‘ಗಡಿನಾಡಿನಲ್ಲಿ ಕನ್ನಡದ ಇಂಪು ಕಂಪು ಹರಡಬೇಕು’
ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ನೃತ್ಯೋಪಾಸನಾ ಕಲಾಕೇಂದ್ರ ಆಯೋಜನೆ
ಪುತ್ತೂರು: 75 ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರಕಾರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ನೃತ್ಯೋಪಾಸನಾ ಕಲಾಕೇಂದ್ರ ಆಯೋಜನೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಡೆಯುವ ಗಡಿನಾಡ ಸಂಸ್ಕೃತಿ ಉತ್ಸವ – ಗೌರವ ಸನ್ಮಾನ, ವಿಚಾರಗೋಷ್ಠಿ, ಸಾಂಸ್ಕೃತಿಕ ಉತ್ಸವಗಳಿಗೆ ಜ. 26 ರಂದು ಬೆಳಿಗ್ಗೆ ಚಾಲನೆ ದೊರೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ‘ಭಾರತದಲ್ಲಿನ ಮೂಲ ಚಿಂತನೆಗಳನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಆದರೂ ನಮ್ಮಲ್ಲಿನ ವೈವಿಧ್ಯತೆ ನಮ್ಮೆಲ್ಲರನ್ನು ಒಂದುಗೂಡಿಸಿ ಬದುಕಿಸಿದೆ’ ಎಂದು ಹೇಳಿ ಶುಭಾಶಯ ಸಲ್ಲಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಧಕರಿಗೆ ಸನ್ಮಾನ
ಆರು ದಶಕಗಳ ಕಾಲ ಕಲಾಸೇವೆ ಮಾಡಿರುವ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ಕೊಳಲು, ಚೆಂಡೆ ಮದ್ದಳೆಯಂತಹ ಚರ್ಮವಾದ್ಯ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ, ರಾಜರತ್ನಂ ದೇವಾಡಿಗ, ಯಕ್ಷಗಾನ ತರಗತಿ, ಜಾಗೃತಿ ಕಾರ್ಯಕ್ರಮ, ತಾಳಮದ್ದಳೆ, ಯುವ ಕಲಾವಿದರಿಗೆ ಪ್ರೋತ್ಸಾಹ, ಗಡಿನಾಡ ಪ್ರದೇಶದಲ್ಲಿ ಯಕ್ಷಗಾನ, ಪಾರಂಪರಿಕ ಸೊಬಗಿನ ಉಳಿವಿಗೆ ಪ್ರಯತ್ನಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ, ಸಾಂಸ್ಕೃತಿಕ ಪ್ರತಿಷ್ಠಾನದ ಪರವಾಗಿ ಅದರ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಅರ್ಥಶಾಸ್ತ್ರಜ್ಞ, ಸಂಶೋಧನಾ ಮಾರ್ಗದರ್ಶಕ 40 ವರ್ಷಗಳ ಮಿಕ್ಕಿ ಅಧ್ಯಾಪನ ವೃತ್ತಿ ಮಾಡಿರುವ ಡಾ. ವಿಘ್ನೇಶ್ವರ ವರ್ಮುಡಿ, ಭರತನಾಟ್ಯ ವಿದುಷಿ ಅನುಪಮಾ ರಾಘವೇಂದ್ರ ರವರಿಗೆ ಸನ್ಮಾನ ನಡೆಯಿತು.
ಸನ್ಮಾನಿತರ ಪರವಾಗಿ ಕುಂಬ್ಳೆ ಶ್ರೀಧರ ರಾವ್ ಹಾಗೂ ಡಾ. ವಿಘ್ನೇಶ್ವರ ವರ್ಮುಡಿಯವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಶುಭಾಶಿಸಿದರು. ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಉಪಸ್ಥಿತರಿದ್ದರು.
ನೃತ್ಯೋಪಾಸನಾ ಕಲಾಕೇಂದ್ರದ ವ್ಯವಸ್ಥಾಪನಾ ಟ್ರಸ್ಟಿ, ವಿದುಷಿ ಶಾಲಿನಿ ಆತ್ಮಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಹೂ ನೀಡಿ ಗೌರವಿಸಿದರು.
ಭಾರತ ಮಾತೆಯ ಭಾವಚಿತ್ರ, ವಿವೇಕಾನಂದರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.
ನೃತ್ಯೋಪಾಸನಾ ಕಲಾಕೇಂದ್ರದ ಶಿಷ್ಯೆ ಸಿಂಚನಾ ಎಸ್. ಭಟ್ ನೇರಳಕಟ್ಟೆ ಪ್ರಾರ್ಥಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಮೈತ್ರಿ ಭಟ್ ಸ್ವಾಗತಿಸಿ, ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ವಂದಿಸಿದರು.
ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಪ್ರೊ. ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಆತ್ಮಭೂಷಣ್ ರವರು ಅತಿಥಿಗಳಿಗೆ ಗೌರವ ಸ್ಮರಣಿಕೆ ನೀಡಿದರು.