ಇಂದು(ಫೆ.11) ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಪುತ್ತೂರು, ಹನುಮಗಿರಿಯಲ್ಲಿ ಬಿಗಿ ಪೊಲೀಸ್ ಭದ್ರತೆ

0

ಪುತ್ತೂರು:ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಹಾಗೂ ಹನುಮಗಿರಿಯಲ್ಲಿ ಅಮರಗಿರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವರು, ದೇಶದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಫೆ.11ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು, ಹನುಮಗಿರಿ ಸುತ್ತಮುತ್ತ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು ಎಲ್ಲಿ ನೋಡಿದರೂ ಪೊಲೀಸರೇ ಕಾಣುತ್ತಿದ್ದಾರೆ. ರಾಜ್ಯದ ನಾನಾ ಭಾಗದಿಂದ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.ಅಮಿತ್ ಶಾ ಅವರಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ರಾಜ್ಯದ ಹಲವು ಸಚಿವರು, ಜನಪ್ರತಿನಿಧಿಗಳು, ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.ಕೆಲವು ದಿನಗಳಿಂದ ಕೇರಳ ಗಡಿ ಸಹಿತ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ನಿಗಾ ಇರಿಸಲಾಗಿದೆ.ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳುವ ಹನುಮಗಿರಿಯಲ್ಲಿ ಮತ್ತು ಪುತ್ತೂರು ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ ಸಮಾವೇಶ ನಡೆಯಲಿರುವ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಉನ್ನತ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ:

ಸುಮಾರು ಮೂರು ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಮಧ್ಯೆ ಕೇಂದ್ರ ಗುಪ್ತಚರ ಇಲಾಖೆಯ ಅಽಕಾರಿಗಳೂ ಈ ಭಾಗದಲ್ಲಿ ಸಕ್ರಿಯರಾಗಿದ್ದಾರೆ.ಸಚಿವರು ಕೇರಳದ ಕಣ್ಣೂರುಗೆ ಬಂದು ಬಳಿಕ ಜಿಲ್ಲೆಯ ನಾನಾ ಕಡೆ ಪ್ರಯಾಣಿಸಲಿರುವ ಕಾರಣ ಜಿಲ್ಲಾಡಳಿತ ಸಚಿವರ ಭದ್ರತೆಗೆ ಗರಿಷ್ಠ ಆದ್ಯತೆ ನೀಡಿದೆ.

ಮೂರು ಹೆಲಿಪ್ಯಾಡ್: ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.
ಕೇರಳ ಗಡಿ ಭಾಗದಲ್ಲಿರುವ ಹನುಮಗಿರಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅಮರಗಿರಿ ಭಾರತಮಾತಾ ಮಂದಿರವನ್ನು ಸಚಿವರು ಉದ್ಘಾಟಿಸಲಿದ್ದಾರೆ.ಕಣ್ಣೂರುನಿಂದ ಬರಲಿರುವ ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ಈಶ್ವರಮಂಗಲ ಗಜಾನನ ಶಾಲೆ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು ಈಗಾಗಲೇ ಇದರ ಉದ್ಘಾಟನೆ ನಡೆದಿದೆ.ಹೈದರಾಬಾದ್‌ನಿಂದ ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಅಲ್ಲಿಂದ ಬಿಎಸ್‌ಎಫ್ ಹೆಲಿಕಾಪ್ಟರ್‌ನಲ್ಲಿ ಬರುವ ಅಮಿತ್ ಶಾರವರು ಹನುಮಗಿರಿ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ.‌ ಹನುಮಗಿರಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಬರಲಿರುವ ಶಾ ಅವರು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಎದುರಿನ ಮೈದಾನದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ. ಮೊಟ್ಟೆತ್ತಡ್ಕದಲ್ಲಿ ಇದೀಗ ಶಾಶ್ವತವಾದ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಇದರ ಜತೆಗೆ ಪುತ್ತೂರು ಸಂತ ಫಿಲೋಮಿನಾ ಹೆಲಿಕಾಪ್ಟರ್ ಕಾಲೇಜಿನ ಮೈದಾನವನ್ನೂ ಹೆಚ್ಚುವರಿ ಹೆಲಿಪ್ಯಾಡ್ ಆಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.ಇದು 3ನೇ ಮತ್ತು ತುರ್ತು ಹೆಲಿಪ್ಯಾಡ್ ಆಗಿ ಬಳಕೆಯಾಗಲಿದೆ.

