ಕಡಬ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ

0

  •  ದಲ್ಲಾಳಿಗಳು ಯಾರೆಂದು ಗೊತ್ತಿಲ್ಲ, ಮಾಹಿತಿ ನೀಡಿದರೆ ಅವರ ವಿರುದ್ದ ಕ್ರಮ-ತಹಶೀಲ್ದಾರ್
  • ಕಡಬ ಸರ್ವೆ ಇಲಾಖೆಯಲ್ಲಿ ದುಡ್ಡಿನ ದಂಧೆ-ಆರೋಪ

ಕಡಬ: ಕಡಬ ತಾಲೂಕು ಕಛೇರಿ ಹಾಗೂ ಸರ್ವೆ ಇಲಾಖೆಯಲ್ಲಿ ದಲ್ಲಾಳಿಗಳ ಕಾಟ ಹಾಗೂ ಭ್ರಷ್ಟಾಚಾರವೇ ತುಂಬಿದೆ ಎನ್ನುವ ಆರೋಪಕ್ಕೆ ತಾಲೂಕು ಕಛೇರಿಯಲ್ಲಿ ದಲ್ಲಾಳಿಗಳು ಯಾರು ಎಂದು ತಿಳಿದಿಲ್ಲ. ಅವರ ಹೆಸರು ಹೇಳಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಉತ್ತರಿಸಿದ ಘಟನೆ ಕಡಬ ತಾಲೂಕು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ನಡೆದಿದೆ. ಕಡಬ ಸರ್ವೆ ಇಲಾಖೆಯಲ್ಲಿ ದುಡ್ಡಿನ ದಂಧೆ ನಡೆಯುತ್ತಿದೆ ಎನ್ನುವ ಆರೋಪಕ್ಕೆ ತಹಶೀಲ್ದಾರ್ ಮೌನವಹಿಸಿದ ಘಟನೆ ಸಭೆಯಲ್ಲಿ ನಡೆಯಿತು.

ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ಜ.31ರಂದು ನಡೆಯಿತು.

ದಲ್ಲಾಳಿಗಳು ಯಾರೆಂದು ಗೊತ್ತಿಲ್ಲ, ಹೆಸರು ಹೇಳಿದರೆ ಅವರ ವಿರುದ್ದ ಕ್ರಮ:

ಡಿ.ಸಿ.ಮನ್ನಾ ಭೂಮಿಯನ್ನು ಇತರ ವರ್ಗದವರಿಗೆ ಮಂಜೂರಾತಿ ಮಾಡಿರುವ ಬಗ್ಗೆ ಹಾಗೂ ಇತರ ವಿಷಯಗಳ ಚರ್ಚೆಯಲ್ಲಿ ವಸಂತ ಕುಬಲಾಡಿ, ಗುರುವಪ್ಪ ಕಲ್ಲುಗುಡ್ಡೆ, ಆನಂದ ಮಿತ್ತಬೈಲ್, ಶಶಿಧರ ಬೊಟ್ಟಡ್ಕ, ಬಾಬು ಎಲ್.ಸವಣೂರು ಮೊದಲಾದವರು ಮಾತನಾಡಿ, ಕಡಬ ತಾಲೂಕು ಕಛೇರಿಗೆ ಸಾಮಾನ್ಯ ಜನರು ಹೋದರೆ ಅವರನ್ನು ಕೇಳುವವರೇ ಇಲ್ಲದಂತಾಗಿದೆ. ನಿಮಗೆ ದಲ್ಲಾಳಿಗಳ ಮೂಲಕ ಫೈಲ್ ಕೊಟ್ಟರೆ ಬೇಗ ಆಗುತ್ತದೆ, ಸರ್ವೆ ಇಲಾಖೆಯಲ್ಲಿ ಅಂತೂ ದುಡ್ಡಿನ ದಂಧೆಯೇ ನಡೆಯುತ್ತಿದೆ, ಅಲ್ಲಿಯವರಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಈ ರೀತಿಯಾದರೆ ಬಡವರು ಏನು ಮಾಡಬೇಕು ಎಂದು ಆಕ್ರೋಶಭರಿತರಾಗಿ ಹೇಳಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅವರು ನಮ್ಮ ಕಛೇರಿಗೆ ಬರುವವರಲ್ಲಿ ದಲ್ಲಾಳಿಗಳು ಯಾರೆಂದು ಗೊತ್ತಿಲ್ಲ, ನನ್ನ ಕೊಠಡಿಯಲ್ಲಿ ನೋಡಿದ್ದೀರಾ ಎಂದು ಹೇಳಿದರು. ಇದಕ್ಕೆ ವಸಂತ, ಗುರುವಪ್ಪರವರು ಮಾತನಾಡಿ, ನಿಮಗೆ ಗೊತ್ತಿಲ್ಲ ಅನ್ನುವುದು ಸುಳ್ಳು, ನಿಮ್ಮ ಟೇಬಲ್ ಮೇಲೆ ಕುಳಿತುಕೊಂಡರೂ ನಿಮಗೆ ಗೊತ್ತಾಗುವುದಿಲ್ಲ ಅಲ್ವ, ನಿಮ್ಮಲ್ಲಿ ಸಿಸಿ ಕ್ಯಾಮಾರ ಇಲ್ವ ಅದರಲ್ಲಿ ಪರಿಶೀಲನೆ ಮಾಡಿ ಎಂದು ಹೇಳಿದರು. ತಹಸೀಲ್ದಾರ್ ಉತ್ತರಿಸಿ ದಲ್ಲಾಳಿಗಳ ಹೆಸರನ್ನು ಹೇಳಿದರೆ ನಾನು ಪರಿಶೀಲನೆ ಮಾಡಿ ಅವರ ವಿರುದ್ದ ಕ್ರಮ ಕ್ಯಗೊಳ್ಳುತ್ತೇನೆ ಎಂದು ಹೇಳಿದರು. ಸರ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ತಹಸೀಲ್ದಾರ್ ಯಾವುದೇ ಉತ್ತರ ನೀಡಿಲ್ಲ.

