`ಜನ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಬಯಸುತ್ತಿದ್ದಾರೆ’:ಮಾಣಿಲದಲ್ಲಿ `ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ’ದಲ್ಲಿ ಶಾಸಕ ಮಠಂದೂರು

0

ಜನಪ್ರತಿನಿಧಿಗಳು, ಅಧಿಕಾರಿಗಳು ಒಂದಾದಲ್ಲಿ ಮಾತ್ರ ಗ್ರಾಮಸ್ಥರ ಸಮಸ್ಯೆ ಪರಿಹಾರ ಸಾಧ್ಯ:ರವಿಕುಮಾರ್ ಎಂ.ಆರ್.

15 ವರ್ಷಗಳಿಂದ ಮಾಣಿಲ ಅಭಿವೃದ್ಧಿ ಹೊಂದುತ್ತಾ ಸಾಗುತ್ತಿದೆ-ರಾಜೇಶ್ ಬಾಳೆಕಲ್ಲು

ವಿಟ್ಲ:ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಆಗಬೇಕಿದೆ.ಜನರೂ ಅದನ್ನು ಬಯಸುತ್ತಿದ್ದಾರೆ.ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ `ಗ್ರಾಮ ವಾಸ್ತವ್ಯ’ದಂತಹ ಕಾರ್ಯಕ್ರಮಗಳ ಮೂಲಕ ಉತ್ತಮ ಸಂದೇಶ ನೀಡಬೇಕಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಪ್ರತಿಯೊಬ್ಬರೂ ಸ್ವಾವಲಂಬಿಯಾಗಬೇಕೆನ್ನುವುದು ರಾಜ್ಯ ಸರಕಾರದ ಉದ್ದೇಶವಾಗಿದೆ.ಜನರ ಮನೆಬಾಗಿಲಿಗೆ ಬಂದು ಸರಕಾರದ ಸವಲತ್ತುಗಳನ್ನು ತಿಳಿಸುವ ಕೆಲಸ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಆಗುತ್ತಿದೆ.ಸರಕಾರದ ಭಾವನೆಯನ್ನು ಈಡೇರಿಸುವ ಕೆಲಸ ಜಿಲ್ಲಾಡಳಿತದಿಂದ ಆಗುತ್ತಿದೆ.ಗಡಿಭಾಗದಲ್ಲಿರುವ ಹತ್ತಾರು ಜ್ವಲಂತ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಅವಶ್ಯಕ ಎಂದೂ ಮಠಂದೂರು ಹೇಳಿದರು.

ಬಂಟ್ವಾಳ ತಾಲೂಕಿನ ಮಾಣಿಲದ ಸರಕಾರಿ ಪ್ರೌಢಶಾಲೆಯಲ್ಲಿ ಜ.21ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅವರ `ಗ್ರಾಮವಾಸ್ತವ್ಯ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಇಲಾಖೆಗಳಿಗೆ ಗ್ರಾಮದ ಸಂಪರ್ಕ ಕಲ್ಪಿಸಲು ಗ್ರಾಮ ವಾಸ್ತವ್ಯ ಪ್ರಮುಖ ಕಾರಣವಾಗಿದೆ.ಗಡಿಗ್ರಾಮದ ಜನರು ಅನುಭವಿಸುತ್ತಿರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕು.ಅಧಿಕಾರಿ, ಜನಪ್ರತಿನಿಧಿಗಳು ಗ್ರಾಮದೆಡೆಗೆ ತೆರಳಿದಾಗ ಜನರ ಸಮಸ್ಯೆ ಶೀಘ್ರ ಪರಿಹಾರವಾಗಲು ಸಾಧ್ಯವಾಗುತ್ತದೆ.ದ.ಕ.ಜಿಲ್ಲೆಯ ಗಡಿಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ.ಕಂದಾಯ ಇಲಾಖೆ ಸಮಸ್ಯೆ ನೂರಕ್ಕೆ ನೂರು ಪರಿಹಾರವನ್ನು ಕಂಡರೆ, ಜನಪ್ರತಿನಿಧಿಗಳೂ ನಿರಾಳರಾಗುತ್ತಾರೆ.ಮರಳು, ಕೆಂಪುಕಲ್ಲು, ಪ್ರಮಾಣಪತ್ರಗಳು, ಹೀಗೆ ಸಮಸ್ಯೆಗಳು ಹಲವು ಇದೆ ಎಂದು ಮಠಂದೂರು ಹೇಳಿದರು.

ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ ಜನರಿಗೆ ಹತ್ತಿರವಾದಷ್ಟು ಸಮಸ್ಯೆಗೆ ಪರಿಹಾರ ದೊರಕುತ್ತದೆ.ಸಮಸ್ಯೆಯನ್ನು ಬಗೆಹರಿಸುವ ಕೆಲಸವಾಗಬೇಕು.ಅಧಿಕಾರಿಗಳಿಗೆ ಸಾಮಾನ್ಯ ಜನರ ಬವಣೆಯನ್ನು ತಿಳಿದುಕೊಳ್ಳಲು ಇದು ಸುಯೋಗ.ಇಲ್ಲಿಗೆ ಬಂದಿರುವ ಅಧಿಕಾರಿಗಳ ಬಳಿಗೆ ತೆರಳಿ ಸರಕಾರದ ಸವಲತ್ತುಗಳನ್ನು ತಿಳಿಯುವ ಪ್ರಯತ್ನ ಗ್ರಾಮಸ್ಥರಿಂದಲೂ ಆಗಬೇಕಿದೆ ಎಂದು ಶಾಸಕರು ಹೇಳಿದರು.

ಜನಪ್ರತಿನಿಧಿಗಳು, ಅಧಿಕಾರಿಗಳು ಒಂದಾದಲ್ಲಿ ಸಮಸ್ಯೆ ಪರಿಹಾರ: ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಅವರು ಮಾತನಾಡಿ, ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.ಸಾರ್ವಜನಿಕರ ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮ ಅತ್ಯಂತ ಪ್ರಯೋಜನಕಾರಿಯಾಗಿದೆ.ಗ್ರಾಮದ ಪ್ರಜೆಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಪ್ರಯತ್ನ ಇದಾಗಿದೆ.ಯಾವುದೇ ಕ್ಷೇತ್ರದಲ್ಲಿ ಪರಿಪೂರ್ಣ ಕೆಲಸವಾಗಲು ಜನಪ್ರತಿನಿಧಿ, ಅಧಿಕಾರಿ ವರ್ಗ ಒಂದಾದಲ್ಲಿ ಮಾತ್ರ ಸಾಧ್ಯ ಎಂದರು.ಸ್ಥಳೀಯವಾಗಿ ಹಲವಾರು ವರುಷಗಳಿಂದ ಬಾಕಿ ಇರುವ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವಲ್ಲಿ ಈ ಕಾರ್ಯಕ್ರಮ ಪ್ರಸ್ತುತ ಎಂದು ಹೇಳಿದ ಡಿಸಿಯವರು,ಕಾರ್ಯಗಳಿಗೆ ತಾಲೂಕು ಮಟ್ಟದಲ್ಲಿ ಅನುಮೋದನೆ ದೊರಕದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಪರಿಣಾಮಕಾರಿಯಾಗಿ ಮೂಡಿಬರುತ್ತದೆ ಎಂದರು.

15 ವರ್ಷಗಳಿಂದ ಮಾಣಿಲ ಅಭಿವೃದ್ಧಿ ಹೊಂದುತ್ತಿದೆ:
ಮಾಣಿಲ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಬಾಳೆಕಲ್ಲುರವರು ಮಾತನಾಡಿ ಮಾಣಿಲ ಒಂದು ಕುಗ್ರಾಮಾವಾಗಿತ್ತು.ಅನೇಕ ವರ್ಷಗಳಿಂದ ಹಿಂದುಳಿದ ಮಾಣಿಲ 15 ವರ್ಷಗಳಿಂದ ಅಭಿವೃದ್ಧಿ ಹೊಂದುತ್ತಾ ಹೋಗಿದೆ. ಗ್ರಾಮದ ಅಭಿವೃದ್ದಿಗೆ ಶಾಸಕರ ಕೊಡುಗೆ ಅಪಾರವಾಗಿದೆ.ಜನರ ಸಮಸ್ಯೆಯನ್ನು ಅಧಿಕಾರಿಗಳು ಆದಷ್ಟು ಪರಿಹರಿಸುವ ಪ್ರಯತ್ನ ಮಾಡಬೇಕಾಗಿ ಮನವಿ ಮಾಡಿದರಲ್ಲದೆ,ಹಲವು ಬೇಡಿಕೆಗಳ ಪಟ್ಟಿಯನ್ನು ಮಂಡಿಸಿದರು.