ಕಂಗೊಳಿಸುತ್ತಿರುವ ಪುತ್ತೂರು ಪೇಟೆ: ಕ್ಯಾಂಪ್ರೋ ಸುವರ್ಣ ಮಹೋತ್ಸವ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ವಿವಿಧ ಮಂತ್ರಿಗಳು, ಜನಪ್ರತಿನಿಧಿಗಳಿಗೆ ಸ್ವಾಗತ ಕೋರಿ ಪುತ್ತೂರು ಪೇಟೆಯಾದ್ಯಂತ ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳನ್ನು ಅಳವಡಿಸಲಾಗಿದೆ.ಹನುಮಗಿರಿ ವ್ಯಾಪ್ತಿಯಲ್ಲಿಯೂ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ.ಇತರ ಗ್ರಾಮಾಂತರ ಭಾಗಗಳಲ್ಲೂ ರಸ್ತೆ ಬದಿ ಸ್ವಾಗತದ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

ಸಮಾವೇಶಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆ: ಸುಳ್ಯ ಭಾಗದಿಂದ ಬರುವವರಿಗಾಗಿ ಕಾವು ಕ್ಯಾಂಪೋ ಬಳಿಯಲ್ಲಿ, ಬೆಳ್ಳಾರೆ ಭಾಗದಿಂದ ಬರುವವರಿಗೆ ಪರ್ಪುಂಜ ಶಿವಕೃಪಾ ಹಾಲ್ ಬಳಿ, ಸವಣೂರು ಮತ್ತು ಸುಬ್ರಹ್ಮಣ್ಯ ಭಾಗದಿಂದ ಬರುವವರಿಗೆ ನರಿಮೊಗರು ಮುಕ್ವೆ ಉಮಾಮಹೇಶ್ವರಿ ದೇವಸ್ಥಾನದ ಬಳಿ, ಬೆಳ್ತಂಗಡಿ ಹಾಗೂ ನೆಲ್ಯಾಡಿ ಭಾಗದಿಂದ ಬರುವವರಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಬಂಟ್ವಾಳ ಭಾಗದಿಂದ ಬರುವವರಿಗೆ ಮಾಣಿ-ಕಬಕ ರಸ್ತೆಯ ಮಿತ್ತೂರು ಪೆಟ್ರೋಲ್ ಪಂಪ್ ಬಳಿ, ವಿಟ್ಲ ಕನ್ಯಾನ ಭಾಗದಿಂದ ಬರುವವರಿಗೆ ಕಬಕ-ವಿಟ್ಲ ರಸ್ತೆಯ ಅಳಕೆಮಜಲು ಭಜನಾ ಮಂದಿರ ಬಳಿ, ಪಾಣಾಜೆ ಭಾಗದಿಂದ ಬರುವವರಿಗೆ ಉಪ್ಪಳಿಗೆ ಶಾಲಾ ವಠಾರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ವಾಹನಗಳ ಪಾರ್ಕಿಂಗ್ ಸ್ಥಳ, ಪಾರ್ಕಿಂಗ್ ಪ್ರಮುಖರು: ವಿವೇಕಾನಂದ ತೆಂಕಿಲ ಶಾಲಾ ಮೈದಾನದಲ್ಲಿ ಕ್ಯಾಂಪ್ರೋ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವವರು ವಾಹನಗಳನ್ನು ಸ್ವಯಂ ಸೇವಕರು ಸೂಚಿಸಿದ ಸ್ಥಳದಲ್ಲೇ ಪಾರ್ಕ್ ಮಾಡುವಂತೆ ವಾಹನ ಪಾರ್ಕಿಂಗ್ ವ್ಯವಸ್ಥೆಯ ಸಂಚಾಲಕ ಭಾಮಿ ಅಶೋಕ್ ಶೆಣೈ ಮತ್ತು ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.