ಪುತ್ತೂರು: ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ʼಅಮೃತಧಾರ' ವಿಸ್ತೃತ ಕಟ್ಟಡದ ಪ್ರವೇಶೋತ್ಸವ ಹಾಗೂ
ಸಾಂದ್ರ ಶೀಥಲೀಕರಣ ಘಟಕದ ಉದ್ಘಾಟನೆಯು ಫೆ.9ರಂದು ನೆರವೇರಿತು.
ಹೈನುಗಾರರ ಕಾಮಧೇನುವಾಗಿ ಸಂಘ ಬೆಳೆದಿದೆ-ಸಂಜೀವ ಮಠಂದೂರು:
ಅಮೃತಧಾರ ವಿಸ್ತೃತ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂಡೂರಿನಲ್ಲಿ ಪ್ರಾರಂಭಗೊಂಡ ಸಂಘವು ಉತ್ತಮ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. 25 ಲೀಟರ್ ಹಾಲಿನಿಂದ ಪ್ರಾರಂಭಗೊಂಡ ಸಂಘವು ಇಂದು 1300ಲೀಟರ್ ಹಾಲು ಸಂಗ್ರಹಣೆಯೊಂದಿಗೆ ಸಾಂಧ್ರ ಶೀಥಲೀಕರಣ ಘಟಕ ಸ್ಥಾಪಿಸುವ ಹಂತಕ್ಕೆ ಬೆಳೆದಿರುವುದು ಶ್ಲಾಘನೀಯವಾದುದು. ಸಂಘವು ಈ ಭಾಗದ ರೈತರಿಗೆ ಹೈನುಗಾರಿಕೆಗೆ ಪ್ರೇರಣೆ ನೀಡುತ್ತಿರುವ ಕಾಮಧೇನುವಾಗಿದೆ ಎಂದರು.
ತಾಂತ್ರಿಕ, ವೈಜ್ಞಾನಿಕವಾಗಿ ಯುವಜನತೆ ಹೈನುಕಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು-ಕೆ.ಪಿ ಸುಚರಿತ ಶೆಟ್ಟಿ:
ಸಾಂದ್ರಶೀಥಲೀಕರಣ ಘಟಕವನ್ನು ಉದ್ಘಾಟಿಸಿದ ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಹೈನುಗಾರಿಕೆಯು ಆರ್ಥಿಕ ಶಕ್ತಿಯಾಗಿ, ಸ್ವಾವಲಂಬನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಯುವ ಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಒಕ್ಕೂಟದಿಂದ ದೊರೆಯುವ ತಾಂತ್ರಿಕ ವೈಜ್ಞಾನಿಕ ಸೌಲಭ್ಯಗಳನ್ನು ಬಳಸಿಕೊಂಡು ಅಧಿಕ ಲಾಭ ಪಡೆದು ಹೈನುಗಾರಿಕೆಯನ್ನು ಮುನ್ನಡೆಸಬೇಕು. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಯುವ ಶಕ್ತಿ ಅಧಿಕವಾಗಿ ತೊಡಗಿಸಿಕೊಳ್ಳುವ ಮೂಲಕ ಅವಿಭಜಿತ ಜಿಲ್ಲೆಯ ಅಸ್ಮಿತೆಯನ್ನು ಉಳಿಸಬೇಕು ಎಂದರು. ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಹಿಂಡಿಯ ದರ ಏರಿಕೆಯಾಗಿದೆ. ಹಾಲಿನ ದರ ಏರಿಕೆ ಮಾಡುವುದು, ಸಹಾಯಧನ ಏರಿಕೆ ಮಾಡುವಂತೆ ಶಾಸಕರ ಮೂಲಕ ಸರಕಾರದ ಗಮನ ಸೆಳೆಯಲಾಗಿದೆ. ರೈತರಿಂದ ಶುದ್ಧ ಹಾಗೂ ಗುಣಮಟ್ಟದ ಹಾಲು ಸಾಂದ್ರ ಶೀಥಲೀಕರಣ ಘಟಕಕ್ಕೆ ವೇಗವಾಗಿ ಸಂಗ್ರಹಣೆಯಾಗಿ ಶುದ್ದ ಹಾಲು ಜಿಲ್ಲೆಯ ಜನತೆಗೆ ತಲುಪಲಿದೆ. ಮುಂಡೂರಿನಲ್ಲಿ ಪ್ರಾರಂಭಗೊಂಡ ಘಟಕ ಹಾಗೂ ಅಮೃತಧಾರೆ ಕಟ್ಟಡವು ಕ್ಷೀರಧಾರೆಯಾಗಿ ಹರಿಯಲಿ ಎಂದು ಹಾರೈಸಿದರು.
