ಪುತ್ತೂರು; ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆಗೆ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಹಾಗೂ ಪುತ್ತೂರಿನಲ್ಲಿ ಛಾಯಾ ಭವನ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಶಾಸಕ ಸಂಜೀವ ಮಠಂದೂರು ಸೌತ್ ಕೆನರಾ ಫೋರ್ಟಗ್ರಾಫರ್ಸ್ ಅಸೋಸಿಯೇಶನ್ ಪದಗ್ರಹಣ ಸಮಾರಂಭದಲ್ಲಿ ಭರವಸೆ ನೀಡಿದರು.
ಎಪಿಎಂಸಿ ರೈತ ಸಭಾಭವನದಲ್ಲಿ ಜ.೩೧ರಂದು ಸಂಜೆ ನಡೆದ ಅಸೋಸಿಯೇಷನ್ ಪುತ್ತೂರು ವಲಯದ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಇತರ ಕ್ಷೇತ್ರಗಳಿಗೆ ಅಕಾಡೆಮಿಗಳಿರುವಂತೆ ಛಾಯಾಗ್ರಹಣ ವೃತ್ತಿನಿರತರಿಗೂ ಅಕಾಡೆಮಿ ಸ್ಥಾಪಿಸುವಂತೆ ಬೇಡಿಕೆ ಬಂದಿದ್ದು ನಿಮ್ಮ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಅಲ್ಲದೆ ಪುತ್ತೂರಿನಲ್ಲಿ ಛಾಯಾ ಭವನ ನಿರ್ಮಾಣಕ್ಕೆ ಬೇಡಿಕೆಯಿದ್ದು ಇದಕ್ಕಾಗಿ ಜಾಗ ಇದ್ದರೆ ಗುರುತಿಸಿಕೊಡಿ. ಅದನ್ನು ಸಹಾಯಕ ಆಯುಕ್ತರು ಹಾಗೂ ತಹಶಿಲ್ದಾರ್ ಮುಖಾಂತರ ಮಂಜೂರುಗೊಳಿಸಿ ಛಾಯಾ ಭವನ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಫೋಟೋಗ್ರಾಫರ್ ಅಸೋಸಿಯೇಷನ್ ಸಮಾಜದಲ್ಲಿ ಬಲಿಷ್ಠ ಸಂಘಟನೆಯಾಗಿ ಬೆಳೆಯುತ್ತಿದೆ. ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುವ ಮೂಲಕ ಎಲ್ಲರ ವಿಶ್ವಾಸ ಗಳಿಸಿ, ಒಗ್ಗೂಡಿಕೊಂಡು ಸಂಘಟನೆಯು ಮುನ್ನಡೆಯುತ್ತಿದೆ ಎಂದರು.
ಸೌತ್ ಕೆನರಾ ಫೋಟೋಗ್ರಾಫರ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್ ಮಾತನಾಡಿ, ಪುತ್ತೂರು ವಲಯದ ಪ್ರತಿಯೊಬ್ಬ ಸದಸ್ಯರಲ್ಲಿಯೂ ಉತ್ತಮ ನಾಯಕತ್ವ ಗುಣವಿದೆ. ಹೀಗಾಗಿ ಸಂಘಟನೆಯು ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಜಿಲ್ಲಾ ಅಸೋಸಿಯೇಷನ್ಗೆ ಬಹಳಷ್ಟು ಕೊಡುಗೆಗಳನ್ನು ನೀಡಿರುವ ವಲಯವು ಮಂಗಳೂರಿನಲ್ಲಿ ನಿರ್ಮಾಣವಾಗಲಿರುವ ಛಾಯ ಭವನಕ್ಕೆ ದೊಡ್ಡ ಮಟ್ಟದಲ್ಲಿ ಸಹಕರಿಸುವಂತೆ ಅವರು ಮನವಿ ಮಾಡಿದರು.
