ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ – ಪ್ರಥಮ ಬಾರಿಗೆ ಹಲವು ವಿಶೇಷ ಕಾರ್ಯಕ್ರಮ ‘ಶಿವಾರ್ಪಣಂ’

0

  • ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಅಷ್ಟಾವಧಾನ ಸೇವೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಸಂಪ್ರದಾಯದಂತೆ ಶಿವರಾತ್ರಿಯಂದು ನಡೆಯುವ ಕಾರ್ಯಕ್ರಮಕ್ಕೆ ಪೂರಕವಾಗಿ ಈ ವರ್ಷ ಮಾ.1ರ ಮಹಾಶಿವರಾತ್ರಿಯಂದು ‘ಶಿವಾರ್ಪಣಂ’ ಎಂಬ ಹಲವು ವಿಶೇಷ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೇವಳದ ಗದ್ದೆ ಪೂರ್ತಿ ಉತ್ಸವ ಕಾಣಲಿದ್ದು, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಆಯೋಜನೆಯಾಗಲಿದೆ.

 

ಕಾರ್ಯಕ್ರಮದ ಕುರಿತು ದೇವಸ್ಥಾನದ ಆಡಳಿತ ಕಚೇರಿಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಮಹಾಶಿವರಾತ್ರಿಗೆ ನಮ್ಮ ಆಡಳಿತ ಮಂಡಳಿ ಹಲವು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಧಾರ್ಮಿಕ ಧತ್ತಿ ಇಲಾಖೆಯಿಂದ ಬಂದಿರುವ ಸೂಚನೆಗೆ ಪೂರಕವಾಗಿ ನಮಗೆ ದೇವರು ಮೊದಲೇ ಪ್ರೇರಣೆ ನೀಡಿದಂತಾಗಿದೆ. ಧಾರ್ಮಿಕ ಇಲಾಖೆಯಿಂದ ನಿನ್ನೆ ತಾನೆ ಸುತ್ತೋಲೆ ಬಂದಿದೆ. ಅದಕ್ಕೂ ಮುಂದೆ ವಿಶೇಷ ಕಾರ್ಯಕ್ರಮವನ್ನು ನಾವು ಆಯೋಜಿಸಿರುವುದು ವ್ಯವಸ್ಥೆಗೆ ಪೂರಕವಾಗಿದೆ ಎಂದ ಅವರು ಮಹಾಶಿವರಾತ್ರಿ ಉತ್ಸವದಂದು ಬೆಳಿಗ್ಗೆ ದೇವಳದಲ್ಲಿ ಶ್ರೀ ದೇವರಿಗೆ ಶತರುದ್ರಾಭಿಷೇಕ ಹಾಗು ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಲಿದೆ. ದೇವಾಲಯದ ಮುಂಭಾಗದಲ್ಲಿ ಹಿಮಗಿರಿ ವೇದಿಕೆಯಲ್ಲಿ ಬೆಳಿಗ್ಗೆ ಗಂ 9ರಿಂದ ಮಕ್ಕಳಿಂದ ಶಿವನ ಛದ್ಮವೇಷ, ಮಕ್ಕಳ ಯಕ್ಷಗಾನ ತಾಳಮದ್ದಳೆ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 9.30ಕ್ಕೆ ದೇವಳದ ರಾಜಾಂಗಣಲ್ಲಿರುವ ಕಂಡನಾಯಕನ ಕಟ್ಟೆಯಲ್ಲಿ ಅಷ್ಟಾವಧಾನ ಸೇವೆ ನಡೆಯಲಿದೆ. ಧ್ಯಾನರೂಢನಾಗಿರುವ ಶಿವನ ವಿಗ್ರಹದ ಮುಂಭಾಗದಲ್ಲಿ ಬೆಳಗ್ಗೆ ಗಂಟೆ 6.45 ರಿಂದ ಮರುದಿನ ಸೂರ್ಯೋದಯದ ತನಕ ಭಜನೆ, ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದ ಅವರು ಶಿವನ ಪ್ರೀತ್ಯಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ ಹಿಮಗಿರಿ ವೇದಿಕೆಯಲ್ಲಿ ಸ್ವಣೋದ್ಯಮಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನ ಜಿ.ಎಲ್ ಬಲರಾಮ ಆಚಾರ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಿವನ ವಿವಿಧ ರೂಪಗಳ ಛದ್ಮವೇಷ ಸ್ಪರ್ಧೆ ಬಳಿಕ ಮಧ್ಯಾಹ್ನ ಅರಿಯಡ್ಕ ಚಿಕ್ಕಪ್ಪ ನಾಕ್ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ಬಳಿಕ ಧೀಶಕ್ತಿ ಬಾಲಿಕಾ ಯಕ್ಷ ಬಳಗ ‘ ಶಿವಭಕ್ತ ವೀರಮಣಿ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಸ್ಕಾರ ಭಾರತಿಯಿಂದ ಶಾಸ್ತ್ರೀಯ ಸಂಗೀತ, ಪ್ರತಿಷ್ಠಿತ ನೃತ್ಯ ಶಾಲಾ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಅಷ್ಟಾವಧಾನ ಸೇವೆ:
ದೇವಳದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೇವರಿಗೆ ಅತಿ ಪ್ರಿಯವಾದ ಅಷ್ಟಾವಧಾನ ಸೇವೆಯನ್ನು ರಾತ್ರಿ ಶ್ರೀ ದೇವರ ಸಾಂಪ್ರದಾಯಿಕ ಉತ್ಸವದ ಬಳಿಕ ದೇವಳದ ರಾಜಾಂಗಣದಲ್ಲಿರುವ ಕಂಡನಾಯಕನ ಕಟ್ಟೆಯಲ್ಲಿ ನಡೆಯಲಿದೆ. ದೇವರ ಮುಂದೆ ನಾಲ್ಕು ವೇದಗಳು, ಶಂಖಧ್ವನಿ, ಕೊಳಲು, ರುದ್ರವಾದ್ಯ, ಯಕ್ಷಗಾನ, ಸಂಗೀತ, ಭರತನಾಟ್ಯಗಳನ್ನೊಳಗೊಂಡ ‘ಅಷ್ಟಾವಧಾನ ಸೇವೆ’ ಯಾಗಿದ್ದು, ಕೂಟೇಲ್ ವೇ ಮೂ ನರಸಿಂಹ ಭಟ್ ಅವರು ನಿರ್ವಹಣೆ ಮಾಡಲಿದ್ದಾರೆ.

