ಉಪ್ಪಿನಂಗಡಿ: ಸರಕಾರ ಜಾರಿಗೆ ತಂದಿರುವ ಭೂಮಿ ಕರದ ವಿರುದ್ಧ 34 ನೆಕ್ಕಿಲಾಡಿ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇದರ ರದ್ಧತಿ ಕೋರಿ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಗಿದೆ.
ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಅವರ ಅಧ್ಯಕ್ಷತೆಯಲ್ಲಿ ಫೆ.2ರಂದು ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಲಂದರ್ ಶಾಫಿ, ಕನ್ವರ್ಷನ್ ಆದ ಜಾಗಕ್ಕೆ ಭೂಮಿ ಕರ ಕಟ್ಟಬೇಕೆಂದು ಸರಕಾರದ ಆದೇಶವಿದೆ. ಉದಾಹರಣೆಗೆ ಓರ್ವ 10 ಸೆಂಟ್ಸ್ ಜಾಗ ಕನ್ವರ್ಷನ್ ಮಾಡಿಕೊಂಡು ಅದರ ಐದು ಸೆಂಟ್ಸ್‌ನಲ್ಲಿ ಮನೆಯೊಂದನ್ನು ನಿರ್ಮಿಸಿದರೆ ಈಗಿನ ಆದೇಶದ ಪ್ರಕಾರ ಕನ್ವರ್ಷನ್ ಆಗಿರುವ ಆ 10 ಸೆಂಟ್ಸ್ ಜಾಗಕ್ಕೂ ತೆರಿಗೆ ಕಟ್ಟಬೇಕು. ಇದರೊಂದಿಗೆ ಅದೇ ಜಾಗದಲ್ಲಿ ನಿರ್ಮಿಸಿದ ಮನೆಗೂ ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಮನೆಗೆ ಬೇರೆ ಜಾಗಕ್ಕೆ ಬೇರೆ ತೆರಿಗೆಗಳನ್ನು ಕಟ್ಟಬೇಕಾಗುತ್ತದೆ. ಜನಸಾಮಾನ್ಯರಿಗೆ ಎರಡೆರಡು ತೆರಿಗೆಯ ಹೊರೆ ಬೀಳುತ್ತದೆ ಎಂದರು.
ಆಗ ಮಾತನಾಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಡಿ., ಈ ವರ್ಷ 9/11 ಮಾಡಿಕೊಂಡವರು ಭೂಮಿ ಕರವನ್ನು ಕಾನೂನು ಪ್ರಕಾರ ಕಟ್ಟಲೇ ಬೇಕು ಎಂದರು. ಆಗ ಕಲಂದರ್ ಶಾಫಿ ಮಾತನಾಡಿ, ಕನ್ವರ್ಷನ್ ಆದ ಜಾಗಕ್ಕೆ ಪ್ರತ್ಯೇಕ ಹಾಗೂ ಅದರಲ್ಲಿ ನಿರ್ಮಿಸಿದ ಮನೆಗೆ ಪ್ರತ್ಯೇಕ ತೆರಿಗೆ ಕಟ್ಟಬೇಕೆನ್ನುವುದು ಸರಿಯಲ್ಲ. ಇದು ಸರಕಾರ ಜನಸಾಮಾನ್ಯರನ್ನು ದರೋಡೆ ಮಾಡುವಂತಾಯಿತು. ಗ್ರಾಮಾಂತರ ಪ್ರದೇಶಕ್ಕೆ ಈ ಕಾನೂನು ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭೂಮಿ ಕರದ ಬಗ್ಗೆ ಸಭೆಯಲ್ಲಿ ಇನ್ನಷ್ಟು ಆಕ್ಷೇಪಗಳು ಕೇಳಿ ಬಂದು, ಕೊನೆಗೆ ಇದರ ರದ್ಧತಿಗೆ ಕೋರಿ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಕಾಟಾಚಾರಕ್ಕೆ ಸರಕಾರಿ ಶಾಲೆಗೆ ಕಲಿಸಬೇಕಾ?:
ಸರಕಾರ ಹೇಳುತ್ತದೆ ಸರಕಾರಿ ಶಾಲೆಗೆ ಮಕ್ಕಳನ್ನು ಕಲಿಸಿ. ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು. ಆದರೆ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಮತ್ತೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ. ಇದರೊಂದಿಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ನಮಗೂ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಲಿಸಬೇಕೆನ್ನುವ ಹಂಬಲವಿಲ್ಲ. ಆದರೆ ಅವರಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಕನಸಿದೆ. ಸರಕಾರಿ ಶಾಲೆಯಲ್ಲಿ ಅದು ಸಿಗುವುದಾದರೆ ನಾವು ಯಾಕೆ ಖಾಸಗಿ ಶಾಲೆಗೆ ಕಲಿಸುತ್ತೇವೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ತುಂಬಾ ಇದೆ. ಪರಿಸ್ಥಿತಿ ಹೀಗಿರುವಾಗ ನಾವು ನಮ್ಮ ಮಕ್ಕಳನ್ನು ಕಾಟಾಚಾರಕ್ಕೆ ಸರಕಾರಿ ಶಾಲೆಗೆ ಕಲಿಸಬೇಕಾ? ಮೊದಲು ಸರಕಾರಿ ಶಾಲೆಗಳಲ್ಲಿ ತರಗತಿಗೊಂದು ಶಿಕ್ಷಕರನ್ನು ಕೊಡಿ. ಗುಣಮಟ್ಟದ ಶಿಕ್ಷಣವನ್ನು ನೀಡಿ. ಹಾಗಾದಾಗ ಸರಕಾರಿ ಶಾಲೆಯೂ ಮಕ್ಕಳಿಂದ ತುಂಬಿತುಳುಕುತ್ತದೆ ಎಂದು ಕಲಂದರ್ ಶಾಫಿ ಆಕ್ರೋಶ ಭರಿತರಾಗಿಯೇ ನುಡಿದರು. ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ಇತರರೂ ಸಭೆಯಲ್ಲಿ ಧ್ವನಿಯೆತ್ತಿದರು.
ಪ್ರತಿಭಟನೆಯ ಎಚ್ಚರಿಕೆ:
ತಾಳೆಹಿತ್ಲುವಿನಲ್ಲಿ ಗ್ರಾ.ಪಂ.ನ ಪಂಪ್ ಚಾಲಕನೋರ್ವ ಗ್ರಾ.ಪಂ.ಗೆ ಸೇರಿದ ಕೊಳವೆ ಬಾವಿಗೆ ಹಾಗೂ ಪಂಪ್ ಹೌಸ್‌ನ ಸುತ್ತ ಬೇಲಿ ಹಾಕಿ ಅತಿಕ್ರಮಿಸಿಕೊಂಡಿದ್ದು, ಇದನ್ನು ಯಾಕೆ ತೆರವು ಮಾಡಿಲ್ಲ ಎಂದು ಅಬ್ದುರ್ರಹ್ಮಾನ್ ಯುನಿಕ್ ಪ್ರಶ್ನಿಸಿದರು. ಆಗ ಪಿಡಿಒ ಯೋಚನಾಮಗ್ನರಾದಾಗ, ಯಾಕೆ ಸರ್ ಆಶ್ಚರ್ಯಚಕಿತರಂತೆ ಗೊತ್ತಿಲ್ಲದಂತೆ ಮಾಡುತ್ತೀರಿ. ನಿಮ್ಮ ಗಮನಕ್ಕೆ ಅದನ್ನು ತರಲಾಗಿದೆಯಲ್ಲವೇ ಎಂದು ಅನಿ ಮಿನೇಜಸ್ ಪ್ರಶ್ನಿಸಿದರು. ಆಗ ಪಿಡಿಒ ತೆರವಿಗೆ ಹೇಳಿದ್ದೇನೆ ಎಂದರು. ಆಗ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಗ್ರಾ.ಪಂ. ಆಸ್ತಿಯನ್ನು ರಕ್ಷಣೆ ಮಾಡುವುದು ನಿಮ್ಮ ಜವಾಬ್ದಾರಿ. ಆದ್ದರಿಂದ 15 ದಿನಗಳೊಳಗೆ ಆ ಬೇಲಿಯನ್ನು ತೆರವು ಮಾಡಬೇಕು. ತಪ್ಪಿದ್ದಲ್ಲಿ ಗ್ರಾ.ಪಂ. ಮುಂದೆ ಸಾರ್ವಜನಿಕರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೈಕೋರ್ಟ್‌ಗೆ ರಿಟ್:
