ಜೆಇಇ, ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸುಧಾರಣೆಗಾಗಿ ಸಹಾಯಕ ಆಯುಕ್ತರಿಗೆ ಅಂಬಿಕಾ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ

0

ಪುತ್ತೂರು: ಜೆಇಇ, ನೀಟ್‌ನಂತಹ ರಾಷ್ಟ್ರೀಯ ಪರೀಕ್ಷೆಗಳಲ್ಲಿ ಪೂರ್ವಸಿದ್ಧತೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಅವಧಿಯನ್ನು ಹಾಳು ಮಾಡಲಾಗುತ್ತಿದ್ದು, ಇದರ ಬಗೆಗೆ ಪ್ರಸ್ತುತ ವರ್ಷದಿಂದಲೇ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಕೊಡುವಂತೆ ವಿನಂತಿಸಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಶ್ರೀವತ್ಸ ಎಂ.ಕೆ, ಶಿವಾನಿ ಬಿ, ಧೃತಿ ಎಂ, ಶ್ರಾವಣಿ ಜಿ ಎಸ್ ಅವರನ್ನೊಳಗೊಂಡ ವಿದ್ಯಾರ್ಥಿಗಳ ನಿಯೋಗ ಬುಧವಾರ ಪುತ್ತೂರಿನ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಜೆಇಇ, ನೀಟ್ ಪರೀಕ್ಷೆಯಲ್ಲಿ ಕೊಠಡಿಯೊಳಕ್ಕೆ ಆಗಮಿಸುವ ಮೇಲ್ವಿಚಾರಕರು ಸ್ಪರ್ಧಾತ್ಮಕ ಪರೀಕ್ಷೆಗಳ ನಿಯಮದಂತೆ ಅಭ್ಯರ್ಥಿಯ ನೋಂದಣಿ ಸಂಖ್ಯೆಯನ್ನು ನೋಂದಾಯಿಸುವುದು, ಅಭ್ಯರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಬರೆಯುವುದು, ಅಭ್ಯರ್ಥಿಗಳ ಸಹಿಯನ್ನು ಪಡೆಯುವುದು, ಪರೀಕ್ಷಾ ನಿಯಮಗಳ ವಿವರಣೆ ಇತ್ಯಾದಿಗಳನ್ನು ಮಾಡಬೇಕಾಗುತ್ತದೆ. ಆದರೆ ಈ ಕಾರ್ಯವನ್ನು ಪರೀಕ್ಷಾ ಅವಧಿಯ ಪೂರ್ವದಲ್ಲೇ ಮಾಡಿಮುಗಿಸಬೇಕೆಂಬುದು ನಿಯಮ. ಹಲವು ಕಡೆಗಳಲ್ಲಿ ಈ ನಿಯಮದಂತೆ ಪರೀಕ್ಷಾ ಪೂರ್ವ ಅವಧಿಯಲ್ಲೇ ಈ ಕಾರ್ಯವನ್ನು ಮುಗಿಸುತ್ತಾರೆ. ಆದರೆ ಕೆಲವು ಮೇಲ್ವಿಚಾರಕರು ಈ ಪೂರ್ವಸಿದ್ಧತೆ ಮಾಡುವುದಕ್ಕೂ ಪರೀಕ್ಷಾ ಅವಧಿಯನ್ನೇ ಬಳಸುತ್ತಿದ್ದಾರೆ. ಅಂದರೆ ಮೂರು ಗಂಟೆಗಳ ಪರೀಕ್ಷೆಯ ಅವಧಿಯಲ್ಲೇ ಈ ಕಾರ್ಯವೂ ನಡೆಯುತ್ತಿದೆ. ಇವೆಲ್ಲವನ್ನೂ ಪೂರೈಸುವುದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸುಮಾರು ಹತ್ತು ನಿಮಿಷವನ್ನು ವ್ಯಯಿಸಬೇಕಾಗುತ್ತದೆ. ಈ ಸಮಯ ಪರೀಕ್ಷಾ ಸಮಯದೊಳಗೇ ಬರುವುದರಿಂದ ನೂರ ಎಂಬತ್ತು ನಿಮಿಷಗಳ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ನೂರ ಎಪ್ಪತ್ತು ನಿಮಿಷಗಳಷ್ಟೇ ಲಭ್ಯವಾಗುತ್ತಿದೆ. ಇದರಿಂದಾಗಿ ಎಷ್ಟೋ ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ಮನವಿಪತ್ರದಲ್ಲಿ ವಿವರಿಸಿದ್ದಾರೆ., ನೀಟ್ ಮೊದಲಾದವುಗಳು ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದ್ದು, ವಿದ್ಯಾರ್ಥಿಗಳ ಜ್ಞಾನದ ಜತೆಗೆ ವೇಗವಾಗಿ ಉತ್ತರಿಸುವ ಕೌಶಲ್ಯವನ್ನೂ ಒರೆಗೆ ಹಚ್ಚುತ್ತವೆ. ಹೀಗಿರುವಾಗ ಇರುವ ಸಮಯವನ್ನೂ ಅನ್ಯತಮ ಕಾರ್ಯಕ್ಕೆ ಬಳಸಿಕೊಂಡರೆ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳು ಕೇಳಿದ್ದಾರೆ. ಆದ್ದರಿಂದ ಅಭ್ಯರ್ಥಿಗಳಿಗೆ ಮಾಹಿತಿ ನೀಡುವಿಕೆ, ವಿವರ ಪಡೆಯುವಿಕೆಯೇ ಮೊದಲಾದ ಸಂಗತಿಗಳನ್ನು ಪರೀಕ್ಷಾ ಅವಧಿಯ ಪೂರ್ವದಲ್ಲೇ ನಡೆಸಿ ಪೂರ್ಣ ಪರೀಕ್ಷಾ ಅವಧಿಯನ್ನು ಅಭ್ಯರ್ಥಿಗಳು ಪರೀಕ್ಷೆ ಎದುರಿಸುವುದಕ್ಕೆ ಅವಕಾಶ ಮಾಡಿಕೊಡಬೇಕು. ಈ ಬಗೆಗೆ ಕೊಠಡಿ ಮೇಲ್ವಿಚಾರಕರಾಗಿ ಆಗಮಿಸುವವರಿಗೆ ಸ್ಪಷ್ಟ ಮಾಹಿತಿ ನೀಡಿಯೇ ಕೊಠಡಿಗೆ ಕಳುಹಿಸಬೇಕೆಂದು ಸಹಾಯಕ ಆಯುಕ್ತರನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here