ನಿಟಕಪೂರ್ವ ಅಧ್ಯಕ್ಷ ಹರೀಶ್ ಎಲಿಯ ಮಾತನಾಡಿ, ತಮ್ಮ ಅವಧಿಯಲ್ಲಿ ಕೈಗೊಂಡ ಹಲವು ಸಮಾಜ ಮುಖಿ ಯೋಜನೆಗಳನ್ನು ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ನಾಗೇಶ್ ಟಿ.ಎಸ್ ಮಾತನಾಡಿ, ಮುಂದಿನ ಅವಧಿಯಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಪ್ರತಿಯೊಬ್ಬರು ಸಹಕರಿಸುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಆನಂದ ಎನ್ ಬಂಟ್ವಾಳ ಮಾತನಾಡಿ, ಸಂಘಟನೆಯ ಮಹತ್ವದ ಬಗ್ಗೆ ವಿವರಿಸಿದರು. ಜಿಲ್ಲಾ ಅಸೋಸಿಯೇಷನ್ ಸಂಚಾಲಕ ನವೀನ್ ಕುಮಾರ್ ಕುದ್ರೋಳಿ, ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಮಾತನಾಡಿ ನೂತನ ಪದಾಧಿಕಾರಿಗಳ ತಂಡ ಶುಭ ಹಾರೈಸಿದರು.
ಸೌತ್ ಕೆನರಾ ಫೋಟೋಗ್ರಾಫರ್ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಸುದರ್ಶನ್ ರಾವ್, ಪುತ್ತೂರು ವಲಯದ ಗೌರವಾಧ್ಯಕ್ಷ ಹರೀಶ್ ಪುಣಚ, ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಪ್ರಭು, ಶಿವರಾಮ ಕಡಬ, ಶಾಂತಾ ಕುಮಾರ್, ಸುಧೀರ್ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ ಮಿತ್ತೂರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದಗ್ರಹಣ:
ನಿಕಟಪೂರ್ವ ಅಧ್ಯಕ್ಷ ಹರೀಶ್ ಎಲಿಯ ನೂತನ ಅಧ್ಯಕ್ಷ ನಾಗೇಶ್ ಟಿ.ಎಸ್ರವರಿಗೆ ಅಸೋಸಿಯೇಶನ್ನ ಲಾಂಛನ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ನಿಕಟಪೂರ್ವ ಕಾರ್ಯದರ್ಶಿ ಜಯಂತ ಗೌಡ ಕೆ. ವರದಿಯ ಪುಸ್ತಕವರನ್ನು ನೂತನ ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್ ಹಸ್ತಾಂತರಿಸಿದರು. ನಿಟಕಪೂರ್ವ ಕೋಶಾಧಿಕಾರಿ ವಸಂತ ನಾಯ್ಕ ಎಂ.ರವರು ನೂತನ ಕೋಶಾಧಿಕಾರಿ ಗಿರಿಧರ್ ಭಟ್ರವರಿಗೆ ಲೆಕ್ಕಪತ್ರಗಳ ದಾಖಲೆಗಳನ್ನು ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿತು.
