ಶೇಡಿಗುರಿ ಚಿಮಿಣಿಗುಡ್ಡೆ ಮನೆ ಸೈಟ್‌ಗೆ ಅರಣ್ಯ ಇಲಾಖೆಯಿಂದ ಅಡ್ಡಿ

0
  • ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆಗೆ ಗ್ರಾಮಸ್ಥರ ಒತ್ತಾಯ-ನಿರ್ಣಯ
  • ಕೊಳ್ತಿಗೆ ಗ್ರಾಮಸಭೆ

 

ಪುತ್ತೂರು: ಕೊಳ್ತಿಗೆ ಗ್ರಾಮದ ಶೇಡಿಗುರಿ ಚಿಮಿಣಿಗುಡ್ಡೆಯಲ್ಲಿರುವ ಸುಮಾರು 40 ಎಕರೆ ಸರಕಾರಿ ಜಾಗದಲ್ಲಿ 5 ಎಕರೆ ಮನೆ ಸೈಟ್‌ಗೆ 1 ಎಕರೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮತ್ತು 1 ಎಕರೆ ಸ್ಮಶಾನಕ್ಕೆ ಕಾಯ್ದಿರಿಸಲಾಗಿದ್ದು ಇದರಲ್ಲಿ 17 ಫಲಾನುಭವಿಗಳಿಗೆ ಮನೆ ಸೈಟ್‌ಗೆ ಈಗಾಗಗಲೇ ಕಂದಾಯ ಇಲಾಖೆಗೆ ಆರ್‌ಟಿಸಿ ದೊರೆಕಿದ್ದರೂ ಅರಣ್ಯ ಇಲಾಖೆಯವರು ಈ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ತಡೆಯಾಜ್ಞೆ ತಂದಿರುವುದರಿಂದ ಮನೆ ಸೈಟ್‌ಗೆ ಆರ್‌ಟಿಸಿ ಪಡೆದ ಫನಾನುಭವಿಗಳಿಗೆ ತೊಂದರೆಯಾಗಿದೆ. ಸುಮಾರು 40 ವರ್ಷಗಳ ಹಿಂದಿನ ಸರಕಾರಿ ಜಾಗವಾಗಿದ್ದರೂ ಇದೀಗ ಗ್ರಾಪಂ ಒಳ್ಳೆಯ ಉದ್ದೇಶಕ್ಕೆ ಉಪಯೋಗಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ ಆದ್ದರಿಂದ ಈ ಕೂಡಲೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಕೊಳ್ತಿಗೆ ಗ್ರಾಮಸಭೆಯಲ್ಲಿ ಆಗ್ರಹಿಸಿದರು. ಜಂಟಿ ಸರ್ವೆಗೆ ಇಲಾಖೆಗಳಿಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ಸಭೆಯು ಗ್ರಾಪಂ ಅಧ್ಯಕ್ಷ ಶ್ಯಾಮ್‌ಸುಂದರ್ ರೈಯವರ ಅಧ್ಯಕ್ಷತೆಯಲ್ಲಿ ಫೆ.15 ರಂದು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ಯವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಅರಣ್ಯ ಇಲಾಖಾ ಮಾಹಿತಿ ಸಂದರ್ಭದಲ್ಲಿ ಗ್ರಾಮಸ್ಥ ಅಣ್ಣು ಕಲಾಯಿಯವರು ವಿಷಯ ಪ್ರಸ್ತಾಪಿಸಿ, ಶೇಡಿಗುರಿಯ ಚಿಮಿಣಿಗುಡ್ಡೆಯಲ್ಲಿ ಮನೆ ನಿರ್ಮಾಣಕ್ಕೆ ಡಿನೋಟಿಪಿಕೇಶನ್ ಕೊಟ್ಟಿದ್ದರೂ ಈಗ ಈ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಅರಣ್ಯ ಇಲಾಖೆಯವರು ಅಡ್ಡಿ ಪಡಿಸುತ್ತಿದ್ದಾರೆ ಇದು ಯಾಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಕೃಷ್ಣಜ್ಯೋತಿಯವರು ಇದು ಕೆಸಿಡಿಸಿ ರಿಸರ್ವ್ ಜಾಗವಾಗಿದೆ ಎಂದು ತಿಳಿಸಿದರು. ಗ್ರಾಮಸ್ಥರಾದ ಶ್ರೀಧರ ಪೂಜಾರಿಯವರು ಮಾತನಾಡಿ, ಇದು 40 ವರ್ಷಗಳ ಹಿಂದಿನ ಸರಕಾರಿ ಜಾಗವಾಗಿದೆ. ಈ ಜಾಗದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಸೈಟ್ ಕೊಟ್ಟು ಆರ್‌ಟಿಸಿ ಕೊಟ್ಟ ಬಳಿಕವೂ ಅರಣ್ಯ ಇಲಾಖೆಯವರು ಈ ಜಾಗವನ್ನು ಸ್ವಾದೀನ ಮಾಡಿಕೊಳ್ಳುವುದು ಹೇಗೆ? ಪಂಚಾಯತ್‌ನವರು ಇದಕ್ಕೆ ಯಾಕೆ ತಡೆಯಾಜ್ಞೆ ತರಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶ್ಯಾಮ್‌ಸುಂದರ ರೈ, ಇದು ರಿಸರ್ವ್ ಫಾರೆಸ್ಟ್ ಜಾಗ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ನಾವೇನು ಮಾಡಲು ಸಾಧ್ಯವಿಲ್ಲ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಬೇಕಾಗಿದೆ ಎಂದು ತಿಳಿಸಿದರು. ಹಾಗಾದರೆ ಜಂಟಿ ಸರ್ವೆಗೆ ಬರೆದುಕೊಳ್ಳುವ ಎಂದು ಗ್ರಾಮಸ್ಥರು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.

ರಸ್ತೆ ಡಾಂಬರೀಕಣ ಸಂಪೂರ್ಣ ಕಳಪೆ-ತನಿಖೆಗೆ ಆಗ್ರಹ
ಗ್ರಾಮದ ಮಾವಿನಕಟ್ಟೆ-ಕಲ್ಲರ್ಪೆ ರಸ್ತೆ ಡಾಂಬರೀಕರಣವೂ ಸಂಪೂರ್ಣ ಕಳಪೆಯಾಗಿದೆ. 50 ಲಕ್ಷ ರೂ.ಅನುದಾನದಲ್ಲಿ ಡಾಂಬರೀಕರಣವಾಗಿದ್ದು ಡಾಂಬರೀಕಣವೂ ಸಂಪೂರ್ಣ ಕಳಪೆಯಾಗಿದೆ. ಈಗಾಗಲೇ ಜಲ್ಲಿ ಎದ್ದು ಹೋಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಸದಸ್ಯ ಪವನ್ ಡಿ.ಜೆ ದೊಡ್ಡಮನೆ ಆಗ್ರಹಿಸಿದರು. ರಸ್ತೆ ದುರಸ್ತಿಗೆ ಎಸ್ಟಿಮೇಟ್ ಆಗಿದ್ದು ಅದರಂತೆ ದುರಸ್ತಿ ಮಾಡಿದ್ದೇವೆ. ಕಳಪೆ ಆಗಿರುವುದಾದರೆ ಅದನ್ನು ಸಾಬೀತು ಪಡಿಸಿ, 1 ವರ್ಷದ ಗ್ಯಾರಂಟಿ ಇದೆ. ಈ ಅವಧಿಯಲ್ಲಿ ಡಾಂಬರ್ ಎದ್ದು ಹೋದರೆ ಮತ್ತೆ ಮಾಡಿಕೊಡುತ್ತೇವೆ ಎಂದು ಜಿಪಂ ಇಂಜಿನಿಯರ್ ಭರವಸೆ ನೀಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪವನ್ ರವರು, ರಸ್ತೆ ದುರಸ್ತಿಗೆ ಎಂದು ಎಸ್ಟಿಮೇಟ್ ಆಗಿರುವುದಾದರೆ ಅದನ್ನು ತೋರಿಸಿ, ಎಸ್ಟೀಮೇಟ್ ಪ್ರಕಾರ ಡಾಂಬರೀಕರಣವಾಗಿಲ್ಲ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪ್ರಮೋದ್ ಕೆ.