ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ಉದ್ಘಾಟನೆ

0
  • ಸ್ವಚ್ಛತೆ, ಜನರ ಆರೋಗ್ಯದಲ್ಲಿ ಪುತ್ತೂರು ನಗರಸಭೆ ನಂ. 1 ಗುರಿ- ಸಂಜೀವ ಮಠಂದೂರು

 

ಪುತ್ತೂರು: ಪುತ್ತೂರು ನಗರಸಭೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಪೌರ ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ರಾಜ್ಯದಲ್ಲಿ ಸ್ವಚ್ಛತೆ ಮತ್ತು ಜನರ ಆರೋಗ್ಯದಲ್ಲಿ ಪುತ್ತೂರು ನಗರಸಭೆ ನಂ.1ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ನಗರಸಭೆ ವತಿಯಿಂದ ಸ್ವಚ್ಛ ಭಾರತ್ ಯೋಜನೆ, 14ನೇ ಹಣಕಾಸು ಯೋಜನೆಯಡಿಯಲ್ಲಿ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಪೌರ ಕಾರ್ಮಿಕರ ವಿಶ್ರಾಂತಿಗಾಗಿ ರೂ. 17ಲಕ್ಷ ವೆಚ್ಚದಲ್ಲಿ ನಿಮಾಣಗೊಂಡ ಪುರುಷ ಮತ್ತು ಮಹಿಳೆಯರ ಕೊಠಡಿಗಳನ್ನು ಜ.೨೪ರಂದು ಬೆಳಿಗ್ಗೆ ಉದ್ಘಾಟಿಸಿ ಮಾತನಾಡಿದರು. ನಗರವನ್ನು ಸ್ವಚ್ಛ ಸುಂದರವನ್ನಾಗಿಸುವ ಸಂದರ್ಭದಲ್ಲಿ ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡಲು ಬನ್ನೂರು ಡಂಪಿಂಗ್ ಯಾರ್ಡ್‌ಗೆ ಬಂದಾಗ ಇಲ್ಲಿ ಕಸ ವಿಂಗಡಣೆ ಮಾಡಿ ವಿಶ್ರಾಂತಿ ಮಾಡಿಕೊಳ್ಳಲು ಕೊಠಡಿ ನಿಮಾಣ ಮಾಡುವ ಮೂಲಕ ಕಾರ್ಮಿಕರು ಕೂಡಾ ಅವರ ಆರೋಗ್ಯ ಕಾಪಾಡುವ ಮತ್ತು ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಗರಸಭೆ ಕಾಳಜಿ ವಹಿಸಿರುವುದು ಉತ್ತಮ ವಿಚಾರ. ಇಲ್ಲಿ ಒಂದಷ್ಟು ಕಸವನ್ನು ವಿಂಗಡನೆ ಮಾಡಿ ಮರುಬಳಕೆ ಮಾಡುವ ದೃಷ್ಟಿಯಿಂದ ಹೊಸ ಹೊಸ ಯೋಜನೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನ ಪುತ್ತೂರು ನಗರಸಭೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಗುರುತಿಸಿಕೊಳ್ಳಬೇಕೆಂದು ಅವರು ಹೇಳಿದರು.

ಪೌರ ಕಾರ್ಮಿಕರ ಆರೋಗ್ಯ ಮುಖ್ಯ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಪೌರ ಕಾರ್ಮಿಕರು ನಗರದ ಸ್ವಚ್ಚತೆ ಕಾಪಾಡುತ್ತಾರೆ. ಇವರೊಂದಿಗೆ ಸಾರ್ವಜನಿಕರು ಕೂಡಾ ಕಸ ವಿಂಗಡಣೆ ಮಾಡಿ ಕೊಡುವ ಮೂಲಕ ಸಹಕಾರ ನೀಡಬೇಕು. ಯಾಕೆಂದರೆ ಪೌರ ಕಾರ್ಮಿಕರ ಆರೋಗ್ಯದಿಂದಿರಬೇಕು ಎಂಬುದು ನಮ್ಮ ಆಶಯ ಎಂದರು.

ನಗರ ವ್ಯಾಪ್ತಿಯಲ್ಲೂ ವಿಶ್ರಾಂತಿ ಕೊಠಡಿ:
ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಸ್ವಚ್ಛ ಭಾರತ್ ಯೋಜನೆ ಮತ್ತು ಅಮೃತ್ ನಿರ್ಮಲ ನಗರಯೋಜನೆಯಡಿಯಲ್ಲಿ ಪೌರ ಕಾರ್ಮಿಕರಿಗೆ ನಗರ ವ್ಯಾಪ್ತಿಯಲ್ಲೂ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲು ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಸದಸ್ಯ ಶೀನಪ್ಪ ನಾಯ್ಕ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ರೋಟರಿ ಪೂರ್ವ ಸ್ವಚ್ಛ ಭಾರತ ಯೋಜನಾ ಟ್ರಸ್ಟ್ ನಿರ್ದೇಶಕ ಡಾ| ರಾಜೇಶ್ ಬೆಜ್ಜಂಗಳ ಮತ್ತು ಪೌರ ಕಾರ್ಮಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here