ಇರ್ದೆ ಪಳ್ಳಿತ್ತಡ್ಕ ದರ್ಗಾಶರೀಫ್ 46 ನೇ ಉರೂಸ್ ಸಮಾರೋಪ, ಸೌಹಾರ್ದ ಸಂಗಮ

0
  • ಮಂದಿರ, ಮಸೀದಿ, ಚರ್ಚ್‌ಗಳಿಂದ ಸೌಹಾರ್ದತೆಯ ಸಂದೇಶ ರವಾನೆಯಾಗಲಿ: ಕುಂಬೋಳ್ ತಂಙಳ್

 

ಪುತ್ತೂರು: ಸೌಹಾರ್ದತೆ ಕೇವಲ ವೇದಿಕೆಯ ಮೇಲೆ ನಡೆಯುವ ಭಾಷಣಕ್ಕೆ ಸೀಮಿತವಾಗಬಾರದು, ಸೌಹಾರ್ದ ತೆ ಅದು ಹೃದಯದಿಂದ ಮೊಗಳಬೇಕು, ಇಲ್ಲಿ ಎಲ್ಲಾ ಧರ್ಮದವರು ಪರಸ್ಪರ ಸಾಹೋದರ್ಯತೆಯಿಂದ ಬಾಳಿಬದಕುವ ಶಾಂತಿಯುತ ವಾತಾವರಣ ನಿರ್ಮಾಣವಾಗಬೇಕಾದರೆ ನಮ್ಮೂರಲ್ಲಿರುವ ಮಂದಿರ , ಮಸೀದಿ, ಚರ್ಚ್‌ಗಳಿಂದ ಸೌಹಾರ್ದತೆಯ ಸಂದೇಶ ರವಾನೆಯಾಗಬೇಕಿದೆ ಎಂದು ಅಸ್ಸಯ್ಯದ್ ಕೆ ಎಸ್ ಆಟಕೋಯ ತಂಙಳ್ ರವರು ಹೇಳಿದರು.


ಅವರು ಇರ್ದೆ -ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 46 ನೇ ಉರೂಸ್ ಮುಬಾರಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಅನೇಕ, ಧರ್ಮಗಳ, ಜಾತಿಗಳ ಮನುಷ್ಯರು ಬದುಕುತ್ತಿದ್ದಾರೆ. ಅವರವರ ಧರ್ಮ ಅವರಿಗೆ ದೊಡ್ಡದು, ನಾವು ಯಾವ ಧರ್ಮದವರನ್ನು ನಿಂದಿಸುವ, ಅಪಮಾನಿಸುವ ಕೃತ್ಯ ಮಾಡಬಾರದು. ನಮ್ಮ ದೇಹದಲ್ಲಿರುವ ರಕ್ತ ಒಂದೇ, ಉಸಿರಾಡುವ ಗಾಳಿಯೂ ಒಂದೇ, ಎಲ್ಲಾ ಧರ್ಮದವರಿಗೂ ಹಸಿವು, ಬಾಯಾರಿಕೆ ಎಂಬುದು ಒಂದೇ ರೀತಿಯಾಗಿರುವಾಗ ಯಾರೋ ರಾಜಕೀಯ ಉದ್ದೇಶಕ್ಕಾಗಿ ಧರ್ಮಗಳೊಳಗೆ ವಿಷ ಬೀಜ ಬಿತ್ತುತ್ತಿದ್ದಾರೆ ಅದಕ್ಕೆ ನಾವು ಯಾರೂ ಮಣೆ ಹಾಕಬಾರದು ಎಂದು ಹೇಳಿದರು. ಪ್ರತೀಯೊಂದು ದೇವಸ್ಥಾನ, ಮಸೀದಿ , ಚರ್ಚುಗಳಿಂದ ಒಳ್ಳೆಯ ಸಂದೇಶ ರವಾನೆಯಾದರೆ ಭಾರತದಲ್ಲಿ ಶಾಂತಿ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ಇರ್ದೆ -ಪಳ್ಳಿತ್ತಡ್ಕ ದರ್ಗಾ ಶರೀಫ್ ಜಾಗದ ಮಾಲಕರಾದ ಆನಾಜೆ ಗಣೇಶ್ ರೈ ಮತ್ತು ನಾನು ಆತ್ಮೀಯ ಸ್ನೇಹಿತರಾಗಿದ್ದೆವು , ನಮ್ಮ ಸ್ನೇಹಕ್ಕೆ ಧರ್ಮ ಅಡ್ಡಿಯಾಗಲಿಲ್ಲ ಎಂದು ತಂಙಳ್ ಮೆಲುಕು ಹಾಕಿದರು.