ಡಿ.ಸಿ. ಮನ್ನಾ ಭೂಮಿಯನ್ನು ಇತರರಿಂದ ತೆರವುಗೊಳಿಸಲು ಆಗ್ರಹ: ಕಡಬ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಭ್ಯವಿರುವ ಡಿ.ಸಿ. ಮನ್ನಾ ಜಮೀನು ಒತ್ತುವರಿಯಾಗಿದ್ದು ಇದನ್ನು ತೆರವುಗೊಳಿಸುವ ಬಗ್ಗೆ ಹಿಂದಿನ ಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಪಾಲನಾ ವರದಿಯಲ್ಲಿ ಉತ್ತರಿಸಿದ್ದು, ಕಡಬ ತಾಲೂಕಿನಲ್ಲಿ ಲಭ್ಯವಿರುವ ಡಿಸಿ ಮನ್ನಾ ಜಮೀನು 66.21 ಎಕ್ರೆ, ಒತ್ತುವರಿಯಾಗಿರುವ ಡಿಸಿ ಮನ್ನಾ ಜಮೀನು 63.19. ಮಂಜೂರುದಾರರಿಗೆ ಲಭ್ಯವಿರುವ ಅತಿಕ್ರಮಣ ಮುಕ್ತ ವಿಸ್ತೀರ್ಣ 3.02. ಒತ್ತುವರಿ ಆಗಿರುವ ಡಿಸಿ ಮನ್ನಾ ಜಮೀನಿಗೆ ನಮೂನೆ 50,53,57ರಲ್ಲಿ ಅರ್ಜಿಗಳಿದ್ದು ಅಕ್ರಮ-ಸಕ್ರಮ ಸಮಿತಿ ಮುಂದೆ ಮಂಡಿಸಿ, ಸಮಿತಿ ನಿರ್ಣಯದ ನಂತರ ಒತ್ತುವರಿ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಇದಕ್ಕೆ ಆಕ್ರೋಶಗೊಂಡ ನಾಯಕರು ನಾವು ಹಿಂದಿನ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇವಲ ಕಾಟಚಾರಕ್ಕೆ ಉತ್ತರ ನೀಡಿದ್ದೀರಿ ಹೊರತು ಒಂದು ಆಗ್ರಹವನ್ನು ಈಡೇರಿಸಿಲ್ಲ, ಅನುಪಾಲನ ವರದಿಯಲ್ಲಿ ಎಲ್ಲ ಉತ್ತರಗಳು, ಮಾಡುತ್ತೇವೆ, ಕೋರಿದೆ, ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಮಾತ್ರ ಇದೆ, ನಾವು ಬೇರೆನೂ ಕೇಳುತ್ತಿಲ್ಲ, ಡಿಸಿ ಮನ್ನಾ ಭೂಮಿಯನ್ನು ಇತರ ವರ್ಗದವರಿಗೆ ಹೇಗೆ ಮಂಜೂರಾತಿ ಮಾಡಿದ್ದೀರಿ, ಅದನ್ನು ಕೂಡಲೇ ತೆರವುಗೊಳಿಸಿ ಇಲ್ಲದಿದ್ದರೆ ಸಭೆ ಮಾಡುವ ಅಗತ್ಯ ಇಲ್ಲ ಎಂದು ಹೇಳಿ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು. ತಹಸೀಲ್ದಾರ್ ಉತ್ತರಿಸಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಕಡಬ ತಾಲೂಕು ಮಟ್ಟದ ಅಂಬೇಡ್ಕರ್ ಭವನವನ್ನು ಮೇಲ್ದರ್ಜೆಗೇರಿಸಬೇಕು ಹಾಗೂ ಮಂಜೂರಾಗಿರುವ ನಿವೇಶನದಲ್ಲಿ ಸುಸಜ್ಜಿತವಾದ ಡಾ| ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂದು ಹಿಂದಿನ ಸಭೆಯಲ್ಲಿ ಪ್ರಸ್ತಾಪವಾದರೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಸವಣೂರು ಗ್ರಾಮದ ಕಂಚಗಾರು ಕೆರೆಗೆ ಹೋಗಲು ದಾರಿ ಇರುವುದಿಲ್ಲ, ದಾರಿ ಮಾಡಿಸುವಂತೆ ಮತ್ತು ಕೆರೆಯ ಸರ್ವೆ ನಂಬ್ರ, ವಿಸ್ತೀರ್ಣವುಳ್ಳ ನಾಮಫಲಕವನ್ನು ಅಳವಡಿಸುವಂತೆ ಹಿಂದಿನ ಸಭೆಯಲ್ಲಿ ಪ್ರಸ್ತಾಪವಾಗಿದ್ದು ಕೆರೆಯ ಸುತ್ತ ಇರುವ ಸರಕಾರಿ ಹಾಗೂ ಪರಂಬೋಕು ಜಾಗದ ಒತ್ತುವರಿ ತೆರವುಗೊಳಿಸಬೇಕು ಎಂದು ಬಾಬು ಅವರು ಆಗ್ರಹಿಸಿದರು.

