ಗುಡಿಸಲಿನಲ್ಲಿದ್ದ ಮಹಿಳೆಗೆ ದಾನಿಗಳ ಸಹಕಾರದಿಂದ ಸುಂದರ ಸೂರು ನಿರ್ಮಿಸಿ “ಆಸರೆ”ಯಾದ ಅಮ್ಮುಂಜ ಲಗೋರಿ ಫ್ರೆಂಡ್ಸ್ ತಂಡ

0

ಸೂರು ನಿರ್ಮಿಸಿಕೊಡುವುದು ದೇವರು ಮೆಚ್ಚುವಂತಹ ಕೆಲಸ-ಅಶೋಕ್ ರೈ

ಪುತ್ತೂರು: ಬಡತನದ ಬೇಗೆಯಲ್ಲಿ ಬಸವಳಿದ ಮಹಿಳೆಯ ಬಾಳಿಗೆ ದಾನಿಗಳ ಸಹಕಾರದಿಂದ ಅಮ್ಮುಂಜ ಲಗೋರಿ ಫ್ರೆಂಡ್ಸ್ ಕ್ಲಬ್ ಸುಂದರ ಸೂರನ್ನು ನಿರ್ಮಿಸಿ ನಿಜಕ್ಕೂ ಆಸರೆಯಾಗಿದ್ದಾರೆ. ಲಗೋರಿ ಫ್ರೆಂಡ್ಸ್ ತಂಡ ನಿರ್ವಹಿಸಿದ ಪಾತ್ರ ಇಡೀ ಸಮಾಜಕ್ಕೆ ನಿದರ್ಶನವಾಗಿದೆ. ಹೇಗೆ ದೇವಸ್ಥಾನ ಕಟ್ಟಿಸಿಕೊಡುವುದು ಪುಣ್ಯದ ಕೆಲಸವಾಗಿದೆಯೇ ಹಾಗೆಯೇ ಲಗೋರಿ ಫ್ರೆಂಡ್ಸ್ ತಂಡದವರು ನಿರ್ವಹಿಸಿದ ಕೆಲಸ ದೇವರು ಮೆಚ್ಚುವಂತಹ ಕೆಲಸವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.


ನ.30 ರಂದು ಕುರಿಯ ಗ್ರಾಮದ ಮಾದೇರಿ ಎಂಬಲ್ಲಿ ಲಗೋರಿ ಫ್ರೆಂಡ್ಸ್ ಕ್ಲಬ್ ಅಮ್ಮುಂಜ ಇವರ ಸಾರಥ್ಯದಲ್ಲಿ ದಾನಿಗಳ ಸಹಕಾರದೊಂದಿಗೆ ಶ್ರೀಮತಿ ವೈಶಾಲಿ ಮತ್ತು ಮಕ್ಕಳಿಗೆ ನೂತನವಾಗಿ ನಿರ್ಮಿಸಿದ ‘ಆಸರೆ’ ಮನೆಯ ಗೃಹಪ್ರವೇಶ ಹಾಗೂ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಾವಿರ ಸಾವಿರ ಸಂಘಟನೆಗಳಿದ್ದರೂ ಕೆಲವು ಸಂಘಟನೆಗಳು ಇಂತಹ ಕಾರ್ಯವನ್ನು ಮಾಡಿ ತೋರಿಸಿದ್ದಾರೆ. ಕೆಲವು ಶ್ರೀಮಂತರು ಇದ್ದರೂ ದುಡ್ಡು ಕೊಡುವ ಮನಸ್ಸು ಮಾಡದಿರುವುದು ಖೇದಕರ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 25 ಸಂಘಟನೆಗಳು ಅರ್ಹ ಬಡವರಿಗೆ ಮನೆ ಕಟ್ಟಿಕೊಡುವ ಮನಸ್ಸು ಮಾಡಿದಾಗ ಸಮಾಜ ಉದ್ಧಾರವಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಸುಮಾರು 250 ಮನೆಗಳನ್ನು ನಿರ್ಮಿಸಿ ಕೊಡುವ ಇರಾದೆ ಇದೆ ಎಂದರು.


