ಕೋಡಿಂಬಾಡಿ ಸಂಜೀವಿನಿ ಒಕ್ಕೂಟದ ನೇಮಕಾತಿಯಲ್ಲಿ ಕಾನೂನು ಉಲ್ಲಂಘನೆ: ದಲಿತ್ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡು ಆರೋಪ

0

  • ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ

ಪುತ್ತೂರು: ಕೋಡಿಂಬಾಡಿಯ ಕೆಎಸ್‌ಆರ್‌ಎಲ್‌ಪಿಎಸ್ ಇದರ ಎಲ್‌ಸಿಆರ್‌ಪಿ ನೇಮಕಾತಿಯಲ್ಲಿ ಸರಕಾರದ ಕಾನೂನನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಆದ್ದರಿಂದ ಕೋಡಿಂಬಾಡಿಯಲ್ಲಿ ಸದ್ರಿ ಎಲ್‌ಸಿಆರ್‌ಪಿಯಲ್ಲಿ ಎಂ.ಬಿ.ಕೆ. ಹುದ್ದೆಯ ಬಗ್ಗೆ ಹೊಸತಾಗಿ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿ ಈ ತನಕ ಸದ್ರಿ ಹುದ್ದೆಯಲ್ಲಿರುವವರು ದುರುಪಯೋಗಪಡಿಸಿಕೊಂಡ ಎಲ್ಲಾ ಸವಲತ್ತುಗಳನ್ನು ಅವರಿಂದ ವಾಪಸ್ ಪಡೆಯಬೇಕು ಎಂದು ದಲಿತ್ ಸೇವಾ ಸಮಿತಿಯ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡು ಆಗ್ರಹಿಸಿದ್ದಾರೆ.

 

 

ಮಾ.26ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‌ಸಿಆರ್‌ಪಿಯಾಗಿ ನೇಮಕಾತಿ ಹುದ್ದೆಯು ಸ್ಥಳೀಯವಾಗಿದ್ದು, ಪ್ರಥಮವಾಗಿ ವಿಧವೆಯರು ಮತ್ತು 30 ವರ್ಷಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಪ್ರಥಮ ಆದ್ಯತೆಯನ್ನು ನೀಡಬೇಕಾಗಿರುತ್ತದೆ. ಅವರು ಇಲ್ಲದೇ ಇದ್ದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅನಂತರದ ಆದ್ಯತೆಯನ್ನ ನೀಡಬೇಕಾಗಿರುತ್ತದೆ. ಆ ನಂತರ ಅಲ್ಪಸಂಖ್ಯಾತರ ವರ್ಗದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಯಾರೂ ಇಲ್ಲದಿದ್ದ ಪಕ್ಷದಲ್ಲಿ ಹಿಂದುಳಿದ ವರ್ಗದಿಂದ ಆಯ್ಕೆ ಮಾಡಬಹುದೆಂದು ಕೆಎಸ್‌ಆರ್‌ಎಲ್‌ಪಿಎಸ್ ಸಂಸ್ಥೆಯು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿರುತ್ತದೆ. ಆದರೆ ಕೋಡಿಂಬಾಡಿಯಲ್ಲಿ ಎಲ್‌ಸಿಆರ್‌ಪಿ ನೇಮಕಾತಿಯನ್ನು ಮಾಡುವಾಗ ಯಾವುದೇ ರೀತಿಯಲ್ಲಿ ಮೇಲೆ ಕಾಣಿಸಿದ ಆದ್ಯತೆಯನ್ನು ಗಣನೆಗೆ ತೆಗೆದುಕೊಂಡಿರುವುದು ಕಂಡು ಬರುವುದಿಲ್ಲ. ಕೋಡಿಂಬಾಡಿ ಸಂಜೀವಿನಿ ಒಕ್ಕೂಟದಲ್ಲಿ ಮುಖ್ಯ ಬರಹಗಾರರಾದ ಸಂಧ್ಯಾ ಮತ್ತು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾದ ಸಂಧ್ಯಾರವರು ಸಂಜೀವಿನಿ ಒಕ್ಕೂಟದಲ್ಲಿ ನಾವೇ ಸುಪ್ರೀಂ ಎಂದುಕೊಂಡು ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಸಂಜೀವಿನಿ ಒಕ್ಕೂಟವನ್ನು ಬಡವರಿಗೆ ಸಿಗದಂತೆ ಮಾಡಲಾಗಿದೆ. ಈ ವಿಚಾರವು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿ ವರ್ಗದವರಿಗೆ ತಿಳಿದಿದ್ದರೂ ಅವರು ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿರುವುದು ಸೋಜಿಗದ ಸಂಗತಿಯಾಗಿರುತ್ತದೆ. ಇದನ್ನು ದಲಿತ್ ಸೇವಾ ಸಮಿತಿಯು ಖಂಡಿಸುತ್ತದೆ ಎಂದರು.

ಈಗ ನೇಮಕಾತಿಗೊಂಡ ಸದ್ರಿ ಅಧಿಕಾರಿಯು ಅಧಿಕಾರಿಗಳನ್ನೂ ಲೆಕ್ಕಿಸದೆ ತನ್ನ ದರ್ಪವನ್ನು ತೋರುತ್ತಿದ್ದಾರೆ. ಇದರಿಂದಾಗಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯು ಬಡವರಿಗೆ ಸಿಗದಂತಾಗಿರುತ್ತದೆ. ಕೋಡಿಂಬಾಡಿ ಗ್ರಾಮ ಪಂಚಾಯತ್‌ನವರು ಸಹ ಸಂಸ್ಥೆಗೆ ಕಟ್ಟಡವನ್ನು ಒದಗಿಸಿ ಕೊಟ್ಟಿದ್ದರೂ ಈ ವಿಚಾರದಲ್ಲಿ ತಮಗೆ ಯಾವುದೇ ಸಂಬಂಧವಿಲ್ಲವೆಂದು ವರ್ತಿಸುತ್ತಿದ್ದಾರೆ. ಅಲ್ಲದೆ ಈಗಿನ ಎಲ್‌ಸಿಆರ್‌ಪಿಯವರು ನಾವೇ ಇದರ ಮುಖ್ಯಸ್ಥರು ನಮ್ಮನ್ನು ಯಾರೂ ಕೇಳುವವರು ಇಲ್ಲ ಎಂದು ದರ್ಪದಿಂದ ನುಡಿಯುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವರ್ಗದವರು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಹೇಳಿದರು. ಪ್ರತಿಕಾಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿ ಕೋಡಿಂಬಾಡಿ ಗ್ರಾಮ ಶಾಖೆಯ ಅಧ್ಯಕ್ಷ ಶಶಿಧರ್, ಸದಸ್ಯ ಆನಂದ ಬಿ. ಮತ್ತು ಶಶಿಕಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here