ಹಿಂದೆ ಸೌಹಾರ್ದತೆ  ವಾತಾವರಣ ಇತ್ತು; ಎಂ ಬಿ ವಿಶ್ವನಾಥ ರೈ
ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತಿದೆ. ಜಾತಿ, ಧರ್ಮಗಳ ಅಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ಈಗ ಜೋರಾಗಿಯೇ ನಡೆಯುತ್ತಿದೆ. ಈ ಹಿಂದೆ ಆ ಸ್ಥಿತಿ ಇರಲಿಲ್ಲ. ಜತ್ರೆ, ಉರೂಸ್ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮದವರೂ ಭಾಗವಹಿಸುತ್ತಿದ್ದರು ಆಗಿನ ಸೌಹಾರ್ದ ವಾತಾವರಣ ಅಷ್ಟೊಂದು ಸುಂದರವಾಗಿತ್ತು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು. ಸಮಾಜದಲ್ಲಿ ಕೆಟ್ಟವರಿದ್ದಾರೆ, ಒಳ್ಳೆಯವರಿದ್ದಾರೆ, ದುಷ್ಟರೂ ಇದ್ದಾರೆ, ಎಲ್ಲರೂ ಒಂದೇ ರೀತಿಯಾಗಿರುವುದಿಲ್ಲ. ನಾವು ಯಾರನ್ನೂ ದೂಷಿಸುವ ಕೆಲಸವನ್ನು ಮಾಡಬಾರದು. ನಾವು ಸಮಾಜಕ್ಕೆ ಆದರ್ಶರಾಗಬೇಕು. ಯಾರದೋ ಮಾತು ಕೇಳಿ ನಾವು ಸಮಾಜದಲ್ಲಿ ಕಳಂಕ ಸೃಷ್ಟಿಸುವ ವ್ಯಕ್ತಿಗಳಾಗಬಾರದು ಎಂದು ಹೇಳಿದರು.

ಯುವಕರ ತಲೆಗೆ ಮತಾಂದತೆಯನ್ನು ತುಂಬಿಸಬೇಡಿ: ದೇವಪ್ಪ ಗೌಡ
ಹಿಂದಿನ ಕಾಲದಲ್ಲಿ ಎಲ್ಲಾ ಧರ್ಮದವರೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದರು ಆದರೆ ಇತ್ತೀಚಿನ ವರ್ಷಗಳಿಂದ ಯುವಕರ ತಲೆಗೆ ಮತಾಂದತೆಯನ್ನು ತುಂಬಿಸುವ ಕೆಲಸ ನಡೆಯುತ್ತಿದೆ. ತಮ್ಮ ಸ್ವಾರ್ಥಕ್ಕೋಸ್ಕರ ಯುವಕರನ್ನು ಹಾಳು ಮಾಡುತ್ತಿದ್ದಾರೆ. ಪ್ರತೀಯೊಬ್ಬರಿಗೂ ಅವರವರ ಧರ್ಮಾನುಸಾರ ಬದುಕುವ ಹಕ್ಕು ಸಂವಿಧಾನ ನಮಗೆ ಕೊಟ್ಟಿದೆ. ಅವರವರ ಧರ್ಮ ಅವರವರಿಗೆ ದೊಡ್ಡದು. ಇಲ್ಲಿ ಯಾರನ್ನೂ ನೋಯಿಸುವ ಕೆಲಸವನ್ನು ಯಾರೂ ಮಾಡಬಾರದು. ನಾವು ಪ್ರತೀಯೊಂದನ್ನು ಆಲೋಚನೆ ಮಾಡಬೇಕು. ಆಲೋಚನೆಯಿಲ್ಲದೆ ಯಾರ ಮಾತನ್ನು ಕೇಳಬಾರದು ಎಂದು ಪುತ್ತೂರು ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ ಆರ್ ದೇವಪ್ಪ ಗೌಡ ಹೇಳಿದರು.