ಕಡಬ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿದರೂ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುತ್ತದೆ. ಈಗ ಇರುವ ವೈದ್ಯಾಧಿಕಾರಿಯವರು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಅವರನ್ನು ವರ್ಗಾಯಿಸಬೇಕು ಇಲ್ಲದಿದ್ದಲ್ಲಿ ಮುಂದಿನ ಸಭೆಯಲ್ಲಿ ಪ್ರತಿಭಟನೆ ಮಾಡುವುದಾಗಿ ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಪ್ಪ ಕಲ್ಲುಗುಡ್ಡೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಹಾಯಕಿಯವರು ತಾಲೂಕು ಆರೋಗ್ಯಾಧಿಕಾರಿಯವರು ತರಬೇತಿಗೆ ಹೋಗಿರುವ ಹಿನ್ನಲೆಯಲ್ಲಿ ಬಂದಿಲ್ಲ ಎಂದು ಹೇಳಿದರು.

ಆಲಂಕಾರು ಗ್ರಾಮದ ಸುಂದರ ಪೂಜಾರಿಯವರು ಬಾಲಕೃಷ್ಣರವರಿಗೆ ಜಾಗವನ್ನು ಮಾರಾಟ ಮಾಡಿರುತ್ತಾರೆ, ಬಾಲಕೃಷ್ಣ ಅವರು ಮನೆ ಕಟ್ಟಲು ಭೂಮಿ ಸಮತಟ್ಟು ಮಾಡಿರುವುದರಿಂದ ಸೀತಾರಾಮ ಎಂಬವರ ಮನೆಗೆ ಹೋಗಲು ರಸ್ತೆ ಇರುವುದಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹಿಂದಿನ ಸಭೆಯಲ್ಲಿ ಆಗ್ರಹಿಸಲಾಗಿದ್ದು, ಈ ವಿಚಾರವಾಗಿ ಸಭೆಯಲ್ಲಿ ಭಾರಿ ಚರ್ಚೆ ನಡೆಯಿತು. ಈ ಬಗ್ಗೆ ಮಾತನಾಡಿದ ಗುರುವಪ್ಪ ಕಲ್ಲುಗುಡ್ಡೆ ಈ ಪ್ರಕರಣದಲ್ಲಿ ಆಲಂಕಾರು ಪಿಡಿಒರವರು ಬಾಲಕೃಷ್ಣ ಅವರ ಪರವಾಗಿ ಸಾರ್ವಜನಿಕವಾಗಿ ನಮಗೆ ಅವಾಜ್ ಹಾಕಿದ್ದಾರೆ. ಬಾಲಕೃಷ್ಣ ಪರವಾಗಿ ಸರ್ವೆ ಇಲಾಖೆ, ಕಂದಾಯ ಇಲಾಖೆಯವರು ಕೆಲಸ ಮಾಡುತ್ತಿದ್ದಾರೆ, ಸೀತಾರಾಮರು ಗಡಿಗುರುತಿಗೆ ಅರ್ಜಿ ಸಲ್ಲಿಸಿ ಎರಡು ತಿಂಗಳು ಆದರೂ ಇನ್ನೂ ಸರ್ವೆ ಮಾಡಿಲ್ಲ, ತಾಲೂಕು ಸರ್ವೆಯರ್ ಗಿರಿ ಗೌಡ ಅವರು ಬಾಲಕೃಷ್ಣ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಭೂ ಪರಿವರ್ತನೆ ಮಾಡಿದ್ದು ಒಂದು ಕಡೆ, ಕಟ್ಟಡ ನಿರ್ಮಾಣ ಮಾಡಿದ್ದು ಇನ್ನೊಂದು ಕಡೆ ಎಂದು ಆರೋಪಿಸಿದರು. ತಹಸೀಲ್ದಾರ್ ಅವರು ಮಾತನಾಡಿ ನಾನು ಸ್ಥಳ ವೀಕ್ಷಣೆ ಮಾಡಿ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಚರ್ಚೆ ಕೊನೆಗೊಂಡಿತು.

