ಕಾವು: ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ದ.ಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರಾಸುಗಳಿಗೆ ಸಾಮೂಹಿಕ ಜಂತುಹುಳ ನಿವಾರಕ ಔಷಧಿ ವಿತರಣೆ ಕಾರ್ಯಕ್ರಮವು ಎ.7ರಂದು ಬೆಳಿಗ್ಗೆ ಸಂಘದ ಆವರಣದಲ್ಲಿ ನಡೆಯಿತು.
ಎಸ್.ಬಿ ಜಯರಾಮ ರೈಯವರಿಗೆ ಸನ್ಮಾನ:
ಕೆಎಂಎಫ್‌ನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಸ್.ಬಿ ಜಯರಾಮ ರೈ ಬಳಜ್ಜರವರಿಗೆ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಎಸ್.ಬಿ ಜಯರಾಮ ರೈಯವರಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಫ ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನ ನೆರವೇರಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಎಸ್.ಬಿ ಜಯರಾಮ ರೈಯವರು ಸಾಮಾಜಿಕ, ಧಾರ್ಮಿಕ, ಸಹಕಾರಿ ಕ್ಷೇತ್ರಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದಾರೆ, ವಿಶೇಷವಾಗಿ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಯನ್ನು ನೀಡುವುದರ ಮೂಲಕ ಪ್ರತಿಷ್ಠಿತ ಕೆಎಂಎಫ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ, ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಒದಗಿ ಬರಲಿ ಎಂದು ಶುಭಹಾರೈಸಿದರು.
ಸನ್ಮಾನ ಸ್ವೀಕರಿಸಿದ ಕೆಎಂಎಫ್‌ನ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜರವರು ಮಾತನಾಡಿ ಸನ್ಮಾನ ನೀಡಿದ ಮಾಡ್ನೂರು ಹಾಲು ಉತ್ಪಾದಕರ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು, ರಾಸುಗಳಿಗೆ ಜಂತುಹುಳು ಮಾತ್ರೆ ನೀಡುವ ಅಭಿಯಾನ 13ನೇ ಸುತ್ತಿನ ಕಾರ್ಯಕ್ರಮವಾಗಿದ್ದು, ಇದರಿಂದಾಗಿ ಹಾಲು ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು, ಹಸುವಿನ ಆರೋಗ್ಯ ಕಾಪಾಡಲು ಹೆಚ್ಚು ಪರಿಣಾಮವಾಗಿದೆ, ಹೈನುಗಾರರ ಸಮಸ್ಯೆಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಒಕ್ಕೂಟದ ಉಪವ್ಯವಸ್ಥಾಪಕ ಡಾ| ಸತೀಶ್ ರಾವ್‌ರವರು ಮಾತನಾಡಿ ರಾಸುಗಳಿಗೆ ನೀಡುವ ಸಾಮೂಹಿಕ ಜಂತುಹುಳದ ಮಾತ್ರೆಯು ಪ್ರತಿ 6 ತಿಂಗಳಿಗೊಮ್ಮೆ ನಡೆಯುವ ಕಾರ್ಯಕ್ರಮವಾಗಿದ್ದು, ಇದರಿಂದಾಗಿ ಹಾಲಿನ ಗುಣಮಟ್ಟ, ರಾಸುವಿನಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಆಗುತ್ತದೆ, ಸಂಘದ ಸದಸ್ಯರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಡ್ನೂರು ಸಂಘದಿಂದ ಸದಸ್ಯರಿಗೆ ಉಚಿತವಾಗಿ ಮಾತ್ರೆ ನೀಡಲಾಗುತ್ತಿದೆ ಎಂದು ಹೇಳಿದರು.
ಒಕ್ಕೂಟದ ತಾಲೂಕು ವಿಸ್ತರಣಾಧಿಕಾರಿ ನಾಗೇಶ್, ಡಾ. ಅನುದೀಪ್‌ರವರು ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮ ಆರಂಭಕ್ಕೆ ಮುನ್ನ ಸಂಘದ ಆವರಣದಲ್ಲಿ ಹಸುವಿಗೆ ದೀಪಾರತಿ ಬೆಳಗಲಾಯಿತು. ವೇದಿಕೆಯಲ್ಲಿ ಸದಸ್ಯರಿಗೆ ಸಾಂಕೇತಿಕವಾಗಿ ರಾಸುವಿನ ಜಂತುಹುಳದ ಮಾತ್ರೆ ವಿತರಣೆ ಮಾಡಲಾಯಿತು. ಉಳಿದ ಸದಸ್ಯರುಗಳಿಗೆ ಸಂಘದಲ್ಲಿ ಮಾತ್ರೆ ವಿತರಣೆ ಮಾಡಲಾಯಿತು.
ನಿಹಾನ್ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿಯವರು ಸ್ವಾಗತಿಸಿ ಉಪಾಧ್ಯಕ್ಷ ಸುರೇಂದ್ರ ಬೋರ್ಕರ್ ನನ್ಯ ವಂದಿಸಿದರು. ಸಂಘದ ನಿರ್ದೇಶಕರುಗಳಾದ ನಾರಾಯಣ ರೈ ಮದ್ಲ, ನಾರಾಯಣಶರ್ಮ ಬರೆಕರೆ, ದಿವಾಕರ ಪ್ರಭು ಮುಂಡಕೊಚ್ಚಿ, ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.