ಪುತ್ತೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಪೊಲೀಸ್ ಇಲಾಖೆ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಸ್ವಚ್ಛತಾ ಪಕ್ವಾಡ-2023 ಯೋಜನೆಯಡಿಯಲ್ಲಿ ‘ರಸ್ತೆಯ ಸುರಕ್ಷೆ-ಜೀವದ ರಕ್ಷೆ’ ಕುರಿತು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆಯು ಜ.25 ರಿಂದ 31ರ ವರೆಗೆ ಜರಗಲಿದ್ದು, ಜ.25 ರಂದು ಚಾಲನೆ ದೊರೆಯಿತು.
ಅಧ್ಯಕ್ಷತೆಯನ್ನು ಪುತ್ತೂರು ಆರ್.ಟಿ.ಒ ಹೆಚ್.ವಿಶ್ವನಾಥ್ ಅಖಿಲರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಉದಯರವಿರವರು ಭಾಗವಹಿಸಿ ರಸ್ತೆ ಸುರಕ್ಷತೆಯ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಿಭಾಗದ ಆರ್.ಟಿ.ಒ ವಿಶ್ವನಾಥ ನಾಯ್ಕರವರು ಆಗಮಿಸಿ ಮಾನವನ ಜೀವನ ಎಷ್ಟೊಂದು ಅಮೂಲ್ಯ. ಅದು ಅಪಘಾತದಲ್ಲಿ ಕೊನೆ ಕಾಣಬಾರದು. ವಾಹನದಲ್ಲಿ ಸಂಚರಿಸುವಾಗ ಸಾರಿಗೆ ನಿಯಮಗಳ ಸಮಗ್ರ ಪಾಲನೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಹಿರಿಯ ಮೋಟಾರ್ ತನಿಖಾಧಿಕಾರಿ ಶ್ರೀಧರ್ ರಾವ್ ಉಪಸ್ಥಿತರಿದ್ದರು. ಶ್ವೇತಾ ಪ್ರಾರ್ಥಿಸಿದರು. ದೀಪಕ್ ಕುಮಾರ್ ಸ್ವಾಗತಿಸಿ, ಪುರುಷೋತ್ತಮ್ ಬಿ. ವಂದಿಸಿದರು. ವಿವೇಕ್, ನಾಗರಾಜ್, ಗಣೇಶ್ ಭಟ್, ಗಿರೀಶ್ ರವರು ಸಹಕರಿಸಿದರು.