ಸನ್ಮಾನ;
ಅಸೋಸಿಯೇಷನ್ ನ ಸದಸ್ಯರ ಮಕ್ಕಳಾದ ಆಶ್ರಯ ಪಿ., ಆದಿತ್ಯ ನಾಯಕ್, ಹಿರಿಯ ಸದಸ್ಯ ಬಾಲಕೃಷ್ಣ ರೈ, ಪ್ರಜ್ಣಾ ವಿಶೇಷ ಮಕ್ಕಳ ಆಶ್ರಮಾ ಶಾಲಾ ಮುಖ್ಯಸ್ಥ ಅಣ್ಣಪ್ಪ, ನೌಕಾದಳಕ್ಕೆ ನೇಮಕಗೊಂಡ ಪ್ರಜ್ವಲ್ ಕೇಪುಂಜ, ನಿಕಟಪೂರ್ವ ಅಧ್ಯಕ್ಷ ಹರೀಶ್ ಎಲಿಯ, ಕಾರ್ಯದರ್ಶಿ ಜಯಂತ ಗೌಡ ಪೆರ್ಲಂಪಾಡಿ ಹಾಗೂ ಕೋಶಾಧಿಕಾರಿ ವಸಂತ ನಾಯ್ಕರವರನ್ನು ಸನ್ಮಾನಿಸಲಾಯಿತು. ಅಸೋಸಿಯೇಷನ್ನಿಂದ ಇತ್ತೀಚೆಗೆ ನಡೆದ ‘ಗೊಬ್ಬುದ ಗಮ್ಮತ್’ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಸೋಸಿಯೇಶನ್ನ ೧೩ ವಲಯಗಳ ಪದಾಧಿಕಾರಿಗಳನ್ನು ಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ಗಣೇಶ್ ಕಟ್ಟಪುಣಿ ವಿಜೇತರ ಪಟ್ಟಿ ಓದಿದರು.
ಪ್ರಜ್ಞಾ ಆಶ್ರಮಕ್ಕೆ ಕೊಡುಗೆ;
ಬಿರುಮಲೆ ಬೆಟ್ಟದಲ್ಲಿರುವ ವಿಶೇಷ ಚೇತನ ಮಕ್ಕಳ ಆಶ್ರಮ ಶಾಲೆಗೆ ಅಗತ್ಯ ಪಾತ್ರೆ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕಿರುಚಿತ್ರ ಪ್ರದರ್ಶನ;
ಅಸೋಸಿಯೇಷನ್ನ ಪುತ್ತೂರು ವಲಯದ ಆಶ್ರಯದಲ್ಲಿ ನಡೆಸಲಾದ `ಸಮಾಜಕ್ಕೆ ಫೋಟೋಗ್ರಾಫರ್ಸ್ನ ಅನಿವಾರ್ಯತೆ’ ಎಂಬ ವಿಷಯದಲ್ಲಿ ಕಿರುಚಿತ್ರ ಸ್ಪರ್ಧೆಯನ್ನು ನಡೆಸಲಾಗಿದ್ದು, ಇದರಲ್ಲಿ ಆಯ್ಕೆಯಾದ ಎರಡು ಕಿರುಚಿತ್ರಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಈ ಕಿರುಚಿತ್ರದಲ್ಲಿ ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ನೀಡಲಾಯಿತು. ಸ್ಪರ್ಧೆಯಲ್ಲಿ ಉಳ್ಳಾಲ ವಲಯ(ಪ್ರ) ಹಾಗೂ ಸುಳ್ಯ ವಲಯ(ದ್ವಿ) ಸ್ಥಾನವನ್ನು ಪಡೆದುಕೊಂಡರು. ಉತ್ತಮ ಸಂಕಲನ, ನಿರ್ದೇಶನ, ಛಾಯಾಗ್ರಹಣ, ಕಥೆಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ಷಣ್ಮುಖ ಪ್ರಸಾದ್ ವಿಜೇತರ ಪಟ್ಟಿ ಓದಿದರು.
ರಿಯಾ ಜೆ.ರೈ ಪ್ರಾರ್ಥಿಸಿದರು. ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಶೋಕ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಂತ ಪೆರ್ಲಂಪಾಡಿ, ಕೋಶಾಧಿಕಾರಿ ವಸಂತ, ಪ್ರಸಾದ್ ಉಪ್ಪಿನಂಗಡಿ, ರಘು ಶೆಟ್ಟಿ, ವಸಂತ ಕೋಡಂದೂರು, ಪ್ರವೀಣ್ ವಿಟ್ಲ, ಅಚ್ಚುತ ಕಡ್ಯ, ಚೇತನ್, ಪ್ರಶಾಂತ್, ಗಿರೀಶ್ ಉಪ್ಪಿನಂಗಡಿ ಅತಿಥಿಗಳನ್ನು ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಿದರು. ನೂತನ ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.