ನೆಟ್ಟಣ: ರೈಲೇರುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಪ್ರಯಾಣಿಕನ ಕಾಲು ಮುರಿತ

0

ಕಡಬ:ರೈಲಿಗೆ ಹತ್ತುವ ವೇಳೆ ಕಾಲುಜಾರಿ ಬಿದ್ದು ಪ್ರಯಾಣಿಕನ ಕಾಲು ಮುರಿತಕ್ಕೊಳಗಾಗಿರುವ ಘಟನೆ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಸಂಭವಿಸಿದೆ. ನೆಟ್ಟಣದ ನವಜೀವನ ಕಾಲನಿ ನಿವಾಸಿ ದೇವಸಹಾಯ ಗಾಯಗೊಂಡವರು. ಜ.23ರ ಮಧ್ಯಾಹ್ನ ಮಂಗಳೂರಿಗೆ ತೆರಳುವ ರೈಲು ಹೊರಡಲಾರಂಭಿಸುವ ವೇಳೆ ರೈಲು ಹತ್ತಲು ಯತ್ನಿಸಿದಾಗ ಅವರು ಕಾಲು ಜಾರಿ ಘಟನೆ ಸಂಭವಿಸಿದೆ. ಕಾಲಿಗೆ ಗಂಭೀರ ಗಾಯಗೊಂಡು ಅವರು ರೈಲ್ವೇ ಹಳಿ ಮೇಲೆ ಬಿದ್ದಿದ್ದರೂ ಯಾರೂ ಮೇಲೆತ್ತಲು ಮುಂದೆ ಬಂದಿರಲಿಲ್ಲ. ಬಳಿಕ ನೆಟ್ಟಣದ ಪ್ರಸಾದ್ ಹಾಗೂ ಪ್ರಕಾಶ್ ಎಂಬವರು ಗಾಯಾಳುವನ್ನು ರೈಲ್ವೇ ಹಳಿಯಿಂದ ಎತ್ತಿ ಮೇಲೆ ತಂದು ಜೀಪಿನಲ್ಲಿ ಕಡಬ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಂಬ್ಯುಲೆನ್ಸ್‌ನಲ್ಲಿ ಪುತ್ತೂರಿಗೆ ಕರೆದೊಯ್ದು ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡನೇ ಅವಘಡ:

ನೆಟ್ಟಣದ ರೈಲು ನಿಲ್ದಾಣ ಪ್ರಮುಖ ರೈಲು ನಿಲ್ದಾಣವಾಗಿದೆ.ಇಲ್ಲಿ ಕಳೆದ ಆಗಸ್ಟ್‌ನಲ್ಲಿ ರೈಲು ಡಿಕ್ಕಿಯಾಗಿ ವ್ಯಕ್ತಿಯೋರ್ವರ ಕಾಲು ಮುರಿತಕ್ಕೊಳಗಾಗಿತ್ತು.ಇದಾದ ಕೆಲ ತಿಂಗಳ ಅಂತರದಲ್ಲಿದೀಗ ಎರಡನೇ ಅವಘಡ ಸಂಭವಿಸಿದೆ.

ಮೇಲ್ಸೇತುವೆ ಇಲ್ಲದಿರುವುದೇ ಕಾರಣ?

ಘಟನೆ ಸಂಭವಿಸಿದ ದಿನ ನಿಲ್ದಾಣದ ಭಾಗದಲ್ಲಿ ಬೆಂಗಳೂರು ರೈಲು ನಿಂತಿದ್ದು, ಎರಡನೇ ಹಳಿಯಲ್ಲಿ ಮಂಗಳೂರು ರೈಲು ನಿಂತಿತ್ತು. ಬೆಂಗಳೂರು ರೈಲು ತೆರಳಿದ ಬಳಿಕ ದೇವಸಹಾಯ ಅವರು ಹಳಿ ದಾಟಿ ಎರಡನೇ ಹಳಿಯಲ್ಲಿ ನಿಂತಿದ್ದ ರೈಲು ಹತ್ತಲು ಯತ್ನಿಸಿದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೇಲ್ಸೇತುವೆ ಇಲ್ಲದೆ ಇರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here