ದಾನಿಗಳ ಸಹಕಾರದಿಂದ ಸೂರು ನಿರ್ಮಿಸಿದ ಲಗೋರಿ ಫ್ರೆಂಡ್ಸ್‌ರವರ ಕಾಳಜಿ ಮೆಚ್ಚುವಂತಹುದು-ಡಾ.ಸುರೇಶ್ ಪುತ್ತೂರಾಯ:
ಬೊಳ್ವಾರು ಮಹಾವೀರ ಮೆಡಿಕಲ್ ಸೆಂಟರ್‌ನ ವೈದ್ಯ ಹಾಗೂ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರು ನೂತನ ‘ಆಸರೆ’ ಮನೆಯ ಕೀಯನ್ನು ಮನೆಯೊಡತಿ ಶ್ರೀಮತಿ ವೈಶಾಲಿರವರಿಗೆ ಹಸ್ತಾಂತರಿಸಿ ಮಾತನಾಡಿ, ಸೂರು ಇಲ್ಲದ ಮಹಿಳೆಗೆ ಸೂರು ನಿರ್ಮಿಸಿರುವುದು ತಾನು ಕಂಡ ಉತ್ತಮ ಕಾರ್ಯಕ್ರಮವಾಗಿದೆ ಜೊತೆಗೆ ದಾನಿಗಳ ಸಹಕಾರದಿಂದ ಸೂರು ನಿರ್ಮಿಸಿದ ಲಗೋರಿ ಫ್ರೆಂಡ್ಸ್‌ರವರ ವಿಶೇಷ ಕಾಳಜಿ ಮೆಚ್ಚುವಂತಹುದು. ಯಾರು ಸಮಾಜಮುಖಿ ಕೆಲಸ ಮಾಡುತ್ತಾರೋ ಅವರಿಗೆ ಖಂಡಿತಾ ದೇವರ ಆಶೀರ್ವಾದವಿದೆ ಎಂದರು.


ಸೆರೆಯಲ್ಲಿದ್ದ ಉತ್ತಮ ವ್ಯಕ್ತಿಗೆ ಆತ್ಮ ಸಂಬಂಧವಾಗುವುದು ಆಸರೆ-ಪ್ರೀತಂ ಪುತ್ತೂರಾಯ:
ಸಂಪ್ಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕುಕ್ಕಾಡಿ ಪ್ರೀತಂ ಪುತ್ತೂರಾಯರವರು ‘ಆಸರೆ’ ಗೃಹಪ್ರವೇಶದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿ, ಒಬ್ಬರ ಕಷ್ಟವನ್ನು ನೋಡಿ ಅವರಿಗೆ ಆಸರೆಯಾಗಿ ನಿಂತ ಲಗೋರಿ ಫ್ರೆಂಡ್ಸ್ ಕ್ಲಬ್ ತಂಡದ ಶ್ರಮ ಮೆಚ್ಚುವಂತಹುದು ಹೇಗೆಂದರೆ ಸೆರೆಯಲ್ಲಿದ್ದ ಉತ್ತಮ ವ್ಯಕ್ತಿಗೆ ಆತ್ಮ ಸಂಬಂಧವಾಗುವುದು ಆಸರೆ ಎನಿಸಿದೆ. ಮನೆ ಕಟ್ಟುವ ನಿಷ್ಕಲ್ಮಶವಾದ ಹುಡುಗಾಟದಲ್ಲಿ ಲಗೋರಿ ಫ್ರೆಂಡ್ಸ್ ತಂಡಕ್ಕೆ ಬಯಸಿದ್ದಕ್ಕಿಂತ ಜಾಸ್ತಿ ಪ್ರೀತಿಯ ಸಹಕಾರ ಸಿಕ್ಕಿದ್ದು ಪರಿಪೂರ್ಣ ಹೊಸ ಜೀವನದ ನಾಂದಿಯಾಗಿದೆ ಎಂದರು.


