ಮಕ್ಕಳ ಸಾಹಿತ್ಯ ಮಂಗಳೂರು ಘಟಕದ ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ

0

ಪುತ್ತೂರು:ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡರವರು ಆಯ್ಕೆಯಾಗಿರುತ್ತಾರೆ.
ಸಾಮಾಜಿಕ ಕಳಕಳಿ, ಮಕ್ಕಳ ಬಗೆಗಿನ ಕಾಳಜಿ, ಮಕ್ಕಳಿಗಾಗಿ ಕೈಗೊಳ್ಳುವ ಕಾರ್ಯಕ್ರಮಗಳ ಆಧಾರದಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಘಟಕದ ಅಧ್ಯಕ್ಷರನ್ನಾಗಿ ದ.ಕ ಜಿಲ್ಲಾಧ್ಯಕ್ಷೆ ಪರಿಮಳ ಮಹೇಶ್ ರಾವ್‌ರವರ ನಿರ್ದೇಶನದಂತೆ ಜಿಲ್ಲಾ ಕಾರ್ಯದರ್ಶಿ ರಶ್ಮಿ ಸನಿಲ್ ನೇಮಕಗೊಳಿಸಿ ಆದೇಶಿಸಿದ್ದಾರೆ. ಫೆ.11ರಂದು ಮಂಗಳೂರಿನ ಕದ್ರಿ ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ ಸ್ವೀಕಾರ ಪಡೆದಿರುತ್ತಾರೆ.

ಕೊಕ್ಕಡ ನಿವಾಸಿ ಮೋಹಿನಿ ಹಾಗೂ ಕೊರಗಪ್ಪ ನಾಯ್ಕ ದಂಪತಿ ಪುತ್ರನಾಗಿರುವ ಶಿವಪ್ರಸಾದ್‌ರವರು ಹವ್ಯಾಸಿ ಯಕ್ಷಗಾನ ಕಲಾವಿದ ವಿಶ್ವ ತುಳು ಸಮ್ಮೇಳನದಲ್ಲಿ ಏರ್ಪಡಿಸಿದ ಯಕ್ಷಗಾನದ ಬಣ್ಣದ ವೇಷ ಸ್ಪರ್ಧೆಯಲ್ಲಿ ಸ್ಥಾನ ಪಡೆದಿರುತ್ತಾರೆ. 2009ರ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರು ಕರಾವಳಿ ಉತ್ಸವ ಹಾಗೂ ಹಂಪೆ ವಿಜಯನಗರಕ್ಕೆ 500ನೇ ವರ್ಷದ ಸಂಭ್ರಮಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ರೂಪಕದಲ್ಲಿ ಭಾಗವಹಿಸಿರುತ್ತಾರೆ. ಟಿ.ವಿ ಸುದ್ದಿ ವಾಹಿನಿಗಳಾದ ಮಂಗಳೂರಿನ ನಮ್ಮ ಟೀವಿ ಹಾಗೂ ಸ್ಪಂದನ ವಾಹಿನಿಗಳಲ್ಲಿ ನಿರೂಪಕರಾಗಿ, ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ, ಪುತ್ತೂರಿನ ಶ್ರೀ ಶಾರದಾಂಬಾ ಸೇವಾ ಸಮಾಜ ಸುಧಾರಣಾ ಸಂಘದ ನಿರ್ದೇಶಕರಾಗಿ, ಶ್ರೀ ಶಾರದಾಂಬ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ, ಗವಣೆಗಾರ್ ಕುಟುಂಬದ ಧಾರ್ಮಿಕ ಅನುಷ್ಠಾನ ಅಭಿವೃದ್ಧಿ ಸಾಧನ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಅಸಂಘಟಿತ ಕಾರ್ಮಿಕರ ಒಕ್ಕೂಟದ ಕರ್ನಾಟಕ ರಾಜ್ಯದ ಜೊತೆ ಕಾರ್ಯದರ್ಶಿ, ಕರ್ನಾಟಕ ಜನಪದ ಪರಿಷತ್‌ನ ಮಂಗಳೂರು ತಾಲೂಕಿನ ಜೊತೆ ಕಾರ್ಯದರ್ಶಿ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿರುವ ಇವರು ಮಂಗಳೂರಿನಲ್ಲಿ ಹಲವಾರು ವೇದಿಕೆಯಲ್ಲಿ ಕಾರ್ಯಕ್ರಮ ನಿರೂಪಣೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಷಣ ಕವಿಗೋಷ್ಠಿಗಳಲ್ಲಿ ಭಾಗವಹಿಸುವಿಕೆ ಸಾಹಿತ್ಯ ಪ್ರಕಾರಗಳಾದ ಕವನ, ಚಿತ್ರ-ಕವನ, ಹಾಯ್ಕುಗಳು, ಟಂಕಗಳು, ಮಾತ್ರ ಗಣ ಆಧಾರಿತ ಪ್ರಕಾರಗಳು, ವಿಮರ್ಶೆಗಳು, ಲೇಖನ ಹೀಗೆ ಅನೇಕ ಸಾಹಿತ್ಯದ ಪ್ರಕಾರಗಳನ್ನು ರಚಿಸಿದ್ದಾರೆ.

ಇವರ ಸಾಹಿತ್ಯ ಸೇವೆಗೆ ಉಡುಪಿಯ ರಾಜಾಂಗಣದಲ್ಲಿ ಕನ್ನಡಶ್ರೀ, ಬೆಂಗಳೂರಿನಲ್ಲಿ ನವ ಪರ್ವ ಸಾಹಿತ್ಯ ರತ್ನ, ಕಥಾಬಿಂದು ಧ್ರುವತಾರೆ ಪ್ರಶಸ್ತಿಗಳು ಲಭಿಸಿದೆ. ಫಾರ್ಚುನ್ ಫೈನಾನ್ಸ್‌ನ ಮಂಗಳೂರು ಶಾಖಾ ವ್ಯವಸ್ಥಾಪಕರಾಗಿರುವ ಇವರು ಪತ್ನಿ ಮಲ್ಲಿಕಾ ಹಾಗೂ ಅವಳಿ ಮಕ್ಕಳಾದ ಮಾಸ್ಟರ್ ವೈಭವ್, ಕುಮಾರಿ ವೈಷ್ಣವಿಯವರೊಂದಿಗೆ ಮಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here