ದೇರ್ಲದ ಜಿತೇಶ್ ಪಾಟಾಳಿ, ಅಂಬಟೆಮೂಲೆ ಪ್ರವೀಣ್ ಮೃತಪಟ್ಟವರು
ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದ 6 ಯುವಕರು ಜೊತೆಯಾಗಿ ಸುಳ್ಯಕ್ಕೆ ಹೋಗಿದ್ದರು
ನೀರಲ್ಲಿ ಮುಳುಗುತ್ತಿದ್ದ ಪ್ರವೀಣ್ರನ್ನು ರಕ್ಷಿಸಲು ಯತ್ನಿಸಿದ ಜಿತೇಶ್ ಕೂಡಾ ಮೃತ್ಯು
ಪುತ್ತೂರು:ಸುಳ್ಯದ ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಕೌಡಿಚ್ಚಾರ್ ಪರಿಸರದ ಆರು ಮಂದಿ ಯುವಕರಲ್ಲಿ ಈಜಲು ಬಾರದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕೆಯ್ಯೂರು ಗ್ರಾಮದ ದೇರ್ಲ ನಾರಾಯಣ ಪಾಟಳಿ-ಗೀತಾ ದಂಪತಿಯ ಕಿರಿಯ ಮಗ ಜಿತೇಶ್(19ವ.)ಮತ್ತು ಪಡುವನ್ನೂರು ಗ್ರಾಮದ ಅಂಬಟೆಮೂಲೆ ಕೃಷ್ಣ ನಾಯ್ಕ-ದೇವಕಿ ದಂಪತಿಯ ಏಕೈಕ ಪುತ್ರ ಪ್ರವೀಣ್(19ವ.)ಮೃತಪಟ್ಟವರು.ಫೆ.11ರಂದು ಸಂಜೆ ಈ ಘಟನೆ ನಡೆದಿದೆ.
ಸಂತೋಷ್ ಅಂಬಟೆಮೂಲೆ, ಸತ್ಯಾನಂದ ಚಂದುಕೂಡ್ಲು, ಯುವರಾಜ ಅಂಬಟೆಮೂಲೆ, ನಿತೀಶ್ ಬಳ್ಳಿಕಾನ, ಜಿತೇಶ್ ದೇರ್ಲ ಮತ್ತು ಪ್ರವೀಣ್ ಅಂಬಟೆಮೂಲೆ ಇವರೆಲ್ಲರೂ ಸೇರಿ ಜತೆಯಾಗಿ ಮೆಷಿನ್ ಮೂಲಕ ಹುಲ್ಲು ಹೆರೆಯುವ ಕೆಲಸಕ್ಕೆ ಹೋಗುವವರಾಗಿದ್ದು ಫೆ.11ರಂದು ಕೆಡ್ವಸದ ಪ್ರಯುಕ್ತ ಕೆಲಸಕ್ಕೆ ರಜೆ ಮಾಡಿದ್ದರು.ತಾವು ಒಟ್ಟಿಗೆ ಕೆಲಸಕ್ಕೆ ಹೋಗುವ ಕಾರಿನಲ್ಲಿಯೇ ಅವರು ಮಧ್ಯಾಹ್ನ ಜತೆಯಾಗಿ ಕಾರಿನಲ್ಲಿ ಸುಳ್ಯಕ್ಕೆ ಹೋಗಿದ್ದರು.ಸುಳ್ಯದ ಓಡಬಾಯಿಯಲ್ಲಿ ಅಗ್ನಿಶಾಮಕ ಇಲಾಖೆಯ ಸಮೀಪ ಕಾರನ್ನು ನಿಲ್ಲಿಸಿ, ಪಕ್ಕದಲ್ಲೇ ಇರುವ ತೂಗು ಸೇತುವೆಯಿಂದಾಗಿ ದೊಡ್ಡೇರಿಗೆ ಹೋಗಿದ್ದರು.ಸತ್ಯಾನಂದ ಚಂದುಕೂಡ್ಲುರವರ ಸಂಬಂಧಿ ಗೋವಿಂದ ನಾಯ್ಕರ ಮನೆ ದೊಡ್ಡೇರಿಯಲ್ಲಿದ್ದು ಈ ಆರು ಜನ ಯುವಕರು ಕೂಡಾ ಅಲ್ಲಿಗೆ ಹೋಗಿ ಮನೆಯವರ ಜತೆ ಮಾತನಾಡಿ, ಅಲ್ಲಿ ಶರಬತ್ತು ಕುಡಿದು ಅಲ್ಲಿಂದ ಹೊರಟು ಬಂದಿದ್ದರು.ಹಾಗೆ ಹೊರಟು ಬಂದ ಅವರು ತೂಗು ಸೇತುವೆಯಲ್ಲಿ ಬಾರದೇ ಪಕ್ಕದಲ್ಲೇ ಇರುವ ಪಯಸ್ವಿನಿ ನದಿಗೆ ಇಳಿದು ಸ್ನಾನ ಮಾಡಲು ಮುಂದಾದರು.