ಪುತ್ತೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಡಯಾಗ್ನಾಸ್ಟೀಕ್ ಲ್ಯಾಬೋರೇಟರಿ, ಚೇತನಾ ಆಸ್ಪತ್ರೆ ಪುತ್ತೂರು, ರೆಡ್ಡಿಸ್ ಲ್ಯಾಬೋರೇಟರಿ, ಮೈಕ್ರೋ ಲ್ಯಾಬ್ಸ್ ಮತ್ತು ಇಂಟರ್‌ಗೇಸ್ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನದ ಪ್ರಯುಕ್ತ ಉಚಿತ ಮಧುಮೇಹ, ಬಾಡಿ ಮಿನರಲ್ ಡೆನ್ಸಿಟಿ(ಬಿ.ಎಂ.ಡಿ), ರಕ್ತದೊತ್ತಡ(ಬಿಪಿ), ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ತಪಾಸಣಾ ಶಿಬಿರವು ಏ.7 ರಂದು ಪುತ್ತೂರು ಮಿನಿ ವಿಧಾನಸೌಧದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರುರವರು ಕಾರ್ಯಕ್ರಮವನ್ಮು ಉದ್ಘಾಟಿಸಿ ಮಾತನಾಡಿ,ಮನುಷ್ಯ ತನ್ನ ದಿನನಿತ್ಯದ ಬದುಕಿನ ಜಂಜಾಟದ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜಾಗೃತಿ ಹಾಗೂ ಸಾಮಾಜಿಕ ಕಳಕಳಿಯನ್ನು ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸಂದೇಶ ನೀಡಿದೆ. ಕಳೆದ ಕೋವಿಡ್ ಸಂದರ್ಭದಲ್ಲಿ ರೋಟರಿ ಸಂಸ್ಥೆ ಸೇರಿದಂತೆ ಹಲವಾರು ಸೇವಾಸಂಸ್ಥೆಗಳು ಮನುಷ್ಯನ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿರುವುದನ್ನು ಖಂಡಿತಾ ಪ್ರಶಂಸಿಸಬೇಕಾಗಿದೆ. ಸರಕಾರಿ ನೌಕರರು ಸದಾ ಒತ್ತಡದಲ್ಲಿ ಸೇವೆ ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಶಿಬಿರಗಳು ಬಹಳ ಉಪಯುಕ್ತವೆನಿಸುವುದು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಲು ಸಹಕಾರಿಯಾಗುವುದು ಎಂದರು.
ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ರವರು ಮಾತನಾಡಿ, ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಯಾವ ಪರಿಸ್ಥಿತಿಯಲ್ಲಿದ್ದೇವು ಎಂಬುದನ್ನು ನಾವೆಲ್ಲಾ ಬಲ್ಲೆವು. ಆರೋಗ್ಯ ಇಲಾಖೆಯು ಸದಾ ಮೀಟಿಂಗ್ ಅನ್ನು ಹಮ್ಮಿಕೊಂಡು ಜನರ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸುವುದು ಎಂಬಂತೆ ಕಾರ್ಯೋನ್ಮುಖರಾಗಿರುವುದು ನಾವು ನೋಡಿದ್ದೇವೆ. ರೋಟರಿ ಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳು ಒಗ್ಗೂಡಿ ಆರೋಗ್ಯಕ್ಕೆ ಸಂಬಂಧಪಟ್ಟ ಶಿಬಿರವನ್ನು ಆಯೋಜಿಸುವುದರ ಮೂಲ ಉದ್ಧೇಶ ಸರಕಾರಿ ನೌಕರರು ಆರೋಗ್ಯ ತಪಾಸಣೆಯನ್ನು ಮಾಡಿ ತಜ್ಞ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆದುಕೊಳ್ಳುವುದು. ಈ ಮೂಲಕ ಸಾರ್ವಜನಿಕವಾಗಿ ಇದರ ಪ್ರಯೋಜನ ಪಡೆದುಕೊಳ್ಳಲು ಸಹಕಾರಿ ಎನಿಸುವುದು ಎಂದರು.
ಪುತ್ತೂರು ತಹಶೀಲ್ದಾರ್ ಹಾಗೂ ರೋಟರಿ ಸೆಂಟ್ರಲ್ ಸದಸ್ಯ ರಮೇಶ್ ಬಾಬು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕದ ಕಾರ್ಯದರ್ಶಿ ಆಸ್ಕರ್ ಆನಂದ್, ಪುತ್ತೂರು ಡಯಾಗ್ನಾಸ್ಟೀಕ್ ಲ್ಯಾಬೋರೇಟರಿಯ ನೋಯಲ್ ಡಿ’ಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಸೆಂಟ್ರಲ್ ಅಧ್ಯಕ್ಷ ನವೀನ್ ಚಂದ್ರ ನಾಯಿಕ್ ವಂದಿಸಿದರು. ರೋಟರಿ ಸೆಂಟ್ರಲ್ ಸದಸ್ಯ ಡಾ|ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ತಪಾಸಣೆಯಿಂದ ರೋಗವನ್ನು ತಡೆಗಟ್ಟಿ..
1950, ಎಪ್ರಿಲ್ 7 ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಆರೋಗ್ಯ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಜನರ ಜೀವನಶೈಲಿ, ಆಹಾರಕ್ರಮದಲ್ಲಿ ವ್ಯತ್ಯಯ, ವ್ಯಾಯಾಮದ ಕೊರತೆಯಿಂದ ಮಧುಮೇಹ, ರಕ್ತದೊತ್ತಡ, ಬೊಜ್ಜು ಉಂಟಾಗಿ ರೋಗಗಳು ಬಾಧಿಸುತ್ತವೆ. ಬೇಕರಿ ಐಟಂ, ಸಿಹಿ ಪದಾರ್ಥಗಳು, ಜಂಕ್ ಫುಡ್ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀಳುತ್ತದೆ. ಮನುಷ್ಯನು ನಿರಂತರ ಆರೋಗ್ಯ ತಪಾಸಣೆಯನ್ನು ಮಾಡುವ ಮೂಲಕ ರೋಗವನ್ನು ಮೊದಲೇ ಗುರುತಿಸಿ ಅವನ್ನು ತಡೆಗಟ್ಟಬಹುದಾಗಿದೆ.
-ಡಾ.ಜೆ.ಸಿ ಆಡಿಗ, ಚೇತನಾ ಆಸ್ಪತ್ರೆ