ಬ್ರಿಟೀಷರು ಮಾಡಿದ ಕೆಲಸವನ್ನು ಇಂದು ರಾಜಕೀಯದವರು ಮಾಡುತ್ತಿದ್ದಾರೆ: ನವೀನ್ ರೈ ಚೆಲ್ಯಡ್ಕ
ಅಂದು ಮೊಘಲರ ಆಳ್ವಿಕೆಯಲ್ಲಿ ಭಾರತ ಸಂಪದ್ಬರಿತವಾಗಿತ್ತು ಇದಕ್ಕೆ ಕಾರಣ ಅಂದಿನ ಕಾಲದಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದರು. ಇವರ ನಡುವೆ ಬಂದ ಬ್ರಿಟೀಷರು ಜನರನ್ನು ಒಡೆದು ಆಳುವ ಮೂಲಕ ದೇಶವನ್ನು ಗಂಡಾಂತರಕ್ಕೆ ತಂದರು. ಅದೇ ಪರಿಸ್ಥಿತಿ ಇಂದು ಭಾರತಕ್ಕೆ ಬಂದಿದೆ. ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ವ್ಯಕ್ತಿಗಳು ಹಿಂದೂ ಮುಸ್ಲಿಮರ ನಡುವೆ ಕೋಮು ವಿಷ ಬೀಜವನ್ನು ಬಿತ್ತುತ್ತಿದ್ದಾರೆ. ಇದು ದೇಶದ ಪ್ರಗತಿಗೆ ಮಾರಕವಾಗಿದೆ. ಇಲ್ಲಿ ಬದುಕುವ ಎಲ್ಲರೂ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡಿದರೆ ಭಾರತ ವಿಶ್ವದಲ್ಲೇ ಪ್ರಭಲ ಶಕ್ತಿಯಾಗಲು ಸಾಧ್ಯವಾಗುತ್ತದೆ. ಬಡವರ ಮಕ್ಕಳ ಸಾವಿನಿಂದ ಲಾಭಪಡೆಯುವ ಅನೇಕ ಮಂದಿ ರಾಜಕಾರಣಿಗಳು ನಮ್ಮೊಳಗಿದ್ದಾರೆ, ರಾಜಕೀಯಕ್ಕೆ ಧರ್ಮ ಸೇರಿಕೊಂಡಿದ್ದರಿಂದ ಇಂದು ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಜಾತ್ರೆಗೆ, ಉರೂಸಿಗೆ ಪರಸ್ಪರ ಸಹಕಾರದಿಂದ ಎಲ್ಲಾ ಧರ್ಮದ ಮಂದಿಯೂ ಅದರಲ್ಲಿ ಭಾಗವಹಿಸುವ ಮೂಲಕ ಸೌಹಾರ್ದತೆಯ ವಾತಾವರಣ ನಿರ್ಮಾಣ ಮಾಡಬೇಕಿದೆ.ಎಲ್ಲಾ ಧರ್ಮದವರೂ ಒಟ್ಟಾಗಿ ಬಾಳಿ ಬದುಕಬೇಕು ಆ ಮೂಲಕ ಭಾರತ ವಿಶ್ವದಲ್ಲೇ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ. ಭಾರತೀಯರಾದ ನಾವು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಬೆಟ್ಟಂಪಾಡಿ ಗ್ರಾಪಂ ಸದಸ್ಯ ನವೀನ್ ರೈ ಚೆಲ್ಯಡ್ಕ ಹೇಳಿದರು.

