ಪುತ್ತೂರು: ಹತ್ತು ಹಲವು ಕಾರಣಿಕತೆಗಳ ಮೂಲಕ ಊರುಪರವೂರಿನ ಸಹಸ್ರಾರು ಭಕ್ತಾಧಿಗಳ ಆರಾಧ್ಯ ದೇವರಾಗಿರುವ ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಪ್ರಥಮ ಪ್ರತಿಷ್ಠಾ ವರ್ಧಂತಿ ಹಾಗೂ ಉತ್ಸವ `ಎಲಿಯ ಜಾತ್ರೆ’ಗೆ ಹಸಿರು ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ ಫೆ.5 ರಂದು ನಡೆಯಿತು.
ಸರ್ವೆ, ಕೆದಂಬಾಡಿ, ಮುಂಡೂರು, ಕೆಯ್ಯೂರು ಗ್ರಾಮದ ಬೈಲುವಾರು ಸಮಿತಿಗಳ ಮೂಲಕ ಸಂಗ್ರಹವಾದ ಹಸಿರು ಹೊರೆಕಾಣಿಕೆಯನ್ನು ತಿಂಗಳಾಡಿ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದ ಬಳಿಯಿಂದ ಮೆರವಣಿಗೆಯ ಮೂಲಕ ದೇವಳಕ್ಕೆ ಕೊಂಡೊಯ್ಯಲಾಯಿತು. ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೆರವಣಿಗೆಯನ್ನು ಶ್ರೀ ದೇವಳದ ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಅಣ್ಣು ತಿಂಗಳಾಡಿಯವರು ಪ್ರಾರ್ಥನೆ ನೆರವೇರಿಸಿದರು.
ಮೆರವಣಿಗೆಯಲ್ಲಿ ಜಾತ್ರಾ ಸಮಿತಿಯ ಗೌರವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ ಶಿವರಾಮ ರೈ ಸೊರಕೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ಕೋಶಾಧಿಕಾರಿ ಮಜಿತ್ ಸುವರ್ಣ ಸೊರಕೆ, ಕಾರ್ಯದರ್ಶಿ ರಜನಿಕಾಂತ ಬಾಳಯ, ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಅಶೋಕ್ ರೈ ಸೊರಕೆ, ಕೆದಂಬಾಡಿಮಠ ರವಿಕುಮಾರ್ ರೈ ಎಲಿಯ, ಉಮಾವತಿ ನಾರ್ಣಪ್ಪ ಪೂಜಾರಿ ಎಲಿಯ, ಲಲಿತಾ ಶಿವಪ್ಪ ಗೌಡ ಮಜಲುಗದ್ದೆ, ಜಾತ್ರಾ ಸಮಿತಿ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಸಾಗು, ಆನಂದ ರೈ ಮಠ, ಮಿತ್ರಂಪಾಡಿ ಜಯರಾಮ ರೈ, ನೇಮೋತ್ಸವ ಸಮಿತಿಯ ಸಂಚಾಲಕ ಉಮೇಶ್ ಸುವರ್ಣ ಸೊರಕೆ, ಜೀರ್ಣೋದ್ಧಾರ ಸಮಿತಿಯ ಪ್ರ.ಕಾರ್ಯದರ್ಶಿ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಕೋಶಾಧಿಕಾರಿ ಪ್ರಸನ್ನ ರೈ ಮಜಲುಗದ್ದೆ, ಸದಸ್ಯರಾದ ಉದಯ ಕುಮಾರ್ ಬಾಕುಡ, ರಾಮಚಂದ್ರ ಸೊರಕೆ, ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಸಮಿತಿಯ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಸದಾನಂದ ಸುವರ್ಣ, ಅಭಿಜಿನ್ ಶೆಟ್ಟಿ ಮೊಡಪ್ಪಾಡಿ, ಬೆಳ್ಳಿಪ್ಪಾಡಿ ಅಭಿಲಾಷ್ ಮಾರ್ತ, ನವೀನ್ ಪೂಜಾರಿ ಎಲಿಯ, ಜಯಾನಂದ ರೈ ಮಿತ್ರಂಪಾಡಿ, ಜಯರಾಮ ರೈ ಬಾಳಯ, ಗಣೇಶ್ ರೈ ಮಿತ್ರಂಪಾಡಿ, ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ತಂಡದ ಪದಾಧಿಕಾರಿಗಳು ಅಲ್ಲದೆ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಜಾತ್ರಾ ಸಮಿತಿಯ ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಜಯರಾಜ್ ಸುವರ್ಣ ಸಾರಥ್ಯದಲ್ಲಿ ಭಜನಾ ತಂಡದಿಂದ ವಿಶೇಷ ಭಜನೆ ಕಾರ್ಯಕ್ರಮ ನಡೆಯಿತು.
