ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ – ಸೇವಾ ರೂಪದಲ್ಲಿ ತೆಂಗಿನ ಮಡಲಿನ ತಟ್ಟಿ ಸಮರ್ಪಣೆಗೆ ಭಕ್ತರಿಗೆ ಅವಕಾಶ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಹಾಕುವ ಚಪ್ಪರದ ಚಪ್ಪರ ಮುಹೂರ್ತವು ಜ.14ರಂದು ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಯಿತು. ಇದೇ ಸಂದರ್ಭದಲ್ಲಿ ದೇವಳದ ಹೊರಾಂಗಣದಲ್ಲಿ ತೆಂಗಿನ ಮಡಲಿನ ತಟ್ಟಿ ಸಮರ್ಪಣೆಗೆ ಭಕ್ತರಿಗೆ ಅವಕಾಶ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 

ದೇವಳದ ಬಾಲಗಣಪತಿ ಗುಡಿಯ ಮುಂದೆ ದೇವಳದ ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭಟ್ ಅವರು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಚಪ್ಪರ ಮುಹೂರ್ತ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮ್‌ದಾಸ್ ಗೌಡ, ನಗರಸಭೆ ಸದಸ್ಯರೂ ಮತ್ತು ದೇವಳದ ವಾಸ್ತು ಇಂಜಿನಿಯರ್ ಆಗಿರುವ ಪಿ.ಜಿ.ಜಗನ್ನಿವಾಸ ರಾವ್, ದೇವಳದ ನಿತ್ಯ ಕರಸೇವಕರು ಹಾಗು ನಿತ್ಯ ಚಾಕ್ರಿಗೆ ಸಂಬಂಧಿಸಿದವರು ಸಾಂಕೇತಿಕವಾಗಿ ಚಪ್ಪರ ನಿಲ್ಲಿಸುವ ಮೂಲಕ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿದರು.

ತೆಂಗಿನ ಮಡಲಿನ ತಟ್ಟಿ ಸಮರ್ಪಣೆಗೆ ಚಾಲನೆ:
ಚಪ್ಪರ ಮೂಹೂರ್ತದ ಬಳಿಕ ದೇವಳದ ಹೊರಾಂಗಣದಲ್ಲಿ ತೆಂಗಿನ ಮಡಲಿನ ತಟ್ಟಿಗಳನ್ನು ದೇವಳಕ್ಕೆ ಸಮರ್ಪಣೆ ಮಾಡಲು ಭಕ್ತರಿಗೆ ಅವಕಾಶ ನೀಡುವ ಕಾರ್ಯಕ್ರಮಕ್ಕೆ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಪ್ರಥಮ ಸೇವಾ ರಶೀದಿ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು ಸೇರಿದಂತೆ ಭಕ್ತರು ತೆಂಗಿನ ಮಡಲಿನ ತಟ್ಟಿಗಳನ್ನು ಶಿರದಲ್ಲಿ ಹೊತ್ತು ದೇವಳದ ಒಳಾಂಗಣದಲ್ಲಿ ಗಣಪತಿ ಗುಡಿಯ ಬಳಿ ತಂದಿರಿಸುವ ಮೂಲಕ ಭಕ್ತರ ಸೇವಾ ರೂಪಕ್ಕೆ ಚಾಲನೆ ನೀಡಿದರು.

ತೆಂಗಿನ ಮಡಲಿನ ತಪ್ಪರ ಸಮರ್ಪಣೆಗೆ ಅವಕಾಶ:
ವರ್ಷಾದಿ ಉತ್ಸವಾದಿಗಳಿಗೆ ಪೂರ್ವ ಭಾವಿಯಾಗಿ ಪ್ರತಿ ವರ್ಷ ಚಪ್ಪರ ಮುಹೂರ್ತ ಕಾರ್ಯಕ್ರಮ ದೇವಳದಲ್ಲಿ ನಡೆಯುತ್ತಿದ್ದು, ಭಕ್ತರಿಗೂ ಚಪ್ಪರ ಸೇವೆ ಮಾಡಲು ಅವಕಾಶ ನೀಡಲಾಗಿದೆ. ಚಪ್ಪರ ಸೇವೆಗಾಗಿ ಭಕ್ತರು ದೇವಳದ ಹೊರಾಂಗಣದಲ್ಲಿ ಚಪ್ಪರವೊಂದರ ತೆಂಗಿನ ಮಡಲಿನ ತಟ್ಟಿಗೆ ರೂ. 25ರಂತೆ ರಶೀದಿ ಪಡೆದು ಚಪ್ಪರ ಸೇವೆಗೆ ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here