ಸ್ಪರ್ಧೆಗೆ ಮುಕ್ತ ಅವಕಾಶ:
ಶಿವರಾತ್ರಿ ಅಂಗವಾಗಿ ವಿವಿಧ ಸ್ಪರ್ಧೆಗೆ ಸಂಬಂಧಿಸಿ ಫೆ.27ರಂದು ಮುಳಿಯ ಫೌಂಡೇಶನ್, ನಿವೃತ್ತ ನೌಕರರ ಸಂಘ, ದ ವೆಬ್ ಪೀಪಲ್, ಪಾಂಚಜನ್ಯದ ಸಹಯೋಗದೊಂದಿಗೆ ನಡೆಯಲಿರುವ ಆನ್‌ಲೈನ್ ಕಾರ್ಯಕ್ರಮದಲ್ಲಿ ಶಿವಾರಾಧನಾ ಶ್ಲೋಕ, ಶಿವಭಕ್ತಿ ಗೀತಾ ಗಾಯನ, ಶಿವಕಥೆ ವಾಚನ ನಡೆಯಲಿದೆ. ಈಗಾಗಲೇ ಸುಮಾರು 170 ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಸ್ಪರ್ಧೆಗೆ ಮುಕ್ತ ಅವಕಾಶವಿದೆ ಎಂದು ದೇವಳದ ವ್ಯವಸ್ಥಾಪನಾಸ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್ ಅವರು ತಿಳಿಸಿದರು.

26 ತಂಡಗಳಿಂದ 24 ಗಂಟೆ ಭಜನೆ:
ದೇವಳದ ಎದುರು ಗದ್ದೆಯಲ್ಲಿರುವ ಧ್ಯಾನರೂಢ ಶಿವನ ಮೂರ್ತಿಯ ಬಳಿ ಭಜನಾ ಕಾರ್ಯಕ್ರಮ ನಡೆಯಲಿದೆ. ಶಿವರಾತ್ರಿ ದಿನದಂದು ಬೆಳಿಗ್ಗೆ ಗಂಟೆ 6.45 ರಿಂದ ಮರುದಿನ ಮುಂಜಾನೆ ತನಕ ಏಕಾಹ ಭಜನೆ – ಕುಣಿತ ಭಜನೆ ನಡೆಯಲಿದೆ. ಒಟ್ಟು 26 ತಂಡಗಳಿಂದ 24 ಗಂಟೆ ಭಜನೆ ನಡೆಯಲಿದೆ. ಕೊನೆಗೆ ದೇವರ ಸನ್ನಿಧಿಯಲ್ಲಿ ಮಂಗಳ ನಡೆಯಲಿದೆ. ಕಾಸರಗೋಡು, ಸವಣೂರು, ಮಾಣಿ, ನಂದಾವರ ಸೇರಿದಂತೆ ಪುತ್ತೂರು ಆಸುಪಾಸಿನ ಹಲವು ತಂಡಗಳಿಂದ ನಿರಂತರ ಭಜನೆ ಕಾರ್ಯಕ್ರಮ ನಡೆಯಲಿದೆ. ಈಶ ಸಂಸ್ಥೆ ಭಜನಾ ಕಾರ್ಯಕ್ರಮಕ್ಕೆ ಕೈಜೋಡಿಸಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಮಾಹಿತಿ ನೀಡಿದರು.