ಪ್ರತಿ ವಾಹನ ನಿಲುಗಡೆಯ ಸ್ಥಳಕ್ಕೂ ಪ್ರತ್ಯೇಕ ಹೆಸರು ಸೂಚಿಸಲಾಗಿದೆ.ಪ್ರಮುಖವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆ, ಪುತ್ತೂರು ನಗರದ ಕಿಲ್ಲೆ ಮೈದಾನ, ಪುತ್ತೂರು ನಗರದ ಎಪಿಎಂಸಿ, ವಿಐಪಿಗಳಿಗೆ ತೆಂಕಿಲ ಬೈಪಾಸ್ ವ್ಯಾಪ್ತಿಯ ೩-೪ಲೇ ಔಟ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ.ಸುಳ್ಯದಿಂದ ಬರುವ ಬಸ್‌ಗಳಿಗೆ ಸುಭದ್ರ ಬಳಿ (ಸಿಂಧೂ) ಪಾರ್ಕಿಂಗ್‌ಗೆ ಅಜಿತ್ ಕೆಯ್ಯೂರು(ಮೊ: ೮೯೭೦೯೯೪೦೩೯) ನಿಲುಗಡೆ ಪ್ರಮುಖ್ ಅಗಿದ್ದಾರೆ.ಕಾಣಿಯೂರಿನಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಫಿಲೋಮಿನಾ ಹೈಸ್ಕೂಲ್ ಬಳಿ (ನರ್ಮದಾ) ಪಾರ್ಕಿಂಗ್‌ಗೆ ದಿನೇಶ್ ತಿಂಗಳಾಡಿ(ಮೊ:೮೪೩೧೮೩೯೬೧೪) ನಿಲುಗಡೆ ಪ್ರಮುಖರಾಗಿದ್ದಾರೆ.ಸುಳ್ಯದ ಕಡೆಯಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಬೈಪಾಸ್ ಅಭಯ ಮಾರ್ಬಲ್ ಎದುರು (ಯಮುನಾ) ಪಾರ್ಕಿಂಗ್‌ಗೆ ಅನಿಲ್ ದರ್ಬೆ (೯೯೦೨೮೧೩೭೧೧)ಪ್ರಮುಖರಾಗಿದ್ದಾರೆ.ವಿಐಪಿ ವಾಹನಗಳಿಗೆ ತೆಂಕಿಲ ಬೈಪಾಸ್ ಸುರೇಶ್ ಟವರ‍್ಸ್ ಬಳಿ (ತುಂಗಾ) ಮತ್ತು (ಭದ್ರ) ಪಾರ್ಕಿಂಗ್‌ಗೆ ಚಂದ್ರ ತೆಂಕಿಲ(೯೫೯೧೧೯೭೭೦೬) ಪ್ರಮುಖರಾಗಿದ್ದಾರೆ.ತೆಂಕಿಲ ಗೌಡ ಸಮುದಾಯದ ಬಳಿ (ಶರಾವತಿ) ಪಾರ್ಕಿಂಗ್‌ಗೆ ರೂಪೇಶ್ ಮುರ (೭೦೧೯೫೦೪೮೩೬) ಪ್ರಮುಖರಾಗಿದ್ದಾರೆ. ಸರಕಾರಿ ವಾಹನಗಳಿಗೆ ತೆಂಕಿಲ ಸ್ವಾಮಿ ಕಲಾಮಂದಿರದ(ಕೃಷ್ಣಾ) ಪಾರ್ಕಿಂಗ್‌ಗೆ ನಿತೇಶ್ ನಗರ(೮೯೦೪೨೨೧೪೨೯)ಪ್ರಮುಖರಾಗಿದ್ದಾರೆ.