ಜತೀಂದ್ರ ಶೆಟ್ಟಿ ಅಲಿಮಾರ್ ಮಾತನಾಡಿ, ಗ್ರಾಮ ಸಭೆಯ ಆಮಂತ್ರಣದಲ್ಲಿ ಒಂದು ಕಡೆ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟವರು, ಇನ್ನೊಂದು ಕಡೆ ಮತದಾರರು ಗ್ರಾಮ ಸಭೆಯಲ್ಲಿ ಭಾಗವಹಿಸಬೇಕಂದು ಇದೆ. ತೆರಿಗೆಯ ವಿಚಾರ ಬಂದಾಗ ಗ್ರಾಮಸ್ಥರು ಎಂದು ಇರುತ್ತದೆ. ಈ ಬಗ್ಗೆ ಕಳೆದ ಸುಮಾರು 12 ವರ್ಷಗಳಿಂದ ನಾನು ಧ್ವನಿಯೆತ್ತುತ್ತಲೇ ಇದ್ದೇನೆ. ಇನ್ನೂ ಈ ಬಗ್ಗೆ ನನಗೆ ಸ್ಪಷ್ಟತೆ ಸಿಕ್ಕಿಲ್ಲ. ಮತದಾರನಲ್ಲದವನಿಗೂ ಗ್ರಾಮಸ್ಥನಿಗೂ ಗ್ರಾಮ ಸಭೆಯಲ್ಲಿ ಮಾತನಾಡುವ ಹಕ್ಕು ನೀಡಬೇಕು. ಈ ಬಗ್ಗೆ ಸದ್ಯದಲ್ಲೇ ಹೈಕೋರ್ಟ್‌ನಲ್ಲಿ ರಿಟ್ ಫೈಲ್ ಮಾಡುತ್ತೇನೆ ಎಂದರು.
ವೈದ್ಯರ ಕೊರತೆ ನೀಗಿಸಿ:
ಉಪ್ಪಿನಂಗಡಿ ಸಮುದಾಯ ಆಸ್ಪತ್ರೆ ಹೆಸರಿಗೆ ಮಾತ್ರ ಮೇಲ್ದರ್ಜೆಗೇರಿದೆ. ಆದರೆ ಅಲ್ಲಿ ಎಕ್ಸ್‌ರೇ, ಸ್ಕ್ಯಾನಿಂಗ್ ಮೆಷಿನ್‌ಗಳಿಲ್ಲ. ವೈದ್ಯರ ಕೊರತೆನೂ ಇದೆ ಎಂದು ಅಬ್ದುರ್ರಹ್ಮಾನ್ ಯುನಿಕ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ಕಲಂದರ್ ಶಾಫಿ ಮಾತನಾಡಿ, ಸಮುದಾಯ ಆಸ್ಪತ್ರೆಯಲ್ಲಿ ಹೆಚ್ಚಿನ ಔಷಧಿಗಳಿಗೆ ಹೊರಗಿನ ಮೆಡಿಕಲ್‌ಗಳಿಗೆ ಚೀಟಿ ನೀಡುತ್ತಾರೆಂಬ ಆರೋಪವಿದೆ. ಉಚಿತವಾಗಿ ಔಷಧಿ ವಿತರಿಸಲು ಸಾಧ್ಯವಾಗದಿದ್ದರೆ, ಸರಕಾರಿ ಆಸ್ಪತ್ರೆಯ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರಲ್ಲದೆ, ಔಷಧಿಗಳಿಗೆ ಹೊರಗಡೆ ಚೀಟಿ ನೀಡುವುದಾದರೆ ಖಾಸಗಿ ಕ್ಲಿನಿಕ್‌ಗಳಿಗೆ ಹೋಗುವುದು ಉತ್ತಮವಲ್ಲವೇ ಎಂದರು. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ ಉಪ್ಪಿನಂಗಡಿಯ ಸಮುದಾಯ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆ ನೀಗಿಸಲು ಹಾಗೂ ಅಲ್ಲಿ ಅಗತ್ಯವಿರುವ ಆರೋಗ್ಯ ತಪಾಸಣಾ ಯಂತ್ರಗಳನ್ನು ಪೂರೈಕೆ ಮಾಡಲು ಸರಕಾರವನ್ನು ಕೋರಿ ಪತ್ರ ಬರೆಯಲು ನಿರ್ಣಯಿಸಲಾಯಿತು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಖಾ ಮಾತನಾಡಿ, ಹಾವು ಕಡಿತಕ್ಕೆ ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿದೆ. ಆದರೆ ಲಸಿಕೆ ಕೊಟ್ಟು ಹಾವು ಕಡಿತಕ್ಕೊಳಗಾದವರನ್ನು ತೀವ್ರ ನಿಗಾ ಘಟಕದಲ್ಲಿರಿಸಬೇಕು. ಆದರೆ ಇಲ್ಲಿ ಐಸಿಯುನ ಸೌಲಭ್ಯ ಇಲ್ಲ. ಆದ್ದರಿಂದ ಇಲ್ಲಿಗೆ ಬಂದವರಿಗೆ ತಕ್ಷಣಕ್ಕೆ ಇಲ್ಲಿ ಒಂದು ಡೋಸ್ ಮಾತ್ರ ಲಸಿಕೆಯನ್ನು ಕೊಟ್ಟು ಬಳಿಕ ಅವರನ್ನು ಬೇರೆ ಆಸ್ಪತ್ರೆಗೆ ಕಳಿಸಲಾಗುತ್ತದೆ ಎಂದರು.
ನೀರಿನ ಬಿಲ್ ಸರಿಯಾಗಿ ವಸೂಲಾತಿಯಾಗುತ್ತಿಲ್ಲ:
ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಬಿಲ್ ಅನ್ನು ತಿಂಗಳು ತಿಂಗಳು ಸರಿಯಾಗಿ ವಸೂಲಿ ಮಾಡಲಾಗುತ್ತಿಲ್ಲ. ನಾವೇ ಏನಾದರೂ ಕೆಲಸಕ್ಕೆ ಗ್ರಾ.ಪಂ.ಗೆ ಬಂದಾಗ ಕಟ್ಟಿ ಹೋಗಬೇಕಾಗುತ್ತದೆ. ನಾಲ್ಕೈದು ತಿಂಗಳ ಬಿಲ್ ಅನ್ನು ಒಮ್ಮೆಲೇ ಕೊಟ್ಟರೆ ಗ್ರಾಹಕರಿಗೂ ಹೊರೆಯಾಗುತ್ತದೆ. ನೀರಿನ ಬಿಲ್ ವಸೂಲಿಗೆಂದೇ ಸಿಬ್ಬಂದಿ ಇದ್ದಾರೆ. ಆದರೆ ನೀರಿನ ಬಿಲ್ ಸರಿಯಾಗಿ ವಸೂಲಾತಿ ಸರಿಯಾಗಿ ಮಾಡದಿದ್ದಲ್ಲಿ ಆ ಹುದ್ದೆಯ ಅವಶ್ಯಕತೆ ಗ್ರಾ.ಪಂ.ಗೆ ಏನು ಎಂದು ಅಮಿತಾ ಹರೀಶ್ ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಮಾರ್ಚ್‌ನಿಂದ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ಪುತ್ತೂರು – ಉಪ್ಪಿನಂಗಡಿ ರಸ್ತೆ ವಿಸ್ತರಣೆಯ ಸಂದರ್ಭ ಲೋಕೋಪಯೋಗಿ ಇಲಾಖೆ ಬಡವರಿಗೆ ಒಂದು ನ್ಯಾಯ, ಶ್ರೀಮಂತನಿಗೊಂದು ನ್ಯಾಯ ಎಂಬ ನೀತಿ ಅನುಸರಿಸುತ್ತಿದೆ. ಕೋಡಿಂಬಾಡಿಯಲ್ಲಿ ಶ್ರೀಮಂತ ವ್ಯಕ್ತಿಯೋರ್ವರ ಜಾಗದ ಬದಿ ತಡೆಗೋಡೆ ಕಟ್ಟಿ ಕೊಟ್ಟಿದ್ದಾರೆ. ಆದರೆ ಶಾಂತಿನಗರದಲ್ಲಿ ಒಂದೆರಡು ಮನೆಗಳಿಗೆ ಸರಿಯಾದ ದಾರಿಯೂ ಇಲ್ಲ. ವಿಸ್ತರಣೆಯ ಸಂದರ್ಭ ಮನೆಯ ಬದಿಯವರೆಗೆ ಅಗೆಯಲಾಗಿದೆ. ಅಲ್ಲಿಗೆ ಯಾಕೆ ತಡೆಗೋಡೆ ಕಟ್ಟಿಕೊಡುವುದಿಲ್ಲ ಎಂದು ಗ್ರಾಮಸಭೆಯಲ್ಲಿ ಪ್ರಸ್ತಾಪವಾದಾಗ, ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಮಾತನಾಡಿ, ಇದು ನಮ್ಮ ಗಮನಕ್ಕೂ ಬಂದಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯವರನ್ನು ಕೇಳಿದಾಗ ಅವರು ತಡೆಗೋಡೆ ನಾವು ನಿರ್ಮಿಸಿದ್ದಲ್ಲ. ಖಾಸಗಿ ವ್ಯಕ್ತಿಯೇ ನಿರ್ಮಿಸಿದ್ದು ಎಂದು