ಎಸ್.ರವರು ಡಾಂಬರೀಕರಣ ಸಂಪೂರ್ಣ ಕಳಪೆಯಾಗಿದೆ ಎಂದರು. ಗ್ರಾಮಸ್ಥ ಶ್ರೀಧರ್ ಪೂಜಾರಿಯವರು ಧ್ವನಿಗೂಡಿಸಿ, 50 ಲಕ್ಷಕ್ಕೆ ಎಷ್ಟು ಮೀಟರ್ ಡಾಂಬರೀಕರಣ ಮಾಡಲು ಸಾಧ್ಯವಿದೆ ಅಷ್ಟು ಮಾತ್ರ ಸರಿಯಾಗಿ ಮಾಡಿ, ಅದು ಬಿಟ್ಟು ಮೀಟರ್ ಜಾಸ್ತಿ ಎಳೆದು ಕಳಪೆ ಮಾಡುವುದು ಸರಿಯಲ್ಲ ಎಂದರು. ರಸ್ತೆ ಡಾಂಬರೀಕಣ ಕಳಪೆ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ಅನುದಾನ ಹಂಚಿಕೆಯಲ್ಲಿ ಜಿಪಂನಿಂದ ತಾರತಮ್ಯ ಆಗಿದೆ-ಆರೋಪ
ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಕೊಳ್ತಿಗೆ ಗ್ರಾಮಕ್ಕೆ ಕೇವಲ 1ಲಕ್ಷ ಅನುದಾನ ಮಾತ್ರ ಬಂದಿರುವುದು ಬೇಸರ ತಂದಿದೆ. ಜಿಪಂ, ತಾಪಂ ಆಡಳಿತ ಇಲ್ಲದಿದ್ದರೂ ಗ್ರಾಪಂ ಆಡಳಿತ ಇತ್ತು, ಗ್ರಾಪಂಗೆ ಯಾವುದೇ ಮಾಹಿತಿಯನ್ನು ನೀಡದೆ ಅನುದಾನ ಹಂಚಿಕೆ ಮಾಡಲಾಗಿದೆ. ಇದು ಗ್ರಾಪಂಗೆ ಮಾಡಿದ ಅವಮಾನವಾಗಿದೆ. ಇದು ಖಂಡನೀಯ. ನನಗೆ ಮಾಹಿತಿ ಬಂದ ಪ್ರಕಾರ ಶಾಸಕರು ಅನುದಾನ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ ಎಂದು ಪ್ರಮೋದ್ ಕೆ.ಎಸ್ ಹೇಳಿದರು. ಜಿಲ್ಲಾ ಪಂಚಾಯತ್‌ನಿಂದ ತಾರತಮ್ಯ ಆಗಿದೆ ಎಂದು ಶ್ರೀಧರ ಪೂಜಾರಿ ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶ್ಯಾಮ್‌ಸುಂದರ್ ರೈಯವರು, ಶಾಸಕರು ಅನುದಾನ ಹಂಚಿಕೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ, ತಾಪಂ ಮತ್ತು ಜಿಪಂ ಕಾರ್ಯನಿರ್ವಹಣಾಧಿಕಾರಿಯವರು ಈ ಅನುದಾನ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ಜಿಪಂ ಮತ್ತು ತಾಪಂ ಅನುದಾನದ ಬಗ್ಗೆ ಗ್ರಾಪಂಗೆ ಮಾಹಿತಿ ನೀಡಬೇಕು, ಅನುದಾನಗಳ ಬಗ್ಗೆ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಬೇಕು ಎಂದು ಪಂಚಾಯತ್‌ರಾಜ್ ಇಲಾಖೆಗೆ ಬರೆದುಕೊಳ್ಳುವ ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.

ನನಗೆ ಸಾಲ ಬೇಡ ಎಂದು ಗ್ರಾಮಸ್ಥರಿಂದ ಬ್ಯಾಂಕ್‌ನವರೇ ಬರೆಯಿಸಿಕೊಳ್ಳುತ್ತಿದ್ದಾರೆ!?