ಅನಗತ್ಯ ದುಂದುವೆಚ್ಚ ಮಾಡದೆ ಅರ್ಹರಿಗೆ ಸೂರು ನಿರ್ಮಿಸಿದಾಗ ಶಾಶ್ವತ ಹೆಸರು-ಜಯಂತ್ ನಡುಬೈಲು:
ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ದಾನಿಗಳ ನೆರವಿನಿಂದ ಆಸರೆ ನಿರ್ಮಿಸಲು ಕಾರಣಕರ್ತರಾದ ಲಗೋರಿ ಫ್ರೆಂಡ್ಸ್ ತಂಡದಿಂದ ಶ್ರೀಮತಿ ವೈಶಾಲಿರವರ ಯೋಗವಾಗಿದೆ ಮಾತ್ರವಲ್ಲ ಲಗೋರಿ ಫ್ರೆಂಡ್ಸ್ ತಂಡವನ್ನು ಯಾವಾಗಲೂ ನೆನಪಿನಲ್ಲಿಡಬೇಕಾಗಿದೆ. ಅನಗತ್ಯ ದುಂದುವೆಚ್ಚ ಮಾಡದೆ ಇಂತಹ ಅರ್ಹ ಬಡವರಿಗೆ ಸೂರು ನಿರ್ಮಿಸಿದಾಗ ನಿರ್ಮಿಸಿದವರಿಗೆ ಶಾಶ್ವತ ಹೆಸರು ತಂದು ಕೊಡುತ್ತದೆ. ಪಟ್ಲ ಫೌಂಡೇಶನ್ ನ ಯಕ್ಷಧ್ರುವ ತಂಡದಿಂದ ಹದಿನೈದು ಲಕ್ಷ ವೆಚ್ಚದಲ್ಲಿ ಈಗಾಗಲೇ ೪೪ ಮನೆಗಳನ್ನು ನಿರ್ಮಿಸಿಕೊಟ್ಟಿರುತ್ತಾರೆ ಎಂದರು.


ಎಲ್ಲರೂ ಕೈಜೋಡಿಸಿದಾಗ ಮಾತ್ರ ಯಾವೂದೂ ಸಾಧ್ಯ-ಶಿವರಾಮ ಆಳ್ವ:
ಉದ್ಯಮಿ ಶಿವರಾಮ ಆಳ್ವ ಮಾತನಾಡಿ, ಮನೆ ನಿರ್ಮಿಸುವ ಕುರಿತು ಲಗೋರಿ ಫ್ರೆಂಡ್ಸ್ ತಂಡ ನನ್ನಲ್ಲಿಗೆ ಬಂದಾಗ ಹಣದ ಸಹಾಯ ಮಾಡುತ್ತೇನೆ ಎಂದಾಗ ನಮಗೆ ಹಣ ಬೇಡ, ಮೆಟೀರಿಯಲ್ಸ್ ಒದಗಿಸಿದರೆ ಸಾಕು ಎಂದಿದ್ದರು. ಅದರಂತೆ ಕುರಿಯ ಗ್ರಾಮದಲ್ಲಿ ಫಲಾನುಭವಿ ಮಹಿಳೆಗೆ ಸುಂದರ ಸೂರು ನಿರ್ಮಿಸಿಕೊಟ್ಟಿರುವುದು, ಡಾ.ಪುತ್ತೂರಾಯರವರು ಮೆಡಿಕಲ್ ಕ್ಯಾಂಪ್ ಮಾಡುತ್ತಿರುವುದು, ಪ್ರೀತಂ ಪುತ್ತೂರಾಯರವರು ಮಾಡುವ ಕಾರ್ಯಕ್ರಮಗಳು ಕುರಿಯ ಗ್ರಾಮವನ್ನು ಸಾಧನೆಯಲ್ಲಿ ಎತ್ತರಕ್ಕೇರಿಸುತ್ತದೆ. ಮನೆ ಕಟ್ಟುವುದು ಸುಲಭವಲ್ಲ ಅದಕ್ಕೆ ಲಕ್ಷಗಟ್ಟಲೆ ಹಣ ಬೇಕಾಗುತ್ತದೆ. ಆಸರೆ ಮನೆ ನಿರ್ಮಿಸಿದಂತೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.


ಸುಂದರ ಮನೆಗೆ ದಾನವಿತ್ತ ದಾನಿಗಳು ಇಂದು ಸಂತೃಪ್ತರು-ಜಯಂತ್ ಶೆಟ್ಟಿ:
ರತ್ನಶ್ರೀ ಕ್ಯಾಟರರ್ಸ್ ಮಾಲಕ ಜಯಂತ್ ಶೆಟ್ಟಿ ಕಂಬಳತ್ತಡ್ಡ ಮಾತನಾಡಿ, ದಾನ ಮಾಡುವುದು ದೇವರ ಪ್ರೇರಣೆಯಾಗಿದೆ. ಇಂದಿಲ್ಲಿ ನಿರ್ಮಿಸಿದ ಸುಂದರ ಮನೆಗೆ ದಾನವಿತ್ತ ದಾನಿಗಳು ಇಂದು ಸಂತೃಪ್ತರಾಗಿದ್ದಾರೆ. ಮನೆಗೆ ಬೆಳಕು ಕೊಡುವುದು ದೊಡ್ಡ ಕಾರ್ಯವಾಗಿದ್ದು ನಾವು ದುಡಿದ ಒಂದು ಪಾಲನ್ನು ಸಮಾಜಮುಖಿ ಕಾರ್ಯಗಳಿಗೆ ನೀಡಿದಾಗ ಸಾರ್ಥಕತೆ ಎನಿಸಿಕೊಳ್ಳುವುದು ಎಂದರು.


