ಕಡಮಜಲು ಸುಭಾಸ್ ರೈಯವರಿಗೆ ದ.ಕ. ಜಿಲ್ಲಾ ಮಟ್ಟದ ‘ವಿಕ ಸೂಪರ್ ಸ್ಟಾರ್ ರೈತ’ ಪುರಸ್ಕಾರ – ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

0

ಪುತ್ತೂರು: ವಿಜಯಕರ್ನಾಟಕ ಪ್ರಸ್ತುತಪಡಿಸುವ 5 ನೇ ಆವೃತ್ತಿಯ ‘ವಿಕ ಸೂಪರ್ ಸ್ಟಾರ್ ರೈತ’ ಪುರಸ್ಕಾರಕ್ಕೆ ವೈಜ್ಞಾನಿಕ ಕೃಷಿಕ ಕಡಮಜಲು ಸುಭಾಸ್ ರೈ ರವರು ಆಯ್ಕೆಯಾಗಿದ್ದು, ಜ. 24 ರಂದು ಮಂಗಳೂರಿನ‌ ವಾಮಂಜೂರು ಚರ್ಚ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪುರಸ್ಕಾರ ಸ್ವೀಕರಿಸಿದರು.

5 ವರ್ಷಗಳಿಂದ ಸಾಧಕ ಕೃಷಿಕರ ಪುರಸ್ಕಾರ ಕಾರ್ಯಕ್ರಮ ರಾಜ್ಯದಾದ್ಯಂತ ಮಾಡುತ್ತಿರುವ ವಿಜಯ ಕರ್ನಾಟಕವು ದ.ಕ. ಜಿಲ್ಲೆಯಲ್ಲಿ ಈ ಬಾರಿ 8 ಮಂದಿ ಸಾಧಕ ಕೃಷಿಕರನ್ನು ಆಯ್ಕೆ ಮಾಡಿತ್ತು.

ಸಮಗ್ರ, ವೈಜ್ಞಾನಿಕ ಹಾಗೂ ಪ್ರಗತಿಪರ ಗೇರು ಕೃಷಿಯಲ್ಲಿ ಪುತ್ತೂರಿನಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕಡಮಜಲು ಸುಭಾಸ್ ರೈಯವರು ಆಯ್ಕೆಯಾಗಿದ್ದರು.

ಭತ್ತದ ಕೃಷಿಯೊಂದಿಗೆ ಸಾವಯವ ಕೃಷಿಕ ಪುರುಷೋತ್ತಮ ಕೋಟ್ಯಾನ್ ಕಟೀಲು, ಬರಡು ಕೃಷಿ ಭೂಮಿಯಲ್ಲಿ ಫಸಲು ತೆಗೆದ ಕೃಷಿಕ ಪದ್ಮನಾಭ ಕೋಟ್ಯಾನ್ ಉಳಾಯಿಬೆಟ್ಟು, ಸಾವಯವ ಕೃಷಿಕ ನಿಶ್ಚಲ್ ಜಿ. ಶೆಟ್ಟಿ ಇರಾ, ಸಮಗ್ರ ಕೃಷಿಕ ನಿರಂಜನ್ ಬಿ., ಪ್ರಗತಿಪರ ಹೈನುಗಾರ ಲಿಯೋ ಫೆಲಿಕ್ಸ್ ಫೆರ್ನಾಂಡೀಸ್ ಬಂಟ್ವಾಳ, ಸಮಗ್ರ ಕೃಷಿಕ ಅರವಿಂದ ಡಿ’ಸೋಜಾ ವಿಕ ಸೂಪರ್ ಸ್ಟಾರ್ ರೈತ ಪುರಸ್ಕಾರ ಸ್ವೀಕರಿಸಿದರು.

ಹಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದ ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ, ವಾಮಂಜೂರು ಚರ್ಚ್ ಧರ್ಮಗುರು ಜೇಮ್ಸ್ ಡಿ’ಸೋಜಾ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚ‌ನ ನೀಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಂಸಿಎಫ್ ಚೀಫ್ ಆಪರೇಟಿಂಗ್ ಆಫೀಸರ್ ಎಸ್. ಗಿರೀಶ್ ‘ಅನ್ನದಾತನಿಗೆ ಸನ್ಮಾನಕ್ಕಾಗಿ ನಮಗೆಲ್ಲಾ ಹೆಮ್ಮೆಯಿದೆ’ ಎಂದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ, ಯೂನಿಯನ್ ಬ್ಯಾಂಕ್ ಪ್ರಾಂತೀಯ ಮುಖ್ಯಸ್ಥ ಮಹೇಶ್, ದ.ಕ. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಸೀತಾ ಎಂ.ಸಿ., ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್. ಆರ್. ನಾಯಕ್, ದ.ಕ. ಹಾಲು ಉತ್ಪಾದಕ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಅಶೋಕ್ ಚೂಂತಾರು ಸುಳ್ಯ ಉಪಸ್ಥಿತರಿದ್ದರು. ಪಚ್ಚನಾಡಿ ಕ್ಷೇತ್ರದ ಕಾರ್ಪೋರೇಟರ್ ಸಂಗೀತಾ ಆರ್. ನಾಯಕ್ ಮೆರವಣಿಗೆ ಉದ್ಘಾಟಿಸಿದರು. ವಿಕ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರೆಸ್ಪಾನ್ಸ್ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಡಿ. ಉಪಸ್ಥಿತರಿದ್ದರು. ರಾಜೇಶ್ ಕಿಣಿ ಪ್ರಾರ್ಥಿಸಿದರು. ಮಂಗಳೂರು ಆವೃತ್ತಿಯ ಮುಖ್ಯ ವರದಿಗಾರ ಮಹಮ್ಮದ್ ಪಡುಬಿದ್ರಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here