ಸರಕಾರ ಒಂದು ಕಡೆಯಲ್ಲಿ ಸಣ್ಣ ಉದ್ದಿಮೆಗೆ ಪ್ರೋತ್ಸಾಹ ಕೊಡುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಇದಕ್ಕೆ ಬ್ಯಾಂಕ್‌ನವರು ಅಡ್ಡಗಾಲು ಹಾಕುತ್ತಿದ್ದಾರೆ. ಕೋಳಿ,ಕುರಿ,ಆಡು,ದನ ಇತ್ಯಾದಿ ಸಾಕಾಣೆ ಸೇರಿದಂತೆ ಸಣ್ಣ ಉದ್ದಿಮೆ ಮಾಡುವವರಿಗೆ ಸರಕಾರ ಬ್ಯಾಂಕ್‌ಗಳ ಮೂಲಕ ಸಾಲ ಕೊಡಲು ಆದೇಶ ಮಾಡಿದ್ದರೂ ಬ್ಯಾಂಕ್‌ನವರು ಸಾಲ ಕೊಡುತ್ತಿಲ್ಲ, ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳಬೇಕು ಎಂದು ಪ್ರಮೋದ್ ಕೆ.ಎಸ್ ಆಗ್ರಹಿಸಿದರು. ಸಾಲ ಕೇಳಲು ಬಂದ ಫಲಾನುಭವಿಯಿಂದ ಎಲ್ಲಾ ದಾಖಲೆಗಳನ್ನು ಪಡೆದುಕೊಂಡ ಬಳಿಕ ಕೊನೇ ಕ್ಷಣದಲ್ಲಿ ನೀವು ಸಾಲ ತೆಗೆದುಕೊಳ್ಳಬೇಡಿ ಎಂದೇಳುತ್ತಿದ್ದಾರೆ. ಇದಕ್ಕೆ ನನಗೆ ಸಾಲ ಬೇಡ ಎಂದು ನಮಗೆ ಲಿಖಿತವಾಗಿ ಬರೆದುಕೊಡಿ ಎಂದು ಬ್ಯಾಂಕ್‌ನವರೇ ಫಲಾನುಭವಿಯಿಂದ ಬರೆಯಿಸಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಮೋದ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಸರಿಯಾದ ದಾಖಲೆಗಳನ್ನು ಕೊಟ್ಟರೆ ಸಾಲ ಕೊಡಬೇಕಾಗಿರುವುದು ಬ್ಯಾಂಕ್‌ನವರ ಕರ್ತವ್ಯ, ಗ್ರಾಮಸ್ಥರು ಬ್ಯಾಂಕ್‌ನವರಿಂದಲೇ ನಾವು ಸಾಲ ಕೊಡುವುದಿಲ್ಲ ಎಂದು ಲಿಖಿತವಾಗಿ ಬರೆಯಿಸಿ ತೆಗೆದುಕೊಳ್ಳಬೇಕು, ಯಾವುದೇ ಕಾರಣಕ್ಕೂ ಬ್ಯಾಂಕ್‌ನವರಿಗೆ ನಮಗೆ ಸಾಲ ಬೇಡ ಎಂದು ಬರೆದುಕೊಡಬೇಡಿ ಎಂದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ಆನೆಕಾಲು ಪೀಡಿತರಿಗೂ ಸರಕಾರದಿಂದ ಸಹಾಯಧನ ಬರಲಿ
ಕೊಳ್ತಿಗೆ ಗ್ರಾಮದಲ್ಲಿ ಒಂದೇ ಮನೆಯಲ್ಲಿ ೩ ಮಂದಿ ಆನೆಕಾಲು ರೋಗದಿಂದ ಬಳಲುತ್ತಿದ್ದಾರೆ. ಕೆಲಸ ಮಾಡಲು ಕೂಡ ಸಾಧ್ಯವಾಗದೇ ಇರುವುದರಿಂದ ಇವರಿಗೆ ಊಟಕ್ಕೂ ಬಹಳ ಕಷ್ಟವಾಗಿದೆ. ಸರಕಾರದಿಂದ ಯಾವುದೇ ಪರಿಹಾರ, ಸಹಾಯಧನ ಸಿಗುತ್ತಿಲ್ಲ ಆದ್ದರಿಂದ ಆನೆಕಾಲು ಪೀಡಿತರಿಗೂ ಸರಕಾರ ಸಹಾಯಧನ ಕೊಡಬೇಕು ಈ ಬಗ್ಗೆ ಬರೆದುಕೊಳ್ಳುವ ಎಂದು ಪ್ರಮೊದ್ ಕೆ.