ನೆಲ್ಯಾಡಿ: ಗುಜರಿ ಹೆಕ್ಕಲು ಬಂದಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಕೋಟೆ ಬೀದಿ ನಿವಾಸಿ ಗೋವಿಂದ ಗೌಡ(38ವ)ಎಂಬವರು ಅನಾರೋಗ್ಯದಿಂದ ಅಡ್ಡಹೊಳೆಯಲ್ಲಿ ಮಲಗಿದಲ್ಲಿಯೇ ಮೃತಪಟ್ಟಿರುವ ಘಟನೆ ಫೆ.4ರಂದು ಬೆಳಿಗ್ಗೆ ನಡೆದಿದೆ.
ಗೋವಿಂದ ಗೌಡ ಹಾಗೂ ಅವರ ಪತ್ನಿ ಶಶಿಕಲಾ ಎಲ್.ಎನ್.ಅವರು ಗುಜರಿ ಹೆಕ್ಕುವ ಕೆಲಸ ಮಾಡಿಕೊಂಡಿದ್ದು, ಗುಜರಿ ಹೆಕ್ಕುವರೇ ಅವರ ಊರು ಕೋಟೆ ಬೀದಿ ಕೊಣನೂರುನಿಂದ ಆಪೆ ಆಟೋ ರಿಕ್ಷಾ (ಕೆಎ 12, 6772)ದಲ್ಲಿ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿಗೆ ಬಂದು ಅಲ್ಲಿಯೇ ಉಳಿದುಕೊಂಡಿದ್ದರು. ಫೆ.3ರಂದು ಬೆಳಿಗ್ಗೆ 8ಗಂಟೆ ವೇಳೆಗೆ ಗೋವಿಂದ ಗೌಡ ಅವರಿಗೆ ಜ್ವರ ಕಾಣಿಸಿಕೊಂಡಿದ್ದು ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅದೇ ದಿನ ಅಡ್ಡಹೊಳೆಗೆ ಬಂದು ಅಲ್ಲಿ ರಾತ್ರಿ 9 ಗಂಟೆಗೆ ಮಲಗಿದ್ದರು. ಆದರೆ ಫೆ.4ರಂದು ಬೆಳಿಗ್ಗೆ 5 ಗಂಟೆಯ ಮಧ್ಯೆ ಅವರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಶಶಿಕಲಾ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.