ಬಿಲ್ವ ಪತ್ರೆ ತರಲು ಭಕ್ತರಲ್ಲಿ ಮನವಿ:
ದೇವಳದಲ್ಲಿ ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಲಿದ್ದು, ಇದಕ್ಕೆ ಭಕ್ತರು ನೀಡಿದ ಬಿಲ್ವಪತ್ರೆಯನ್ನೇ ದೇವರಿಗೆ ಅರ್ಪಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಭಕ್ತರು ಬಿಲ್ವಪತ್ರೆಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಲು ಅವಕಾಶವಿದೆ. ಇದರ ಜೊತೆಗೆ ಹೂವಿನ ವ್ಯಾಪಾರದ ಜೊತೆಗೆ ಬಿಲ್ವಪತ್ರೆಯನ್ನು ಭಕ್ತರಿಗೆ ಒದಗಿಸಲು ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗುವುದು ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ಬಿ.ಕೆ.ವೀಣಾ, ರವೀಂದ್ರನಾಥ ರೈ ಬಳ್ಳಮಜಲು ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ದೇವಳದಲ್ಲಿ ಶ್ರೀ ದೇವರಿಗೆ ಶತರುದ್ರಾಭಿಷೇಕ, ಏಕ ಬಿಲ್ವಂ ಶಿವಾರ್ಪಣಂ ಸೇವೆ, ದೇವಾಲಯದ ಮುಂಭಾಗ ಹಿಮಗಿರಿ ವೇದಿಕೆಯಲ್ಲಿ ಬೆಳಿಗ್ಗೆ ಮಕ್ಕಳಿಂದ ಶಿವನ ಛದ್ಮವೇಷ, ಮಕ್ಕಳ ಯಕ್ಷಗಾನ ತಾಳಮದ್ದಳೆ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಕಾರ್ಯಕ್ರಮ. ರಾತ್ರಿ ಗಂಟೆ 9.30ಕ್ಕೆ ದೇವಳದ ರಾಜಾಂಗಣದಲ್ಲಿರುವ ಕಂಡನಾಯಕನ ಕಟ್ಟೆಯಲ್ಲಿ ಅಷ್ಟಾವಧಾನ ಸೇವೆ. ಗದ್ದೆಯಲ್ಲಿರುವ ಧ್ಯಾನರೂಢನಾಗಿರುವ ಶಿವನ ವಿಗ್ರಹದ ಮುಂಭಾಗದಲ್ಲಿ ಬೆಳಗ್ಗೆ ಗಂಟೆ 6.45 ರಿಂದ ಮರುದಿನ ಸೂರ್ಯೋದಯದ ತನಕ ಭಜನೆ, ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ.

ಲೇಸರ್ ಶೋ ಸಂಕಲ್ಪ:
ಕ್ಷೇತ್ರದ ಆವರಣದಲ್ಲಿ ಧಾರ್ಮಿಕ ಸಾನಿಧ್ಯ ಹೆಚ್ಚಾಗಬೇಕೆಂಬ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದೆ ಆವರಣಗೋಡೆ ಆದಾಗ ಇನ್ನೂ ಹೆಚ್ಚಿನ ಕಾರ್ಯಕ್ರಮ ಜೊತೆಗೆ ಥೀಮ್ ಪಾರ್ಕ್ ಮಾಡುವ ಯೋಜನೆ ಇದೆ. ಇದರಲ್ಲಿ ಶಿವನ ವಿವಿಧ ರೂಪಗಳನ್ನು ಲೇಸರ್ ಶೋ ಮಾಡುವ ಸಂಕಲ್ಪ ಮಾಡಿದ್ದೇವೆ – ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

LEAVE A REPLY

Please enter your comment!
Please enter your name here