ಸಿಎಲ್‌ಸಿಯಿಂದ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ  30ನೇ ವರ್ಷದ ಮೊ|ಪತ್ರಾವೋ ಅಂತರ್-ವಾಳೆ ಕ್ರಿಕೆಟ್

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಅಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‌ಸಿ) ಸಂಸ್ಥೆಯ ವತಿಯಿಂದ ‘ಒಗ್ಗಟ್ಟಿಗಾಗಿ ಕ್ರೀಡೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ವರ್ಷಂಪ್ರತಿ ಹಮ್ಮಿಕೊಳ್ಳುವ ಮೊ|ಆಂಟನಿ ಪತ್ರಾವೋ ಸ್ಮರಣಾರ್ಥ 30ನೇ ವರ್ಷದ ಅಂತರ್-ವಾಳೆ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ.5 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್‌ನ ಕ್ರೀಡಾಂಗಣದಲ್ಲಿ ಜರಗಲಿದೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್‌ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸೋಜಾ ಮೆಟಲ್ ಮಾರ್ಟ್ ಮಳಿಗೆಯ ಮಾಲಕ ದೀಪಕ್ ಮಿನೇಜಸ್ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋರವರು ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಪಂದ್ಯಾಟ ಆರಂಭವಾಗುವ ಮೊದಲು ಸಿಎಲ್‌ಸಿ ಅಧ್ಯಕ್ಷ ಮಾರ್ಟಿನ್ ಡಿ’ಸೋಜರವರು ಫಿಲೋಮಿನಾ ಪ್ರೌಢಶಾಲೆಯ ಬಳಿಯಿರುವ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಿದ್ದಾರೆ.

ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ 19 ವಾಳೆಗಳ ಪೈಕಿ 16 ವಾಳೆಗಳಾದ ಬಲ್ನಾಡು, ದರ್ಬೆ, ಗುಂಡ್ಯಡ್ಕ, ಹಾರಾಡಿ, ಕಲ್ಲಾರೆ, ಪದವು, ಪಾಂಗ್ಲಾಯಿ, ಪರ್ಲಡ್ಕ, ನಿತ್ಯಾಧರ್, ಪುತ್ತೂರು, ರೋಟರಿಪುರ, ಸಾಲ್ಮರ, ಸಾಮೆತ್ತಡ್ಕ, ಸಂಟ್ಯಾರು, ಶಿಂಗಾಣಿ, ತೆಂಕಿಲ ವಾಳೆ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸುತ್ತಿದೆ ಎಂದು ಸಿಎಲ್‌ಸಿ ಸಂಸ್ಥೆಯ ಅಧ್ಯಕ್ಷ ಮಾರ್ಟಿನ್ ಡಿ’ಸೋಜ, ಕಾರ್ಯದರ್ಶಿ ವಿಲಿಯಂ ನೊರೋನ್ಹಾ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಡಿ’ಸೋಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾರಾಗಲಿದ್ದಾರೆ ಈ ಬಾರಿಯ ಚಾಂಪಿಯನ್?

ಕಳೆದ ವರ್ಷದ ಪಂದ್ಯಕೂಟದಲ್ಲಿ ಬಲಿಷ್ಟ ತಂಡಗಳಾದ ಸಾಮೆತ್ತಡ್ಕ, ಕಲ್ಲಾರೆ, ಸಂಟ್ಯಾರು ಹಾಗೂ ತೆಂಕಿಲ ವಾಳೆ ತಂಡಗಳು ಸೆಮಿಫೈನಲ್ ಘಟ್ಟವನ್ನು ಪ್ರವೇಶಿಸಿದ್ದು, ಅಂತಿಮವಾಗಿ ಸಾಮೆತ್ತಡ್ಕ ಹಾಗೂ ಸಂಟ್ಯಾರು ವಾಳೆ ತಂಡಗಳು ಫೈನಲಿಗೆ ತಲುಪಿದ್ದವು. ಫೈನಲಿನಲ್ಲಿ ಸಾಮೆತ್ತಡ್ಕ ವಾಳೆಯು ಚಾಂಪಿಯನ್ ಆಗಿ ಮೂಡಿ ಬಂದಿದ್ದು, ಸಂಟ್ಯಾರು ವಾಳೆಯು ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತ್ತು. ಈ ಬಾರಿಯ ರೋಚಕ ಹೋರಾಟದಲ್ಲಿ ಯಾವ ವಾಳೆಯು ಮೊ|ಪತ್ರಾವೋ ಟ್ರೋಫಿ ಚಾಂಪಿಯನ್ ಎನಿಸಿಕೊಳ್ಳುತ್ತದೆ ಎಂದು ಆದಿತ್ಯವಾರ ಸಂಜೆಯವರೆಗೆ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here