ಮಸೀದಿ ನಿರ್ಮಾಣಕ್ಕೆ ಹಿಂದುಗಳೇ ಜಾಗ ಕೊಟ್ಟಿದ್ದಾರೆ ಇದಾಗಿದೆ ನಮ್ಮ ಭಾರತ: ಎಂ ಎಸ್
ಕೋಮು ಸೂಕ್ಷ್ಮ ಪ್ರದೇಶ ಎಂದೇ ಪ್ರಸಿದ್ದಿ ಪಡೆದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಸೀದಿ ನಿರ್ಮಾಣಕ್ಕೆ ಅನೇಕ ಹಿಂದೂಗಳೇ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ, ಮಸೀದಿ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ ಇದು ಭಾರತದ ಸೌಹಾರ್ದತೆಯಾಗಿದೆ, ಇದಾಗಿದೆ ನ್ಮಮ ಭಾರತ ಎಂದು ಜಿಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್ ಹೇಳಿದರು. ಕರಾವಳಿ ಜಿಲ್ಲೆಗಳಲ್ಲಿ ಸೌಹಾರ್ದತೆಯ ವಾತಾವರಣ ಇತ್ತು ಆದರೆ ಅದೇ ಜಿಲ್ಲೆಯಲ್ಲಿ ಇಂದು ಕೋಮು ದಳ್ಳುರಿಗಳು ನಡೆಯುತ್ತಿದೆ ಇದಕ್ಕೆ ಕಾರಣ ಸ್ವಾರ್ಥ ರಾಜಕಾರಣ. ಅಧಿಕಾರ ಪಡೆಯುವ ಉದ್ದೇಶಕ್ಕೆ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜಕೀಯ ಸ್ವಾರ್ಥಿಗಳ ಅಧಿಕಾರ ದಾಹಕ್ಕೆ ಬಡವರ ಮಕ್ಕಳು ಬಲಿಯಾಗುತ್ತಿರುವುದು ಅತ್ಯಂತ ವಿಷಾಧವಾಗಿದೆ ಎಂದು ಹೇಳಿದರು.

ಅರ್ಜಿ ಹಾಕಿ ಯಾರು ಹುಟ್ಟಲಿಲ್ಲ; ಹರಿಪ್ರಕಾಶ್ ಬೈಲಾಡಿ
ಯಾವುದೇ ವ್ಯಕ್ತಿ ನಾನು ಇಂತಹುದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಲಿಲ್ಲ. ಜಾತಿ, ಧರ್ಮಗಳನ್ನು ಮೀರಿ ನಾವು ಹಿರಗೆ ಬಂದಾಗ ಸಮಾಜದಲ್ಲಿರುವ ಪ್ರತೀಯೊಬ್ಬರೂ ಮನುಷ್ಯರಂತೆ ಕಾಣಲು ಸಾಧ್ಯವಾಗುತ್ತದೆ. ತರಗತಿ ಕೋಣೆಯಲ್ಲಿ ದೇಶ ಕಟ್ಟುವ ಕೆಲಸ ಮಾಡಬಹುದು ಎಂದು ಹೇಳುತ್ತಾರೆ ಆದರೆ ಇಂದು ಶಾಲೆಗೆ ಬರುವ ಮಕ್ಕಳಿಗೆ ಧರ್ಮಾಂದತೆಯ ಪಾಠವನ್ನು ತಲೆಗೆ ತುಂಬಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ನಮ್ಮ ದೇಶದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕು ಕೊಟ್ಟಿದೆ. ಸಂವಿಧಾನದ ತತ್ವವನ್ನು ನಾವು ಜೀವನದಲ್ಲಿ ಪಾಲಿಸಿಕೊಂಡು ಬಂದರೆ ಇಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣ ಸಾಧ್ಯ ಎಂದು ಬೆಳಿಯೂರುಕಟ್ಟೆ ಸಪಪೂ ಕಾಲೇಜಿನ ಉಪನ್ಯಾಸಕ ಹರಿಪ್ರಕಾಶ್ ಬೈಲಾಡಿ ಹೇಳಿದರು.

