ಹಣದ ವಿಚಾರದಲ್ಲಿ ವ್ಯಕ್ತಿಗೆ ಹಲ್ಲೆ ; ತಮ್ಮನ ಅಪಹರಣ-ಬೆದರಿಕೆ

0

ಉಪ್ಪಿನಂಗಡಿ: ಸಹೋದರರಿಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರಲ್ಲಿ ತಮ್ಮನನ್ನು ಒತ್ತೆ ಇರಿಸಿಕೊಂಡು ಹಣ ತರುವಂತೆ ಬೇಡಿಕೆಯಿಟ್ಟು ಅಣ್ಣನನ್ನು ಮನೆಗೆ ಕಳುಹಿಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಪ್ರಕರಣಕ್ಕೆ ಸಂಬಂಧಿಸಿ ಕೊಯಿಲದ ಕೆ.ಸಿ. ಫಾರ್ಮ್ ಬಳಿಯ ನಿಜಾಮುದ್ದೀನ್ ಎಂಬವರು ಆರೋಪಿಗಳಾದ ಸಿದ್ದೀಕ್ ಜೆಸಿಬಿ ಕರುವೇಲು, ಇರ್ಷಾದ್ ಮಠ, ಶಾಫಿ ಗಡಿಯಾರ, ಅನ್ಸಾರ್ ಕೆಮ್ಮಾರ ಹಾಗೂ ಇತರರ ಮೇಲೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ…? “ಜ.19ರಂದು ಬೆಳಗ್ಗೆ 10:45ಕ್ಕೆ ನನಗೆ ಅವರಿಗೆ ಪರಿಚಯದ ಸಿದ್ದೀಕ್ ಜೆಸಿಬಿ ಕರುವೇಲು ಎಂಬಾತ ಫೋನ್ ಮಾಡಿದ್ದು, ಕೆಲಸವಿದೆ. ನೀನು ಉಪ್ಪಿನಂಗಡಿಯ ಗಾಂಧಿಪಾರ್ಕ್‌ಗೆ ಬಾ ಎಂದು ತಿಳಿಸಿದ್ದ. ಅದರಂತೆ ನಾನು ಅಲ್ಲಿಗೆ ತೆರಳಿದಾಗ ಅಲ್ಲಿ ಪರಿಚಯದ ಅನ್ಸಾರ್ ಕೆಮ್ಮಾರ ಎಂಬವರ ಕಾರಿನಲ್ಲಿ ಸಿದ್ದೀಕ್ ಜೆಸಿಬಿ ಕರುವೇಲು , ಶಾಫಿ ಗಡಿಯಾರ, ಇರ್ಷಾದ್ ಮಠ ಎಂಬವರಿದ್ದು, ಪೆರ್ನೆ ಕಡೆ ಕೆಲಸಕ್ಕೆ ಹೋಗುವ ಎಂದು ಹೇಳಿ ನನ್ನನ್ನು ಕಾರಿನಲ್ಲಿ ಕುಳ್ಳಿರಿಸಿ ತೆರಳಿದ್ದರು. ದಾರಿ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ಸ್ಕೂಟರ್‌ನಲ್ಲಿ ಬಂದು ಈ ಕಾರು ಹತ್ತಿದ್ದು, ಆಗ ಶಾಫಿ ಗಡಿಯಾರ ಕಾರಿನಿಂದಿಳಿದು ಸ್ಕೂಟರ್‌ನಲ್ಲಿ ಕಾರಿನ ಹಿಂದಿನಿಂದ ಬರುತ್ತಿದ್ದರು. ಇವರು ಕಾರನ್ನು ಮಲ್ಲೂರು ಎಂಬಲ್ಲಿಗೆ ತೆಗೆದುಕೊಂಡು ಹೋಗಿ ಅಲ್ಲಿದ್ದ ಮನೆಯೊಂದರ ಎದುರು ಕಾರನ್ನು ನಿಲ್ಲಿಸಿ ಮನೆಯೊಳಗೆ ನನ್ನನ್ನು ಕರೆದುಕೊಂಡು ಹೋದಾಗ ಅಲ್ಲಿ ಅಪರಿಚಿತ ಇನ್ನೂ ಕೆಲವು ಜನರಿದ್ದರು. ಆಗ ಅವರೆಲ್ಲಾ, ವಿದೇಶದಿಂದ ಬಂದ ನಿನ್ನ ತಮ್ಮ ಶಾರೂಕ್ ಎಲ್ಲಿದ್ದಾನೆ? ಎಂದು ನನ್ನಲ್ಲಿ ಕೇಳಿದ್ದಲ್ಲದೆ, ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ನನ್ನ ಮೊಬೈಲ್ ಫೋನ್ ಕಿತ್ತುಕೊಂಡು ತಮ್ಮ ಶಾರೂಕ್‌ಗೆ ಫೋನ್ ಮಾಡಿ ಕಡಂಬು ಎಂಬಲ್ಲಿಗೆ ಬರ ಹೇಳಿದ್ದರಲ್ಲದೆ, ಅಲ್ಲಿಂದ ನನ್ನನ್ನು ಕಾರಿನಲ್ಲಿ ಕಡಂಬು ಎಂಬಲ್ಲಿಗೆ ಕರೆದುಕೊಂಡು ಬಂದಿದ್ದರು. ಆಗ ಅಲ್ಲಿಗೆ ಬಂದ ತಮ್ಮ ಶಾರೂಕ್ ಹಾಗೂ ಆತನ ಜೊತೆಗಿದ್ದ ಫೈಝಲ್ ಎಂಬವರನ್ನು ಇದೇ ಕಾರಿನಲ್ಲಿ ಕುಳ್ಳಿರಿಸಿ, ಮತ್ತದೇ ಮಲ್ಲೂರಿನ ಮನೆಗೆ ಕರೆದುಕೊಂಡು ಹೋಗಿ ಶಾರೂಕ್‌ನಿಗೂ ಹಲ್ಲೆ ನಡೆಸಿದ್ದರು.

