ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘದ ಸ್ವಸಹಾಯ ಸಂಘಗಳ ಉದ್ಘಾಟನೆ, ವಿದ್ಯಾ ಸಾರಥಿ ಸಾಲಪತ್ರ ಬಿಡುಗಡೆ

0

ನೆಲ್ಯಾಡಿ: ಕಡಬ ತಾಲೂಕಿನ ಪ್ರಥಮ ಮಹಿಳಾ ಸಹಕಾರ ಸಂಘ ಆಗಿರುವ ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇದರ ವತಿಯಿಂದ ಗ್ರಾಹಕರೊಂದಿಗೆ ಹೊಸ ವರ್ಷ ಆಚರಣೆ, ಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ವಿದ್ಯಾ ಸಾರಥಿ ಸಾಲ ಬಿಡುಗಡೆ ಕಾರ್ಯಕ್ರಮ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಕೆಪಿಟಿಸಿಎಲ್ ಪುತ್ತೂರು ಇಲ್ಲಿನ ಜೂನಿಯರ್ ಇಂಜಿನಿಯರ್ ಪವಿತ್ರ ರವಿಕುಮಾರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದೇ ದೊಡ್ಡ ಸಂಪತ್ತು. ಆಸ್ತಿ ಸಂಪಾದನೆ ಮಾಡುವುದು ಮುಖ್ಯವಲ್ಲ. ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಾಮಧೇನು ಮಹಿಳಾ ಸಹಕಾರ ಸಂಘವು ವಿದ್ಯಾ ಸಾರಥಿ ಸಾಲ ಯೋಜನೆ ಆರಂಭಿಸಿರುವುದು ಉನ್ನತ ಶಿಕ್ಷಣ ಪಡೆಯುವ ಕನಸು ಕಾಣುತ್ತಿರುವ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಇದರ ಜೊತೆಗೆ ಸ್ವಸಹಾಯ ಸಂಘಗಳನ್ನೂ ಆರಂಭಿಸಿ ಮಹಿಳೆಯರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಭಾಗವಹಿಸಲು ಸಂಘ ಅವಕಾಶ ಮಾಡಿಕೊಟ್ಟಿದೆ. ಕಾಮಧೇನು ಸಹಕಾರ ಸಂಘವು ಆರಂಭಗೊಂಡ ಮೂರು ತಿಂಗಳಿನಲ್ಲಿ ಮಾಡಿರುವ ಅಭಿವೃದ್ಧಿ, ಬೆಳವಣಿಗೆ ನಿಜಕ್ಕೂ ಶ್ಲಾಘನೀಯವಾಗಿದೆ. ಇದರ ಹಿಂದೆ ಸಂಸ್ಥೆಯ ಅಧ್ಯಕ್ಷೆ ಉಷಾ ಅಂಚನ್, ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿಗಳ ಪರಿಶ್ರಮವಿದೆ. ಸಂಘ ಇನ್ನಷ್ಟೂ ಎತ್ತರಕ್ಕೆ ಏರಲಿ. ಸಮಾಜ ಎಲ್ಲಾ ವರ್ಗದ ಜನರಿಗೂ ಇದರ ಪ್ರಯೋಜನ ಸಿಗಲಿ ಎಂದರು.

ಸ್ವಸಹಾಯ ಸಂಘಗಳ ಉದ್ಘಾಟಿಸಿ ಮಾತನಾಡಿದ ಹಳೆನೇರೆಂಕಿ ಸರಕಾರಿ ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಸುಗಂಧಿ ಕೆ. ಮಾತನಾಡಿ, ಮಹಿಳೆಯರು ಅಬಲೆಯರಲ್ಲ. ಈಗ ಸಬಲೆಯಾಗಿದ್ದಾರೆ. ಇದಕ್ಕೆ ಮಹಿಳೆಯರೇ ಹುಟ್ಟುಹಾಕಿರುವ ಕಾಮಧೇನು ಮಹಿಳಾ ಸಹಕಾರ ಸಂಘವೇ ಸಾಕ್ಷಿಯಾಗಿದೆ. ಈ ಸಂಘವೂ ಆರಂಭಗೊಂಡ 3 ತಿಂಗಳಲ್ಲಿಯೇ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಸಂಘ ಇನ್ನಷ್ಟೂ ಅಭಿವೃದ್ಧಿಯಾಗಲಿ. ಈ ಊರಿನ ಜನರ ಸಹಕಾರ ಸಿಗಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ವರ್ತಕರ ಸಂಘದ ಉಪಾಧ್ಯಕ್ಷ ಗಣೇಶ್ ಕೆ.ರಶ್ಮಿ ಅವರು ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ನಿಟ್ಟಿನಲ್ಲಿ ಸ್ವಸಹಾಯ ಸಂಘ ಸ್ಥಾಪನೆ, ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿರುವ ಕಾಮಧೇನು ಸಹಕಾರ ಸಂಘವೂ ಎಲ್ಲರಿಗೂ ಕೇಳಿದನ್ನೆಲ್ಲಾ ಕೊಡುವ ಕಾಮಧೇನು ಆಗಿ ಬೆಳೆಯಲಿ. ನೂರಾರು ಕೋಟಿ ರೂ.ವ್ಯವಹಾರ ಮಾಡುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದರು. ಹೊಸಮಜಲು ಸರಕಾರಿ ಹಿ.ಪ್ರಾ.ಶಾಲಾ ಶಿಕ್ಷಕಿ ಪುಷ್ಪ ಮಾತನಾಡಿ, ಸದಾ ಕ್ರಿಯಾಶೀಲರಾಗಿರುವ ಉಷಾ ಅಂಚನ್‌ರವರು ಮಹಿಳೆಯರನ್ನೇ ಸೇರಿಸಿಕೊಂಡು ಕಾಮಧೇನು ಮಹಿಳಾ ಸಹಕಾರ ಸಂಘ ಸ್ಥಾಪಿಸುವ ಮೂಲಕ ಊರಿನ ಜನರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಈ ಸಂಘದ ಕೀರ್ತಿ ಎಲ್ಲೆಡೆ ಪಸರಿಸಲಿ. ಬಡ ಜನರಿಗೆ ಇದರ ಸೇವೆ ನಿರಂತರವಾಗಿ ಸಿಗಲಿ ಎಂದರು. ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಉದ್ಯಮಿ ಶಾಜಿ ಯು.ವರ್ಗೀಸ್, ಮೋಹನ್ ದೋಂತಿಲ ಅವರು ಮಾತನಾಡಿ ಶುಭಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಮಾತನಾಡಿ, ಶಿಕ್ಷಕಿಯಾಗಿ, ರಾಜಕೀಯ ಪ್ರತಿನಿಧಿಯಾಗಿ ಹಾಗೂ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಜನರ ನೋವು-ನಲಿವುಗಳನ್ನು ನೋಡಿದ್ದೇನೆ. ಆರ್ಥಿಕವಾಗಿ ಹಿಂದುಳಿದ ಜನರಿಗಾಗಿಯೇ ಕಾಮಧೇನು ಸಹಕಾರ ಸಂಘ ಆರಂಭಿಸಲಾಗಿದೆ. ಸಂಘ ಆರಂಭಗೊಂಡ ಮೂರು ತಿಂಗಳಿನಲ್ಲಿಯೇ 3 ಕೋಟಿ ರೂ. ವ್ಯವಹಾರ ಮಾಡಿದೆ. ಇದಕ್ಕೆಲ್ಲಾ ಕಾರಣರಾಗಿರುವ ನಮ್ಮ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ವ್ಯವಹಾರ ನಡೆಸುತ್ತಿರುವ ಠೇವಣಿದಾರರಿಗೆ, ಸಾಲಗಾರರಿಗೆ ಹಾಗೂ ಗ್ರಾಹಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಂಘದ ಸಿಬ್ಬಂದಿಗಳೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಲ ನೀಡುವುದು, ಪಡೆಯುವುದೇ ಸಂಘದ ಉದ್ದೇಶವಲ್ಲ. ಸಂಘದ ಸದಸ್ಯೆಯರು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸ್ವಸಹಾಯ ಸಂಘ ಆರಂಭಿಸಲಾಗಿದೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತ ಆಗಬಾರದು ಎಂಬ ನಿಟ್ಟಿನಲ್ಲಿ ವಿದ್ಯಾ ಸಾರಥಿ ಎಂಬ ಸಾಲ ಯೋಜನೆ ಆರಂಭಿಸಿದ್ದೇವೆ. ಗೃಹಲಕ್ಷ್ಮೀ ಯೋಜನೆಯೂ ಜಾರಿಯಲ್ಲಿದೆ. ಸದಸ್ಯರು ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವುದರಿಂದ ತಮ್ಮ ಅಭಿವೃದ್ಧಿಯೊಂದಿಗೆ, ಊರಿನ, ದೇಶದ ಅಭಿವೃದ್ಧಿಗೂ ಕಾರಣರಾಗಬೇಕೆಂದು ಹೇಳಿದರು.

ಸಂಘದ ಕಾರ್ಯದರ್ಶಿ ಚೈತನ್ಯ ಅವರು ಸಂಘದ ಚಟುವಟಿಕೆಗಳ ಕುರಿತ ವರದಿ ಮಂಡಿಸಿದರು. ಸಿಬ್ಬಂದಿ ಸ್ವಾತಿ ಅವರು ವಿದ್ಯಾ ಸಾರಥಿ ಸಾಲ ಯೋಜನೆಯ ಕುರಿತು ಮಾಹಿತಿ ನೀಡಿದರು. ನಿರ್ದೇಶಕಿ ಸಂಪಾವತಿ ಪಟ್ಟೆಜಾಲು ಅವರು ಸ್ವಸಹಾಯ ಸಂಘಗಳ ನಿಯಮಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು. ನಿರ್ದೇಶಕಿ ಶ್ರೀಲತಾ ಸಿ.ಹೆಚ್.ಮಾದೇರಿ ಸ್ವಾಗತಿಸಿದರು. ಉಪಾಧ್ಯಕ್ಷೆ ಮೇಘನಾ ಶೈನ್ ವಂದಿಸಿದರು. ಸಂಘದ ಗೌರವ ಸಲಹೆಗಾರ ಜನಾರ್ದನ ಬಾಣಜಾಲು, ನಿರ್ದೇಶಕರಾದ ಮೈತ್ರಿ ಪುತ್ತಿಗೆ, ರತಿ ಡಿ.ಶಾಂತಿನಗರ, ವಿನೀತಾ ತಂಗಚ್ಚನ್, ಜಯಂತಿ ಬಿ.ನಾಯ್ಕ್ ಅಲಂಗಪೆ, ಶಾಲಿನಿಶೇಖರ ಪೂಜಾರಿ ಗೋಳಿತ್ತೊಟ್ಟು, ವಾರಿಜಾಕ್ಷಿ ಹೊಸಮನೆ, ಡೈಸಿ ವರ್ಗೀಸ್ ಇಚ್ಲಂಪಾಡಿ, ಪ್ರವೀಣಿಸುಧಾಕರ ಗೌರಿಜಾಲುರವರು ಸಹಕರಿಸಿದರು.

ಸನ್ಮಾನ:
2022ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಗಂಗಾಧರ ಶೆಟ್ಟಿಯವರು, ಸಮಾಜಮುಖಿ ಚಿಂತನೆಯ ಕೆಲಸಗಾರರಾಗಿರುವ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಅವರು ಹುಟ್ಟುಹಾಕಿರುವ ಕಾಮಧೇನು ಸಹಕಾರ ಸಂಘವೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು. ಕೇಕ್ ಕಟ್ ಮಾಡುವ ಮೂಲಕ ಈ ಸಂದರ್ಭದಲ್ಲಿ ಹೊಸ ವರ್ಷಾಚರಣೆಯನ್ನು ಆಚರಿಸಲಾಯಿತು.

LEAVE A REPLY

Please enter your comment!
Please enter your name here