ಶಾಸಕರೇ, ಜನಪ್ರತಿನಿಧಿಗಳೇ, ಪಕ್ಷಗಳೇ, ಸಂಘ ಸಂಸ್ಥೆಗಳೇ, ಜನರೇ ಎದ್ದೇಳಿ | ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವುದಕ್ಕಿಂತ ದೊಡ್ಡ ಸೇವೆ, ದೇಶ ಸೇವೆಯಿಲ್ಲ

0

[box type=”error” bg=”#” color=”#” border=”#” radius=”10″ fontsize=”15″]ಜನರಿಗೆ ಉತ್ತಮ ಸೇವೆ ದೊರಕುವಂತೆ ಮಾಡಿ ಕಣ್ಣೀರು ಒರೆಸುವುದೇ ನಿಮ್ಮ ಜೀವನದ ಗುರಿಯಾಗಲಿ[/box]

ಲಂಚ, ಭ್ರಷ್ಟಾಚಾರಕ್ಕಿಂತ ದೊಡ್ಡ ಪಿಡುಗು ದೇಶದಲ್ಲಿಲ್ಲ. ಲಂಚ ಅಂದರೆ ದರೋಡೆಗಿಂತ ದೊಡ್ಡ ದರೋಡೆ, ಭ್ರಷ್ಟಾಚಾರ ಎಂದರೆ ದೊಡ್ಡ ದೇಶ ದ್ರೋಹ ಎಂಬುವುದು ಸುದ್ದಿ ಜನಾಂದೋಲನದ ಮೂಲಕ ಜನರಿಗೆ ಅರ್ಥವಾಗಿದೆ. ಹೀಗಿದ್ದರೂ ಇಷ್ಟು ವರ್ಷವಾದರೂ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ, ಜಾಸ್ತಿಯಾಗುತ್ತಾ ಇದೆ ಎಂದು ಜನರು ಕೊರಗುವುದು ಯಾಕೆ?. ಬ್ರಿಟಿಷರ ಕಾಲದಲ್ಲಿ ಆದರೆ ಆಗ ನಾವು ಗುಲಾಮರಾಗಿದ್ದೆವು. ಅವರು ರಾಜರುಗಳಾಗಿದ್ದರು. ನಮ್ಮಿಂದ ಕಪ್ಪ ವಸೂಲು ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿತ್ತು ಎಂಬುವುದು ಸರಿ. ಆದರೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ, ನಮ್ಮಿಂದ ನಮಗೆ ನಾವೇ ಆಡಳಿತ ಎಂಬ ಮತದಾನದ ಹಕ್ಕು ಬಂದ ಮೇಲೆ, ನಾವು ಓಟು ಕೊಟ್ಟ ಪ್ರತಿನಿಧಿ, ಶಾಸಕರಾಗಿ ರಾಜ್ಯವಾಳುತ್ತಾರೆ. ಸಂಸದ ದೇಶ ಆಳುತ್ತಾರೆ ಎಂದು ಹೇಳುವಾಗ, ಇಲಾಖೆಗಳು ನಮ್ಮ ಸೇವೆಗೆ ಎಂದಿರುವಾಗ ರಾಜರುಗಳಾದ ನಾವು ಗುಲಾಮರಂತೆ (ಕುರಿಗಳಂತೆ) ವರ್ತಿಸುವುದು ಯಾಕೆ? ಎಂದು ನನಗೆ ಅರ್ಥವಾಗುತ್ತಿಲ್ಲ. ಆ ರೀತಿಯ ನಮ್ಮ ಜನರ ವರ್ತನೆಯೇ ಲಂಚ, ಭ್ರಷ್ಟಾಚಾರಕ್ಕೆ ಕಾರಣ ಎಂದು ಹೇಳಿದರೆ ತಪ್ಪಾದೀತೆ?.

