ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿ 75ರ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು, ಕುಮಾರಧಾರ ನದಿಗೆ ಸೇತುವೆಯ ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಈ ನಡುವೆ ಕೂಟೇಲು ದಡ್ಡು ಸಮೀಪದಿಂದ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಲಾಗಿದ್ದು ಪರಿಸರ ಧೂಳಿನಿಂದ ಆವೃತ್ತವಾಗಿದೆ.
ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಮಾಡಬೇಕಾಗಿರುವುದು ಸಂಬಂಧಿಸಿದವರ ಜವಾಬ್ದಾರಿಯಾಗಿರುತ್ತದೆ. ಆದರೆ ಉಪ್ಪಿನಂಗಡಿ ಪರಿಸರದಲ್ಲಿ ನಡೆಯುತ್ತಿರುವ ಕಾಮಗಾರಿಯ ವೇಳೆ ಧೂಳಿನಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದ್ದು ಇದಕ್ಕೆ ಹೆದ್ದಾರಿ ಇಲಾಖೆಯೇ ನೇರ ಹೊಣೆಗಾರರಾಗಿರುತ್ತಾರೆ.
ಕೂಟೇಲು ಪರಿಸರದಲ್ಲಿ ಶಾಲೆಗಳು, ಕೈಗಾರಿಕೆಗಳು, ಮನೆಗಳಿದ್ದು ರಸ್ತೆಯದ್ದಕ್ಕೂ ಮಣ್ಣು ರಾಶಿ ಹಾಕಿದ್ದು ವಾಹನಗಳ ಸಂಚಾರದ ವೇಳೆ, ಗಾಳಿ ಬರುವ ವೇಳೆ ಧೂಳು ಎದ್ದು ಬರುತ್ತಿದ್ದು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೀರು ಸಿಂಪಡನೆ ಮಾಡಲಿ
ರಸ್ತೆ ಅಗಲೀಕರಣಕ್ಕೆ ಮಣ್ಣು ಹಾಕಿದರೆ ಅದಕ್ಕೆ ನೀರು ಹಾಕಿ ಧೂಳು ಬಾರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರದ್ದು. ಕೂಟೇಲು ಪರಿಸರದಲ್ಲಿ ಅತೀ ಹೆಚ್ಚು ಸಮಸ್ಯೆ ಉಂಟಾಗಿದ್ದು ಇಲ್ಲಿ ನೀರು ಸಿಂಪಡನೆ ಮಾಡಿಯೇ ಇಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕರು. ಎಲ್ಲಾ ಕಡೆಗಳಲ್ಲಿ ರಸ್ತೆ ಕಾಮಗಾರಿ ಮಾಡುವಾಗ ದೂಳು ಉಂಟಾದರೆ ಅದನ್ನು ನೀರು ಹಾಕಿ ಪರಿಹಾರ ಮಾಡುತ್ತಾರೆ. ಆದರೆ ಉಪ್ಪಿನಂಗಡಿಯಲ್ಲಿ ಯಾಕೆ ಹೀಗಾಯ್ತು ಎಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಗುತ್ತಿಗೆದಾರರಿಗೆ, ಇಲಾಖಾ ಇಂಜನಿಯರ್‌ಗಳಿಗೆ ಕರೆ ಮಾಡಿ ಹೇಳಿದರೆ ಧೂಳು ಬಾರದಂತೆ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದ್ದಾರೆ ವಿನಃ ವ್ಯವಸ್ಥೆ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಕೂಟೇಲು ಪರಿಸರದಲ್ಲಿ ಸಮಸ್ಯೆಯಾಗಿದೆ. ಅಲ್ಲಿ ಶಾಲೆಯಿದ್ದು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಹೇಳಿದ್ದರು. ಕೂಡಲೇ ಟ್ಯಾಂಕರ್ ಮೂಲಕ ನೀರು ಹಾಕಿಸುವ ವ್ಯವಸ್ಥೆಯನ್ನು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಮುಕ್ತ ನೀಡುತ್ತೇವೆ
ನಿಖಿತ್, ಇಂಜನಿಯರ್ ಹೆದ್ದಾರಿ ಇಲಾಖೆ
ದೂಳಿನಿಂದ ತುಂಬಾ ತೊಂದರೆಯಾಗುತ್ತಿದೆ, ಕೆಲವು ಮಕ್ಕಳಿಗೆ ದೂಳಿನ ಕಾರಣಕ್ಕೆ ಅಲರ್ಜಿಯಾಗಿದೆ. ರಸ್ತೆಗೆ ನೀರು ಹಾಕಿ ದೂಳುಬಾರದಂತೆ ನೋಡಿಕೊಳ್ಳಬೇಕು. ದೂಳು ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ತೊಂದರೆ ಕೊಡುತ್ತದೆ. ಸಂಬಂಧಪಟ್ಟ ಅದಿಕಾರಿಗಳು ತಕ್ಷಣ ಸ್ಪಂದಿಸಬೇಕು
ಅದ್ದು ಕೂಟೆಲು, ಸ್ಥಳೀಯರು