ಶಿರವಸ್ತ್ರಕ್ಕೆ ಅವಕಾಶ ನಿರಾಕರಣೆ: ಉಪ್ಪಿನಂಗಡಿಯಲ್ಲಿ ಪ್ರತಿಭಟನೆ

0

ಉಪ್ಪಿನಂಗಡಿ: ಧಾರ್ಮಿಕ ನಂಬಿಕೆಗಳ ಅನುಸರಣೆಗೆ ನಮ್ಮ ಸಂವಿಧಾನದಲ್ಲಿ ಅವಕಾಶ ನೀಡಲಾಗಿದ್ದು, ಆದ್ದರಿಂದ ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ಶಾಲನ್ನು ಶಿರವಸ್ತ್ರವಾಗಿ ಧರಿಸಲು ಅವಕಾಶ ನೀಡಬೇಕು ಎಂದು ಉಪ್ಪಿನಂಗಡಿ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷೆ ಮೆಹರು ತಿಳಿಸಿದರು.

ಕಾಲೇಜು ವಿದ್ಯಾರ್ಥಿನಿಯರಿಗೆ ಕಾಲೇಜಿನೊಳಗೆ ಶಿರವಸ್ತ್ರ ಧರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಉಪ್ಪಿನಂಗಡಿಯ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯ ವತಿಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಸಮೀಪದ ವೃತ್ತದ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆ ಶಿರವಸ್ತ್ರವನ್ನು ಧರಿಸಿದರೆಂಬ ಏಕೈಕ ಕಾರಣಕ್ಕಾಗಿ ಅವರನ್ನು ಕಾಲೇಜಿನಿಂದ ಹೊರಗಿಡುವ ಕೆಲಸಗಳು ನಡೆಯುತ್ತಿದ್ದು, ಇದು ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮವನ್ನು ಬೀರುತ್ತದೆ. ಕೇವಲ ಮುಸ್ಲಿಮರು ಮಾತ್ರವಲ್ಲ. ಕ್ರೈಸ್ತ ಸನ್ಯಾಸಿನಿಯರು, ಲಂಬಾಣಿ ಮಹಿಳೆಯರು, ಗುಜರಾತಿ ಮಹಿಳೆಯರು, ಸಿಖ್ ಮಹಿಳೆಯರು ಕೂಡಾ ಶಿರವಸ್ತ್ರವನ್ನು ಧರಿಸುತ್ತಾರೆ. ಮಾಜಿ ರಾಷ್ಟ್ರಪತಿಯವರಾದ ಪ್ರತಿಭಾ ಪಾಟೀಲ್ ಕೂಡಾ ಶಿರ ಮುಚ್ಚಿಕೊಳ್ಳುತ್ತಿದ್ದರು ಎಂಬುದನ್ನು ಗಮನಿಸಬೇಕು. ಸಂವಿಧಾನದ ಅನುಚ್ಚೇದ 25, 26ರ ಪ್ರಕಾರ ಧಾರ್ಮಿಕ ನಂಬಿಕೆಗಳ, ಆಚಾರಗಳ ಅನುಸರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದೀಗ ಶಿರವಸ್ತ್ರ ಧರಿಸಲು ಅವಕಾಶ ನಿರಾಕರಿಸುತ್ತಿರುವುದು ಅಸಂವಿಧಾನಿಕ ಕ್ರಮವಾಗಿದ್ದು, ಈ ಮೂಲಕ ಮೂಲಭೂತ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಸರಕಾರ ನಡೆಸುತ್ತಿದೆ ಎಂದರು. ಮುಸ್ಲಿಂ ಹೆಣ್ಣು ಮಕ್ಕಳಿಗೆ ಕಾಲೇಜುಗಳಲ್ಲಿ ಶಾಲನ್ನು ಶಿರವಸ್ತ್ರವಾಗಿ ಧರಿಸಲು ಅವಕಾಶ ನೀಡಬೇಕು ಬಳಿಕ ನಾಡಕಚೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯ ಸಂಚಾಲಕಿ ಫಾಹೀನ, ಪ್ರಮುಖರಾದ ಸಾಜಿದ, ಅನೀಸ, ಫಾಹಿನ, ಮಿಸ್ರೀಯಾ, ಸಂಭ್ರತ್, ಶಾಹಿದಾ, ಅಸುರಾ, ಸೈದಾ ಯೂಸುಫ್, ಸಹಲ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here