





ವಿಟ್ಲ:ಬೆಂಗಳೂರಿನಲ್ಲಿ ಹೈಕೋರ್ಟ್‌ನ ಹಿರಿಯ ವಕೀಲರಾಗಿರುವ ವಿಟ್ಲದ ರಾಜೇಶ್ ರೈ ಕಲ್ಲಂಗಳರವರನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಕೇಂದ್ರ ಸರಕಾರ ನೇಮಿಸಿದೆ.


ಕರ್ನಾಟಕ ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರದ ವಕೀಲರಾಗಿರುವ ವಿಜಯ ಕುಮಾರ್ ಎ.ಪಾಟೀಲ್ ಹಾಗೂ ಹಿರಿಯ ವಕೀಲರಾಗಿರುವ ರಾಜೇಶ್ ರೈ ಕಲ್ಲಂಗಳ ಮತ್ತು ತಾಜಾಲಿ ಮೌಲಾಸಾಬ್ ನಡಾಫ್ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಲು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈಗ ವಿಜಯ ಕುಮಾರ್ ಎ.ಪಾಟೀಲ್ ಹಾಗೂ ಹಿರಿಯ ವಕೀಲ ರಾಜೇಶ್ ರೈ ಕಲ್ಲಂಗಳರವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಆದೇಶ ಹೊರಡಿಸಿದೆ.






ಬಂಟ್ವಾಳ ತಾಲೂಕು ಕೇಪು ಗ್ರಾಮದ ಕಲ್ಲಂಗಳ ನಿವಾಸಿಯಾಗಿರುವ ರಾಜೇಶ್ ರೈಯವರು 1999ರಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ಬಳಿಕ ಕ್ರಿಮಿನಲ್ ಸೈಡ್ ಪ್ರಾಕ್ಟೀಸ್ ಮಾಡಿ ಎರಡು ವರ್ಷಗಳ ಕಾಲ ಹೈಕೋರ್ಟ್‌ನಲ್ಲಿ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಕೇಂದ್ರ ಸರಕಾರದ ಹಿರಿಯ ವಕೀಲರಾಗಿ 6 ವರುಷಗಳ ಕಾಲ ಕರ್ತವ್ಯ ನಿರ್ವಹಿಸಿ ಬಳಿಕ ಜಾರಿ ನಿರ್ದೇಶನಾಲಯದಲ್ಲಿ ವಕೀಲರಾಗಿ 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಬಿಡಿಎ ವಕೀಲರಾಗಿಯೂ ಕಳೆದ 15 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಇಡಿ ಪರ ವಿಶೇಷ ಅಭಿಯೋಜಕರಾಗಿದ್ದರು:
ರಾಜೇಶ್ ರೈ ಕಲ್ಲಂಗಳ ಅವರು ಜಾರಿ ನಿರ್ದೇಶನಾಲಯದ ವಿಶೇಷ ಅಭಿಯೋಜಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಹಾಸನ ಜಿಲ್ಲಾ ಘಟಕದ ಸಹಾಯಕ ವ್ಯವಸ್ಥಾಪಕರಾಗಿದ್ದ ಬಿ.ಸಿ.ಶಾಂತಕುಮಾರ್ ಅವರು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ, ಹಣದ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಕಠಿಣ ಸಜೆ ವಿಧಿಸಿ ಆದೇಶಿಸಿತ್ತು.ಈ ಪ್ರಕರಣದಲ್ಲಿ ಇಡಿ ಪರ ವಿಶೇಷ ಅಭಿಯೋಜಕರಾಗಿ ರಾಜೇಶ್ ರೈ ಕಲ್ಲಂಗಳ ಅವರು ವಾದಿಸಿದ್ದರು.
ಕಲ್ಲಂಗಳ ದಿ.ವಾಸಪ್ಪ ಪೆರ್ಗಡೆ ಹಾಗೂ ದಿ.ಜಲಜಾಕ್ಷಿ ವಿ ಶೆಡ್ತಿರವರ ಮೂರನೇ ಪುತ್ರರಾಗಿರುವ ರಾಜೇಶ್ ರೈಯವರು ಪತ್ನಿ ರೇಶ್ಮಾ ರಾಜೇಶ್, ಮಕ್ಕಳಾದ ಸಾನಿಧ್ಯ ರೈ ಹಾಗೂ ಶಾಶ್ವತ್ ರೈರವರೊಂದಿಗೆ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.