ಪಳ್ಳಿತ್ತಡ್ಕ ಸೌಹಾರ್ದತೆ ಯ ಸೊಗಡು; ಬಡಗನ್ನೂರು
46 ವರ್ಷಗಳಿಂದ ಪ್ರತೀ ಬಾರಿ ಉರೂಸ್ ಕಾರ್ಯಕ್ರಮದಲ್ಲಿ ಸೌಹಾರ್ದತೆಯ ಸಂದೇಶವನ್ನು ನೀಡುವ ಕೆಲಸ ಪಳ್ಳಿತ್ತಡ್ಕ ಉರೂಸ್‌ನಿಂದ ನಡೆಯುತ್ತಿದೆ. ನಾವು ಅಂಗೈಯಲ್ಲೇ ಜಗತ್ತನ್ನೇ ನೋಡುತ್ತೇವೆ ಅದರೆ ನೆರೆಯವನ ಕಷ್ಟ ನಮಗೆ ಗೊತ್ತಾಗುತ್ತಿಲ್ಲ ಇದು ದುರಂತವಾಗಿದೆ. ದೇಶವನ್ನು ಬದಲಾವಣೆ ಮಾಡಲು ಯಾರಿಗೂ ಸಾಧ್ಯವಿಲ್ಲ. ದೇಶದಲ್ಲಿ ನೂರಾರು ಧರ್ಮ, ಜಾತಿ ವ್ಯಕ್ತಿಗಳು ಈ ದೇಶವನ್ನು ಸೌಹಾರ್ದತೆಯಿಂದ ಕಟ್ಟಿದ್ದಾರೆ. ಭಾರತವನ್ನು ಬದಲಾವಣೆ ಮಾಡುತ್ತಿದ್ದರೆ 800 ವರ್ಷಗಳ ಕಾಲ ಆಳಿದ ಮೊಗಲರು ಮಾಡುತ್ತಿದ್ದರು ಅವರಿಗೆದು ಸಾಧ್ಯವಾಗದೇ ಇರುವುದು ಭಾರತದ ಅಸ್ಮಿತೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಮಂದಿರ, ಮಸೀದಿಗಳಲ್ಲಿ ಏನು ಕಲಿಸಬೇಕೋ ಅದನ್ನು ಕಲಿಸುತ್ತಿಲ್ಲ. ಪ್ರೀತಿಯ ಹೃದಯಗಳು ಧಾರ್ಮಿಕ ಕೇಂದ್ರಗಳಲ್ಲಿ ಹುಟ್ಟಿಬರಬೇಕಿದೆ ಎಂದು ಹೇಳಿದರು.

ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದೆ: ಅನೀಸ್ ಕೌಸರಿ
ದೇಶವನ್ನು 800 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮೊಘಲರು ಭಾರತವನ್ನು ಸಂಪದ್ಬರಿತ ದೇಶವನ್ನಾಗಿ ಮಾಡಿದ್ದರು. ಮೊಘಲರು ದೇಶವನ್ನು ಕಟ್ಟಿದ್ದರು ಅಂದಿನ ಕಾಲದಲ್ಲಿ ದೇಶದಲ್ಲಿ ಹಿಂಧೂ ಮುಸ್ಲಿಂ ಸೌಹಾರ್ದತೆಯಿಂದ ಬಾಳುತ್ತಿದ್ದರು. ಆದರೆ ಅವರ ಉತ್ತಮ ಆಡಳಿತ ವೈಖರಿಯನ್ನು ಸಹಿಸಿದ ಕೆಲವರು ಅವರ ಇತಿಹಾಸವನ್ನು ತಿರುಚಿ ಮೊಘಲ್ ಚಕ್ರವರ್ತಿಗಳ ಬಗ್ಗೆ ಕೀಳಾಗಿ ವರ್ಣಿಸಲಾಗಿದೆ. ಔರಂಗಜೇಬ ಚಕ್ರವರ್ತಿ, ಟಿಪ್ಪುಸುಲ್ತಾನರನ್ನು ಲೂಟಿಕೋರ ಎಂದು ವರ್ಣಿಸಲಾಗಿದೆ, ಹಿಂದೂ ವಿರೋಧಿ ಎಂದು ಬರೆಯಲಾಗಿದೆ. ಇದೇ ವಿಚಾರವನ್ನು ಮುಂದಿಟ್ಟು ಇಂದು ದೇಶದಲ್ಲಿ ಮುಸಲ್ಮಾನರ ಮೇಲೆ ಅಕ್ರಮಣ ನಡೆಯುತ್ತಿದೆ ಇದು ಅತ್ಯಂತ ಖೇದಕರ ಸಂಗತಿಯಾಗಿದೆ. ಮೊಘಲರಿಗೆ ಭಾರತವನ್ನು ಏನು ಬೇಕಾದರೂ ಮಾಡಬಹುದಿತ್ತು , ಆದರೆ ಅವರು ಆರೀತಿ ಮಾಡಲಿಲ್ಲ, ಮೊಘಲರು ಕಟ್ಟಿದ ಭಾರತವನ್ನು ಬ್ರಿಟೀಷರು ಒಡೆದು ಆಳ್ವಿಕೆ ನಡೆಸುವ ಮೂಲಕ ಲೂಟಿ ಮಾಡಿದರು ಎಂದು ದಿಕ್ಸೂಚಿ ಭಾಷಣ ಮಾಡಿದ ಕುಂಬ್ರ ಕೆಐಸಿ ಪ್ರೊಪೆಸರ್ ಅನೀಸ್ ಕೌಸರಿ ಹೇಳಿದರು.

ತನ್ನಧರ್ಮವನ್ನು ಮೊದಲು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು, ಧರ್ಮಗಳು ಮಾನವೀಯತೆಯನ್ನು ಕಲಿಸಿದೆ ಆದರೆ ಸ್ವಾರ್ಥಕ್ಕಾಗಿ ಧರ್ಮವನ್ನು ಬಳಕೆ ಮಾಡಿ ಮನುಷ್ಯತ್ವವನ್ನು ನಾಶ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಇಸ್ಲಾಂ ಶಾಂತಿಯ ಧರ್ಮವಾಗಿದೆ, ಪರ ಧರ್ಮವನ್ನು, ಧರ್ಮಿಯರನ್ನು ಎಂದಿಗೂ ಅಪಹಾಸ್ಯ ಮಾಡಬೇಡ ಎಂದು ಇಸ್ಲಾಂ ಕಲಿಸಿದೆ ಎಂದು ಹೇಳಿದರು. ಸೌಹಾರ್ಧತೆಯ ಕಡೆ ಎಲ್ಲಾ ಧರ್ಮಿಯರೂ ಕೆಲಸ ಮಾಡಿದರೆ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಹೇಳಿದರು.