84 ವಿದ್ಯಾರ್ಥಿಗಳಿಗೆ ಒಬ್ಬನೇ ಶಿಕ್ಷಕ:
ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 84ವಿದ್ಯಾರ್ಥಿಗಳಿದ್ದು, ಓರ್ವ ಶಿಕ್ಷಕ ಮಾತ್ರ ಇರುವುದಾಗಿ ದೂರು ಬಂದಿತ್ತು.ಈ ಕುರಿತು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಸ್ಪಷ್ಟನೆಯನ್ನು ಕೇಳಿದ ಸಮಯ, ಅನುದಾನಿತ ಶಾಲೆಗೆ ಯಾವುದೇ ಶಿಕ್ಷಕರನ್ನು ಹಾಕುವಂತಿಲ್ಲ ಎಂದರು.ಈ ಬಗ್ಗೆ ತಕ್ಷಣ ಆಡಳಿತ ಮಂಡಳಿಗೆ ಆದೇಶ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ಶಿಕ್ಷಣಾಧಿಕಾರಿಗೆ ಆದೇಶ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸವಲತ್ತುಗಳನ್ನು ವಿತರಿಸಲಾಯಿತು.ಮಾಣಿಲ ಗ್ರಾ.ಪಂ.ಅಧ್ಯಕ್ಷೆ ವನಿತಾ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಯೋಜನಾ ನಿರ್ದೇಶಕ ಕೆ.ಜಯರಾಮ್, ಡಿಡಿಎಲ್‌ಆರ್ ನಿರಂಜನ್, ತಹಸೀಲ್ದಾರ್ ದಯಾನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಪತಹಸೀಲ್ದಾರ್ ವಿಜಯ ವಿಕ್ರಮ ಸ್ವಾಗತಿಸಿದರು.ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರೂಪಿಸಿದರು.

ಸಮಸ್ಯೆ ಸರಿಯಾಗುವ ತನಕ ತೆರಿಗೆ ಪಾವತಿಸಬೇಡಿ
ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಬಂದ ಅರ್ಜಿಗಳನ್ನು ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನು ಕರೆದು ಅವರಿಂದ ಸಮಸ್ಯೆಗೆ ಉತ್ತರ ಪಡೆದುಕೊಂಡರು.ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳಲು ಯತ್ನಿಸಿದ ಕೆಲವೊಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಯವರು ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.ಪಾರಂಪರಿಕವಾಗಿ ಬಂದ ಹಲವು ಮನೆಗಳು, ಕೃಷಿಕರು ಕೃಷಿ ಉದ್ದೆಶಕ್ಕಾಗಿ ಬಳಸುವ ಕಟ್ಟಡಗಳ ದಾಖಲೆ ಬದಲಾವಣೆ ಸಮಯ ಭೂಪರಿವರ್ತನೆ ಹಾಗೂ 9/11 ಇಲ್ಲದೇ ಹೋದರೆ ಪಂಚಾಯತ್‌ನಿಂದ ಕದ ಸಂಖ್ಯೆ ಬದಲಾವಣೆ ಮಾಡುತ್ತಿಲ್ಲ ಎಂಬ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮುಂದೆ ಇಟ್ಟಾಗ ಸಮಸ್ಯೆ ಸರಿಯಾಗುವ ತನಕ ಯಾವುದೇ ಕಾರಣಕ್ಕೂ ತೆರಿಗೆಯನ್ನು ಪಾವತಿಸಬೇಡಿ ಎಂದರಲ್ಲದೆ, ಗ್ರಾ.ಪಂ.ನವರು ಸಮಸ್ಯೆ ಉಂಟು ಮಾಡಿದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸುವಂತೆ ಸೂಚನೆ ನೀಡಿದರು.ಇನ್ನುಳಿದಂತೆ, ಹಲವಾರು ಆದೇಶವನ್ನು ಜಿಲ್ಲಾಧಿಕಾರಿಯವರು ಸ್ಥಳದಲ್ಲೇ ಮಾಡಿರುವುದರಿಂದಾಗಿ ಗ್ರಾಮವಾಸ್ತವ್ಯ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

LEAVE A REPLY

Please enter your comment!
Please enter your name here