ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಹಲವು ವೈಶಿಷ್ಟ್ಯಗಳೊಂದಿಗೆ ನಡೆದ ‘ಕೃಷಿ ಯಂತ್ರ ಮೇಳ, ಕನಸಿನ ಮನೆ’ ಸಂಪನ್ನ
ಗಮನ ಸೆಳೆದ ಮೇಳಗಳು, ಪ್ರದರ್ಶನ, ಮಾರಾಟ

0

ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಆವರಣದಲ್ಲಿ ಫೆ.10ರಿಂದ 12ರ ತನಕ 5ನೇ ಬೃಹತ್ ಕೃಷಿ ಯಂತ್ರ ಮೇಳ 2023 ಮತ್ತು ಕನಸಿನ ಮನೆ ಯಂತ್ರ/ ತಂತ್ರಜ್ಞಾನಗಳ ಪ್ರದರ್ಶನ, ಮಾರಾಟ ಮತ್ತು ವಿಚಾರ ಸಂಕಿರಣದೊಂದಿಗೆ ಅದ್ಭುತವಾಗಿ ನಡೆಯಿತು. ವಿವಿಧ ಬಗೆಯ ಯಂತ್ರೋಪಕರಣಗಳು, ಆಹಾರ ಮೇಳಗಳು, ಹೂವಿನ ಗಿಡ, ಪ್ರಾಣಿ ಪಕ್ಷಿಗಳ ಮಾರಾಟ ಪ್ರದರ್ಶನ, ತಿಂಡಿ ತಿನಿಸುಗಳು, ಮಣ್ಣಿನಿಂದ ತಯಾರಿಸಿದ ಪರಿಕರಗಳು,ವಸ್ತು ಪ್ರದರ್ಶನ, ಕನಸಿನ ಮನೆಯ ಒಂದಷ್ಟು ಸಲಕರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ನಾನಾ ಬಗೆಯ ವಸ್ತು ಪರಿಕರಗಳನ್ನು ಹಾಗೂ ಕಾರ್ಯಕ್ರಮವನ್ನು ಒಳಗೊಂಡ ಕೃಷಿ ಯಂತ್ರ ಮೇಳದಲ್ಲಿ ಕಾಣಬಹುದಾಗಿತ್ತು.

ನರ್ಸರಿಯಲ್ಲೊಂದು ಪುಷ್ಪಲೋಕ: ಕೆಂಪು ಹಳದಿ ಹಸಿರು ಬಿಳಿ ಹೀಗೆ ನವರಂಗಗಳಿಂದ ಕೂಡಿದ ಗುಲಾಬಿ, ಸೇವಂತಿಗೆ, ದಾಸವಾಳ, ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಒಂದರಿಂದ ಒಂದು ವಿಭಿನ್ನ ರೀತಿಯಿಂದ ಕಂಗೊಳಿಸುತ್ತಿತ್ತು. ಬಂದಂತಹ ಎಲ್ಲಾ ಹೆಣ್ಣು ಮಕ್ಕಳನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದೆ ನವರಂಗಿನ ಹೂವಿನ ಗಿಡಗಳು ಎಂದರೆ ತಪ್ಪಾಗಲಾರದು.

ಪ್ರಜ್ವಲಿಸಿತು ಪಾರಂಪರಿಕ ಗ್ರಾಮ: ಮಂಗಳೂರು ವಿಶ್ವವಿದ್ಯಾನಿಲಯ ಪ್ರವರ್ತಿತ ಪಾರಂಪರಿಕ ಗ್ರಾಮಕ್ಕೆ ಒಳಹೊಕ್ಕಾಗ ಕಮ್ಮಾರಿಕೆ, ಕುಂಬಾರಿಕೆ , ಬುಟ್ಟಿ ನೇಯುವುದು, ಕೇರಳ ಬಿಳಲಿನ ಬುಟ್ಟಿ ತಯಾರಿಕೆ, ಕೊರಂಬು ಮತ್ತು ಗೊಬ್ಬರದ ಬುಟ್ಟಿ ತಯಾರಿಕೆ ಹೀಗೆ ಅನೇಕ ವಿಧದ ಪಾರಂಪರಿಕವಾದ ವಸ್ತುಗಳನ್ನು ನೇಯುವುದರ ದೃಶ್ಯವನ್ನು ನೋಡಬಹುದಾಗಿತ್ತು.

ಹೀಗೊಂದು ಪರಂಪರೆ: ಕಾರ್ಲ ತಾಲೂಕು ಕಡ್ತಾಲ ಗ್ರಾಮ ದ ಮಂತ್ರಸಿರಿ ನಿವಾಸದ ದಂಪತಿ ರಘು ಪರವ ಹಾಗೂ ವಸಂತಿ ಮತ್ತು ಅವರ ಕಿರಿಮಗ ರವೀಂದ್ರರವರು ಜೊತೆಗೂಡಿ ತಯಾರಿಸಿದಂತಹ ಅನೇಕ ಪಾರಂಪರಿಕ ವಸ್ತುಗಳನ್ನು ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇವರು ಸುಮಾರು 25 ವರ್ಷದಿಂದ ಬುಟ್ಟಿ ತಯಾರಿಕೆ ಯಲ್ಲಿ ತೊಡಗಿ ಅನೇಕ ಬುಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಈ ಪರಿಕರಗಳ ತಯಾರಿಕೆಗೆ ಬೇಕಾದಂತಹ ಪರಿಕರಗಳನ್ನು ತಾವೇ ಸ್ವತಹ ಅರಣ್ಯಾಧಿಕಾರಿಗಳ ಅಪ್ಪಣೆಯ ಮೇರೆಗೆ ಕಾಡಿನಿಂದ ಬಿದಿರನ್ನು ತಂದು ಕೈಯಾರೆ ಅದರಿಂದ ಅನೇಕ ಪರಿಕರಗಳನ್ನು ತಯಾರಿಸಿ ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇಡುತ್ತಿದ್ದರು. ತುಳುನಾಡಿನ ಸಂಸ್ಕೃತಿಯ ಜೊತೆಗೆ ಕಲೆಗಳನ್ನು ಉಳಿಸುವಂತಹ ಕಾರ್ಯ ಇಂತವರಿಂದ ನಡೆಯುತ್ತಿದೆ ಎಂಬುವುದು ಸಂತೋಷದಾಯಕವಾದ ವಿಚಾರ.

ಮುಟ್ಟಾಳೆಯನ್ನು ತಯಾರಿಸುವ ದೃಶ್ಯವೊಂದು ಕೃಷಿಮೇಳದ ಪಾರಂಪರಿಕ ಗ್ರಾಮದ ಒಳಗೆ ಕಾಣಬಹುದಾಗಿತ್ತು. ಇದರ ತಯಾರಿಕೆಯಲ್ಲಿ ತೊಡಗಿದವರು ಕಾರ್ಕಳ ತಾಲೂಕು ಅಮೃತನಗರ ದಯಾನಾಯಕ್ ಶಾಲೆಯ ಸಮೀಪದ ಕೊರಗ ಪಾಣರ್‌ರವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಂತರ ತಮ್ಮನ್ನು ತಾವು ಸಂಪೂರ್ಣ ದೇವರಾಧನೆಯಲ್ಲಿ ತೊಡಗಿಸಿಕೊಂಡು ಬಿಡುವಿನ ಸಮಯದಲ್ಲಿ ಇಂತಹ ಪಾರಂಪರಿಕ ವಸ್ತು ತಯಾರಿಸಿ ಮಾಡುತ್ತಿದ್ದಾರೆ. 6 ವರ್ಷ ಪ್ರಾಯದಲ್ಲೇ ಇವರು ದೈವದ ನರ್ತನದಲ್ಲಿ ತೊಡಗಿದ್ದರು. ಸುಮಾರು ಮೂವತ್ತು ವರ್ಷಗಳಿಂದ ಹಾಳೆಯ ಮುಟ್ಟಾಳೆಯನ್ನು ತಯಾರಿಕೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕೇವಲ ಐದು ಪೈಸೆಗೆ ಮುಟ್ಟಾಳೆಯನ್ನು ಇವರು ಮಾರಿದ್ದಾರಂತೆ. ಇಂದು ಒಂದು ಹಾಳೆಯ ಮುಟ್ಟಾಳೆಯ ಬೆಲೆ ಸುಮಾರು 50 ರೂ ಗೆ ಏರಿಕೆಯಾಗಿದೆ.