ಬಳಿಕ ಶಾರೂಕ್‌ನನ್ನು ಅಲ್ಲಿಯೇ ಒತ್ತೆ ಇಟ್ಟುಕೊಂಡ ಆರೋಪಿಗಳು 4 ಲಕ್ಷ ಹಣ ತಂದರೆ ಮಾತ್ರ ನಿನ್ನ ತಮ್ಮ ಶಾರೂಕ್‌ನನ್ನು ಬಿಡುತ್ತೇವೆ ಎಂದು ನನ್ನಲ್ಲಿ ಹೇಳಿ ನನ್ನ ಮೊಬೈಲ್ ಫೋನ್ ಅನ್ನು ಅವರೇ ಇಟ್ಟುಕೊಂಡು ಆರೋಪಿ ಅನ್ಸಾರ್ ಕೆಮ್ಮಾರ ಎಂಬಾತನ ಕಾರಿನಲ್ಲಿ ನನ್ನನ್ನು ಹಾಗೂ ಫೈಝಲ್‌ನನ್ನು ರಾತ್ರಿ 8:30ರ ಸುಮಾರಿಗೆ ಮನೆಗೆ ಕಳುಹಿಸಿದ್ದರು. ಮನೆ ತಲುಪಿದ ನಾನು ನಡೆದ ಘಟನೆಯನ್ನು ತಾಯಿಯಲ್ಲಿ ಹೇಳಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜ.20ರಂದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದೆನೆ. ಆರೋಪಿಗಳು ಹಣ ಸುಲಿಗೆ ಮಾಡುವ ಉದ್ದೆಶದಿಂದ ತನ್ನನ್ನು ಹಾಗೂ ತನ್ನ ತಮ್ಮನನ್ನು ಅಪಹರಿಸಿ, ಹಲ್ಲೆ ನಡೆಸಿದ್ದು, ಆತನನ್ನು ಒತ್ತೆ ಇರಿಸಿಕೊಂಡಿದ್ದಾರೆ” ಎಂದು ನಿಜಾಮುದ್ದೀನ್ ದೂರಿನಲ್ಲಿ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here