ಜ.21, 22: ಇಚ್ಲಂಪಾಡಿ ಸೈಂಟ್ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನ ಸುವರ್ಣ ಮಹೋತ್ಸವ, ಪುತ್ತೂರು ಧರ್ಮಪ್ರಾಂತ್ಯದ ವಾರ್ಷಿಕೋತ್ಸವ

0

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಸೈಂಟ್ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನ ಸುವರ್ಣ ಮಹೋತ್ಸವ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ವಾರ್ಷಿಕೋತ್ಸವ ಜ.21 ಮತ್ತು ಜ.22ರಂದು ಇಚ್ಲಂಪಾಡಿ ಸೈಂಟ್ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ.

ಪ್ರವಾಸಿ ತಾಣಗಳಾದ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಇಚ್ಲಂಪಾಡಿಯಲ್ಲಿ ಪ್ರಕೃತಿ ರಮಣೀಯ ಸುಂದರ ಪ್ರದೇಶದಲ್ಲಿ ಗುಂಡ್ಯ ಹೊಳೆ ದಡದಲ್ಲಿ ಎತ್ತರ ಪ್ರದೇಶದಲ್ಲಿ ಸೈಂಟ್ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್ ನಿರ್ಮಾಣಗೊಂಡಿದೆ. ಚರ್ಚ್‌ನ ಸುತ್ತಲೂ ಹಸಿರು ಪರಿಸರ ಕಂಗೊಳಿಸುತ್ತಿದ್ದು ಭಕ್ತರನ್ನೂ ಕೈ ಬೀಸಿ ಕರೆಯುವಂತಿದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದಲ್ಲಿ ತಮ್ಮ ಸಂಕಷ್ಟಗಳೆಲ್ಲವೂ ನಿವಾರಣೆಯಾಗಿರುವ ಹಲವು ನಿದರ್ಶನಗಳೂ ಕಾಣಸಿಗುತ್ತವೆ. ಇಂತಹ ಸುಂದರ ಪರಿಸರ, ಪವಾಡಗಳ ಕ್ಷೇತ್ರವಾಗಿರುವ ಸೈಂಟ್ ತೋಮ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್ ಈಗ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿದೆ. ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಮಲಂಕರ ಧರ್ಮ ಸಭೆಯ ಅತೀ ವಂದನೀಯ ಪರಮ ಪೂಜ್ಯ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮೀಸ್ ಕಾಥೋಲಿಕೊಸ್, ನೂತನ ಧರ್ಮಾಧ್ಯಕ್ಷರುಗಳಾದ ಡಾ| ಆಂಟನಿ ಮಾರ್ ಸಿಲ್ವಾನೊಸ್, ಡಾ.ಮ್ಯಾಥ್ಯು ಮಾರ್ ಪೊಳಿಕಾರ್ಪಸ್ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಸಹಿತ ವಿವಿಧ ಚರ್ಚ್‌ಗಳ ಧರ್ಮಗುರುಗಳು, ಧರ್ಮಭಗಿಣಿಯರು, ರಾಷ್ಟ್ರೀಯ ಮುಖಂಡರು ಹಾಗೂ ಸಾವಿರಾರು ಭಕ್ತಾಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜ.21ರಂದು ಸಂಜೆ 5 ಗಂಟೆಗೆ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್‌ರವರು ಇಚ್ಲಂಪಾಡಿ ಗ್ರಾಮದ ತೈಪನ ಎಂಬಲ್ಲಿ ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ ಅವರ ಜಮೀನಿನಲ್ಲಿ ಚರ್ಚ್‌ಗೆ ದಾನವಾಗಿ ಅವರ ಕುಟುಂಬದವರು ನಿರ್ಮಾಣ ಮಾಡಿದ ಸೈಂಟ್ ಜಾರ್ಜ್‌ರ ಶಿಲುಬೆ ಗೋಪುರದ ಪವಿತ್ರೀಕರಣ ವಿಧಿ ವಿಧಾನ ನೆರವೇರಿಸುವರು. ನಂತರ ಚರ್ಚ್‌ನ ಮುಂಭಾಗದಲ್ಲಿ ಹೊಸದಾಗಿ ನಿರ್ಮಾಣಗೊಂಡ ಧ್ವಜಸ್ತಂಭ, ಪ್ರವೇಶ ದ್ವಾರದ ಉದ್ಘಾಟನೆ ನಡೆಯಲಿದೆ. ಬಳಿಕ ಚರ್ಚ್‌ನಲ್ಲಿ ಸಂಧ್ಯಾ ಪ್ರಾರ್ಥನೆ, ಗತಿಸಿದ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ನಡೆಯಲಿದೆ.

ಜ.22ರಂದು ಬೆಳಿಗ್ಗೆ 8.30ಕ್ಕೆ ಅತೀವಂದನೀಯ ಬಸೇಲಿಯೋಸ್ ಕ್ಲೀಮೀಸ್ ಕಾಥೋಲಿಕೋಸ್‌ರವರ ನೇತೃತ್ವದಲ್ಲಿ ಚರ್ಚ್‌ನಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ. ದಿವ್ಯಬಲಿ ಪೂಜೆ, ಅಗಲಿದ ಬಿಷಪ್ ಮೊರೋನ್ ಮಾರ್ ಸಿರಿಲ್ ಬಸೇಲಿಯೋಸ್ ಕಾಥೊಲಿಕೋಸ್ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ| ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ ಅವರ ಆತ್ಮಕ್ಕೆ ಶಾಂತಿಕೋರಿ ಪ್ರಾರ್ಥನೆ ನಡೆಯಲಿದೆ. ತದನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ’ಕಾರುಣ್ಯ ನಿಧಿ’ಎಂಬ ಚಾರಿಟಿ ಫಂಡ್‌ನ ಉದ್ಘಾಟನೆ ನಡೆಯಲಿದ್ದು ಜೊತೆಗೆ ಹಲವು ಚಾರಿಟಿ ಸೇವೆಗಳೂ ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರುಗಳಾದ ಫಾ. ಮೆಲ್ವಿನ್ ಮ್ಯಾಥ್ಯೂ ಒಐಸಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here