ಸುಮಾರು ನಲವತ್ತೈದು ವರ್ಷಗಳಿಂದ ನಾರಾಯಣ ಮೂಲ್ಯ ಹಾಗೂ ಸುಂದರಿ ದಂಪತಿಗಳು ತಮ್ಮನ್ನು ತಾವು ಕುಂಬಾರರ ಕೆಲಸದಲ್ಲಿ ತೊಡಗಿಸಿಕೊಂಡವರು. ಮಣ್ಣಿನಿಂದ ತಯಾರಿಸಿದ ಹೂಜಿ, ಹಣತೆ, ಮಡಕೆ, ಲೋಟ, ತಟ್ಟೆ ಗಳನ್ನು ತಯಾರಿಸಿ ಪ್ರದರ್ಶನದ ಜೊತೆಗೆ ಮಾರಾಟದಲ್ಲಿ ಕೂಡ ತೊಡಗಿಸಿಕೊಂಡಿದ್ದರು.

ಶ್ರೀದುರ್ಗಾ ಸ್ವ ಸಹಾಯ ಸಂಘ ದ ಸದಸ್ಯರಾದ ವೈ. ದಾಮೋದರ ಆಚಾರ್ಯ ಹಾಗೂ ಬ್ರಹ್ಮಶ್ರೀ ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರಾದ ಪುಷ್ಪಾವತಿ ಡಿ ಆಚಾರ್ಯ ದಂಪತಿ ಸುಮಾರು 24, 25 ವರ್ಷಗಳಿಂದ ಕಮ್ಮಾರಿಕೆಯ ಕೆಲಸದಲ್ಲಿ ತೊಡಗಿಸಿ ಕೊಂಡವರು. ಕುಟುಂಬ ಸಮೇತ ಇವರು ಕಮ್ಮಾರಿಕೆಯಲ್ಲಿ ತೊಡಗಿದ್ದಾರೆ. ಸುಮಾರು 9 ವರ್ಷಗಳಿಂದ ತಿರುಗಾಟ ಕಮ್ಮಾರ ಕೆಲಸದಲ್ಲಿ ತೊಡಗಿದ್ದಾರೆ. ಇವರು ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ತಮ್ಮ ಕಮ್ಮಾರಿಕೆ ಕೆಲಸದ ಪ್ರದರ್ಶನವನ್ನು ನೀಡಿದ್ದಾರೆ. ಹೀಗೆ ಅನೇಕ ಕಡೆಗಳಲ್ಲಿ ಇವರು ಇದರ ಪ್ರದರ್ಶನವನ್ನು ನೀಡುತ್ತಾ ಬರುತ್ತಿದ್ದಾರೆ. ಇದರ ಪಕ್ಕದಲ್ಲಿ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಗತಕಾಲದ ವಸ್ತು ಸಲಕರಣೆಗಳನ್ನು ವೀಕ್ಷಣೆಗಾಗಿ ಇಟ್ಟಿದ್ದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಾರುಬಾರು: ಸರಿಯಾದ ಸಮಯಕ್ಕೆ ಊಟ ತಿಂಡಿಯನ್ನು ಸೇವಿಸದೇ ತಮ್ಮನ್ನು ತಾವು ಸಂಪೂರ್ಣವಾಗಿ ಕೃಷಿ ಯಂತ್ರ ಮೇಳದಲ್ಲಿ ತೊಡಗಿಸಿಕೊಂಡಿದ್ದರು. ಒಂದೆಡೆ ವಿಕಸನ ಟಿವಿಯ ಕೆಲಸ, ವೇದಿಕೆಯತ್ತ ಹಾಯಿಸಿದರೆ ರಾತ್ರಿ ಸಮಯದಲ್ಲಿ ಶ್ವಾನಗಳ ಕರ್ಣಗಳು ಯಾವ ರೀತಿ ಚುರುಕಾಗಿರುತ್ತದೆಯೋ ಆ ತರಹ ಪ್ರತಿ ಕಾರ್ಯಕ್ರಮದ ವರದಿಯನ್ನು ಸರಿಯಾಗಿ ಆಲಿಸಿ ಗಣ್ಯರು ಸಂಪನ್ಮೂಲ ವ್ಯಕ್ತಿಗಳು ಮಾತನಾಡುವ ಪ್ರತಿಯೊಂದು ಮಾತುಗಳನ್ನು ಅಚ್ಚೊಡೆಯುತ್ತ ಎಲ್ಲಿ ಯಾವ ವಿವರಗಳು ಬಿಟ್ಟು ಹೋಗುತ್ತೋ ಎಂಬ ಭಯದಿಂದ ವರದಿ ಮಾಡುವ ಭಾವಿ ಪತ್ರಕರ್ತರು. ಜೊತೆಗೆ ನೇರ ಪ್ರಸಾರದಲ್ಲಿ ಕ್ಯಾಮೆರಾವನ್ನು ನಿರ್ವಹಿಸುತ್ತ ಫಾರಿನ್ ಹುಡುಗರು ಕಿವಿಗೆ ಹೆಡ್ ಫೋನ್ ಹಾಕಿ ಮಿಂಚುವ ತರ ತಾವುಗಳು ಕಿವಿಗೆ ಹೆಡ್ ಫೋನ್ ಹಾಕಿಕೊಂಡು ನೇರ ಪ್ರಸಾರ ಸರಿಯಾಗಿ ಪ್ರಸರಾಗೊಳ್ಳುತ್ತಿದೆಯೋ ಎಂಬುದನ್ನು ಆಗಾಗ ಗಮನಿಸುತ್ತಿರುವುದು, ಇತ್ತ ಕಣ್ಣು ಹಾಯಿಸಿದರೆ ಅಲ್ಲೊಬ್ಬ ಕ್ಯಾಮರವನ್ನು ಹಿಡಿದು ಗಣ್ಯ ವ್ಯಕ್ತಿಗಳು ಆಗಮಿಸುವ ಸಂದರ್ಭದಲ್ಲಿ ಅವರ ಹಿಂದೂ ಮುಂದು ಓಡಾಡುತ್ತಾ ಫೋಟೋವನ್ನು ಕ್ಲಿಕ್ಕಿಸುವ ದೃಶ್ಯ, ಇತ್ತ ಪ್ರತಿ ಮಳಿಗೆಯಲ್ಲೂ ಒಬ್ಬೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪೆನ್ನು ಪುಸ್ತಕ ಹಿಡಿದು ಮಾಹಿತಿಯನ್ನು ಕಲೆ ಹಾಕುವ ನೋಟ, ಆ ಸುಡು ಬಿಸಿಲಿನ ಮಧ್ಯೆಯು ವಿದ್ಯಾರ್ಥಿಗಳು ಜಿಂಕೆಯ ಹಾಗೆ ಚುರುಕಾಗಿ ಪತ್ರಿಕೋದ್ಯಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ಪರಿಯು ಮೆಚ್ಚುಗೆಗೆ ಪಾತ್ರವಾಗಿತ್ತು.
ಪ್ರತಿದಿನದ ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿ ವರದಿಯನ್ನು ಪತ್ರಿಕೆಗಳಿಗೆ ಅದೇ ದಿನ ಕಳುಹಿಸಿ ಮರುದಿನ ವರದಿಯು ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ಮಾಡಿದ ಹೆಮ್ಮೆ ಪತ್ರಿಕೋದ್ಯಮ ವಿದ್ಯಾರ್ಥಿಗಳದ್ದು. ಕೃಷಿ ಯಂತ್ರ ಮೇಳದ ಬಗ್ಗೆ ಎರಡು ವಿಶೇಷ ವಿಕಸನ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಅದರಲ್ಲಿ ಕೃಷಿಯಂತ್ರ ಮೇಳದ ಕುರಿತಾದ ಲೇಖನಗಳು ಇನ್ನಿತರೆ ಮಾಹಿತಿ ಹೀಗೆ ಹತ್ತು ಹಲವು ವಿಚಾರಗಳನ್ನು ಒಳಗೊಂಡಿದ್ದಂತಹ ಪತ್ರಿಕೆಯನ್ನು ಸ್ವತಹ ವಿದ್ಯಾರ್ಥಿಗಳೇ ತಯಾರಿಸಿದ್ದು ಭಲೇ ಅನ್ನಿಸಿತ್ತು.

ಕರ್ನಾಟಕದ ಅನೇಕ ಕಡೆಯಿಂದ ಈ ಕೃಷಿ ಮೇಳಕ್ಕೆ ಅನೇಕ ರೈತರು ಭಾಗವಹಿಸಿದ ನಿದರ್ಶನಗಳುಂಟು. ಇದಕ್ಕೆ ಸಂಪೂರ್ಣವಾಗಿ ಸಹಕರಿಸಿದ್ದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ ಆರ್ ನಿಡ್ಪಳ್ಳಿ, ಉಪನ್ಯಾಸಕಿಯಾದ ಹವ್ಯಾ ಪುರ, ಸ್ನಾತಕೋತ್ತರ ವಿಭಾಗದ ಪತ್ರಿಕೋದ್ಯಮ ಉಪನ್ಯಾಸಕಿಯಾದ ಶ್ರೀಪ್ರಿಯಾ, ಉಪನ್ಯಾಸಕರಾದ ಭರತ್ ಶೆಟ್ಟಿ ಹಾಗೂ ಸಂತೋಷ್ ಕುಮಾರ್.

ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೃಷಿ ಮೇಳದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಯಾವ ರೀತಿ ಎಂದರೆ ಪದವಿ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆಗಳು ನಡೆಯುತ್ತಿದ್ದು ಅದನ್ನು ಒಂದೆಡೆ ಸಂಬಾಳಿಸಿಕೊಂಡು ತಮ್ಮ ಕರ್ತವ್ಯವನ್ನು ಮರೆಯದೆಯು ಕಾರ್ಯಕ್ರಮದ ಕೊನೆಯವರೆಗೂ ನಿಂತು ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು. ಮಕ್ಕಳು ಮನಸ್ಸು ಮಾಡಿದರೆ ಏನ್ನೂ ಸಾಧಿಸಿ ತೋರಿಸುತ್ತಾರೆ ಎಂಬುದಕ್ಕೆ ಕೃಷಿಮೇಳವೇ ಸಾಕ್ಷಿಯಾಯಿತು.
ಜನರ ನೋಟ ಬಾನೆತ್ತರಕ್ಕೆ ಹಾಯಿಸಿದ ಡ್ರೋನ್: ಕೃಷಿ ಬೆಳೆಗಳಿಗೆ ಸುಲಭವಾಗಿ ಮದ್ದು ಸಿಂಪಡೆನೆ ಮಾಡುವ ಕಲ್ಪನೆಯೊಂದಿಗೆ ಡ್ರೋನ್ ಬಳಸಿ ಯಾವ ರೀತಿ ಸಿಂಪಡಿಸಬಹುದು ಎನ್ನುವ ಮಾಹಿತಿಯನ್ನು ಡ್ರೋನ್ ಹಾರಿಸುವುದರ ಮೂಲಕ ಪ್ರದರ್ಶಿಸಲಾಗುತ್ತಿತ್ತು ಇದು ಬಂದಂತಹ ಎಲ್ಲರನ್ನೂ ಪನ್ನೀರು ಎರಚಿ ದ ಹಾಗೆ ನೀರೆರೆಚಿ ಸ್ವಾಗತಿಸುತ್ತಿತ್ತು.

91ರ ಕೆಎಸ್ ಕೃಷ್ಣ ಭಟ್ಟರು ಕೃಷಿಮೇಳದಲ್ಲಿ: ತಮ್ಮ 35 ನೇ ವಯಸ್ಸಿನಲ್ಲಿ ಅಳಿಕೆಯ ಜೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ನಿರ್ವಹಿಸುತ್ತಿದ್ದು ಇದೀಗ ನಿವೃತ್ತ ಜೀವನದಲ್ಲಿಯು ತಮ್ಮನ್ನು ತಾವು ಸಂಪೂರ್ಣವಾಗಿ ವಿಧ್ಯಾರ್ಥಿಗಳಿಗೆ ಮೀಸಲಿಟ್ಟವರು ಕೆ ಎಸ್ ಕೃಷ್ಣ ಭಟ್ಟರು. ಕೃಷಿಕರ ಕುಟುಂಬದಿಂದ ಬಂದ ಇವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಕಂಡವರು. ಮಾವಂದಿರಾದ ರಾಮಚಂದ್ರ ಭಟ್ ಹಾಗೂ ತಿಮ್ಮಣ್ಣ ಭಟ್ ರವರು ಈ ಚಳುವಳಿಯಲ್ಲಿ ಭಾಗಿಯಾಗಿದ್ದರಂತೆ. ಗಾಂಧೀಜಿಯವರ ಅಂತ್ಯಸಂಸ್ಕಾರದ ವಿಭೂತಿಯನ್ನು ನೇತ್ರಾವತಿ ನದಿಗೆ ಬಿಡುವ ಮೆರವಣಿಗೆಯಲ್ಲಿ ಕೃಷ್ಣ ಭಟ್ಟರು ಭಾಗಿಯಾಗಿದ್ದರು. ಅನೇಕ ವಿದ್ಯಾದೇಗುಲಗಳಿಗೆ ತಮ್ಮ ವೇತನದ ಬಹುಪಾಲನ್ನು ಅಂದಿನಿಂದ ಇಂದಿನವರೆಗೂ ನೀಡುತ್ತಾ ಬಂದವರು. ಕೃಷಿ ಮೇಳವು ನಮ್ಮ ಸಂಸ್ಥೆಗೆ ಒಂದು ಹೆಮ್ಮೆ ಎನ್ನುತ್ತಾರೆ ಕೃಷಿಯ ಬಗ್ಗೆ ಅತ್ಯಂತ ಒಲವು ಹಾಗೂ ಹೆಚ್ಚಿನ ಜ್ಞಾನವನ್ನು ಪಡೆದು ಮೇಳಕ್ಕೆ ಆಗಮಿಸಿದ 91ರ ಕೆಎಸ್ ಕೃಷ್ಣ ಭಟ್.

