






- ತ್ಯಾಜ್ಯ ತೆರವು ಮಾಡದಿದ್ದಲ್ಲಿ ಸಾರ್ವಜನಿಕರು ನೇರ ನನಗೆ ದೂರು ನೀಡಿ – ಇ.ಒ


ಪುತ್ತೂರು: ಕೇಂದ್ರ ಸರಕಾರದ ಜಲ ಶಕ್ತಿ ಮಂತ್ರಾಲಯವು ಹೊರಡಿಸಿರುವ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಹಂತ ೨ರ ಮಾರ್ಗಸೂಚಿಯಂತೆ ಸ್ವಚ್ಚತಾ ಕಾರ್ಯ ಆರಂಭಗೊಂಡಿದ್ದು, ತ್ಯಾಜ್ಯ ಎಸೆದವರ ಮೇಲೆ ದಂಡನಾ ಕ್ರಮ ಜರಗಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿನ ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯವನ್ನು ಒಂದು ಬಾರಿ ತೆರವು ಮಾಡಬೇಕೆಂದು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಲ್ಲಾ ಗ್ರಾ.ಪಂಗಳಿಗೆ ಸೂಚನೆ ನೀಡಿದ್ದಾರೆ.





ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ ಹಂತ ೨ರ ಮಾರ್ಗಸೂಚಿಗಳ ಅನ್ವಯ ಗ್ರಾಮಗಳನ್ನು ಬಯಲು ಶೌಚ ಮತ್ತು ಕಸ ಮುಕ್ತ ಮತ್ತು ಕೊಳಚೆ ನೀರು ಮಕ್ತವಾಗಿಸಿ ಬಯಲು ಕಸ ಮುಕ್ತ ಗ್ರಾಮಗಳೆಂದು ಘೋಷಿಸಲಾಗುತ್ತದೆ. ಹಾಗಾಗಿ ಸ್ವಚ್ಛ ಸಂಕೀರ್ಣ ಘಟಕಗಳನ್ನು ನಿರ್ಮಿಸಿ ಸ್ವಚ್ಛ ವಾಹಿನಿ ವಾಹನಗಳ ಮೂಲಕ ತ್ಯಾಜ್ಯವನ್ನು ಸಂಗ್ರಹಿಸಿ ನಿರ್ವಹಣೆ ಮಾಡಲಾಗುತ್ತಿದ್ದು, ಇದ್ಕೆ ಪೂರಕವಾಗಿ ಬಯಲಿನಲ್ಲಿ ತ್ಯಾಜ್ಯ ಬೀಳುವುದನ್ನು ತಡೆಯಲು ಗ್ರಾ.ಪಂ ಕ್ರಮವಹಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ಗ್ರಾ.ಪಂಗಳ ವ್ಯಾಪ್ತಿಯಲ್ಲಿರುವ ರಸ್ತೆಗಳ ಇಕ್ಕೆಗಳ, ನೀರಿನ ತೋಡು, ಚರಂಡಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ಒಂದು ಬಾರಿಗೆ ತೆಗೆದು ಅಲ್ಲಿನ ಪ್ರದೇಶವನ್ನು ಸುಂದರವಾಗಿಸಿಕೊಂಡು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಬಿಸಾಡುವವರ ಮೇಲೆ ದಂಡನಾ ಕ್ರಮ ಜರುಗಿಸಬೇಕು. ಆದ್ದರಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ’ಬಯಲು ಕಸ ಮುಕ್ತ ಗ್ರಾಮ’ಗಳನ್ನಾಗಿ ಘೋಷಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಈಗಾಗಲೇ ಗ್ರಾ.ಪಂಗಳಿಗೆ ಜಿಲ್ಲಾಡಳಿತದಿಂದ ಬಂದಿರುವ ಸುತ್ತೋಲೆಯನ್ನು ಕಳುಹಿಸಿದ್ದಾರೆ.
ತ್ಯಾಜ್ಯ ಎಸೆಯದಂತೆ ಕಾರ್ಯಪಡೆ ಕಾವಲು
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ಗ್ರಾ.ಪಂ ಹಂತದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆಗಳನ್ನು ರಚಿಚಲು ತೀರ್ಮಾನಿಸಲಾಗಿದೆ. ಅದರಂತೆ ಪ್ರತಿ ಗ್ರಾಮಕ್ಕೆ ಬೀಟ್ ಪೊಲೀಸ್, ಅಧಿಕಾರಿ, ಸಿಬ್ಬಂದಿಯನ್ನು ಸೇರ್ಪಡೆಗೊಳಿಸಬೇಕು. ಗ್ರಾ.ಪಂ ಮಟ್ಟದಲ್ಲಿ ರಚಿದಲಾಗುವ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆಯಲ್ಲಿರುವ ಬೀಟ್ ಪೊಲೀಸ್ ಅಧಿಕಾರಿ/ ಸಿಬ್ಬಂದಿಯನ್ನು ಗಸ್ತು ತಿರುಗಲು ನಿಯೋಜಿಸಲಾಗುತ್ತದೆ. – ನವೀನ್ ಭಂಡಾರಿ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ ಪುತ್ತೂರು
ತ್ಯಾಜ್ಯ ತೆರವು ಮಾಡದಿದ್ದಲ್ಲಿ ಸಾರ್ವಜನಿಕರು ನನಗೆ ದೂರು ನೀಡಿ
ಗ್ರಾ.ಪಂ ವ್ಯಾಪ್ತಿಯಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯ ತೆರವು ಮಾಡದಿದ್ದಲ್ಲಿ ಸಾರ್ವಜನಿಕರಿಗೆ ದೂರು ನೀಡಲು ಅವಕಾಶವಿದೆ. ಸಾರ್ವಜನಿಕರು ನೇರ ನನ್ನ ಮೊಬೈಲ್ ನಂಬರ್ 9901348445 ಗೆ ಕರೆ ಮಾಡುವಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.