ಹೇಳುತ್ತಾರೆ. ಆದರೆ ಅದು ಲೋಕೋಪಯೋಗಿ ಇಲಾಖೆಯವರೇ ನಿರ್ಮಿಸಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ ಎಂದರು. ಈ ಬಗ್ಗೆ ಚರ್ಚೆಯಾಗಿ ಲೋಕೋಪಯೋಗಿ ಇಲಾಖೆ ಮಾಡಿದ್ದರೆ, ಈ ರೀತಿ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತ್ತಲ್ಲದೆ, ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ರಸ್ತೆ ವಿಸ್ತರಣೆಗೆ ಜಾಗ ಅಗೆದಾಗ ಅಗತ್ಯವಿದ್ದ ಕಡೆ ತಡೆಗೋಡೆ ನಿರ್ಮಿಸಬೇಕೆಂದು ನಿರ್ಣಯಿಸಿ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿ.ಪಂ. ರಸ್ತೆಗಳು ಅತಿಕ್ರಮಣವಾಗುತ್ತಿವೆ. ಈ ಬಗ್ಗೆ ನಾನು ಹಲವು ವರ್ಷಗಳಿಂದ ಧ್ವನಿಯೆತ್ತಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂದು ನಿರಾಲದ ಗುರುರಾಜ್ ಭಟ್ ತಿಳಿಸಿದರು. ಇದಕ್ಕುತ್ತರಿಸಿದ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್., ರಸ್ತೆ ಮಾರ್ಜಿನ್ ಅತಿಕ್ರಮಿಸಿಕೊಂಡಿರುವುದರ ತೆರವಿಗೆ ಈಗಾಗಲೇ ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ ಎಂದರು. ಬೇರಿಕೆ ಪೊಲೀಸ್ ಕ್ವಾಟ್ರಸ್‌ನಲ್ಲಿ ಇಂಗು ಗುಂಡಿಯಿಂದ ನೀರು ಹೊರಚೆಲ್ಲಿ ಖಾಸಗಿ ವ್ಯಕ್ತಿಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಲಿಖಿತ ನೊಟೀಸ್ ನೀಡಲು ನಿರ್ಣಯ ಕೈಗೊಳ್ಳಲಾಯಿತು ಹಾಗೂ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಧೂಳಿನ ಸಮಸ್ಯೆಯಾಗುತ್ತಿದ್ದು, ಆದರೂ ಸಭೆಗೆ ಬಾರದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸ್ವಪ್ನ, ಸದಸ್ಯರಾದ ತುಳಸಿ, ರತ್ನಾವತಿ, ಹರೀಶ್ ಡಿ., ಸುಜಾತ ರೈ, ವೇದಾವತಿ, ಗೀತಾ, ಹರೀಶ್ ಕುಮಾರ್, ವಿಜಯಕುಮಾರ್ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪುತ್ತೂರು ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಪ್ರಸನ್ನ ಹೆಬ್ಬಾರ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ಗ್ರಾ.ಪಂ. ಪಿಡಿಒ ಸತೀಶ್ ಡಿ. ಬಂಗೇರ ಸ್ವಾಗತಿಸಿ, ವಂದಿಸಿದರು.