ಯಶಸ್ಸಿನಲ್ಲಿ ಸಿಂಹಪಾಲು ವಾಹನ ನಿಲುಗಡೆ ಕಾರ್ಯದ ಸ್ವಯಂ ಸೇವಕರಿಗೆ: ಬೃಹತ್ ಮೇಳಕ್ಕೆ ಬಂದ ಸಾವಿರಾರು ವಾಹನಗಳ ನಿಲುಗಡೆಗೆ ಅಲ್ಲಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಯಾವುದೇ ಕುಂದುಕೊರತೆಗಳು ಬಾರದಂತೆ ಅಚ್ಚುಕಟ್ಟಾಗಿ ನಿಷ್ಠೆಯಿಂದ ಮೂರು ದಿನಗಳ ಕಾಲ ಹಗಲಿರುಳೆನ್ನದೆ ಬೆವರು ಸುರಿಸಿ ಸಹಕರಿಸಿದ್ದು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತಂಡ. ಎಲ್ಲರೂ ಈ ಮೇಳ ದ ಒಳಗಡೆ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಕೆಲಸ ಮಾಡುತ್ತಿದ್ದರೆ ಈ ಸ್ವಯಂಸೇವಕರು ಮೇಳಕ್ಕೆ ಬಂದಂತಹ ಎಲ್ಲಾ ವಾಹನಗಳ ನಿಲುಗಡೆಯ ಕಾರ್ಯದಲ್ಲಿ ತೊಡಗಿದ್ದರು. ಒಂದು ನಿಮಿಷವೂ ವಿರಮಿಸದೆ ಎಲ್ಲಿಯೂ ಕುಳಿತುಕೊಳ್ಳದೆ ಅತ್ತಿತ್ತ ಓಡಾಡುತ್ತಾ ಕಾರ್ಯವನ್ನು ಮಾಡಿ ಮೇಳದ ಯಶಸ್ಸಿಗೆ ಕಾರಣರಾಗಿದ್ದಾರೆ.

ಸುಮಾರು 230 ಕ್ಕಿಂತಲೂ ಅಽಕ ಮಳಿಗೆಗಳನ್ನು ಹೊಂದಿದ ಈ ಮೇಳದಲ್ಲಿ ಸುತ್ತಾಡುವುದು ಅಷ್ಟೊಂದು ಸುಲಭದ ಮಾತಲ್ಲ ಬಿಸಿಲಿನ ಬೇಗೆಯಲ್ಲಿ ದಾಹವಾಗುವುದು ಸಾಮಾನ್ಯ. ಅಂತಹ ಸಮಯದಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿತ್ತು. ಮೇಳದ ಸುತ್ತಲೂ ಓಡಾಡುತ್ತಾ ನೀರಿನ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಕ್ಕಳ ಕೆಲಸವಂತು ಮಾತಿಗೆ ನಿಲುಕದ್ದು.

ಹಸಿವು ನೀಗಿಸಿದ ಮೃಷ್ಟಾನ್ನ ಭೋಜನ: ಭೋಜನದ ವ್ಯವಸ್ಥೆಯಲ್ಲಿಯೂ ಕೂಡ ಮಕ್ಕಳದೇ ಕಾರುಬಾರು. ಮೂರು ನಾಲ್ಕು ಹೊತ್ತಿನ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರಿಂದ ಮಕ್ಕಳೇ ಬಡಿಸುವ ಕಾರ್ಯದಲ್ಲೂ ತೊಡಗಿದ್ದರು. ಉಪಹಾರದ ವ್ಯವಸ್ಥೆಯಂತೂ ಅದ್ಭುತ. ವಿಧ ವಿಧವಾದ ಪದಾರ್ಥ ತಿಂಡಿಗಳಿಂದ ಉಪಹಾರವು ಬಂದವರ ಹಸಿವನ್ನು ನೀಗಿಸುತ್ತಿತ್ತು.