ಒಕ್ಕೂಟದ ಹಾಲಿನ ಕೊರತೆ ಮುಂಡೂರು ಸಂಘದಿಂದ ನಿವಾರಣೆಯಾಗಲಿ-ಎಸ್.ಬಿ ಜಯರಾಮ ರೈ:
ನಾಮಫಲಕ ಅನಾವರಣಗೊಳಿಸಿದ ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳೆಜ್ಜ ಮಾತನಾಡಿ, ದ.ಕ ಹಾಲು ಒಕ್ಕೂಟವು ಸುಮಾರು 5.70ಲಕ್ಷ ಲೀಟರ್ ಹಾಲು ಸಂಗ್ರಹಣೆಯೊಂದಿಗೆ ಹೆಮ್ಮರವಾಗಿ ಬೆಳೆದಿದೆ. ಈಗ ಉತ್ಪಾದನೆಗೆ ಹಿನ್ನಡೆಯಾಗಿದೆ. ಈಗ ಉತ್ಪಾದನಾ ವೆಚ್ಚವೇ ಅಧಿಕವಾಗುತ್ತಿದೆ. ಆದರೂ ಹೈನುಗಾರರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸಾಂದ್ರಶೀಥಲೀಕರಣ ಘಟಕ ಬೆಳೆಯಲು ಸಹಕರಿಸಬೇಕು. ಹಾಲಿನ ದರ ಏರಿಕೆ ಮಾಡುವಂತೆ ಸರಕಾರವನ್ನು ನಿಯೋಗದ ಮೂಲಕ ಒತ್ತಾಯಿಸಲಾಗುವುದು. ಒಕ್ಕೂಟಕ್ಕೆ ಐವತ್ತು ಸಾವಿರ ಲೀಟರ್ ಹಾಲಿನ ಕೊರತೆಯಿದ್ದು ಅದರ ನಿವಾರಣೆಯು ಮುಂಡೂರು ಸಂಘದ ಮೂಲಕ ನಡೆಯಲಿ ಎಂದರು.
ದ.ಕ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟಕ್ಕೆ ಪ್ರಯತ್ನ-ನಾರಾಯಣ ಪ್ರಕಾಶ್:
ಜನರೇಟರ್ ಉದ್ಘಾಟಿಸಿದ ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಮಾತನಾಡಿ, ಹಾಲಿಗೆ ಪ್ರೋತ್ಸಾಹ ಧನ, ಹಾಲಿನ ದರ ಏರಿಕೆ ಮಾಡುವಂತೆ ಒಕ್ಕೂಟದ ಮೂಲಕ ಸರಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಒಕ್ಕೂಟವನ್ನು ಉಭಯ ಜಿಲ್ಲೆಗಳಿಂದ ಪ್ರತ್ಯೇಕಗೊಳಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಒಕ್ಕೂಟದಲ್ಲಿ ಸುಳ್ಯ, ಕಡಬ ತಾಲೂಕುಗಳಿಗೆ ಪ್ರಾತಿನಿಧ್ಯಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಸಹಕಾರಿ ಕ್ಷೇತ್ರ ಪ್ರಾರಂಭಗೊಂಡ ದ.ಕ ಜಿಲ್ಲೆಗೆ ಶಸಕ್ತ ಒಕ್ಕೂಟ ಬೇಕೆಂದು ಪ್ರಯತ್ನಿಸಲಾಗುತ್ತಿದೆ ಎಂದರು.