ಕೈಜೋಡಿಸಿದ ದಾನಿಗಳು:
ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್ ನ ಹಾಜಿ ಮಹಮ್ಮದ್ ಸಾದಿಕ್, ಮೋಹನ ಪಾಟಾಳಿ ಡೆಮ್ಮಲೆ, ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್ ರೈ ಮಿಶನ್ ಮೂಲೆ, ಉದ್ಯಮಿ ಗಿರಿಧರ ಹೆಗ್ಡೆ ಕೊಂಬೆಟ್ಟು, ಮಾತೃಶ್ರೀ ಅರ್ಥ್ ಮೂವರ್ಸ್ ಮಾಲಕ ಮೋಹನದಾಸ್ ರೈ, ಮಾನಕ ಜ್ಯುವೆಲ್ಲರ್ಸ್ ನ ಸಿದ್ಧನಾಥ ಎಸ್.ಆರ್, ಉದ್ಯಮಿ ಶಿವರಾಮ ಆಳ್ವ, ಅಕ್ಷಯ ಕಾಲೇಜು ಸಂಸ್ಥಾಪಕ ಜಯಂತ್ ನಡುಬೈಲು, ಆರ್ಯಾಪು ಗ್ರಾ.ಪಂ ಪಿಡಿಒ ನಾಗೇಶ್, ಹನುಮಾನ್ ಏಜೆನ್ಸೀಸ್ ನ ದಿನೇಶ್ ಮೊಡಪ್ಪಾಡಿಮೂಲೆ, ಕಿರಣ್ ಎಂಟರ್ಪ್ರೈಸಸ್ ನ ಕೇಶವ ನಾಯಕ್, ಆರ್ಯಾಪು ಗ್ರಾ.ಪಂ. ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ, ಕುರಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ್ ರೈ, ರತ್ನಶ್ರೀ ಕ್ಯಾಟರರ್ಸ್ ನ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಮುಖೇಶ್ ರೈ ಅಡ್ಯೆತ್ತಿಮಾರು, ಅಪ್ಸರಾ ಟೈಲರ್ಸ್ ನ ಮಹಾಬಲ ರೈ, ಮುಕ್ವೆ ಮಜಲುಮಾರು ಅರುಣಾ ಮಸಲಾ ಏಜೆನ್ಸೀಸ್ ನ ಸತೀಶ್ ಪೂಜಾರಿ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿಚಂದ್ರ ಆಚಾರ್ಯರವರಲ್ಲದೆ ಅನೇಕರು ಆಸರೆ ಮನೆ ನಿರ್ಮಾಣದಲ್ಲಿ ಕೈಜೋಡಿಸಿದ್ದರು.


ಅಭಿನಂದನೆ:
ಆಸರೆ ಮನೆ ನಿರ್ಮಾಣಕ್ಕೆ ರಾತ್ರಿ ಹಗಲು ಉಚಿತವಾಗಿ ಕೆಲಸ ಮಾಡಿದ ಸಂದೀಪ್ ಮತ್ತು ಬಳಗ, ವಯರಿಂಗ್ ಕೆಲಸ ಮಾಡಿದ ವಸಂತ ಮತ್ತು ಬಳಗಕ್ಕೆ ಶಾಲು ಹೊದಿಸಿ ಅಭಿನಂದಿಸಲಾಯಿತು.