ಎಸ್ ತಿಳಿಸಿದರು. ಈ ಬಗ್ಗೆ ಸರಕಾರಕ್ಕೆ ಮತ್ತು ಆರೋಗ್ಯ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು. ಕೋವಿಡ್ 19 ತುರ್ತು ಸಂದರ್ಭದಲ್ಲಿ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಆರೋಗ್ಯ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಉತ್ತಮ ಸೇವೆ ನೀಡಿದ್ದಾರೆ ಎಂದು ಅಧ್ಯಕ್ಷರು ಅವರಿಗೆ ಅಭಿನಂದನೆ ಸಲ್ಲಿಸಿದರು. ಕೋವಿಡ್ ತುರ್ತು ಸಂದರ್ಭದಲ್ಲಿ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಗ್ರಾಮಸ್ಥರು ಉತ್ತಮ ಸಹಕಾರ ನೀಡಿದ್ದಾರೆ ಎಂದ ವೈದ್ಯಾಧಿಕಾರಿಯವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸರಕಾರದ ಆಯುಷ್ಮಾನ್ ಸೌಲಭ್ಯವನ್ನು ಪಡೆಯಬೇಕಾದರೆ ಸರಕಾರಿ ಆಸ್ಪತ್ರೆಯ ಶಿಫಾರಸ್ಸಿನ ಮೇರೆಗೆ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ದಾಖಲೆ ಮಾಡಬೇಕಾಗುತ್ತದೆ. ಇದರಿಂದ ತುರ್ತು ಸಂದರ್ಭದಲ್ಲಿ ಕಷ್ಟವಾಗುತ್ತಿದೆ. ಹೃದಯಾಘಾತ ಸಂದರ್ಭದಲ್ಲಿ ರೋಗಿಯನ್ನು ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿ ಶಿಫಾರಸ್ಸು ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಿಸುವ ವೇಳೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ತುರ್ತು ಸಂದರ್ಭದಲ್ಲಿ ನೇರವಾಗಿ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಆ ರೋಗಿಗೆ ಆಯುಷ್ಮಾನ್ ಸೌಲಭ್ಯ ಸಿಗುವಂತೆ ಆಗಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ಪ್ರಮೋದ್ ಕೆ.ಎಸ್ ತಿಳಿಸಿದರು. ಕೊಳ್ತಿಗೆ ಗ್ರಾಮಕ್ಕೆ 108 ಆಂಬುಲೆನ್ಸ್ ಅಗತ್ಯ ಇದೆ ಎಂದು ಅಣ್ಣು ಕಲಾಯಿ ತಿಳಿಸಿದರು.

ಮೆಸ್ಕಾಂ ಲೈನ್‌ಮೆನ್‌ಗಳು ಸ್ಪಂದಿಸುತ್ತಿಲ್ಲ
