ಅಮಿತ್ ಶಾ ಆಗಮನದಿಂದ ದ.ಕ, ಉಡುಪಿಯಲ್ಲಿ ಮತ್ತೊಮ್ಮೆ ರೈತ ಪರವಾದ ಚಟುವಟಿಕೆ – ಸುನಿಲ್ ಕುಮಾರ್
ಪುತ್ತೂರು: ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಫೆ.11ರಂದು ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಆಗಮಿಸುವ ಹಿನ್ನೆಲೆಯಲ್ಲಿ ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆಯುವ ಸಹಕಾರಿಗಳ ಮತ್ತು ರೈತರ ಸಮಾವೇಶ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಅಮಿತ್ ಶಾ ಆಗಮನದಿಂದ ದ.ಕ, ಉಡುಪಿಯಲ್ಲಿ ಮತ್ತೊಮ್ಮೆ ರೈತ ಪರವಾದ ಚಟುವಟಿಕೆ:
ಸಮಾವೇಶದ ಮೈದಾನದಲ್ಲಿ ಸಂಬಂಧಿಸಿ ಶಾಸಕರು ಮತ್ತು ಪಕ್ಷದ ಮುಖಂಡರ ಜೊತೆ ಮಾತನಾಡಿದ ಅವರು ವಿವೇಕಾನಂದ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಫೆ. 11ಕ್ಕೆ ಅಮಿತ್ ಶಾ ಬರುವ ಹಿನ್ನೆಲೆಯಲ್ಲಿ ಸಹಕಾರಿಗಳ ಮತ್ತು ರೈತರ ಬಹಳ ದೊಡ್ಡ ಪ್ರಮಾಣದ ಸಮಾವೇಶ ನಡೆಯಲಿದೆ. ಮಂಗಳೂರಿನಲ್ಲಿರುವ ಎಲ್ಲಾ ರೈತರನ್ನು ಮತ್ತು ಸಹಕಾರಿಕ ಕ್ಷೆತ್ರಗಳಲ್ಲಿರುವವರನ್ನು ಸೇರಿಸಿಕೊಂಡು ತನ್ಮೂಲಕ ಎರಡೂ ಕ್ಷೇತ್ರಗಳನ್ನು ಸೇರಿಸಿಕೊಂಡು ದೊಡ್ಡ ಶಕ್ತಿ ನಿರ್ಮಾಣ ಮಾಡಲಿದ್ದೇವೆ. ಸುಮಾರು 75 ರಿಂದ 1 ಲಕ್ಷ ಜನಸಂಖ್ಯೆ ಸಮಾವೇಶದಲ್ಲಿ ಸೇರಲಿದ್ದಾರೆ. ಅಡಿಕೆ ಬೆಳೆಗಾರರು ಮತ್ತು ರೈತರನ್ನು ಕಣ್ಮುಂದೆ ಇಟ್ಟುಕೊಂಡು ಈ ಸಮಾವೇಶ ನಡೆಯಲಿದೆ. ರೈತರ ಪರವಾಗಿ ಇದ್ದ ಸರಕಾರದ ಅದು ಬಿಜೆಪಿ ಸರಕಾರ ಮಾತ್ರ. ಇಂತಹ ಸಂದರ್ಭದಲ್ಲಿ ಐತಿಹಾಸಿಕ ಸಮಾವೇಶ ಮುಂದಿನ ದಿನಗಳಲ್ಲಿ ರೈತರ ಚಟುವಟಿಕೆಗಳಿಗೆ ಇನ್ನಷ್ಟು ಶಕ್ತಿಯನ್ನು ನೀಡಲು ಮತ್ತು ಅವರಿಗೆ ಉತ್ತೇಜನ ನೀಡಲು ಈ ಸಮಾವೇಶ ಪ್ರೇರಣೆ ನೀಡಲಿದೆ ಹಾಗು ಮುಂದಿನ ಚುನಾವಣೆ ದೃಷ್ಟಿಯಿಂದ ಕೂಡಾ ನಮಗೆ ಹುರುಪನ್ನು ಮೂಡಿಸುತ್ತದೆ. ಸಮಾವೇಶದಲ್ಲಿ ಗ್ರಾಮ ಮಟ್ಟದ ಬೂತ್ ಮಟ್ಟದ ಕಾರ್ಯಕರ್ತರು ಸಕ್ರಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಅಮಿತ್ ಶಾ ಆಗಮನ ಮತ್ತು ಸಮಾವೇಶದ ಮೂಲಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಮತ್ತೊಮ್ಮೆ ಗೆದ್ದು ಕೊಂಡು ರೈತ ಪರವಾಗಿ ಚಟುವಟಿಕೆಗಳನ್ನು ಮಾಡುವಂತೆ ಸಂಕಲ್ಪ ಮಾಡಲಿದ್ದೇವೆ ಎಂದರು.
ಸ್ಥಳ ಪರಿಶೀಲನೆ ನಡೆಸಿದ ಸಚಿವರು:
ಸಮಾವೇಶಕ್ಕೆ ಜರ್ಮನ್ ಮಾದರಿಯಲ್ಲಿ ಪೆಂಡಾಲ್ ಅಳವಡಿಸಲಾಗುತ್ತಿದ್ದು ಕಾರ್ಯಕ್ರಮದ ವೇದಿಕೆ ಮತ್ತು ಗಣ್ಯರು ಬರುವ ದಾರಿಗಳ ಕುರಿತು ಸಚಿವರು ವೇದಿಕೆ ನಿರ್ಮಾಣದ ಉಸ್ತುವಾರಿ ಪಿ.ಜಿ.ಜಗನ್ನಿವಾಸ ಅವರಲ್ಲಿ ನಕ್ಷೆ ಸಹಿತ ಮಾಹಿತಿ ಪಡೆದು ಕೊಂಡರು. ಈ ಸಂದರ್ಭದಲ್ಲಿ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್ ಅಂಗಾರ, ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ರಾಮದಾಸ್ ಬಂಟ್ವಾಳ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್, ಮಾಜಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಹಿಂದುಳಿದ ವರ್ಗದ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಸಂತೋಷ್ ರೈ ಕೈಕಾರ, ಸೀತಾರಾಮ ರೈ ಕೆದಂಬಾಡಿಗುತ್ತು, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ನಿತೀಶ್ ಕುಮಾರ್ ಶಾಂತಿವನ, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕುಮಾರ್, ಎಸ್ಪಿ ಡಾ. ವಿಕ್ರಂ ಅಮ್ಟೆ, ಸಹಾಯಕ ಕಮೀಷನರ್ ಗಿರೀಶ್ ನಂದನ್, ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಸಹಿತ ಹಲವಾರು ಮಂದಿ ಪ್ರಮುಖರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.