ಕೋಡಿಂಬಾಡಿ: ಅಂಗಳದಿಂದ ಅಡಿಕೆ ಕಳವು ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದ ಮನೆ ಮಂದಿ

0

ಪುತ್ತೂರು: ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ವೇಳೆ ಮನೆ ಮಂದಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜ.28ರ ರಾತ್ರಿ ನಡೆದ ಘಟನೆ ಕೋಡಿಂಬಾಡಿ ಮೇಲಿನ ಹಿತ್ತಿಲು ಮನೆಯಲ್ಲಿ ನಡೆದಿದೆ.

ಕಡೇಶಿವಾಲಯ ನಿವಾಸಿ ಸಚಿನ್ ಎಂಬವರು ಅಡಿಕೆ ಕಳವು ಮಾಡಿದ ಬಂಧಿತ ಆರೋಪಿ. ಕೋಡಿಂಬಾಡಿ ಮೇಲಿನ ಹಿತ್ತಿಲು ಮನೆಯ ಮೋಹನ್ ಕುಮಾರ್ ಅವರು ಮನೆಯಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಜ.28ರ ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಸಚಿನ್ ಮತ್ತು ಇತರ ಇಬ್ಬರು ಕಳವು ಮಾಡುತ್ತಿದ್ದರು. ಇದೇ ವೇಳೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮೋಹನ್ ಕುಮಾರ್ ಅವರ ಭಾವ ದೀಕ್ಷಿತ್ ಅವರು ಮನೆಯಂಗಳದಲ್ಲಿ ಮೂವರು ಅಡಿಕೆ ಕಳವು ಮಾಡುವುದು ಕಂಡು ಬಂತು. ತಕ್ಷಣ ಅವರು ಮನೆ ಮಂದಿಯನ್ನು ಎಚ್ಚರಿಸಿ ಅಡಿಕೆ ಕಳವು ಮಾಡುತ್ತಿರುವವರನ್ನು ಹಿಡಿಯಲು ಹೋದಾಗ ಅವರೆಲ್ಲ ಪರಾರಿಯಾಗಲು ಯತ್ನಸಿದರು. ಒಬ್ಬಾತನ ಕೈಯಿಂದ ಅಡಿಕೆ ಚೀಲ ಬಿದ್ದಾಗ ಅದನ್ನು ಮತ್ತೆ ಪಡೆಯಲೆಂದು ಯತ್ನಿಸಿದಾಗ ಆತನನ್ನು ಮನೆ ಮಂದಿ ಹಿಡಿದಿದ್ದಾರೆ. ಬಳಿಕ ವಿಚಾರಿಸಿದಾಗ ಆತ ಕಡೇಶಿವಾಲಯದ ಚೇತನ್ ಎಂದು ಬೆಳಕಿಗೆ ಬಂದಿದ್ದು, ಬಳಿಕ ಆರೋಪಿಯನ್ನು ಮೋಹನ್ ಕುಮಾರ್ ಮತ್ತಿತರರು ಪೊಲೀಸರಿಗೆ ಒಪ್ಪಿಸಿದರು. ಕಳವಾದ ಅಡಿಕೆಯ ಮೌಲ್ಯ ರೂ. 2ಸಾವಿರ ಆಗಿದ್ದು, ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here