ನಮ್ಮ ಊರಿನಲ್ಲಿರುವ ಎಲ್ಲಾ ಇಲಾಖೆಗಳು, ಅಧಿಕಾರಿಗಳು ನಮ್ಮ ಊರಿನ ಜನರ ಸೇವೆಗಾಗಿ ಇರುವಂತದ್ದು, ತಾಲೂಕಿನ ಅಧಿಕಾರಿಗಳು, ಇಲಾಖೆಗಳು ತಾಲೂಕಿನ ಜನರ ಸೇವೆಗಾಗಿ, ಜಿಲ್ಲೆಯ ಅಧಿಕಾರಿಗಳು ಜಿಲ್ಲೆಯ ಒಟ್ಟು ಜನರ ಸೇವೆಗಾಗಿ ಇರುವಂತದ್ದು. ಅದು ಹೌದೇ? ಅಲ್ಲವೇ? ಎಂದು ನಿಮ್ಮ ನಿಮ್ಮ ಪಕ್ಷದವರನ್ನು, ಜನಪ್ರತಿನಿಧಿಯನ್ನು ಕೇಳಿ ನೋಡಿ. ನೀವು ನಮ್ಮ ಜನಪ್ರತಿನಿಧಿಗಳಾಗಿರುವಾಗ, ನಮ್ಮದೇ ಆಡಳಿತ ಇರುವಾಗ, ಅಧಿಕಾರಿಗಳು ಜನರಿಂದ ಕೆಲಸಕ್ಕಾಗಿ ದರೋಡೆಯ ಮೂಲಕ ಹಣ ವಸೂಲಿ ಮಾಡುವುದು, ಭ್ರಷ್ಟಾಚಾರದ ಮೂಲಕ ನಮ್ಮ ಊರು, ತಾಲೂಕು, ಜಿಲ್ಲೆಯನ್ನು ಹಾಳು ಮಾಡುವುದು ಹೇಗೆ? ಎಂಬ ಪ್ರಶ್ನೆಯನ್ನು ಕೇಳಿ. ನೀವು ಅಸಹಾಯಕರೇ ಅಥವಾ ನಿಮಗೆ ಅದರಲ್ಲಿ ಪಾಲಿದೆಯೇ ಎಂಬ ಸಂಶಯವನ್ನು ಜನಪ್ರತಿನಿಧಿಗಳ, ಮುಂದೆ ಇಡಿ. ಲಂಚ, ಭ್ರಷ್ಟಾಚಾರ ಕಡಿಮೆಯಾಗುವುದು ಖಂಡಿತ.