ಅವರಲ್ಲಿ ಈಜಲು ತಿಳಿದಿದ್ದ ನಿತೀಶ್ರವರು ನೀರಿಗಿಳಿದು ಮುಂದೆ ಹೋಗತೊಡಗಿದಾಗ ಪ್ರವೀಣ ಮತ್ತು ಜಿತೇಶ್ ಅವರೂ ನೀರಿಗಿಳಿದರು.ನಿತೀಶ್ರವರು ಹೊಳೆಯ ಬದಿಯಿಂದಾಗಿ ಹೋದರು.ಪ್ರವೀಣ್ ಮತ್ತು ಜಿತೇಶ್ರವರು ನೀರು ತುಂಬಿದ ಗುಂಡಿಯ ಮಧ್ಯದಿಂದಾಗಿ ಹೋಗುತ್ತಿದ್ದ ವೇಳೆ ಪ್ರವೀಣ್ರವರು ನೀರಿನಲ್ಲಿ ಮುಳುಗಿದರು.ಆತ ಬೊಬ್ಬೆ ಹೊಡೆದಾಗ ಜೊತೆಯಲ್ಲೇ ಇದ್ದ ಜಿತೇಶ್ರವರು ಪ್ರವೀಣ್ರವರನ್ನು ಎಳೆಯಲು ಮುಂದಾದಾಗ ಇಬ್ಬರೂ ನೀರಿನಲ್ಲಿ ಮುಳುಗಿದರು.ಜತೆಗಿದ್ದ ನಾಲ್ವರು ಯುವಕರೂ ಕೂಡಲೇ ನೀರಿಗೆ ಇಳಿದು ಜಿತೇಶ್ ಮತ್ತು ಪ್ರವೀಣ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ದಡದಲ್ಲಿ ನಿಂತು ಜೋರಾಗಿ ಬೊಬ್ಬೆ ಹೊಡೆದರು.ಈ ಬೊಬ್ಬೆ ಕೇಳಿ,ನದಿಯ ಪಕ್ಕದಲ್ಲಿ ಮನೆಯಿರುವ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಕಲಾವತಿ ದೊಡ್ಡೇರಿಯವರ ಪುತ್ರ ಜಯಪ್ರಕಾಶರು ಓಡಿ ಬಂದರು.ಬೊಬ್ಬೆ ಹೊಡೆಯುತ್ತಿದ್ದ ಯುವಕರಿಂದ ವಿಷಯ ತಿಳಿದು ಜಯಪ್ರಕಾಶರು ನೀರಿಗೆ ಧುಮುಕಿದರು.ಆದರೆ ಆ ವೇಳೆಗಾಗಲೇ ಜಿತೇಶ್ ಮತ್ತು ಪ್ರವೀಣ್ ನೀರಲ್ಲಿ ಪೂರ್ಣವಾಗಿ ಮುಳುಗಿದ್ದು ಜಯಪ್ರಕಾಶರು ಅವರನ್ನು ನೀರಿನಿಂದ ಮೇಲಕ್ಕೆತ್ತಿದರು.ಆದರೆ ಆ ವೇಳೆಗಾಗಲೇ ಅವರಿಬ್ಬರ ಪ್ರಾಣ ಪಕ್ಷಿ ಹಾರಿಹೋಗಿತ್ತು.ಇಬ್ಬರೂ ಪರಸ್ಪರ ಹಿಡಿದುಕೊಂಡಿದ್ದ ಭಂಗಿಯಲ್ಲೇ ಕೊನೆಯುಸಿರೆಳೆದಿದ್ದರು.ಬಳಿಕ ಮೃತ ದೇಹಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು. ಪೊಲೀಸರು ಬಂದ ಬಳಿಕ ಪೋಸ್ಟ್ ಮಾರ್ಟಂ ನಡೆಸಿ ಮೃತದೇಹಗಳನ್ನು ಯುವಕರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಮೃತ ಜಿತೇಶ್ರವರು ತಂದೆ,ತಾಯಿ, ಅಣ್ಣ ಹಾಗೂ ಸಹೋದರಿಯನ್ನು ಅಗಲಿದ್ದಾರೆ.ಮೃತ ಪ್ರವೀಣ ಅವರು ತಂದೆ,ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.ಈ ದುರ್ಘಟನೆಯಿಂದಾಗಿ ಎರಡೂ ಮನೆಗಳಲ್ಲಿ ಸ್ಮಶಾನ ಮೌನ ಆವರಿಸಿದೆ.