ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಜೀವನದ ಪ್ರಮುಖ ಮೈಲಿಗಲ್ಲು : ರಝಾಕ್ ಮಾಸ್ಟರ್
ಪುತ್ತೂರು : ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಎಂಬುವುದು ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ವಿದ್ಯಾರ್ಥಿಗಳು ನಿರಂತರವಾಗಿ ಸ್ಪರ್ಧಾ ಮನೋಭಾವ ದೊಂದಿಗೆ ಅಭ್ಯಾಸ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು ಎಂದು ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಹೇಳಿದರು.
ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳ ಪ್ರೇರಣಾ ಶಿಬಿರದಲ್ಲಿ ಮಾತನಾಡಿದರು. ಶಿಕ್ಷಕರು ಮತ್ತು ರಕ್ಷಕರು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ ತುಂಬುವ ಬದಲು ಪ್ರೀತಿಯಿಂದ ಸರಳವಾಗಿ ಕಲಿಯಲು ಪ್ರೇರಣೆ ಕೊಟ್ಟರೆ ಖಂಡಿತಾ ಅವರು ಸಾಧಕರಾಗುತ್ತಾರೆ. ಎಂದರಲ್ಲದೆ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಮುಂದಿನ ಪ್ರತಿಯೊಂದು ಕ್ಷಣ ಅಮೂಲ್ಯ ವಾಗಿದ್ದು, ನಾಳೆಯ ಕೆಲಸ ಇಂದು ಮಾಡಿ ಇಂದಿನದ್ದು ಈಗಲೇ ಮಾಡಿ ಎಂಬಂತೆ ಕಾರ್ಯಪ್ರವೃತ್ತರಾಗಬೇಕು ಹಾಗೂ ಮುಂದಿನ ಒಂದು ತಿಂಗಳು ಎಲ್ಲಾ ಕೌಟುಂಬಿಕ ಅಥವಾ ಇನ್ನಿತರ ಶುಭ ಸಮಾರಂಭಗಳಿಗೆ ಬ್ರೇಕ್ ಹಾಕಿ ಓದಿನ ಕಡೆಗೆ ಗಮನ ಕೊಡುವಂತೆ ಸೂಚಿಸಿದರು. ಸಂಸ್ಥೆಯ ಸಂಚಾಲಕ ಮುಹಮ್ಮದ್ ಸಾಬ್ ಹಾಜಿ ಕಾರ್ಯದರ್ಶಿ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಮೌಂಟನ್ ವ್ಯೂ ಅಸ್ವಾಲಿಹಾ ಶರೀಅತ್ ಕಾಲೇಜ್ ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ, ಸಾಲ್ಮರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮೋಹನಾಂಗಿ, ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಹಸನ್ ಮುದ್ದೋಡಿ, ಸಾಲ್ಮರ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಮುಹಮ್ಮದ್ ಮುಸ್ತಫ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕ ಮಂಜುನಾಥ ರೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ದೈಹಿಕ ಶಿಕ್ಷಕರಾದ ಅಶ್ರಫ್ ಮತ್ತು ಜಯರಾಮ್ ಸಹಕರಿಸಿದರು. ಸಂಸ್ಥೆಯ ಎಲ್ಲ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದರು.