ನಿಡ್ಪಳ್ಳಿ; ಇಲ್ಲಿಯ ಚೂರಿಪದವು ನಿವಾಸಿಗಳು ತಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಅರೋಪಿಸಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳದೆ ಬಹಿಷ್ಕರಿಸುವುದೆಂದು ತಿರ್ಮಾನಿಸಿ ಬ್ಯಾನರ್ ಅಳವಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಕುಕ್ಕುಪುಣಿಯಿಂದ ಬದಿಯಾರು ಮೂಲಕ ಚೂರಿಪದವು ಸಂಪರ್ಕ ರಸ್ತೆ ನಿರ್ಮಾಣ ಮಾಡಿ ಕೊಡುವುದಾಗಿ ನೀಡಿದ ಭರವಸೆ ಭರವಸೆಯಾಗಿಯೆ ಉಳಿದಿರುವುದರ ಬಗ್ಗೆ ಆಕ್ರೋಶ ಗೊಂಡ ಇಲ್ಲಿಯ ಸಾರ್ವಜನಿಕರು ಈ ರೀತಿಯ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸ್ಥಳೀಯ ನಾಗರಿಕರು ತಿಳಿಸಿದ್ದಾರೆ.
ಇತ್ತೀಚೆಗೆ ನಿಡ್ಪಳ್ಳಿಯಲ್ಲಿ ನಡೆದ ಅಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಈ ರಸ್ತೆ ನಿರ್ಮಾಣಕ್ಕೆ ಬಂದ ಬೇಡಿಕೆಗೆ ಸ್ಪಂದಿಸಿದ ಎ.ಸಿ ಮತ್ತು ತಹಶೀಲ್ದಾರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಅದರ ಅಗತ್ಯತೆಯನ್ನು ಮನಗಂಡು ತಕ್ಷಣ ಆ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ರಸ್ತೆ ನಿರ್ಮಾಣ ಮಾಡದಂತೆ ಸ್ಥಳೀಯರೋರ್ವರು ಉನ್ನತ ಜನಪ್ರತಿನಿಧಿಗಳ ಮೂಲಕ ಅಧಿಕಾರಿಗಳಿಗೆ ಒತ್ತಡ ಹೇರಿ ತಡೆ ಹಿಡಿದಿರುವುದಾಗಿ ಸಂಶಯ ಇದೆ ಎಂದು ಸ್ಥಳೀಯ ನಾಗರಿಕರು ಅನುಮಾನ ವ್ಯಕ್ತಪಡಿಸುತ್ತಿದ್ದು ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಅಲ್ಲಿಯ ನಾಗರಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.