ಸಭಾ ಕಾರ್ಯಕ್ರಮದ ಮುನ್ನ ತಂತ್ರಿಗಳಾದ ಕುಕ್ಕಾಡಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದರು. ಉದ್ಯಮಿ ಕೊಂಬೆಟ್ಟು ಗಿರಿಧರ್ ಹೆಗ್ಡೆ, ಮಾತೃಶ್ರೀ ಅರ್ಥ್ ಮೂವರ್ಸ್‌ನ ಮೋಹನದಾಸ್ ರೈ, ಕಿರಣ್ ಎಂಟರ್ಪ್ರೈಸಸ್‌ನ ಕೇಶವ ನಾಯಕ್, ಮುಕ್ವೆ ಮಜಲುಮಾರು ಅರುಣಾ ಮಸಲಾ ಏಜೆನ್ಸೀಸ್‌ನ ಸತೀಶ್ ಪೂಜಾರಿ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿಚಂದ್ರ ಆಚಾರ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಗೋರಿ ಫ್ರೆಂಡ್ಸ್ ಕ್ಲಬ್ ತಂಡದ ಸದಸ್ಯ ಹಾಗೂ ಆರ್ಯಾಪು ಗ್ರಾ.ಪಂ ಸದಸ್ಯ ನೇಮಾಕ್ಷ ಸುವರ್ಣ ಅಮ್ಮುಂಜ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಲಗೋರಿ ಫ್ರೆಂಡ್ಸ್ ತಂಡಕ್ಕೆ ಅರ್ಪಣೆ..
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಪ್ಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಕುಕ್ಕಾಡಿ ಪ್ರೀತಂ ಪುತ್ತೂರಾಯರವರನ್ನು ಲಗೋರಿ ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು. ಆದರೆ ಬಡ ಮಹಿಳೆಗೆ ಸೂರು ಕಲ್ಪಿಸಲು ನೆರವಾದ ಲಗೋರಿ ಫ್ರೆಂಡ್ಸ್ ತಂಡದ ನೇಮಾಕ್ಷ ಸುವರ್ಣ, ಸುಕುಮಾರ್ ಗೌಡ, ಹರೀಶ್ ಮಾದೇರಿ, ರಿತೇಶ್ ಪೂಜಾರಿ, ಪ್ರವೀಣ್ ಗೌಡ, ಶಮಂತ್ ಗೌಡರವರಿಗೆ ತನಗೆ ನೀಡಿದ ಸನ್ಮಾನವನ್ನು ಅರ್ಪಿಸಿ ಇವರು ನಿಜವಾಗಿ ಸನ್ಮಾನಕ್ಕೆ ಅರ್ಹರು ಎಂದು ಪ್ರೀತಂ ಪುತ್ತೂರಾಯರವರು ಹೇಳಿದರು.

ರೂ.8 ಲಕ್ಷ ವೆಚ್ಚ..
ಶ್ರೀಮತಿ ವೈಶಾಲಿರವರ ಪತಿ ಒಂಭತ್ತು ವರ್ಷದ ಹಿಂದೆ ನಿಧನರಾಗಿದ್ದು ತನ್ನ ಗಂಡನ ಮನೆಯವರ ಆಸರೆಯಿಲ್ಲದೆ ಹೆತ್ತವರ ಜಾಗದಲ್ಲಿನ ಗುಡಿಸಲಿನಲ್ಲಿ ತನ್ನ ಈರ್ವರು ಮಕ್ಕಳೊಂದಿಗೆ ವಾಸವಾಗಿದ್ದರು. ಮಳೆಗಾಲದಲ್ಲಿ ಗುಡುಗು ಸಿಡಿಲಿನೊಂದಿಗೆ ಕಷ್ಟದಿಂದ ದಿನ ಸಾಗಿಸುತ್ತಿದ್ದ ವೈಶಾಲಿರವರ ಪರಿಸ್ಥಿತಿಯನ್ನು ಅರಿತ ಸ್ಥಳೀಯ ಲಗೋರಿ ಫ್ರೆಂಡ್ಸ್ ತಂಡ ಕೂಡಲೇ ಕಾರ್ಯಪ್ರವೃತ್ತರಾಗಿ ದಾನಿಗಳನ್ನು ಸಂಪರ್ಕಿಸಿ ಕೇವಲ ಐದು ತಿಂಗಳಲ್ಲೇ ರೂ.೮ ಲಕ್ಷ ವೆಚ್ಚದಲ್ಲಿ ಎಲ್ಲಾ ಸೌಕರ್ಯವನ್ನೊಳಗೊಂಡ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟಿರುತ್ತಾರೆ. ಮನೆಗೆ ಬೇಕಾದ ಕಲ್ಲು, ಹೊಯ್ಗೆ, ಕಬ್ಬಿಣ, ದಾರಂದ ಹೀಗೆ ಮನೆಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ದಾನಿಗಳಿಂದ ಸಂಗ್ರಹಿಸಲಾಗಿತ್ತು.

