ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ಧಾರ್ಮಿಕ ಸಭೆ

0
  • ಸಂಸ್ಕತಿ, ಆಚರಣೆಗಳು ನಿರಂತರವಾಗಿದ್ದಾಗ ಧರ್ಮದ ಉಳಿವು-ಡಾ| ವಿಜಯ ಸರಸ್ವತಿ

ಪುತ್ತೂರು;ಸಂಸ್ಕೃತಿಯ ಆಚರಣೆಯಲ್ಲಿ ಧರ್ಮದ ಜೀವಾಳ ಅಡಗಿದೆ. ಆಚರಣೆಗಳಿಂದ ಸಂಸ್ಕೃತಿಯ ಉಳಿವು. ಆಚರಣೆಗಳಿದ್ದಾಗ ಧರ್ಮದ ಉಳಿವು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಹೇಳಿದರು.

 


ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.26ರಂದು ನಡೆದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಧರ್ಮವಿಲ್ಲದೇ‌ ಜೀವನವೇ ಇಲ್ಲ. ಜೀವನಕ್ಕೆ ಸಂಸ್ಕಾರ ನೀಡುವುದೇ ಧರ್ಮ. ಮನಸ್ಸಿನ ಅಂತರಂಗದ ಭಕ್ತಿ ಬಹಿರಂಗವಾದಾಗ ಸಂಸ್ಕಾರ ಉಳಿಯಲು ಸಾಧ್ಯ. ಧರ್ಮದ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ಧರ್ಮವನ್ನು ಉಳಿಸಿದರೆ ಧರ್ಮ ನಮ್ಮ ರಕ್ಷಿಸುತ್ತದೆ. ದೃಢವಿಲ್ಲದ ಭಕ್ತಿ ನಿಷ್ಪ್ರಯೋಜಕ. ಹೀಗಾಗಿ ಧರ್ಮದ ಬಗ್ಗೆ ಚಿಂತನೆ ಅಗತ್ಯವಿದೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡಬೇಕಾದ ಆವಶ್ಯಕತೆಯಿದೆ ಎಂದು ಅವರು ಹೇಳಿದರು.

 


ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಧರ್ಮ,‌ಸಂಪ್ರದಾಯ ದೇಶದ ತಿರುಳು. ಆಧುನಿಕತೆಯ ಜೊತೆಗೆ ಬದುಕಬೇಕಾಗಿದೆ. ಧರ್ಮದ ಮೂಲ ತತ್ವ ಬಿಟ್ಟು ಬದುಕಲು ಸಾಧ್ಯವಿಲ್ಲ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಸುರೇಶ್ ಪುತ್ತೂರಾಯರವರು ವೈದ್ಯರಾಗಿ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮುಖಾಂತರ ಮಾದರಿಯಾಗಿದ್ದಾರೆ. ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಇಡೀ ಸಮಾಜವನ್ನು ಒಟ್ಟು ಸೇರಿಕೊಂಡು ಹೋಗುವ ಕೆಸಲವಾಗಬೇಕು. ಧರ್ಮದ ಪುನರುತ್ಥಾನದ ಕೇಂದ್ರವಾಗಿ ಮೂಡಿಬರಲಿ ಎಂದ ಅವರು, ದೇವಸ್ಥಾನದ ವತಿಯಿಂದ ನಡೆಸಲಾದ ಗದ್ದೆಯಲ್ಲಿ ಬೆಳೆದ ಭತ್ತದ ಅಕ್ಕಿಯನ್ನು ಪ್ರಸಾದ ರೂಪದಲ್ಲಿ ವಿತರಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ ಎಂದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಭತ್ತವನ್ನು ಬೆಳೆಸುವ ಮೂಲಕ ಧರ್ಮದ ಪಾಲನೆ ಮಾಡಿದಂತೆ ಮಕ್ಕಳಿಗೆ ಧಾರ್ಮಿಕ ಜ್ಞಾನ ನೀಡಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದ್ದು ಧರ್ಮವನ್ನು ಉಳಿಸಿ ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಉತ್ಸವ ಸಮಿತಿ, ವ್ಯವಸ್ಥಾಪನಾ ಸಮಿತಿ, ನವಚೇತನ ಯುವಕ ಮಂಡಲ ಹಾಗೂ ಊರ ಭಕ್ತಾದಿಗಳ ಸಹಕಾರ,‌ ಪ್ರೋತ್ಸಾಹದಿಂದ ಪ್ರತಿಷ್ಠಾ ಮಹೋತ್ಸವವಯ ಬಹಳಷ್ಟು ಯಶಸ್ವಿಯಾಗಿ ನೆರವೇರಿರುತ್ತದೆ. ದೇವಸ್ಥಾನದಲ್ಲಿ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದ್ದು ಪ್ರತಿಯೊಬ್ಬರು ಸಹಕರಿಸುವಂತೆ ಅವರು ಮನವಿ ಮಾಡಿದರು.


ಉತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಇಳಂತಾಜೆ ಪ್ರಾಸ್ರಾವಿಕವಾಗಿ ಮಾತನಾಡಿ, ಎರಡನೇ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯುತ್ತಿದೆ. ಧರ್ಮಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ. ಸಮಾಜಕ್ಕೆ ಸಂಸ್ಕಾರ ನೀಡುವ ಕ್ಷೇತ್ರವಾಗಿದೆ. ಹೀಗಾಗಿ ಧಾರ್ಮಿಕ ಸಭೆ ನಡೆಸಿ ಜನರಿಗೆ ಸಂಸ್ಕಾರ ಅರಿವು ಮೂಡಿಸಲು ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಉತ್ಸವ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಮರಣಿಕೆ ಜೊತೆ ಅಕ್ಕಿ;
ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ, ಗದ್ದೆಗಿಳಿಯೋಣ ಬೇಸಾಯ ಮಾಡೋಣ ಕಾರ್ಯಕ್ರಮದಲ್ಲಿ ದೇವಸ್ಥಾನದ ವತಿಯಿಂದ ಬೆಳೆದ ಭತ್ತದಿಂದ ತಯಾರಿಸಲಾದ‌ ಅಕ್ಕಿಯನ್ನು ಸ್ಮರಣಿಕೆ ಜೊತೆ ನೀಡಲಾಯಿತು.


ಪ್ರಾರ್ಥನಾ ಯು.ಎಸ್ ಪ್ರಾರ್ಥಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಇಳಂತಾಜೆ ಸ್ವಾಗತಿಸಿದರು. ಉತ್ಸವ ಸಮಿತಿ ಉಪಾಧ್ಯಕ್ಷ ಭೀಮಯ್ಯ ಭಟ್, ಜತೆ ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಗೌರವ ಸಲಹೆಗಾರ ವಿಜಯ ಬಿ.ಎಸ್., ಸುರೇಶ್ ಸಂಪ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಹಾಗೂ ಲಕ್ಷ್ಮಣ ಬೈಲಾಡಿ ಅತಿಥಿಗಳಿಗೆ ಶಾಲು ನೀಡಿ ಗೌರವಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರೇಮ, ವಿನ್ಯಾಸ್ ಯು.ಎಸ್. , ಜಯಕುಮಾರ್ ನಾಯರ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್. ವಂದಿಸಿದರು. ಉಮೇಶ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಶ್ರೀ ಧೂಮಾವತಿ ದೈವದ ನೇಮ, ಅನ್ನಸಂತರ್ಪಣೆ ಬಳಿಕ ಗುಳಿಗ ದೈವದ ನೇಮೋತ್ಸವದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here