ಕೊರಿಂಗಿಲ ಜಮಾತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕೊರಿಂಗಿಲ ಇಮಾಂ ಅಯ್ಯೂಬ್ ವಹಬಿ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಿತು.ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಇರ್ದೆ-ಪಳ್ಲಿತ್ತಡ್ಕ ಉರೂಸ್ ಕಮಿಟಿ ಅಧ್ಯಕ್ಷ ಮೂಸೆಕುಂಞಿ ಬೆಟ್ಟಂಪಾಡಿ, ಬೆಟ್ಟಂಪಾಡಿ ಗ್ರಾಪಂ ಸದಸ್ಯರುಗಳಾದ ಚಂದ್ರಶೇಖರ ರೈ ಬಾಲ್ಯೊಟ್ಟು, ಪ್ರಕಾಶ್ ರೈ ಬೈಲಾಡಿ ಮೊಯಿದುಕುಂಞಿ ಕೋನಡ್ಕ, ಕೆಡಿಪಿ ಮಾಜಿ ಸದಸ್ಯ ಕೃಷ್ಣ ಪ್ರಸಾದ್ ಆಳ್ವ, ಕೊರಿಂಗಿಲ ಜಮಾತ್ ಕಮಿಟಿ ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ ಎಂಪೆಕಲ್ಲು, ಕೋಶಾಧಿಕಾರಿ ಮಹಮ್ಮದ್ ಹಾಜಿ ಶಾಲಾ ಬಳಿ, ಅಜ್ಜಿಕಟ್ಟೆ ಮಸೀದಿ ಅಧ್ಯಕ್ಷ ಉಮ್ಮರ್ ಪಟ್ಟೆ, ಉದ್ಯಮಿಗಳಾದ ಅಬ್ಬಾಸ್ ಹಾಜಿ ಮಣ್ಣಾಪು, ಮಹಮ್ಮದ್ ಕುಂಞಿ ಕೂಟತ್ತಾನ,ಯೂಸುಫ್ ಹಾಜಿ ಕೈಕಾರ, ಕರವೇ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ತಂಬುತ್ತಡ್ಕ ಮಸೀದಿ ಅಧ್ಯಕ್ಷ ರಫೀಕ್ ಎನ್‌ಆರ್‌ಕೆ, ರೆಂಜ ಮಸೀದಿ ಅಧ್ಯಕ್ಷ ಅಬ್ದುಲ್‌ರಹಿಮಾನ್ ಹಾಜಿ ಮಣ್ಣಾಪು, ಪೇರ್‍ಲತಡ್ಕ ಮಸೀದಿ ಅಧ್ಯಕ್ಷ ಎಂ ಮಹಮ್ಮದ್ ಹಾಜಿ ನವಾಝ್, ಆರ್ಲಪದವು ಮಸೀದಿ ಕಾರ್ಯಾದ್ಯಕ್ಷ ಎನ್ ಎಸ್ ಯೂಸುಫ್ ನೆಲ್ಲಿತ್ತಿಮಾರ್, ಪಾಣಾಜೆ ಸುನ್ನಿ ನಗರ ಮಸೀದಿ ಅಧ್ಯಕ್ಷ ಅಬ್ದುಲ್ಲ ಕುಂಞಿ ಜಾಲಗದ್ದೆ, ಆರ್ಲಪದವು ಅಫ್ರಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಬದ್ರಿಯಾ, ಕೊರಿಂಗಿಲ ಮಸೀದಿ ಕಾರ್ಯದರ್ಶಿ ಕಾಸಿಂ ಕೇಕನಾಜೆ, ಮಾಜಿ ಕಾರ್ಯದರ್ಶಿ ಶಾಹುಲ್ ಹಮೀದ್ ಕೊರಿಂಗಿಲ, ಅಬ್ದುಲ್ಲ ನೆಕ್ಕರೆ, ಅಬ್ದುಲ್ಲ ಹಾಜಿ ಆನಡ್ಕ, ಪಳ್ಳಿತ್ತಡ್ಕ ಉರೂಸ್ ಕಮಿಟಿ ಕಾರ್ಯದರ್ಶಿ ಅನ್ವರ್ ಕೊರಿಂಗಿಲ ಉಪಸ್ಥಿತರಿದ್ದರು. ಸಿವಿಲ್ ಇಂಜನಿಯರ್ ಆಲಿಕುಂಞಿ ಹಾಜಿ ಕೊರಿಂಗಿಲ ಸ್ವಾಗತಿಸಿದರು.

