ದಿ. ಟಿ.ಕೆ ಆಳ್ವ ಸಂಸ್ಮರಣೆ – ‘ಕಂದಾವರದ ಕಂದೀಲು’ ಬಿಡುಗಡೆ 

0

ಸಾಧನೆಯಿಂದಲೇ ಬದುಕಿನ ಸಾರ್ಥಕತೆ: ಸಾಧ್ವಿ ಮಾತಾನಂದಮಯಿ

 ಮಂಗಳೂರು: ‘ಬದುಕು ನಮಗೆ ದೇವರು ಕೊಟ್ಟ ವರ. ಅದನ್ನು ಸಾಧನೆಯ ಮೂಲಕ ಸಫಲಗೊಳಿಸಬೇಕು. ದಿ. ಟಿ.ಕೆ. ಆಳ್ವ ಮತ್ತು ಜಾಹ್ನವಿ ಟಿ.ಆಳ್ವ ತಮ್ಮ ಜೀವನಾನುಭವಗಳನ್ನು ಬರಹದ ಮೂಲಕ ದಾಖಲಿಸಿರುವುದು ಇತರರಿಗೆ ಪ್ರೇರಣಾದಾಯಕವಾದ ಸಾಧನೆ’ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಹೇಳಿದ್ದಾರೆ. ತಲೇಕಳ ತರವಾಡು ಮನೆ ದಿ. ಕಿನ್ಯಣ್ಣ ಆಳ್ವ ಸಂಸ್ಮರಣಾ ಸಮಿತಿ ವತಿಯಿಂದ ನಗರದ ಬಲ್ಮಠ ಕುಡ್ಲ ಪೆವಿಲಿನ್ ಸಭಾಂಗಣದಲ್ಲಿ ಜರಗಿದ ಟಿ.ಕೆ.ಆಳ್ವ ಸಂಸ್ಮರಣೆ ಮತ್ತು ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಸಂಸ್ಮರಣಾ ಜ್ಯೋತಿ ಬೆಳಗಿದರು. ಹಿರಿಯ ಪತ್ರಕರ್ತ ಮತ್ತು ಸಾಹಿತಿ ಮಲಾರ್ ಜಯರಾಮ ರೈ ನುಡಿ ನಮನ ಸಲ್ಲಿಸಿದರು. ದಿ. ಟಿ.ಕೆ. ಆಳ್ವ ಅವರ ಜೀವನಾನುಭವಸಾರ ‘ಕಂದಾವರದ ಕಂದೀಲು’ ಕೃತಿಯನ್ನು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ ಬಿಡುಗಡೆಗೊಳಿಸಿದರು. ಸಂಸ್ಮರಣ ಸಮಿತಿಯ ಸುಜಯ ಶೆಟ್ಟಿ ಸುರತ್ಕಲ್ ಕೃತಿ ಪರಿಚಯ ಮಾಡಿದರು.

ಕುಟುಂಬದ ಹಿರಿಮೆ:

ಭಾರತೀಯ ಭಾಷಾ ಸಂಸ್ಥಾನ ಮೈಸೂರು ಇದರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟ ಪೂರ್ವ ನಿರ್ದೇಶಕ ಡಾ. ಬಿ.ಶಿವರಾಮ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ‘ತುಳುನಾಡಿನ ಅವಿಭಕ್ತ ಕುಟುಂಬ ಪದ್ಧತಿ ಸಹಬಾಳ್ವೆಯ ಅತ್ಯುನ್ನತ ಮಾದರಿ. ಅದರಲ್ಲಿ ಬಾಳಿ ಬದುಕಿದವರು ತಮ್ಮ ಕುಟುಂಬದ ಹಿರಿಮೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ದಿಕ್ಕಿನಲ್ಲಿ ಹಿರಿಯರ ಅನುಭವಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ದಿ. ಟಿ.ಕೆ.ಆಳ್ವರು ತಾವು ಹುಟ್ಟಿ ಬೆಳೆದ ತಲೇಕಳ ತರವಾಡಿನಿಂದ ವಿವಾಹಾನಂತರ ನೆಲೆಯಾದ ಕಂದಾವರದವರೆಗೆ ಕಂಡರಸಿದ ಬದುಕಿನ ವಿವಿಧ ಘಟನೆಗಳನ್ನು ಕಂದಾವರದ ಕಂದೀಲು ಕೃತಿಯಲ್ಲಿ ಪಡಿ ಮೂಡಿಸಿರುವುದು ದಾಖಲಾತಿಯ ದೃಷ್ಟಿಯಿಂದ ಮಹತ್ವ ಪಡೆಯುತ್ತದೆ’ ಎಂದರು.

‘ಕಂದೀಲು’ ಪದ ಅರೇಬಿಕ್ ನಿಂದ ಬಂದಿದ್ದು ಪೋರ್ಚುಗೀಸಲ್ಲಿ ಕ್ಯಾಂಡಿಲ್ ಆಗಿ ಬಳಕೆಯಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಗಾಳಿ ತಾಗದಂತೆ ಗಾಜಿನ ಆವರಣವುಳ್ಳ ಎಲ್ಲಿಗಾದರೂ ಕೊಂಡೊಯ್ಯಲು ಅನುಕೂಲವಾಗುವ ದೀಪವನ್ನು ಕಂದೀಲು ಎಂಬುದಾಗಿ ಕರೆಯುವುದನ್ನು ಪ್ರಸ್ತಾವಿಸಿ, ‘ಮೇಣದ ಬತ್ತಿ ಉರಿದು ಲೋಕಕ್ಕೆ ಬೆಳಕನ್ನು‌ ಕೊಡುವಂತೆ ತೀರಿಕೊಂಡಿರುವ ಟಿ.ಕೆ.ಆಳ್ವರ ಬದುಕು ಮತ್ತು ಕೃತಿ‌ ಬೆಳಕನ್ನು ಕೊಡಲಿ‌’ ಎಂದು‌ ಆಶಿಸಿದರು.    ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ, ಮ್ಯಾಪ್ಸ್ ಕಾಲೇಜು ಸಂಚಾಲಕ ದಿನೇಶ್ ಆಳ್ವ, ಪರಿಸರಾಸಕ್ತ ಚಿಂತಕ ದಿನೇಶ್ ಹೊಳ್ಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. 

ಮೈಸೂರಿನ ಸ್ಕಾನರಿ ಟೆಕ್ನಾಲಜಿ ಆಡಳಿತ ನಿರ್ದೇಶಕ ವಿಶ್ವ ಪ್ರಸಾದ್ ಆಳ್ವ ಕಂದಾವರ ಪ್ರಸ್ತಾವನೆಗೈದರು. ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥಿಸಿದರು. ವಿಜೇಶ್ ಶೆಟ್ಟಿ ಸ್ವಾಗತಿಸಿ, ವೇಣುಗೋಪಾಲ ಆಳ್ವ ಕಂದಾವರ ವಂದಿಸಿದರು. ನಮ್ಮ ಟಿ.ವಿ.ಯ ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ದಿ.ಟಿ.ಕೆ.ಆಳ್ವ ಸಂಸ್ಮರಣಾ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here