ಹರಿದು ಬಂದ ಹಸಿರು ಹೊರೆ ಕಾಣಿಕೆ
ಜಾತ್ರಾ ಮಹೋತ್ಸವಕ್ಕೆ ಹಸಿರು ಹೊರೆಕಾಣಿಕೆಯಾಗಿ ಸೋನಾಮಸೂರಿ ಬೆಳ್ತಿಗೆ ಅಕ್ಕಿ, ತೆಂಗಿನ ಕಾಯಿ, ಅಡಿಕೆ ಗೊನೆ, ಸಿಯಾಳ ಗೊನೆ, ಬಾಳೆ ಗೊನೆ, ತರಕಾರಿ, ದನದ ತುಪ್ಪ, ದನದ ಹಾಲು, ಎಳ್ಳೆಣ್ಣೆ, ತೆಂಗಿನೆಣ್ಣೆ, ಬೆಲ್ಲ, ಸಕ್ಕರೆ, ಬಾಳೆ ಎಲೆ, ಹೂವು, ಹಿಂಗಾರ, ಮಲ್ಲಿಗೆ, ತುಳಸಿ,ಸೇವಂತಿಗೆ ಇತ್ಯಾದಿ ವಸ್ತುಗಳನ್ನು ಸ್ವೀಕರಿಸಲಾಗಿತ್ತು. ಕೆದಂಬಾಡಿ, ಕೆಯ್ಯೂರು, ಸರ್ವೆ, ಮುಂಡೂರು ಬೈಲುವಾರುಗಳಿಂದ ಹಸಿರು ಹೊರೆ ಕಾಣಿಕೆ ಬಂದಿದೆ. ಬೈಲುವಾರು ಸಮಿತಿಯ ಸಂಚಾಲಕರು ಹಾಗೂ ಸದಸ್ಯರುಗಳ ವಿಶೇಷ ಮುತುವರ್ಜಿಯಿಂದ ಹೊರೆಕಾಣಿಕೆ ಸಮಗ್ರವಾಗಿ ಸಂಗ್ರಹವಾಗಿದ್ದು ದೇವರ ಕಾರಣಿಕತೆಯನ್ನು ತೋರಿಸುತ್ತಿದೆ.
ಫೆ.6-7ರಂದು ಜಾತ್ರಾ ಸಂಭ್ರಮ
ಫೆ.6 ರಂದು ಬೆಳಿಗ್ಗೆ 3 ಕಾಯಿ ಗಣಪತಿ ಹೋಮ, ಸಾನಿಧ್ಯ ಕಲಶಪೂಜೆ, ಪುಣ್ಯಾಹ, ಪಂಚಗವ್ಯ, ಪಂಚಾಮೃತಾಭಿಷೇಕ, ಸಾನಿಧ್ಯ ಕಲಶಾಭಿಷೇಕ ಮತ್ತು ದೇವಳದ ನಾಗಬನದಲ್ಲಿ ನಾಗತಂಬಿಲ ಸೇವೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ರಂಗ ಪೂಜೆ, ಶ್ರೀ ಭೂತ ಬಲಿ, ಸೇವಾ ಸುತ್ತುಗಳು, ನೃತ್ಯಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಫೆ.೦7 ರಂದು ಶ್ರೀ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಸಂಜೆ 5 ಗಂಟೆಗೆ ದೇವಳದ ಪರಿವಾರ ದೈವಗಳಾದ ಪಿಲಿಭೂತ, ರಕ್ತೇಶ್ವರಿ, ಶಿರಾಡಿ ದೈವ, ಕುಪ್ಪೆ ಪಂಜುರ್ಲಿ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, 6 ಗಂಟೆಗೆ ಅಡ್ಕರೆಗುಂಡಿಯಿಂದ ದೇವಳದ ಕಾವಲು ದೈವ ಗುಳಿಗನ ಭಂಡಾರವನ್ನು ಮೆರವಣಿಗೆಯೊಂದಿಗೆ ದೇವಳಕ್ಕೆ ತರುವ ಕಾರ್ಯಕ್ರಮ ನಡೆದು ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಬಳಿಕ ಶ್ರೀ ದೈವಗಳಿಗೆ ವೈಭವದ ನೇಮೋತ್ಸವ ನಡೆಯಲಿದೆ.