ತೆಂಕಿಲ ಮಂಗಳಾ ಹಾರ್ಡ್‌ವೇರ್ ಕಟ್ಟಡದ ಬಳಿ(ಪಲ್ಗುಣಿ)ಪಾರ್ಕಿಂಗ್‌ಗೆ ನಿತೇಶ್ ನಗರ, ನಗರ ಮತ್ತು ಬಲ್ನಾಡಿನಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ತೆಂಕಿಲ ದರ್ಶನ್ ಹಾಲ್‌ನ ಹಿಂಭಾಗ(ಶಾಂಭವಿ) ಪಾರ್ಕಿಂಗ್ ಚೇತನ್ ಬೊಳುವಾರು(ಮೊ: ೮೧೦೫೮೯೫೨೧೦)ಪ್ರಮುಖರಾಗಿದ್ದಾರೆ.ಅದೇ ಭಾಗದಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಜೈನಭವನ (ಸರಯೂ) ಪಾರ್ಕಿಂಗ್ ಜೀವನ್ ಬಲ್ನಾಡು(ಮೊ:೯೪೮೩೨೧೫೩೭೭) ಪ್ರಮುಖರಾಗಿದ್ದಾರೆ.ಅದೇ ಭಾಗದಿಂದ ಬರುವ ದ್ವಿಚಕ್ರ ವಾಹನಗಳಿಗೆ ತೆಂಕಿಲ ಪಾದೆಯ (ನೇತ್ರಾವತಿ) ಪಾರ್ಕಿಂಗ್‌ನಲ್ಲಿ ಭವಿಷ್ಯತ್ (೭೦೨೬೮೬೯೪೯೩) ಪ್ರಮುಖರಾಗಿದ್ದಾರೆ. ವಿಟ್ಲ ಭಾಗದಿಂದ ಬರುವ ಬಸ್‌ಗಳಿಗೆ ಬೈಪಾಸ್ ರಸ್ತೆಯ ಅಶ್ಮಿ ಕಂಪರ್ಟ್ಸ್ ಬಳಿ (ಕಾವೇರಿ) ಪಾರ್ಕಿಂಗ್‌ನಲ್ಲಿ ಪ್ರವೀಣ್ ಕಲ್ಲೇಗ(ಮೊ: ೯೬೬೩೮೮೫೨೩೬) ಪ್ರಮುಖರಾಗಿದ್ದಾರೆ. ವಿಟ್ಲ ಭಾಗದಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಸುಶ್ರುತ ಆಸ್ಪತ್ರೆಯ ಬಳಿ (ಗೋದಾವರಿ) ಪಾರ್ಕಿಂಗ್‌ನಲ್ಲಿ ರೂಪೇಶ್ ಬಲ್ನಾಡ್(೯೬೩೨೩೪೬೧೯೨)ಪ್ರಮುಖರಾಗಿದ್ದಾರೆ.ಬೆಳ್ತಂಗಡಿ ಮತ್ತು ಉಪ್ಪಿನಂಗಡಿಯಿಂದ ಬರುವ ಬಸ್‌ಗಳಿಗೆ ಮಹಾಲಿಂಗೇಶ್ವರ ದೇವಸ್ಥಾನದ (ಗೋದಾವರಿ) ಪಾರ್ಕಿಂಗ್‌ನಲ್ಲಿ ಜಿತೇಶ್ ಬಲ್ನಾಡ್ (ಮೊ:೯೬೦೬೭೭೯೭೩೭) ಪ್ರಮುಖರಾಗಿದ್ದಾರೆ.ಸುಳ್ಯ ರಸ್ತೆಯಿಂದ ಬರುವ ನಾಲ್ಕು ಚಕ್ರದ ವಾಹನಳಿಗೆ ಬೈಪಾಸ್ ಭಾರತ್ ಗ್ಯಾಸ್ ಎದುರುಗಡೆ (ಕುಮಾರಧಾರ) ಪಾರ್ಕಿಂಗ್‌ನಲ್ಲಿ ಹರೀಶ್ ದೋಲ್ಪಾಡಿ (ಮೊ: ೮೩೧೦೮೫೭೪೯೧) ಪ್ರಮುಖರಾಗಿದ್ದಾರೆ.ಪಂಚವಟಿ ಬಳಿ ಸೀತಾ ಪಾರ್ಕಿಂಗ್, ಪರ್ಲಡ್ಕ ಶಾಲಾ ಮೈದಾನದಲ್ಲಿ ಭಾಗೀರಥಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಎಲ್ಲಾ ವಾಹನಗಳು ಮಧ್ಯಾಹ್ನ ಗಂಟೆ ೧.೩೦ರ ಒಳಗಾಗಿ ಸೂಚಿಸಿದ ಸ್ಥಳದಲ್ಲಿ ನಿಲುಗಡೆಗೊಳಿಸಬೇಕೆಂದು ಪಾರ್ಕಿಂಗ್ ವಿಭಾಗದ ಸಂಚಾಲಕರು ಸೂಚಿಸಿದ್ದಾರೆ.