ಕೊಳ್ತಿಗೆ ಗ್ರಾಮದಲ್ಲಿ ಇಬ್ಬರು ಮೆಸ್ಕಾಂ ಪವರ್ ಮೆನ್‌ಗಳಿದ್ದಾರೆ ಇವರಲ್ಲಿ ಸೀನಿಯರ್ ಜ್ಯೂನಿಯರ್ ಎಂದು ಇದೆಯಾ ಎಂದು ಪ್ರಶ್ನಿಸಿದ ಸದಸ್ಯ ಯತೀಂದ್ರ ಕೊಚ್ಚಿಯವರು, ಏಕೆಂದರೆ ಮೆಸ್ಕಾಂ ವಿಷಯದಲ್ಲಿ ಲೈನ್‌ಮೆನ್‌ಗೆ ವಿಷಯ ತಿಳಿಸಿದಾಗ ನೀವು ಮತ್ತೊಬ್ಬ ಲೈನ್‌ಮೆನ್‌ಗೆ ವಿಷಯ ತಿಳಿಸಿದ್ದೀರ ಎಂದು ಅವರು ಕೇಳಿದ್ದಾರೆ ಎಂದು ಕೊಚ್ಚಿಯವರು ತಿಳಿಸಿದರು. ಇದಕ್ಕೆ ಉತ್ತರಿಸಿದ ಜೆಇ ನಿತ್ಯಾನಂದ ತೆಂಡೂಲ್ಕರ್‌ರವರು ಇಲ್ಲಿ ಸೀನಿಯರ್ ಜ್ಯೂನಿಯರ್ ಯಾವುದೂ ಇಲ್ಲ, ಮೆಸ್ಕಾಂಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ನೀವು ಲೈನ್‌ಮೆನ್‌ಗಳು ಸರಿಯಾಗಿ ಸ್ಪಂದಿಸದೇ ಇದ್ದರೆ 1912 ಟೋಲ್‌ಫ್ರೀ ನಂಬರ್‌ಗೆ ಕರೆ ಮಾಡಿ ವಿಷಯ ತಿಳಿಸಿ, ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು. ಕುಂಟಿಕಾನ ಶಾಲಾ ಆಟದ ಮೈದಾನದ ಬಳಿಯಲ್ಲೇ ವಿದ್ಯುತ್ ವಯರ್ ನೇತಾಡುತ್ತಿದೆ ಇದನ್ನು ಸರಿಪಡಿಸಿ, ಹಳೆಯ ವಿದ್ಯುತ್ ವಯರ್‌ಗಳನ್ನು ಶೀಘ್ರವೇ ಬದಲಾಯಿಸಿ ಎಂಬಿತ್ಯಾದಿ ಬೇಡಿಕೆಗಳು ಗ್ರಾಮಸ್ಥರಿಂದ ಬಂತು.

ಬಸ್ಸು ಬರಲಿ
ಮಾವಿನಕಟ್ಟೆ-ಕೊಂರ್ಬಡ್ಕ ರಸ್ತೆಯಲ್ಲಿ ಈ ಹಿಂದೆ ಸರಕಾರಿ ಬಸ್ಸು ಬರುತ್ತಿತ್ತು ಆದರೆ ರಸ್ತೆ ಸರಿ ಇಲ್ಲ ಎಂಬ ಹಿನ್ನೆಲೆಯಲ್ಲಿ ಬಸ್ಸು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ರಸ್ತೆ ಸಂಪೂರ್ಣ ದುರಸ್ತಿಯಾಗಿದೆ. ಆದ್ದರಿಂದ ಮತ್ತೆ ಸರಕಾರಿ ಬಸ್ಸು ಸಂಪರ್ಕ ಕಲ್ಪಿಸಬೇಕು ಎಂದು ಪವನ್ ಡಿ.ಜೆ ವಿನಂತಿಸಿಕೊಂಡರು. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಬಸ್ಸು ಡಿಫೋ ಅಧಿಕಾರಿ ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಕೊಳ್ತಿಗೆಗೆ ಬಸ್ಸು ಸಂಚಾರ ಒದಗಿಸಿಕೊಡಬೇಕು ಎಂಬ ಮನವಿಗೆ ಶೀಘ್ರ ಸ್ಪಂದಿಸಿ ಬಸ್ಸು ಸಂಚಾರ ಒದಗಿಸಿಕೊಟ್ಟ ಕೆಎಸ್‌ಆರ್‌ಟಿಸಿಗೆ ಪ್ರಮೋದ್ ಕೆ.ಎಸ್.ರವರು ಅಭಿನಂದನೆ ಸಲ್ಲಿಸಿದರು.

