ಪುತ್ತೂರು:ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲಿ ದೌರ್ಜನ್ಯ ಅಂದರೆ ಏನು ಎಂಬ ಮಾಹಿತಿ ಪತ್ರವನ್ನು ಅಳವಡಿಸಬೇಕೆಂದು ತಹಶೀಲ್ದಾರ್ ನಿಸರ್ಗಪ್ರಿಯ ಅವರು ಸಮನ್ವಯ ಸಮಿತಿಯ ಜವಾಬ್ದಾರಿ ಇರುವ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ವರದಕ್ಷಿಣೆ ನಿಷೇಧ ಕಾಯಿದೆ, ಮಾದಕ ವಸ್ತು ಸೇವನೆ ನಿಷೇಧ ಕಾಯಿದೆ, ಸ್ತ್ರೀಶಕ್ತಿ ಯೋಜನೆಯ ಸಮನ್ವಯ ಸಮಿತಿ, ಮಕ್ಕಳ ಮಾರಾಟ ಮತ್ತು ಸಾಗಾಟ ತಡೆ ಸಮಿತಿ, ಬಾಲ್ಯ ವಿವಾಹ ನಿಷೇಧ ಕಾಯಿದೆ ಸಮಿತಿ, ಭಾಗ್ಯಲಕ್ಷ್ಮೀ ಯೋಜನೆಯ ಕ್ರಿಯಾತಂಡ, ಕೌಟುಂಬಿಕ ದೌರ್ಜನ್ಯ ತಡೆ ಸಮಿತಿ, ಮಕ್ಕಳ ರಕ್ಷಣಾ ಸಮಿತಿ, ವಿಕಲ ಚೇತನರ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಮಾತೃವಂದನಾ ಸಮಿತಿ, ಬೇಟಿ ಪಡಾವೊ-ಬೇಟಿ ಬಚಾವೊ ಸಮಿತಿ, ಗೆಳತಿ ವಿಶೇಷ ಚಿಕಿತ್ಸಾ ಘಟಕ, ಐಸಿಡಿಎಸ್ ಸಮನ್ವಯ ಸಮಿತಿಗಳ ಪ್ರಗತಿ ಪರಿಶೀಲನೆ ಜ.30ರಂದು ತಾ.ಪಂ ಸಭಾಂಗಣದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸಲಹಾ ಪೆಟ್ಟಿಗೆ ಸ್ಥಾಪನೆ, ಸುರಕ್ಷಾ ನಿಧಿ ಸ್ಥಾಪನೆ ಸೇರಿದಂತೆ ಅನೇಕ ನಿಯಮಗಳಿವೆ. ಇದನ್ನು ಎಲ್ಲರೂ ಪಾಲಿಸಬೇಕು. ಅನೇಕ ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಬೇಕು. 18 ವರ್ಷದ ಕೆಳಗಿನ ಮಕ್ಕಳು ಖಿನ್ನತೆಯಿಂದ ಅಥವಾ ಶಾಲೆಗೆ ನಿರಂತರ ಗೈರಾಗಿರುವ ಅಥವಾ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ಮಾಡಿ 15 ದಿನದೊಳಗೆ ಕೊಡುವಂತೆ ತಹಶೀಲ್ದಾರ್ ನಿಸರ್ಗಪ್ರಿಯ ಅವರು ಸಿಡಿಪಿ ಇಲಾಖೆಗೆ ಸೂಚನೆ ನೀಡಿದರು.ಈ ಕುರಿತು ಶಿಕ್ಷಣ ಇಲಾಖೆಗೂ ಪತ್ರ ಬರೆಯುವಂತೆ ಅವರು ಸೂಚಿಸಿದರು.