ಅದ್ಭುತ ಕಲ್ಪನೆಯ ಕೃಷಿ ರಸಪ್ರಶ್ನೆ: ರೇಡಿಯೋ ಪಾಂಚಜನ್ಯ ನೇತೃತ್ವದಲ್ಲಿ 15 ನುರಿತ ಪ್ರಸಿದ್ಧ ಕೃಷಿಕರಿಂದ ಅನುಭವ ಪ್ರಶ್ನಾವಳಿ ಹೊಂದಿದ್ದು ಮರಿಕೆ ಸದಾಶಿವ ಭಟ್ ಅವರ ಮಾರ್ಗದರ್ಶನದಲ್ಲಿ ಕೃಷಿ ಬಾಂಧವರಿಗೆ , ವಿದ್ಯಾರ್ಥಿಗಳಿಗೆ , ಸಾರ್ವಜನಿಕರಿಗೆ ಕೃಷಿಗೆ ಸಂಬಂಧಪಟ್ಟ ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ಜನರು ಕೇವಲ ವೀಕ್ಷಣೆಗೆ ಮಾತ್ರವಲ್ಲದೆ ಬಹುಮಾನವನ್ನು ಗೆಲ್ಲುವಂತಹ ಅದ್ಭುತ ಕಲ್ಪನೆ ಯೊಂದಿಗೆ ಕೃಷಿ ರಸಪ್ರಶ್ನೆಯನ್ನು ಆಯೋಜಿಸಿದ್ದು ಇದರಲ್ಲಿ ಭಾಗವಹಿಸಿದ ಹಾಗೂ ಗೆದ್ದಂತಹವರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ಕೂಡ ವಿತರಿಸಲಾಗುತ್ತಿತ್ತು. ಪ್ರಥಮ ಬಹುಮಾನವಾಗಿ ಚಿನ್ನದ ನಾಣ್ಯ, ದ್ವಿತೀಯ ಬೆಳ್ಳಿಯ ನಾಣ್ಯ ತೃತೀಯ ಬೆಳ್ಳಿಯ ನಾಣ್ಯ ನೀಡಲಾಗಿತ್ತು.

ಕೃಷಿ ಯಂತ್ರ ಮೇಳವು ಅದ್ಭುತ ಯಶಸ್ಸನ್ನು ಕಂಡಿರುವುದಕ್ಕೆ ಮುಖ್ಯ ಕಾರಣ ಮಕ್ಕಳು ಎಂದು ಹೇಳಬಹುದು. ಮಕ್ಕಳ ಕೆಲಸ ಯಾರಿಗೂ ಕಣ್ಣಿಗೆ ಬೇಗ ತೋರುವುದಿಲ್ಲ ಎಂಬ ಮಾತನ್ನು ಹಲವು ಸಲ ಹಿರಿಯರ ಬಾಯಿಂದ ನಾವು ಕೇಳಿರಬಹುದು. ಹಾಗೆ ಈ ಮೇಳದಲ್ಲಿ ಮಕ್ಕಳ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಅರಿಯಬೇಕಿದೆ. ಇಂತಹ ಬೃಹತ್ ಮೇಳ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಜರಗುವ ಮಾಹಿತಿ ಸಿಕ್ಕಿದಂದಿನಿಂದಲೇ ಮೇಳ ಮುಗಿಯುವ ಕೊನೆಯ ವರೆಗೂ ಪ್ರಧಾನ ಪಾತ್ರವನ್ನು ವಹಿಸಿದವರು ವಿದ್ಯಾರ್ಥಿಗಳು. ಜೊತೆಗೆ ಬೆಂಗಾವಲಾಗಿ ನಿಂತ ವಿದ್ಯಾಸಂಸ್ಥೆ , ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಇವರಿಗೆ ಹ್ಯಾಟ್ಸ್‌ಪ್.
ದೀಪ್ತಿ ಅಡ್ಡಂತ್ತಡ್ಕ, ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು

LEAVE A REPLY

Please enter your comment!
Please enter your name here