ಹೈಗಾರಿಕೆಗೆ ಇನ್ನಷ್ಟು ಪ್ರೇರಣೆ-ಡಿ.ಅಶೋಕ್:
ದ.ಕ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಮಾತನಾಡಿ, ಹಾಲಿನ ಉತ್ಪಾದನೆಗೆ ಇನ್ನಷ್ಟು ಪ್ರೇರಣೆ ನೀಡಬೇಕು ಎನ್ನುವ ಉದ್ದೇಶದಿಂದ ಸಾಂದ್ರಶೀಥಲೀಕರಣ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಇನ್ನೂ ಎರಡು ಘಟಕ ಪ್ರಾರಂಭವಾಗಲಿದ್ದು ಮುಂದೆ ಪುತ್ತೂರು ಸಾಂದ್ರಶೀಥಲೀಕರಣ ತಾಲೂಕು ಆಗಲಿದೆ ಎಂದ ಅವರು ವಾರ್ಷಿಕ 2.30 ಕೋಟಿ ವ್ಯವಹಾರ ಮಾಡುತ್ತಿರುವ ಮುಂಡೂರು ಸಂಘದ ಸಾಧನೆಯನ್ನು ಶ್ಲಾಘಿಸಿದರು.
ಎಲ್ಲರ ಸಹಕಾರಕ್ಕೆ ಕೃತಜ್ಞತೆ-ಶ್ರೀಕಾಂತ್ ಆಚಾರ್:
ಅಧ್ಯಕ್ಷತೆ ವಹಿಸಿದ್ದ ಮುಂಡೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಮಾತನಾಡಿ, ಗ್ರಾಮದ ಜನತೆಯ ಅಗತ್ಯತೆಯನ್ನು ಮನಗಂಡು ಸಾಂದ್ರಶೀಥಲೀಕರಣ ಘಟಕ ಸ್ಥಾಪನೆಗೆ ಎಲ್ಲರ ಸಹಕಾರ ದೊರೆತಿದೆ. ಸಂಘದ ಬೆಳವಣಿಗೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ಸವಿತಾ ಎನ್ ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ಆರ್.ರಾವ್ ಮಾತನಾಡಿ ಶುಭ ಹಾರೈಸಿದರು. ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ನಡುಬೈಲು, ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ಬಿಎಂಸಿ ಉಪವ್ಯವಸ್ಥಾಪಕ ಡಾ.ಕೇಶವ ಸುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಸಂಘದ ಮಾಜಿ ಅಧ್ಯಕ್ಷರಾದ ಗಂಗಯ್ಯ ಬಂಗೇರ ಕಂಪ, ಎಂ.ಪಿ ಬಾಲಕೃಷ್ಣ ರಾವ್ ಪಜಿಮಣ್ಣು ಹಾಗೂ ಹರೀಶ್ ಪುತ್ತೂರಾಯ, ಹಾಲಿ ಅಧ್ಯಕ್ಷ ಶ್ರೀಕಾಂತ್ ಹಿಂದಾರು ಹಾಗೂ ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು.
ನಿರ್ದೇಶಕಿ ಚೇತನಾ ಹಿಂದಾರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಉಮೇಶ್ ಗುತ್ತಿನಪಾಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ವರದಿ ವಾಚಿಸಿದರು. ನಿರ್ದೇಶಕ ಅನಿಲ್ ಕಣ್ಣಾರ್ನೂಜಿ ವಂದಿಸಿದರು, ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಜಯಗುರು ಆಚಾರ್ ಹಿಂದಾರು, ಉದಯ ಪಜಿಮಣ್ಣು, ಅನಿಲ್ ಕುಮಾರ್ ಕಣ್ಣಾರ್ನೂಜಿ, ರಮೇಶ್, ದೇವಕಿ, ಸೇಸಪ್ಪ ಶೆಟ್ಟಿ ಪೊನೋನಿ, ಚೇತನಾ, ಶಾರದಾ ಬಂಡಿಕಾನ, ರಂಜಿತ್ ಕಂಪ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಭೋಜನ ನಡೆಯಿತು.