ಅಷ್ಟು ಮಾಡಿದರೆ ಸಾಲದು. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಆಡಳಿತದ ಆಶಯದಂತೆ ಪ್ರತಿಯೊಬ್ಬ ಪ್ರಜೆ ಈಗಿನ ಪರಿಸ್ಥಿತಿಗೆ ತಾನು ಹೊಣೆಗಾರ ಎಂದು ಪರಿಗಣಿಸಿ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಘೋಷಣೆ ಆಚರಣೆಗೆ ತರಬೇಕು. ಮನೆ ಮನೆಗಳಲ್ಲಿ, ಊರುಗಳಲ್ಲಿ, ಮಳಿಗೆಗಳಲ್ಲಿ ಎಲ್ಲಾ ಕಡೆ ಆ ಘೋಷಣೆಯ ಫಲಕಗಳನ್ನು ಅಳವಡಿಸಬೇಕು. ಶಾಸಕರು, ಜನಪ್ರತಿನಿಧಿಗಳು ಎಲ್ಲಾ ಪಕ್ಷದವರು, ಸಂಘಟನೆಯವರು, ಜನರು (ಪಕ್ಷ, ಜಾತಿ, ಧರ್ಮ, ಅಧಿಕಾರಿ, ಕೂಲಿ ಕಾರ್ಮಿಕ, ಬಡವ, ಶ್ರೀಮಂತ ಎಂಬ ಬೇಧ ಭಾವ ಬಿಟ್ಟು) ತಮ್ಮ ಊರನ್ನು, ತಾಲೂಕನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವುದಕ್ಕಿಂತ ದೊಡ್ಡ ಜನಸೇವೆ, ದೇಶಸೇವೆ ಇಲ್ಲ ಎಂದು ತಿಳಿದು ಅದರ ಅನುಷ್ಠಾನಕ್ಕೆ ಮುಂದೆ ಬರಬೇಕು. ಒಂದು ಪಂಚಾಯತ್‌ನಲ್ಲಿರುವ 3,000ದಿಂದ 5,000 ಜನರಿಗೆ ತೊಂದರೆ ಕೊಡುವ 2ರಿಂದ 5 ಜನರಿರುತ್ತಾರೆ. ಅವರನ್ನು ಎದುರಿಸಲು ಸಾಧ್ಯವಿಲ್ಲವೇ?. 3ರಿಂದ 4 ಲಕ್ಷ ಇರುವ ತಾಲೂಕಿನ ಜನರಿಗೆ 50 ರಿಂದ 100 ಜನ ಸೇವಕರು (ಅಧಿಕಾರಿಗಳು) ತೊಂದರೆ ಕೊಡಲು ಹೇಗೆ ಸಾಧ್ಯ?. ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶ ದ್ರೋಹ. ಉತ್ತಮ ಸೇವೆಗೆ ಪುರಸ್ಕಾರ, ನಮಸ್ಕಾರ ಎಂದು ಜನರು ನಿರ್ಣಯಿಸಿ ಲಂಚ, ಭ್ರಷ್ಟಾಚಾರಿಗಳಿಗೆ ಬಹಿಷ್ಕಾರ ಮಾಡಿದರೆ, ಉತ್ತಮ ಸೇವೆ ಮಾಡುವವರಿಗೆ ಪುರಸ್ಕಾರ ಮಾಡಿದರೆ ಏನಾಗಬಹುದು?. ಲಂಚ ತೆಗೆದುಕೊಂಡರೆ ದರೋಡೆಕೋರನಾಗುತ್ತೇನೆ. ಭ್ರಷ್ಟಾಚಾರ ಮಾಡಿದರೆ ದೇಶದ್ರೋಹಿಯಾಗುತ್ತೇನೆ. ಜನರ ಮಾನ್ಯತೆ, ಗೌರವ ಇರುವುದಿಲ್ಲ ಎಂದು ಅನಿಸಿದರೆ ಆತ ಲಂಚ, ಭ್ರಷ್ಟಾಚಾರ ಮಾಡಿಯಾನೆ?. ಮಾಡಿದರೆ ಊರಿನ, ತಾಲೂಕಿನ ಜನರ ಆಕ್ರೋಶ ಇರುವಾಗ ಅಲ್ಲಿ ಉಳಿದಾನೇ?. ಉತ್ತಮ ಸೇವೆ ಮಾಡಿದರೆ ಜನ ಮೆಚ್ಚಿದ ಜನ ಸೇವಕನಾಗುತ್ತಾನೆ. ನಮಸ್ಕಾರವೂ ಪುರಸ್ಕಾರವೂ ದೊರಕುತ್ತದೆ. ಗೌರವವಿಲ್ಲದ ಹಣಕ್ಕಿಂತ ಜನರ ಪ್ರೀತಿಯ ಸಂಪತ್ತೇ ಮುಖ್ಯ ಎಂಬ ಕಾರಣಕ್ಕೆ ಮನಪರಿವರ್ತನೆಯಾಗಲಾರದೆ?. ಜನರು ಮನಸ್ಸು ಮಾಡಿದರೆ ಈ ಬದಲಾವಣೆ ಸಾಧ್ಯ. ಮೂರು ತಿಂಗಳಲ್ಲಿ ಪುತ್ತೂರನ್ನು ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕನ್ನಾಗಿ ಮಾಡಬಹುದು ಎಂಬ ಭರವಸೆಯನ್ನು ರಾಜರುಗಳಾದ ಪುತ್ತೂರಿನ ಜನರ ಮುಂದೆ ಇಡುತ್ತಿದ್ದೇನೆ.

ಪತ್ರಿಕೆಯ ಮುಖ್ಯ ಜವಾಬ್ದಾರಿಯಿಂದ ಹೊರ ಬಂದು ಈ ಜನಾಂದೋಲನವನ್ನು ತಾಲೂಕಿನಾದಂತ, ದ.ಕ.ಜಿಲ್ಲೆಗೆ ಮತ್ತು ಇತರ ಕಡೆಗೆ ಹರಡುವ ಯೋಜನೆಗೆ ನಿಮ್ಮೆಲ್ಲರ ಬೆಂಬಲವನ್ನು, ಪ್ರೋತ್ಸಾಹವನ್ನು ಆಶಿಸುತ್ತೇನೆ.

LEAVE A REPLY

Please enter your comment!
Please enter your name here