ನೆಲ್ಯಾಡಿ: ವಾರದ ಹಿಂದೆ ಕೊಕ್ಕಡ ಸಮೀಪದ ಅಡೈಕಡೆ ತಿರುಗುವಲ್ಲಿ ಬೈಕ್ ಹಾಗೂ ಮರಳು ಸಾಗಾಟದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಸೌತಡ್ಕ ನಿವಾಸಿ ಸಿರಾಜುದ್ದೀನ್(34ವ.)ರವರು ಚಿಕಿತ್ಸೆಗೆ ಸ್ಪಂದಿಸದೆ ಫೆ.7ರಂದು ಮೃತಪಟ್ಟಿದ್ದಾರೆ.
ಸಿರಾಜುದ್ದೀನ್ ಅವರು ಫೆ.1ರಂದು ಕೊಕ್ಕಡದಿಂದ ಉಪ್ಪಾರಪಳಿಕೆ-ಗೋಳಿತ್ತೊಟ್ಟು ಮಾರ್ಗವಾಗಿ ಬಿ.ಸಿ.ರೋಡ್ಗೆ ತನ್ನ ಬೈಕ್ನಲ್ಲಿ ಹೋಗುವ ಸಂದರ್ಭ ಅಡೈಕಡೆ ತಿರುಗುವಲ್ಲಿ ಕೊಕ್ಕಡ ಕಡೆಗೆ ಬರುತ್ತಿದ್ದ ಮರಳು ಸಾಗಾಟದ ಟಿಪ್ಪರ್ ಲಾರಿ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ ಸಿರಾಜುದ್ದೀನ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಫೆ.7ರಂದು ಸಂಜೆ ವೇಳೆಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೊಕ್ಕಡ ಸೌತಡ್ಕ ಬಳಿಯ ನಿವಾಸಿಯಾಗಿದ್ದು ಸಿರಾಜುದ್ದೀನ್ರವರು 12 ವರ್ಷಗಳಿಂದ ಕೊಕ್ಕಡ, ಪಟ್ರಮೆ ಭಾಗಗಳಲ್ಲಿ ಅಡಕೆ ವ್ಯಾಪಾರ ನಡೆಸುತ್ತಿದ್ದರು. ಎಸ್ಕೆಎಸ್ಎಸ್ಎಫ್ ಕೊಕ್ಕಡ ಯುನಿಟ್ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ವಿಖಾಯ ಆಕ್ಟಿವ್ವಿಂಗ್ ಸದಸ್ಯನಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ 1 ವರ್ಷ ಪ್ರಾಯದ ಪುತ್ರಿಯನ್ನು ಅಗಲಿದ್ದಾರೆ.