ಉರೂಸ್ ಸಮಾರೋಪ
ಉರೂಸ್ ಸಮಾರೋಪ ಸಮಾರಂಭವನ್ನು ಕೊರಿಂಗಿಲ ಇಮಾಂ ಅಯ್ಯೂಬ್ ವಹಬಿ ಉದ್ಘಾಟಿಸಿದರು. ಅಲ್‌ಹಾಫಿಲ್ ನಿಝಾಮುದ್ದೀನ್ ಅಝ್‌ಹರಿ ಕುಮ್ಮನಂ ಕಿಯಾಮತ್ ನಾಳಿಲ್ ದಜ್ಜಾಲಿಂಡೆ ವರವು ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಅಲ್ಲಾಹನು ಕಲಿಸಿದ ಮಾರ್ಗದಲ್ಲಿ ಜೀವನ ನಡೆಸುವ ಮೂಲಕ ನಾವು ಅಲ್ಲಾಹನ ತೃಪ್ತಿಗೆ ಪಾತ್ರರಾಗಬೇಕು. ಒಳಿತು, ಕೆಡುಕುಗಳ ಬಗ್ಗೆ ಜ್ಞಾನ ಉಳ್ಳವರಾಗಬೇಕು. ಪರಲೋಕ ವಿಜಯದತ್ತ ನಾವೆಲ್ಲರೂ ದೃಷ್ಟಿ ಹಾಯಿಸುವವರಾಗಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಸವಾದ್ ತಂಙಳ್ ಪಾನೂರು, ಕೊರಿಂಗಿಲ ಸಹ ಅಧ್ಯಾಪಕ ಉಮರುಲ್‌ಫಾರೂಕ್ ಮುಸ್ಲಿಯಾರ್ ಉಪಸ್ತಿತರಿದ್ದರು.

20 ಕ್ವಿಂಟ್ವಾಳ್ ಅಕ್ಕಿಯ ಬೆಲ್ಲದಗಂಜಿ 10 ಸಾವಿರ ಮಂದಿಗೆ ಅನ್ನದಾನ
ಉರೂಸ್ ಸಮಾರಂಭದ ಒಟ್ಟು ಏಳುದಿನದಲ್ಲಿ 20 ಕ್ವಿಟ್ವಾಳ್ ಅಕ್ಕಿಯ ಬೆಲ್ಲದ ಗಂಜಿಯನ್ನು ಸೀರಣಿಯಾಗಿ ನೀಡಲಾಯಿತು. ಅನ್ನದಾನ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಿದ್ದರು. ನಿರೀಕ್ಷೆಗೂ ಮೀರಿದ ಜನ ಸೇರಿದ ಕಾರಣ ಪಳ್ಳಿತ್ತಡ್ಕ ದರ್ಗಾ ವಠಾರದಿಂದ ಇರ್ದೆ ಜಂಕ್ಷನ್ ತನಕ ಸುಮಾರು ಒಂದೂವರೆ ಕಿ ಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಪಾರ್ಕಿಂಗ್ ಸ್ಥಳ ವ್ಯವಸ್ಥೆ ಮಾಡಿದ್ದರೂ ಭಕ್ತರ ಸಂಖ್ಯೆ ಅಧಿಕವಾಗಿರುವ ಕಾರಣ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಪ್ಯ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಉರೂಸ್ ಸಂತೆಯಲ್ಲಿ ಎಲ್ಲರಿಗೂ ಅವಕಾಶ ನೀಡಲಾಗಿತ್ತು.

LEAVE A REPLY

Please enter your comment!
Please enter your name here