 ಅಮಿತ್ ಶಾ ಕಾರ್ಯಕ್ರಮ....

ಫೆ.11ರಂದು ಅಪರಾಹ್ನ 2.50ಕ್ಕೆ ಕಣ್ಣೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಅಮಿತ್ ಶಾ ಅವರು 3.15ಕ್ಕೆ ಹನುಮಗಿರಿ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ಹನುಮಗಿರಿ, ಅಮರಗಿರಿ ಭೇಟಿ ಮುಗಿಸಿ 3.40ಕ್ಕೆ ಪುತ್ತೂರಿಗೆ ಹೊರಡಲಿದ್ದಾರೆ.ಸಾಯಂಕಾಲ 5.30ರವರೆಗೆ ಪುತ್ತೂರು ತೆಂಕಿಲ ಮೈದಾನದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.5.40ಕ್ಕೆ ಪುತ್ತೂರಿನಿಂದ ಹೊರಟು, 6 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ.6.15ರಿಂದ 8 ಗಂಟೆಯವರೆಗೆ ಮಂಗಳೂರಿನಲ್ಲಿ ಇರಲಿದ್ದಾರೆ.


1,600 ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.7 ಮಂದಿ ಎಸ್‌ಪಿ, 22 ಮಂದಿ ಡಿವೈಎಸ್ಪಿ, 38 ಮಂದಿ ಇನ್‌ಸ್ಪೆಕ್ಟರ್, 80ಕ್ಕೂ ಅಧಿಕ ಪಿಎಸ್‌ಐಗಳು ಕರ್ತವ್ಯ ನಿರ್ವಹಿಸಲಿದ್ದಾರೆ.ಇದರ ಜತೆಗೆ ಪ್ಯಾರಾ ಮಿಲಿಟರಿ ಫೋರ್ಸ್, ಅಮಿತ್ ಶಾ ಅವರಿಗೆ ಎಸ್‌ಪಿಜಿ ಭದ್ರತೆ ಇರಲಿದೆ.ಹನುಮಗಿರಿ, ಮೊಟ್ಟೆತ್ತಡ್ಕ ಹೆಲಿಪ್ಯಾಡ್, ತೆಂಕಿಲ ಸಮಾವೇಶ ಸ್ಥಳದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಫೆ.11ರಂದು ಪುತ್ತೂರು ನಗರದಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗಸೂಚಿ ನಿಗದಿಪಡಿಸಲಾಗಿದೆ.

ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ
ಅಮಿತ್ ಶಾ ಅವರು ಹನುಮಗಿರಿ ಕಾರ್ಯಕ್ರಮ ಮುಗಿಸಿ ಪುತ್ತೂರಿಗೆ ಹೊರಡುವ 1 ಗಂಟೆ ಮೊದಲು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ 2 ಕಡೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗುತ್ತದೆ.ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ಲಿನೆಟ್ ಜಂಕ್ಷನ್‌ನಿಂದ ಮುಕ್ರಂಪಾಡಿ ತನಕ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗುತ್ತದೆ.

LEAVE A REPLY

Please enter your comment!
Please enter your name here