ಲಗೋರಿ ಫ್ರೆಂಡ್ಸ್ ಹಿನ್ನೆಲೆ..
2020ರ ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಿದ ಮಾಡಿದ ಹಿನ್ನೆಲೆಯಲ್ಲಿ ಎಲ್ಲವೂ ಬಂದ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಮ್ಮುಂಜದ ನೇಮಾಕ್ಷ ಸುವರ್ಣ, ಸುಕುಮಾರ್ ಗೌಡ, ಹರೀಶ್ ಮಾದೇರಿ, ರಿತೇಶ್ ಪೂಜಾರಿ, ಪ್ರವೀಣ್ ಗೌಡ, ಶಮಂತ್ ಗೌಡರವರು ದಿನ ಕಳೆಯಲು ಲಗೋರಿ ಆಟವನ್ನು ಆಡಲು ಆರಂಭಿಸಿದ್ದರು ಮಾತ್ರವಲ್ಲ ಲಗೋರಿ ಹೆಸರಿನಲ್ಲಿಯೇ ಲಗೋರಿ ಫ್ರೆಂಡ್ಸ್ ಕ್ಲಬ್ ಅಂತ ಪ್ರಾರಂಭ ಮಾಡಲಾಯಿತು. ಈ ಕ್ಲಬ್‌ನಲ್ಲಿ ಪದಾಧಿಕಾರಿಗಳು ಯಾರೂ ಇಲ್ಲ, ಎಲ್ಲರೂ ಸಮಾನ ಮನಸ್ಕರೇ. ಇದೇ ಲಗೋರಿ ಫ್ರೆಂಡ್ಸ್ ತಂಡ ಪ್ರಸ್ತುತ ಮಹಿಳೆಗೆ ಸೂರನ್ನು ನಿರ್ಮಿಸಿ ಆಟದ ಜೊತೆಗೆ ಆದರ್ಶ ಮೆರೆದಿದ್ದಾರೆ.

ದಾನಿಗಳಿಗೆ ಕೃತಜ್ಞತೆಗಳು..
ಮಹಾಮಾರಿ ಕೊರೋನಾದಿಂದ ಹುಟ್ಟಿಕೊಂಡ ಲಗೋರಿ ಫ್ರೆಂಡ್ಸ್ ಕ್ಲಬ್ ಮುಖೇನ ಇಲ್ಲಿ ವರ್ಷನೂ ಸ್ವಾತಂತ್ರ್ಯದ ಪ್ರಯುಕ್ತ ಧ್ವಜಾರೋಹಣೆ, ಯಾವ್ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗುರುತಿಸುವಿಕೆ ಕಾರ್ಯವನ್ನು ಮಾಡಿದ್ದೇವು. ಈ ಭಾಗದಲ್ಲಿನ ವೈಶಾಲಿ ಎಂಬವರ ಕಷ್ಟವನ್ನು ಅರಿತು ನಮ್ಮ ಲಗೋರಿ ಫ್ರೆಂಡ್ಸ್ ಬಳಗವು ಆರ್ಯಾಪು ಗ್ರಾಮ ಪಂಚಾಯತ್, ಉದ್ಯೋಗ ಖಾತ್ರಿ ಯೋಜನೆಯೊಂದಿಗೆ ಸಹಕಾರ ಪಡೆದು ಹೃದಯವಂತ ದಾನಿಗಳ ನೆರವಿನಿಂದ ಸುಸಜ್ಜಿತ ‘ಆಸರೆ’ ಎಂಬ ಮನೆಯನ್ನು ನಿರ್ಮಿಸಿ ಈಗಾಗಲೇ ಹಸ್ತಾಂತರಿಸಿದ್ದೇವೆ. ನಮ್ಮ ಲಗೋರಿ ಫ್ರೆಂಡ್ಸ್ ಬಳಗದಿಂದಲೂ ಇದರಲ್ಲಿ ಮೂಲ ಬಂಡವಾಳವನ್ನು ಹಾಕಿದ್ದೇವೆ. ರೂ.8 ಲಕ್ಷ ವೆಚ್ಚದಲ್ಲಿ ನಮ್ಮ ಮನೆಯಾಗಿ ಈ ಆಸರೆ ಮನೆಯನ್ನು ನಿರ್ಮಾಣ ಮಾಡುವುದರ ಹಿಂದೆ ನಮ್ಮೊಂದಿಗೆ ಸಹಕರಿಸಿದ ದಾನಿಗಳಿಗೆ ನಮ್ಮ ಕೃತಜ್ಞತೆಗಳು.
-ನೇಮಾಕ್ಷ ಸುವರ್ಣ, ಸುಕುಮಾರ ಗೌಡ, ಲಗೋರಿ ಫ್ರೆಂಡ್ಸ್ ಅಮ್ಮುಂಜ

LEAVE A REPLY

Please enter your comment!
Please enter your name here