ಅರಣ್ಯ ಸಮಿತಿಯಲ್ಲಿ ಕಾಡು ಉತ್ಪತ್ತಿಯನ್ನು ಏಲಂ ಮಾಡುವಾಗ ಪ.ಜಾತಿ/ಪ.ಪಂಗಡದವರಿಗೆ ಸಿಗುತ್ತಿಲ್ಲ, ಸಂಪತ್ತನ್ನು ಪಡೆದುಕೊಳ್ಳುವ ವಿಚಾರದಲ್ಲಿ ಸಭೆಗೆ ಬಂದ ಅರಣ್ಯಾಧಿಕಾರಿಗಳು ಸರಿಯಾದ ಮಾಹಿತಿಯನ್ನು ನೀಡದೆ ಇರುವುದರಿಂದ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಸರಿಯಾಗಿ ಮಾಹಿತಿ ಇಲ್ಲದೆ ಸಭೆಗೆ ಬರಬೇಡಿ, ಮುಂದಿನ ಸಭೆಗೆ ವಲಯ ಅರಣ್ಯಾಧಿಕಾರಿಗಳು ಬರಬೇಕು ಎಂದು ಆಗ್ರಹಿಸಲಾಯಿತು. ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂಬ ಆರೋಪವು ವ್ಯಕ್ತವಾಯಿತು. ಪ.ಜಾತಿ. ಪ.ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್‌ಗಾಗಿ ಮೆಸ್ಕಾಂ ಇಲಾಖೆಗೆ ಅರ್ಜಿ ಸಲ್ಲಿಸುವ ಬಗ್ಗೆ ಮೆಸ್ಕಾಂ ಸಿಬ್ಬಂದಿಗಳು ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಈ ಬಗ್ಗೆ ಇಂಜಿನಿಯರ್ ಸತ್ಯನಾರಾಯಣ ಅವರು ಉತ್ತರಿಸಿ ಪ್ರಾರಂಭದಲ್ಲಿ ಅದರ ಬಗ್ಗೆ ಸರಿಯಾದ ಮಾಹಿತಿ ನಮಗೆ ಇರಲಿಲ್ಲ, ಈಗ ಅರ್ಜಿ ಹಾಕಬಹುದು ಯಾವುದೇ ಸಮಸ್ಯೆ ಇಲ್ಲ ಮಾಹಿತಿ ನೀಡುತ್ತೇವೆ ಎಂದು ಹೇಳಿದರು. ಪರಿಶಿಷ್ಟ ಜಾತಿಯವರ ಕಾಲೋನಿಗೆ ಕಾಂಕ್ರೀಟಿಕರಣಕ್ಕೆ ಹಣ ಮಂಜೂರಾಗಿದ್ದರೂ ಹಲವಾರು ಕಡೆ ಫಲಾನುಭವಿಗಳಿಗೆ ರಸ್ತೆಯ ಪ್ರಯೋಜನ ಸಿಗುತ್ತಿಲ್ಲ, ಇತರ ವರ್ಗದವರ ಮನೆಗಳು ಇರುವಲ್ಲಿ ರಸ್ತೆ ಅಭಿವೃದ್ದಿ ಮಾಡಲಾಗುತ್ತದೆ ಎಂಬ ಆರೋಪವೂ ವ್ಯಕ್ತವಾಯಿತು. ಕಡಬ ತಾಲೂಕಿನ ಸವಣೂರು ಮತ್ತು ಬೆಳ್ಳಾರೆ ಭಾಗದ ಗ್ರಾಮಾಂತರ ಪ್ರದೇಶಗಳಿಗೆ ಶನಿವಾರ ಮತ್ತು ಭಾನುವಾರ ಬಸ್ಸು ಬರುತ್ತಿಲ್ಲ ಎನ್ನುವ ಪ್ರಶ್ನೆಗೆ ಸಂಚಾರ ನಿಯಂತ್ರಕ ಅಬ್ಬಾಸ್ ರವರು ಉತ್ತರಿಸಿ, ಮುಂದೆ ಶನಿವಾರ ಮತ್ತು ಭಾನುವಾರ ಆ ರಸ್ತೆಯಲ್ಲಿ ಬಸ್ಸು ಓಡಿಸಲಾಗುವುದು ಎಂದರು.

