‌ಎಸ್ ಫಂಡ್‌ನಿಂದ ಶಾಲೆಗಳ ಬೇಡಿಕೆ ಪೂರೈಕೆ ಮಾಡಲಾಗುವುದು ಎಂದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸುಧಾಕರ ಕೆ., ಕಡಬ ತಹಶೀಲ್ದಾರ್ ಟಿ.ರಮೇಶಬಾಬು, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಜಯಾನಂದ ಬಂಟ್ರಿಯಾಲ್, ಉಷಾಜೋಯಿ, ರೇಷ್ಮಾಶಶಿ, ಶ್ರೀಲತಾ ಸಿ.ಹೆಚ್., ಎಸ್‌ಡಿಎಂಸಿ ಅಧ್ಯಕ್ಷ ಬಿನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕ ಆನಂದ ಅಜಿಲ ವಂದಿಸಿದರು. ಸಹಶಿಕ್ಷಕ ವಿಮಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಜಿ.ಪಂ.ಮಾಜಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಮಹಮ್ಮದ್ ಇಕ್ಬಾಲ್, ಆನಂದ ಪಿಲವೂರು, ಸಲಾಂ ಪಡುಬೆಟ್ಟು, ನೆಲ್ಯಾಡಿ ಕ್ಲಸ್ಟರ್‌ನ ಸಿಆರ್‌ಪಿ ಪ್ರಕಾಶ್ ಬಾಕಿಲ, ರಾಮಕುಂಜ ಕ್ಲಸ್ಟರ್‌ನ ಸಿಆರ್‌ಪಿ ಮಹೇಶ್, ಶಿಕ್ಷಕರ ಸಂಘದ ಪದಾಧಿಕಾರಿ ಹೇಮಲತಾಪ್ರದೀಪ್, ದ.ಕ.ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಿಂಗರಾಜು ಕೆ.ಪಿ. ಸೇರಿದಂತೆ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯವರು, ನೆರೆಯ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸನ್ಮಾನ:

ಕ್ರೀಡೆಯಲ್ಲಿ ರಾಜ್ಯಮಟ್ಟದ ಸಾಧಕಿ, ಶಾಲೆಯ ವಿದ್ಯಾರ್ಥಿನಿ ಲೇನಾ ಬಿನೋಜ್, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ., ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಸಚಿವ ಎಸ್.ಅಂಗಾರ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನ ನಡೆಯಿತು.

ಮನವಿ ಸಲ್ಲಿಕೆ:

ನೆಲ್ಯಾಡಿ, ರಾಮಕುಂಜ, ಪುಚ್ಚೇರಿ, ಪಡುಬೆಟ್ಟು ಶಾಲೆಗಳ ವತಿಯಿಂದ ವಿವಿಧ ಬೇಡಿಕೆಯ ಮನವಿಯನ್ನು ಈ ಸಂದರ್ಭದಲ್ಲಿ ಸಚಿವರಾದ ಬಿ.ಸಿ.ನಾಗೇಶ್ ಹಾಗೂ ಎಸ್.ಅಂಗಾರ ಅವರಿಗೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here