ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ, ದರ್ಶನ ಬಲಿ

0

ಪುತ್ತೂರು:ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಹಾಗೂ ಪೂಮಾಣಿ-ಕಿನ್ನಿಮಾಣಿ ಮತ್ತು ರಾಜನ್ ದೈವಗಳ ಕದಿಕೆ ಚಾವಡಿ ಬೆಂದ್ರ್‌ತೀರ್ಥದಲ್ಲಿ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಫೆ.3ರಂದು ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನೆರವೇರಿತು.


ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಪ್ರಾತ:ಕಾಲ ಪೂಜೆ, ದರ್ಶನ ಬಲಿ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ಅಪರಾಹ್ನ ದೈವಗಳ ತಂಬಿಲ, ಸಂಜೆ ಕದಿಕೆ ಚಾವಡಿಯಲ್ಲಿ ಮಕರ ತೋರಣ ಏರಿಸುವುದು, ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ, ದುರ್ಗಾಪರಮೇಶ್ವರಿ ದೇವಿಗೆ ಹೂವಿನ ಪೂಜೆ, ವಿಷ್ಣುಮೂರ್ತಿ ದೇವರಿಗೆ ರಂಗಪೂಜೆಯ ಬಳಿಕ ದೈವಗಳ ಭಂಡಾರವು ದೇವಸ್ಥಾನದಿಂದ ಹೊರಟು ಕದಿಕೆ ಚಾವಡಿಗೆ ಆಗಮಿಸಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.


ಇಂದಿನಿಂದ ನೇಮೋತ್ಸವ:

ಜಾತ್ರೋತ್ಸವದಲ್ಲಿ ಫೆ.4ರಿಂದ ಕದಿಕೆ ಚಾವಡಿಯಲ್ಲಿ ದೈವಗಳ ನೇಮೋತ್ಸವ ನಡೆಯಲಿದ್ದು ಪ್ರಥಮ ದಿನ ಕಿನ್ನಿಮಾಣಿ ದೈವ, ಫೆ.5ರಂದು ಪೂಮಾಣಿ ದೈವ, ಫೆ.6ರಂದು ಮಲರಾಯ ಮತ್ತು ರಾಜನ್ ದೈವ(ಹುಲಿಭೂತ)ಗಳ ನೇಮ ನಡೆಯಲಿದೆ. ಸಂಜೆ ನವಕ ಗಣಹೋಮ, ತಂಬಿಲ, ದೈವಗಳ ಭಂಡಾರ ಕದಿಕೆ ಚಾವಡಿಯಿಂದ ದೇವಸ್ಥಾನಕ್ಕೆ ಆಗಮನ ಬಳಿಕ ದೇವಾಲಯದಲ್ಲಿ ಪಿಲಿಚಾಮುಂಡಿ ದೈವದ ನೇಮ ನಡೆದು ರಾತ್ರಿ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೈವಗಳ ಭಂಡಾರ ನಿರ್ಗಮನದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here