ತಾ.ಪಂ. ಮಾಜಿ ಅಧ್ಯಕ್ಷರ ಮನೆಯ ಸಮೀಪ ನಿರ್ಮಿಸಲಾದ ಬಸ್ಸು ತಂಗುದಾಣದ ಶೀಟನ್ನು ತೆಗೆದು ಇನ್ನೊಂದು ಬಸ್ಸು ತಂಗುದಾಣಕ್ಕೆ ಅಳವಡಿಸಲಾಗಿದೆ. ಈಗ ಆ ಬಸ್ಸು ತಂಗುದಾಣ ಉಪಯೋಗಕ್ಕಿಲ್ಲವಾಗಿದೆ, ಬಸ್ಸು ತಂಗುದಾಣಕ್ಕೆ ಎರಡು ಬಿಲ್ ಮಾಡಲಾಗಿದೆ. ಈ ರೀತಿ ಹಲವಾರು ಕಡೆ ನಡೆದಿದೆ. ಈ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಲಾಯಿತು. ಈ ಬಗ್ಗೆ ತನಿಖೆ ಮಾಡುವುದಾಗಿ ತಾ.ಪಂ. ನಿರ್ದೇಶಕ ಚೆನ್ನಪ್ಪ ಗೌಡ ಉತ್ತರಿಸಿದರು. ರೆಂಜಿಲಾಡಿಯ ಬಿಂದು ಎಂಬವರು ತನ್ನ ಮನೆಗೆ ಹೋಗಲು ರಸ್ತೆ ಇಲ್ಲ ಎಂದು ನೂಜಿಬಾಳ್ತಿಲದಲ್ಲಿ ನಡೆದ ತಹಶೀಲ್ದಾರ ಗ್ರಾಮ ವಾಸ್ತವ್ಯದಲ್ಲಿ ಮನವಿ ನೀಡಿದ್ದರು ಬಳಿಕವೂ ಈ ಬಗ್ಗೆ ಮನವಿ ಮಾಡಿದರೂ ಈವರೆಗೆ ರಸ್ತೆ ನಿರ್ಮಾಣ ಆಗಿಲ್ಲ ಎಂದು ವಸಂತ ಕುಬಲಾಡಿಯವರು ಪ್ರಸ್ತಾಪಿಸಿದರು. ದಲಿತ ನಿಂದನೆ ಕಾನೂನಿನ ಬಗ್ಗೆ ಹೈಕೋರ್ಟ್ ತೀರ್ಪಿನ ಬಗ್ಗೆ ಉಲ್ಲೇಖಿಸಿ ದಲಿತ ಮುಖಂಡರು ಖಂಡನೆ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಸಭೆಯಲ್ಲಿ ಜಯಶ್ರೀ ಹೊಸಮಠ, ಆನಂದ ಹೊಸಮಠ, ಪುಷ್ಪಾ ಪಡುಬೆಟ್ಟು, ಅಣ್ಣು ದೊಳ್ಪಾಡಿ, ಆನಂದ ಮುದ್ವ ಸೇರಿದಂತೆ ಹಲವಾರು ಮಂದಿ ಚರ್ಚೆ ನಡೆಸಿದರು. ವೇದಿಕೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ, ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಕೃಷ್ಣ ಅವರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here