ಮಿತ್ತಳಿಕೆ ಮಲರಾಯ ಧರ್ಮಚಾವಡಿಯ ಬ್ರಹ್ಮಕಲಶ-ಸಭೆ

0

  • ಒಗ್ಗೂಡುವಿಕೆಯಿಂದ ಕುಟುಂಬದಲ್ಲಿ ಒಗ್ಗಟ್ಟು, ಭಾಂದವ್ಯ ವೃದ್ಧಿ-ರುಕ್ಮಯ ಪೂಜಾರಿ

ಪುತ್ತೂರು: ಕುಟುಂಬ ವ್ಯವಸ್ಥೆಯಿಂದ ಒಗ್ಗಟ್ಟು ಹಾಗೂ ಬಾಂಧವ್ಯ ವೃದ್ಧಿಯಾಗುತ್ತದೆ. ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರಗಳು ಮೈಗೂಡುತ್ತದೆ. ಮಿತ್ತಳಿಕೆ ಕುಟುಂಬದವರು ನಾಡಿನೆಲ್ಲೆಡೆ ಹರಡಿದ್ದರೂ, ಒಟ್ಟು ಸೇರಿ ಧರ್ಮಚಾವಡಿಯನ್ನು ನಿರ್ಮಿಸಿ ಸಂಪ್ರದಾಯವನ್ನು ಉಳಿಸಿಕೊಂಡು ಮನೆತನಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಶಾಸಕ ರುಕ್ಮಯ ಪೂಜಾರಿರವರು ಶ್ಲಾಘಿಸಿದರು.

ಅವರು ಮಾ.25ರಂದು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮಿತ್ತಳಿಕೆ ಮಲರಾಯ ಧರ್ಮಚಾವಡಿಯ ಬ್ರಹ್ಮಕಲಶ, ಪುನರ್ ನಿರ್ಮಿತ ಮನೆಯ ಪ್ರವೇಶ, ಶ್ರೀ ಮಲರಾಯ ದೈವದ ನೂತನ ಉಯ್ಯಾಲೆಯ ಪುನರ್ ಪ್ರತಿಷ್ಠೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಟ್ಲ ಸೀಮೆಯ ಪ್ರಸಿದ್ಧ ಬಂಟ ಮನೆತನಗಳಲ್ಲಿ ಮಿತ್ತಳಿಕೆ ಮನೆತನವೂ ಒಂದು. ತಲೆತಲಾಂತರಗಳಿಂದ ಸೀಮೆಯ ಎಲ್ಲ ಪ್ರಸಿದ್ಧ ದೈವ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಿಕೊಂಡು ಮನೆತನದ ಗೌರವವನ್ನು ಮತ್ತು ಹಿರಿಮೆಯನ್ನು ಕಾಪಾಡಿಕೊಂಡು ಬಂದಿದೆ. ದೈವ ದೇವಸ್ಥಾನಗಳ ಪರ್ವ ಕಾಲದಲ್ಲಿ ಮನೆಯ ಎಲ್ಲಾ ಸದಸ್ಯರ ಇರುವಿಕೆಯೊಂದಿಗೆ ಕಟ್ಟುಪಾಡುಗಳಿಗೆ ಕುಂದು ಕೊರತೆ ಬಾರದಂತೆ ಇಂದಿನ ಕಾಲಘಟ್ಟದಲ್ಲಿಯೂ ಅನುಸರಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿರವರು ಮಾತನಾಡಿ, ಈಗ ಕುಟುಂಬದವರು ತಿಂಗಳಿಗೊಮ್ಮೆ ಅಥವಾ ವಾರ್ಷಿಕವಾಗಿ ನಡೆಯುವ ನೇಮ ಮತ್ತಿತರ ಪರ್ವ ಕಾಲದಲ್ಲಿ ಭಾಗವಹಿಸಿ ಈ ಸಾಧನೆಯನ್ನು ಶಾಶ್ವತವಾಗಿಸಬೇಕು. ಗುರು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಯುವ ಸಮುದಾಯ ಮುಂದುವರೆದು ಸಮಾಜದಲ್ಲಿ ಮೇಲ್ಪಂಕ್ತಿಯನ್ನು ಗಳಿಸುವಂತಾಗಬೇಕು. ಮಿತ್ತಳಿಕೆ ಶ್ರೀ ಕ್ಷೇತ್ರವು ವೈಭವದ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಸಂಸ್ಕೃತಿ, ಸಂಸ್ಕಾರಗಳಿಗೆ ಮಿತ್ತಳಿಕೆ ಮನೆತನದವರು ನೀಡಿದ ಗೌರವ ಘನತೆಗೆ ಸಾಕ್ಷಿಯಾಗಿದೆ. ಈ ಮಿತ್ತಳಿಕೆ ಮನೆತನಕ್ಕೆ ದೈವ ದೇವರುಗಳಲ್ಲಿರುವ ಭಕ್ತಿ, ಶ್ರದ್ಧೆ ಹಾಗೂ ಆಸಕ್ತಿ ಸಮಾಜಕ್ಕೆ ಮಾದರಿಯಾಗಿದೆ ಮತ್ತು ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ ಎಂದರು.

ಅಳಿಕೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಭಟ್ ಮಾತನಾಡಿ, ನೂರು ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಮಿತ್ತಳಿಕೆ ಮಲರಾಯ ಧರ್ಮಚಾವಡಿ ಮನೆಯ ಯಜಮಾನ ಸಂಕಪ್ಪ ಶೆಟ್ಟಿಯವರಿಂದ ಇಂದಿನ ಯಜಮಾನ ಸಂಕಪ್ಪ ಶೇಖ ಅವರವರೆಗೂ ಸಂಪ್ರದಾಯಗಳಿಗೆ ಚ್ಯುತಿಯಾಗದಂತೆ ನಡೆಸಿಕೊಂಡು ಬಂದಿರುವುದಾಗಿದೆ. ಪ್ರತಿಯೋರ್ವರು ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಮುನ್ನೆಡೆಯಬೇಕು. ದೈವ-ದೇವರಲ್ಲಿ ನಂಬಿಕೆಯಿರಿಸಿದವನಿಗೆ ದೈವ-ದೇವರು ಎಂದೂ ಕೈ ಬಿಡಲಾರರು. ಮಿತ್ತಳಿಕೆ ಕುಟುಂಬದವರು ಉತ್ತಮ ವಿದ್ಯೆ ಪಡೆದು ಪ್ರತಿಭಾವಂತರಾಗಿ ಸಮಾಜದಲ್ಲಿ ಸಾಧನೆ ಮಾಡುತ್ತಾ ಮುಂದುವರೆಯುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದೊಂದಿಗೆ ಉಳಿಸಿ ಬೆಳೆಸುತ್ತಿದ್ದಾರೆ ಎಂದರು.

ವಿಟ್ಲ ಅರಮನೆಯ ಬಂಗಾರು ಅರಸರು ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಿತ್ತಳಿಕೆ ಸಂಕಪ್ಪ ಶೇಖ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಐತ್ತಪ್ಪ ಆಳ್ವ ಕಡಂಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಿತ್ತಳಿಕೆ ಜಗನ್ನಾಥ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ್ ಪ್ರಸಾದ್ ರೈ ಮಿತ್ತಳಿಕೆ ಕಾರ್ಯಕ್ರಮ ನಿರೂಪಿಸಿದರು. ಡಾ.ನಂದಕಿಶೋರ್ ಆಳ್ವ ವಂದಿಸಿದರು.ಕಡಂಬು ದಯಾನಂದ ಆಳ್ವ, ಗಣೇಶ್ ಶೆಟ್ಡಿ ಗೋಳ್ತಮಜಲು, ಮಿತ್ತಳಿಕೆ ಸೂರ್ಯನಾಥ ಆಳ್ವ, ನಿತಿನ್ ಆಳ್ವ ಸಹಕರಿಸಿದರು.

ಭಕ್ತಸಾಗರ..ಯಶಸ್ವಿ ಸಂಪನ್ನ..
ಬೆಳಿಗ್ಗೆ ಕೇಪು ಶ್ರೀ ಮಲರಾಯ ದೈವಸ್ಥಾನದಿಂದ ಭಂಡಾರ ಹೊರಡುವುದು, ಮಲರಾಯ ದೈವದ ಧರ್ಮನೇಮ, ಸಂಜೆ ಕೇಪು ಶ್ರೀ ಮಲರಾಯ ದೈವಸ್ಥಾನಕ್ಕೆ ಭಂಡಾರ ಹಿಂತಿರುಗುವುದು, ನೆಕ್ಕಿತ್ತ ಪುಣಿಯಿಂದ ಭಂಡಾರ ಹೊರಡುವುದು, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವಗಳಿಗೆ ನೇಮ, ಕೊರಗ ತನಿಯ, ಗುಳಿಗ ಕೋಲ ನಡೆಯಿತು. ಮಧ್ಯಾಹ್ನ ಹಾಗೂ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆ ಜರಗಿದ್ದು, ಸಾವಿರಾರು ಭಕ್ತರು ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಪುಳಕಿತರಾದರು. ಜ್ಯೋತಿಷಿ ವಳಕುಂಜ ವೆಂಕಟ್ರಮಣ ಭಟ್ ಹಾಗೂ ಜ್ಯೋತಿಷಿ ಶಂಭೂರು ಸದಾನಂದ ಕಾರಂತರ ಪ್ರಶ್ನೆ ಚಿಂತನೆಯ ಪ್ರಕಾರ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ ಕಾರಂತರ ಮಾರ್ಗದರ್ಶನದಲ್ಲಿ ಸೀಮೆಯ ತಂತ್ರಿಗಳಾದ ಕುಂಟುಕುಡೇಲು ರಘುರಾಮ ತಂತ್ರಿಗಳ ಪೌರೋಹಿತ್ಯದಲ್ಲಿ ವಿಟ್ಲ ಸೀಮೆಯ ಅರಸರ ಮತ್ತು ಸೀಮೆಯ ಗುರಿಕಾರರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಯಶಸ್ವಿ ಸಂಪನ್ನ ಕಂಡಿತು.

LEAVE A REPLY

Please enter your comment!
Please enter your name here