ವಿಕಲಚೇತನರಿಗೆ ಬಸ್ ಪಾಸ್ ಶಿಬಿರ: ವಿಕಲಚೇತನರಿಗೆ ಬಸ್ ಪಾಸ್ ನೀಡುವ ಸೌಲಭ್ಯದಲ್ಲಿ ವಿಕಲಚೇತನರು ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ.ಬಸ್ಪಾಸ್ ಮಾಡಿಸಲೆಂದು ಕೆಎಸ್ಆರ್ಟಿಸಿ ಡಿಪೋಗೆ ಬಂದಾಗ ಇಲ್ಲಿ ಸರ್ವರ್ ಸಮಸ್ಯೆ ಎಂದು ಹಿಂದಕ್ಕೆ ಕಳುಹಿಸುತ್ತಿದ್ದಾರೆ ಎಂಬ ಆರೋಪ ಸಭೆಯಿಂದ ಕೇಳಿ ಬಂತು. ಉತ್ತರಿಸಿದ ತಹಸೀಲ್ದಾರ್ ಅವರು ಈ ಕುರಿತು ಕೆಎಸ್ಸಾರ್ಟಿಸಿ ಸಂಸ್ಥೆಗೆ ಮನವಿ ಮಾಡಿ ಬಸ್ ಪಾಸ್ ಕೊಡಿಸುವ ವಿಶೇಷ ಕ್ಯಾಂಪ್ ಮಾಡೋಣ ಎಂದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಅವರು ಮಾತನಾಡಿ ಯುಡಿಐಡಿ ಕಾರ್ಡ್ ಅವಧಿಯು ಮುಗಿಯುತ್ತಾ ಬರುತ್ತಿದೆ. ಹೊಸದಾಗಿ ಸೇರ್ಪಡೆಯನ್ನೂ ಮಾಡಲಾಗುತ್ತಿದೆ ಎಂದರು. ವಿಕಲಚೇತನರ ಪುನರ್ವಸತಿ ಯೋಜನೆಯ ನವೀನ್ ಅವರು ಮಾತನಾಡಿ ಬೆಟ್ಟಂಪಾಡಿಯ ಅಜೇರಿನಲ್ಲಿ ಮೂರು ಮಂದಿ ವಿಕಲಚೇತನರಿಗೆ ದಾರಿಯ ಸಮಸ್ಯೆ ಇದೆ ಎಂದು ಪ್ರಸ್ತಾಪಿಸಿದರು.
6 ವರ್ಷದ ಬಳಿಕ ಭಾಗ್ಯಲಕ್ಷ್ಮೀ ಬಾಂಡ್ ರಿಟರ್ನ್ !: ಸಮನ್ವಯ ಸಮಿತಿ ಸದಸ್ಯೆ ಉಷಾ ಅಂಚನ್ ಅವರು ಮಾತನಾಡಿ ನೆಲ್ಯಾಡಿಯಲ್ಲಿ ಮಹಿಳೆಯೊಬ್ಬರ ಮಗಳಿಗೆ ಮಾಡಿದ ಭಾಗ್ಯಲಕ್ಷ್ಮೀ ಯೋಜನೆ ಬಾಂಡ್ ಆರು ವರ್ಷದ ಬಳಿಕ ರಿಟರ್ನ್ ಆಗಿದೆ. ಆ ಮಹಿಳೆ ತುಂಬಾ ನೊಂದು ಕೊಂಡಿರುವುದಾಗಿ ಪ್ರಸ್ತಾಪಿಸಿದರು. ಉತ್ತರಿಸಿದ ಅಂಗನವಾಡಿ ಮೇಲ್ಚಿಚಾರಕರು 2015ರಲ್ಲಿ 4 ಮಕ್ಕಳಿಗೆ ಇದ್ದ ಬಾಂಡ್ ಸೌಲಭ್ಯ 2017ರಲ್ಲಿ ಅದು ಮೂರಕ್ಕೆ ಇಳಿಸಲಾಗಿತ್ತು. ಆ ಮಾನದಂಡದಂತೆ ಬಾಂಡ್ ರಿಟರ್ನ್ ಆಗಿದೆ ಎಂದರು. ಆಕ್ಷೇಪಿಸಿದ ಉಷಾ ಅಂಚನ್ ಅನಕ್ಷರಸ್ಥರಿಗೆ ಇದು ಅರ್ಥ ಆಗುವುದಿಲ್ಲ. ಒಂದು ವೇಳೆ ಅಗುವುದಿಲ್ಲ ಎಂದಾದರೆ ಆರಂಭದಲ್ಲೇ ತಿಳಿಸಬೇಕು ಎಂದರು. ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಸುನಿಲ್, ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಎಸ್. ರವಿ ಮಕ್ಕಳ ದೌರ್ಜನ್ಯ ಕುರಿತು ವಿವಿಧ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ನಗರಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಉಪಸ್ಥಿತರಿದ್ದರು. ಸಮನ್ವಯ ಸಮಿತಿ ಸದಸ್ಯೆ ಜೊಹರಾ ನಿಸಾರ್, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಎಮ್.ಎನ್ ರಾವ್ ಉಪಸ್ಥಿತರಿದ್ದರು.