ಪುತ್ತೂರು:ನಗರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜು ಪೈಪು ಅಳವಡಿಸುವ ಕಾಮಗಾರಿಯಲ್ಲಿ ಅಲ್ಲಲ್ಲಿ ರಸ್ತೆಗಳು ಕೆಟ್ಟು ಹೋಗಿದ್ದು ಅದನ್ನು ಸಮರ್ಪಕವಾಗಿ ಮರು ದುರಸ್ತಿಗೊಳಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಜಲಸಿರಿ ಅಧಿಕಾರಿಗಳನ್ನು ತರಾಟೆಗೆತ್ತಿಗೊಂಡ ಘಟನೆ ಜ.27ರಂದು ಪುತ್ತೂರು ನಗರಸಭೆ ಕಚೇರಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಎಮ್.ಆರ್.ಅಧಿಕಾರ ಸ್ವೀಕರಿಸಿದ ಬಳಿಕ ವಿವಿಧ ಇಲಾಖೆಗಳಿಗೆ ಭೇಟಿ ನೀಡುತ್ತಿದ್ದು ಜ.27ರಂದು ಪುತ್ತೂರಿಗೆ ಆಗಮಿಸಿದ ಸಂದರ್ಭ ಪುತ್ತೂರು ನಗರಸಭೆಗೂ ಭೇಟಿ ನೀಡಿದ್ದಾರೆ. ಕಚೇರಿಯೊಳಗೆ ತೆರಳಿ ಬಳಿಕ ಕಟ್ಟಡದ ಮೇಲಂತಸ್ತಿನಲ್ಲಿರುವ ಕಡತಗಳ ನೂತನ ಕೊಠಡಿಗೆ ತೆರಳಿ ಕಡತಗಳನ್ನು ವಾರದೊಳಗೆ ಸರಿಯಾಗಿ ಜೋಡಿಸುವಂತೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ಸೂಚನೆ ನೀಡಿದರು. ಈಗಾಗಲೇ ನೂತನ ಕೊಠಡಿ ಮಾಡಲಾಗಿದ್ದು, ಕಡತಗಳನ್ನು ಸಮರ್ಪಕವಾಗಿ ಜೋಡಣೆ ಮಾಡಲಾಗುತ್ತಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಲ್ಲಿ ರಸ್ತೆಗಳು ಕೆಟ್ಟು ಹೋಗಿರುವುದರ ಕುರಿತು ನಗರಸಭೆಯಿಂದ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಜಲರಿಸಿ ಯೋಜನಾ ಕಾರ್ಯಪಾಲಕ ಇಂಜಿನಿಯರ್ ಮಾದೇಶ್ ಅವರನ್ನು ಕರೆಸಿದ ಜಿಲ್ಲಾಧಿಕಾರಿಯವರು ಕಾಮಗಾರಿ ವರದಿ ಪಡೆದರು. ಅಲ್ಲಲ್ಲಿ ಪೈಪ್ ಅಳವಡಿಕೆಗೆ ಅಗೆದ ರಸ್ತೆಗಳನ್ನು ಸಮರ್ಪಕವಾಗಿ ದುರಸ್ತಿಗೊಳಿಸದ ಕುರಿತು ಮಾದೇಶ್ ಅವರನ್ನು ತರಾಟೆಗೆತ್ತಿಕೊಂಡು, ಕೆಟ್ಟು ಹೋಗಿರುವ ಎಲ್ಲಾ ರಸ್ತೆಗಳನ್ನು ವಾರದೊಳಗೆ ದುರಸ್ತಿ ಮಾಡಿಸಲು ಸೂಚನೆ ನೀಡಿದರು.ಇದಾದ ಬಳಿಕ ನಗರಸಭೆ ಕಚೇರಿಯ ಎಲ್ಲಾ ವಿಭಾಗಗಳಿಗೆ ತೆರಳಿ ಸಿಬ್ಬಂದಿಗಳಿಂದ ಅವರ ಕೆಲಸದ ಕುರಿತು ಮಾಹಿತಿ ಪಡೆದರು. ಪೌರಾಯುಕ್ತ ಮಧು ಎಸ್ ಮನೋಹರ್, ನೀರಿನ ವಿಭಾಗದ ವಸಂತ್ ಉಪಸ್ಥಿತರಿದ್ದರು.