ಮನೆಗೆ ಬಂದು ಆದಾಯ ಪರಿಶೀಲಿಸಿ
ಒಬ್ಬರು ಅಜ್ಜಿಗೆ ಎಪಿಎಲ್ ಕಾರ್ಡ್ ಇದೆ ಅದನ್ನು ಬದಲಾಯಿಸಬೇಕು ಎಂದು ಅವರು ಎಷ್ಟೆ ಅರ್ಜಿ ಕೊಟ್ಟರೂ ಅವರಿಗೆ ಮತ್ತೆ ಮತ್ತೆ ಎಪಿಎಲ್ ಕಾರ್ಡ್ ಬರುತ್ತಿದೆ. ಏಕೆಂದರೆ ಅರ್ಜಿಯಲ್ಲಿ ಆದಾಯ ನಮೂದಿಸುವಾಗ ಎಪಿಎಲ್ ಕಾರ್ಡ್ ಎಂದಾಕ್ಷಣ 1 ಲಕ್ಷಕ್ಕಿಂತ ಹೆಚ್ಚೇ ಆದಾಯ ನಮೂದಿಸಲಾಗುತ್ತಿದೆ. ನಿಜವಾಗಿ ನೋಡಿದರೆ ಅವರಿಗೆ ಅಷ್ಟು ಆದಾಯ ಇಲ್ಲ ಆದ್ದರಿಂದ ಆದಾಯ ನಮೂದಿಸುವ ಮುನ್ನ ಕಂದಾಯ ಇಲಾಖಾ ಅಧಿಕಾರಿಗಳು ಫಲಾನುಭವಿಯ ಮನೆಗೆ ತೆರಳಿ ಅವರ ಆದಾಯವನ್ನು ಪರಿಶೀಲಿಸುವುದು ಸೂಕ್ತ ಎಂದು ಪ್ರಮೋದ್ ಕೆ.ಎಸ್ ತಿಳಿಸಿದರು.

ಪಾಲ್ತಾಡು ಮಣಿಕ್ಕರದಲ್ಲಿ ಸಹಕಾರಿ ಸಂಘದ ಕಟ್ಟಡ ನಿರ್ಮಾಣವಾಗಲಿ
ಪಾಲ್ತಾಡು ಮಣಿಕ್ಕರದಲ್ಲಿ ದಿ.ಸುಬ್ಬಣ್ಣ ರೈಯವರು ಸುಮಾರು 10 ಸೆಂಟ್ಸ್ ಜಾಗವನ್ನು ಸಹಕಾರಿ ಸಂಘದ ಕಟ್ಟಡ ನಿರ್ಮಾಣಕ್ಕೆ ಎಂದು ಬಿಟ್ಟು ಕೊಟ್ಟಿದ್ದಾರೆ. ಆದರೆ ಈ ಜಾಗದಲ್ಲಿ ಇದುವರೆಗೆ ಯಾವುದೇ ಕಟ್ಟಡ ನಿರ್ಮಾಣವಾಗಲಿಲ್ಲ, ಆದ್ದರಿಂದ ಕೂಡಲೇ ಈ ಜಾಗದಲ್ಲಿ ಸಹಕಾರಿ ಸಂಘದ ಕಟ್ಟಡ ನಿರ್ಮಾಣವಾಗಬೇಕು ಎಂದು ಪಾಲ್ತಾಡು ಗಫೂರ್ ಸಾಹೇಬ್‌ರವರು ಮನವಿ ಮಾಡಿಕೊಂಡರು.

ವಿವಿದ ವಿಷಯಗಳ ಬಗ್ಗೆ ಗ್ರಾಮಸ್ಥರು ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ಯವರು ಮಾತನಾಡಿ, ಒಂದು ಒಳ್ಳೆಯ ಆರೋಗ್ಯ ಪೂರ್ಣ ಚರ್ಚೆಯೊಂದಿಗೆ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಗ್ರಾಮಸಭೆ ಇದಾಗಿತ್ತು. ಗ್ರಾಪಂ ಅಧ್ಯಕ್ಷರು, ಸದಸ್ಯರುಗಳು, ಅಧಿಕಾರಿ ವರ್ಗದವರು ಉತ್ತಮವಾಗಿ ಗ್ರಾಮಸ್ಥರ ಬೇಡಿಕೆ ಸ್ಪಂದನೆ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಪೂರಕವಾದ ಗ್ರಾಮಸಭೆಗಳು ನಡೆದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಕೊಳ್ತಿಗೆ ಗ್ರಾಮಸಭೆ ಒಳ್ಳೆಯ ಸಭೆಯಾಗಿದೆ ಎಂದರು.

ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ನಾಗವೇಣಿ ಕೆ, ಸದಸ್ಯರುಗಳಾದ ಪವನ್ ಡಿ.ಜಿ ದೊಡ್ಡಮನೆ, ಪ್ರೇಮಾ, ಲತಾ ಕುಮಾರಿ, ಸುಂದರ, ಶುಭಲತಾ ಜೆ.ರೈ, ಪ್ರಮೋದ್ ಕೆ.ಎಸ್, ಯಶೋಧಾ, ಯಶೋಧಾ ಕೋಡಂಬು, ಅಕ್ಕಮ್ಮ, ಚಂದ್ರಾವತಿ , ವೇದಾವತಿ, ಬಾಲಕೃಷ್ಣ ಕೆ.ಎಂ, ವಸಂತ ಕುಮಾರ್ ರೈ, ಯತೀಂದ್ರ ಕೆ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್.ಟಿ ಸುನೀಲ್ ಸ್ವಾಗತಿಸಿದರು. ಕಾರ್ಯದರ್ಶಿ ಶಾರದಾ ಕೆ ವಂದಿಸಿದರು. ಸಿಬ್ಬಂದಿಗಳಾದ ಶಶಿಕಲಾ ಕೆ, ಜಯ ಎಸ್, ನಾಗೇಶ್ ಬಿ, ಸುಚಿತ್ರ ಪಿ.ಜೆ ಸಹಕರಿಸಿದ್ದರು.

ಕೊಳ್ತಿಗೆ ಗ್ರಾಮದಲ್ಲಿರುವ ನಿವೇಶನ ರಹಿತರಿಗೆ 5 ವರ್ಷದೊಳಗೆ ನಿವೇಶನ ನೀಡುವ ಪ್ರಯತ್ನ, ಸಿಆರ್‌ಸಿ ಕಾಲನಿಯವರಿಗೂ ನಿವೇಶನ ಕಾಯ್ದಿರಿಸುವ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಬರೆದುಕೊಳ್ಳುವುದು, ಗ್ರಾಮದಲ್ಲಿರುವ ಸರಕಾರಿ ಜಾಗ, ಗೋಮಾಳಗಳನ್ನು, ಪಂಚಾಯತ್ ಜಾಗಗಳನ್ನು ಗುರುತಿಸಿ ಗಡಿಗುರುತು ಮಾಡಿಕೊಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಿಕೊಳ್ಳುವುದು, ಗ್ರಾಮದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಯತ್ನ, ಗ್ರಾಮದಲ್ಲಿರುವ ಡಿಸಿ ಮನ್ನಾ ಜಾಗವನ್ನು ಗುರುತಿಸುವುದು, ತಾಪಂ, ಜಿಪಂ ಅನುದಾನಕ್ಕೆ ಹೆಚ್ಚಿನ ಪ್ರಯತ್ನ ಮಾಡುವುದು, ಒಟ್ಟಿನಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದುಕೊಂಡು ಕೆಲಸ ಮಾಡುವುದು, ಇದಕ್ಕೆ ಕೇವಲ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿ ವರ್ಗ, ಸಿಬ್ಬಂದಿಗಳಿಂದ ಮಾತ್ರ ಸಾಧ್ಯವಿಲ್ಲ ಮುಖ್ಯವಾಗಿ ಗ್ರಾಮಸ್ಥರ ಸಹಕಾರ ಅತೀ ಮುಖ್ಯ. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಸಹಕಾರ ನೀಡುತ್ತೀರಿ ಎಂಬ ಭರವಸೆ ನಮಗಿದೆ – ಶ್ಯಾಮ್‌ಸುಂದರ್ ರೈ , ಅಧ್ಯಕ್ಷರು, ಗ್ರಾಪಂ

ಲಂಚ, ಭ್ರಷ್ಟಚಾರದ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕಾರ
ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ,ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಗ್ರಾಮಸಭೆಯಲ್ಲಿ ಬೆಂಬಲ ಸೂಚಿಸಲಾಯಿತು. ಗ್ರಾಪಂ ಅಧ್ಯಕ್ಷ ಶ್ಯಾಮ್‌ಸುಂದರ ರೈಯವರು ಲಂಚ ಭ್ರಷ್ಟಾಚಾರ ವಿರೋಧಿಸುವ ನಿಟ್ಟಿನಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಪಂ ಸದಸ್ಯರುಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here